Home ಜನ-ಗಣ-ಮನ ಹೆಲ್ಮೆಟ್ ಹಾಕಿಲ್ಲ ಎಂಬ ಕಾರಣಕ್ಕೆ ಮಾರಣಾಂತಿಕ ಹಲ್ಲೆ : ಚಿಕ್ಕಮಗಳೂರು ಪೊಲೀಸರ ಕೃತ್ಯಕ್ಕೆ ಖಂಡನೆ

ಹೆಲ್ಮೆಟ್ ಹಾಕಿಲ್ಲ ಎಂಬ ಕಾರಣಕ್ಕೆ ಮಾರಣಾಂತಿಕ ಹಲ್ಲೆ : ಚಿಕ್ಕಮಗಳೂರು ಪೊಲೀಸರ ಕೃತ್ಯಕ್ಕೆ ಖಂಡನೆ

0

ಬೈಕಿನಲ್ಲಿ ಹೋಗುವಾಗ ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣಕ್ಕೆ ಚಿಕ್ಕಮಗಳೂರಿನ ವಕೀಲರೊಬ್ಬರ ಮೇಲೆ ಪೊಲೀಸರು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಚಿಕ್ಕಮಗಳೂರು ಟೌನ್ ವ್ಯಾಪ್ತಿಯಲ್ಲಿ ನಡೆದಿದೆ. ಹಲ್ಲೆಯ ನಂತರ ಮೈಮೇಲಿನ ಗಾಯದ ಫೋಟೊ ಹಾಗೂ ಘಟನೆಯನ್ನು ವಿವರಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಪೊಲೀಸರ ಕೃತ್ಯಕ್ಕೆ ಖಂಡನೆ ವ್ಯಕ್ತವಾಗಿದೆ.

ಚಿಕ್ಕಮಗಳೂರಿನ ವಕೀಲ ಪ್ರೀತಮ್ ಎಂಬುವವರು ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸುತ್ತಿದ್ದ ವೇಳೆ ಅಲ್ಲೇ ಹತ್ತಿರದಲ್ಲಿ ತಪಾಸಣೆಗೆ ನಿಂತಿದ್ದ ಪೊಲೀಸರು ಪ್ರೀತಮ್ ಅವರನ್ನು ಅಡ್ಡಗಟ್ಟಿದ್ದಾರೆ. ಪ್ರೀತಮ್ ಬೈಕ್ ನಿಲ್ಲಿಸುತ್ತಿದ್ದಂತೆ ಪೊಲೀಸರು ಬೈಕಿನ ಕೀ ತಗೆದುಕೊಂಡಿದ್ದಾರೆ.

ಪೊಲೀಸರು ಅಡ್ಡಗಟ್ಟಿ ಬೈಕ್ ನಿಲ್ಲಿಸಿದ ಮೇಲೂ ಕೀ ತಗೆದುಕೊಂಡದ್ದಕ್ಕೆ ವಕೀಲ ಪ್ರೀತಮ್ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ. ಬೈಕ್ ಸವಾರರು ಗಾಡಿ ನಿಲ್ಲಿಸಿದ ಮೇಲೂ ಕೀ ತಗೆದುಕೊಳ್ಳಬಾರದು ಎಂಬ ನಿಯಮ ಇದ್ದರೂ ಪೊಲೀಸರ ವರ್ತನೆ ಬಗ್ಗೆ ಸ್ಥಳದಲ್ಲೇ ಖಂಡಿಸಿದ್ದಾರೆ. ನಂತರ ಪೊಲೀಸರ ಈ ವರ್ತನೆ ಸೆರೆ ಹಿಡಿಯಲು ಮೊಬೈಲ್ ಮೂಲಕ ವಿಡಿಯೋ ಮಾಡಲು ತೊಡಗಿದ ಮೇಲೆ ಪೊಲೀಸರು ಪ್ರೀತಮ್ ಮೇಲೆ ಹರಿಹಾಯ್ದಿದ್ದಾರೆ.

ನಂತರ ಸ್ಟೇಶನ್ ಗೆ ಬರುವಂತೆ ಪೊಲೀಸರು ಒತ್ತಾಯಿಸಿದರು ಎಂದು ಪ್ರೀತಮ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ನಿಂತ ಜಾಗದಲ್ಲೇ ಫೈನ್ ಕಟ್ಟಲು ತಯಾರಿದ್ದೇನೆ, ಫೈನ್ ಕಟ್ಟಿಸಿಕೊಳ್ಳಿ ಎಂದರೂ ಪೊಲೀಸರು ಒತ್ತಾಯಪೂರ್ವಕವಾಗಿ ಸ್ಟೇಶನ್ ಗೆ ಎಳೆದೊಯ್ದಿದ್ದಾರೆ ಎಂದೂ ಪ್ರೀತಮ್ ಹೇಳಿಕೊಂಡಿದ್ದಾರೆ.

ಸ್ಟೇಶನ್ ಗೆ ಹೋದ ನಂತರ ಒಂದಷ್ಟು ಮಂದಿ ಪೊಲೀಸರು ಸುತ್ತುವರಿದು ಮನಸೋಇಚ್ಚೆ ತಳಿಸಿದ್ದಾರೆ, ಕೆಲವು ಪೊಲೀಸರು ಹಾಕಿ ಸ್ಟಿಕ್, ಪ್ಲಂಬಿಂಗ್ ಪೈಪ್ ಹಾಗೂ ಪೊಲೀಸ್ ಲಾಟಿ ಉಪಯೋಗಿಸಿ ಹೊಡೆದಿದ್ದಾರೆ, ಹೊಡೆತದ ಪರಿಣಾಮ ಪ್ರಜ್ಞೆ ತಪ್ಪಿದರೂ ಅವರು ಹೊಡೆಯುವುದನ್ನು ನಿಲ್ಲಿಸಲಿಲ್ಲ ಎಂದು ವಿಡಿಯೋದಲ್ಲಿ ಪ್ರೀತಮ್ ಹೇಳಿಕೊಂಡಿದ್ದಾರೆ.

https://m.facebook.com/story.php?story_fbid=pfbid02mGgbuEZw2pukmVW4FWDgaMgtrhz1Ua5NRxCn6C3Ekq25UiXfoxfVBdTMYS3Z9B6nl&id=100003519555450&mibextid=UyTHkb

ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಫೋಟೊ ಮತ್ತು ವಿಡಿಯೋದಲ್ಲಿ ಪ್ರೀತಮ್ ಬೆನ್ನು, ಎದೆ, ಕೈ ಭಾಗಗಳಲ್ಲಿ ಗಾಯಗಳಾಗಿರುವ ಗುರುತು ಇದೆ. ಸಧ್ಯ ಪೊಲೀಸರ ಈ ಕೃತ್ಯಕ್ಕೆ ತೀವ್ರ ಖಂಡನೆ ವ್ಯಕ್ತವಾಗಿದೆ.

You cannot copy content of this page

Exit mobile version