Monday, June 17, 2024

ಸತ್ಯ | ನ್ಯಾಯ |ಧರ್ಮ

ದೇವನಹಳ್ಳಿ | ಬೇರೆ ಜಾತಿಯ ಹುಡುಗನ ಜೊತೆಗಿನ ಸಂಬಂಧದ ಕಾರಣಕ್ಕೆ ಮಗಳನ್ನು ಕೊಂದ ಕಟುಕ

ಬೆಂಗಳೂರು: ಬೇರೊಂದು ಜಾತಿಯ ಹುಡುಗನೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ ವ್ಯಕ್ತಿಯೊಬ್ಬ ತನ್ನ ಮಗಳನ್ನು ಕೊಂದಿರುವ ದೇವನಹಳ್ಳಿಯಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮೃತ ಯುವತಿಯನ್ನು ಬೆಂಗಳೂರು ಹೊರವಲಯದ ದೇವನಹಳ್ಳಿ ಬಳಿಯ ಬಿದಲೂರು ಗ್ರಾಮದ ನಿವಾಸಿ 20 ವರ್ಷದ ಕಾಲೇಜು ವಿದ್ಯಾರ್ಥಿನಿ ಕವನ ಎಂದು ಗುರುತಿಸಲಾಗಿದೆ.

ಪೊಲೀಸರ ಪ್ರಕಾರ, ಆರೋಪಿ ಮಂಜುನಾಥ್ ತನ್ನ ಮಗಳ ಪ್ರೇಮದ ವಿಚಾರ ತಿಳಿದ ನಂತರ ಕಂಗಾಲಾಗಿದ್ದನು. ನಂತರ ಹುಡುಗ ಬೇರೆ ಜಾತಿಗೆ ಸೇರಿದವನು ಎಂದು ತಿಳಿಯುತ್ತಿದ್ದಂತೆ ಆತ ಕ್ರುದ್ಧನಾಗಿದ್ದಾನೆ.

ಮಂಜುನಾಥ್ ತನ್ನ ಮಗಳಿಗೆ ಯುವಕನ್ನು ಪ್ರೇಮಿಸುವುದನ್ನು ಮುಂದುವರಿಸದಂತೆ ಎಚ್ಚರಿಕೆ ನೀಡಿದ್ದ ಆದರೆ ಅವಳು ತನ್ನ ತಂದೆಯ ಮಾತನ್ನು ಕೇಳಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಬುಧವಾರ ರಾತ್ರಿ ತಂದೆ-ಮಗಳಿಬ್ಬರ ನಡುವೆ ಈ ವಿಚಾರವಾಗಿ ತೀವ್ರ ವಾಗ್ವಾದ ನಡೆದಿದ್ದು, ಕೋಪಗೊಂಡ ಮಂಜುನಾಥ್ ಚಾಕುವಿನಿಂದ ಕವನಳ ಕುತ್ತಿಗೆ ಸೀಳಿ ಆಕೆಯ ಕಾಲು ಮತ್ತು ಕೈಗಳಿಗೆ ಹಲವು ಬಾರಿ ಇರಿದಿದ್ದಾನೆ.

ಹತ್ಯೆಯ ನಂತರ ಆರೋಪಿ ವಿಶ್ವನಾಥಪುರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.

ಮಂಜುನಾಥನ ಇಬ್ಬರು ಹೆಣ್ಣು ಮಕ್ಕಳು ಕೂಡ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದು, ಕಳೆದ ಮಂಗಳವಾರವಷ್ಟೇ ಕಿರಿಯ ಮಗಳು ಬೇರೊಬ್ಬ ಯುವಕನನ್ನು ಪ್ರೀತಿಸಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಳು. ಅವಳು ಅಪ್ರಾಪ್ತ ವಯಸ್ಸಿನ ಹುಡುಗಿ ಆಗಿದ್ದರಿಂದ ಆಕೆಯನ್ನು ಪೊಲೀಸರು ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಿದ್ದರು. ಇದರ ಬೆನ್ನಲ್ಲೇ ಕೊಲೆಯಾದ ಮಗಳು ಕೂಡ ಅನ್ಯ ಜಾತಿಯ ಯುವಕನನ್ನು ಪ್ರೀತಿಸುವ ವಿಚಾರ ಮಂಜುನಾಥ್‌ಗೆ ತಿಳಿದಿದೆ.

ಘಟನೆಯ ನಂತರ ನೂರಾರು ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದ್ದು, ಬೆಂಗಳೂರು ವಿಮಾನ ನಿಲ್ದಾಣದ ಸಮೀಪವಿರುವ ಪ್ರದೇಶದಲ್ಲಿಯೇ ಈ ಘಟನೆ ನಡೆದಿರುವುದು ಎಲ್ಲರಿಗೂ ಆಘಾತ ಮಾಡಿಸಿದೆ.

ಕಳೆದ ತಿಂಗಳು ಕೋಲಾರ ಜಿಲ್ಲೆಯಲ್ಲಿ ವರದಿಯಾದ ಎರಡು ಮರ್ಯಾದೆಗೇಡು ಹತ್ಯೆ ಘಟನೆಗಳ ಬೆನ್ನಲ್ಲೇ ಈ ಇತ್ತೀಚಿನ ಘಟನೆ ನಡೆದಿದೆ.

ಕೋಲಾರ ಹತ್ಯೆಯ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಪರಾಧಗಳು ಆಳವಾಗಿ ಬೇರೂರಿರುವ ಜಾತಿ ವ್ಯವಸ್ಥೆ, ಸಾಮಾಜಿಕ ಪದ್ಧತಿಗಳು ಮತ್ತು ಕೀಳು ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳಿದ್ದರು.

ಮರ್ಯಾದಾ ಹತ್ಯೆಗಳ ವಿರುದ್ಧ ತಮ್ಮ ಸರ್ಕಾರವು ಕಾನೂನು ಕ್ರಮವನ್ನು ಪ್ರಾರಂಭಿಸುತ್ತದೆ ಮತ್ತು ಅಂತಹ ಪ್ರಕರಣಗಳ ತನಿಖೆಯಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳುತ್ತದೆ ಎಂದು ಅವರು ಭರವಸೆ ನೀಡಿದ್ದರು.

Related Articles

ಇತ್ತೀಚಿನ ಸುದ್ದಿಗಳು