ಯಾದಗಿರಿ: ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಪೊಲೀಸ್ ಠಾಣೆ ವ್ಯಾಪ್ತಿಯ ಗಂಗನಾಳ ಗ್ರಾಮದ ಬಳಿ, ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಂದೆಯೊಬ್ಬ ತನ್ನ ಇಬ್ಬರು ಎಳೆಯ ಮಕ್ಕಳನ್ನು ನೀರಾವರಿ ಕಾಲುವೆಗೆ ತಳ್ಳಿ ವಿಕೃತಿ ಮೆರೆದಿರುವ ಘಟನೆ ವರದಿಯಾಗಿದೆ.
ಆರೋಪಿ ತಂದೆ ಶಾಂತಪ್ಪ ಬಿರಾದಾರ್, ಮಧ್ಯಾಹ್ನ ಸುಮಾರು 2:15 ರಿಂದ 2:30 ರ ಸುಮಾರಿಗೆ ತನ್ನ ಮೂವರು ಮಕ್ಕಳಾದ ಸಾನ್ವಿ (9) (4ನೇ ತರಗತಿ ವಿದ್ಯಾರ್ಥಿನಿ), 6 ವರ್ಷದ ಸಂಜನಾ (1ನೇ ತರಗತಿ ವಿದ್ಯಾರ್ಥಿನಿ) ಹಾಗೂ ಎರಡೂವರೆ ವರ್ಷದ ಮಗ ಸೃಜನ್‌ನನ್ನು ಬೈಕ್‌ನಲ್ಲಿ ಕರೆದೊಯ್ದಿದ್ದನು. ಕಾಲುವೆಯ ಬಳಿ ತಲುಪಿದ ಆತ, 9 ವರ್ಷದ ಸಾನ್ವಿ ಮತ್ತು ಎರಡೂವರೆ ವರ್ಷದ ಸೃಜನ್‌ನನ್ನು ನೀರಿಗೆ ಎಸೆದಿದ್ದಾನೆ. ಮತ್ತೊಬ್ಬ ಮಗಳು ಸಂಜನಾಳನ್ನು ತನ್ನೊಂದಿಗೇ ಉಳಿಸಿಕೊಂಡು ಯಾದಗಿರಿ ಪಟ್ಟಣಕ್ಕೆ ಮರಳಿದ್ದಾನೆ.
ಪಟ್ಟಣಕ್ಕೆ ಹಿಂದಿರುಗಿದ ಬಳಿಕ ಆತ, ತುರ್ತು ಸ್ಪಂದನಾ ಸಹಾಯವಾಣಿಗೆ (112) ಕರೆ ಮಾಡಿ, ತಾನೇ ತನ್ನ ಇಬ್ಬರು ಮಕ್ಕಳನ್ನು ಕಾಲುವೆಗೆ ಎಸೆದಿರುವುದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಪೊಲೀಸರು ತಕ್ಷಣವೇ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ರಾತ್ರಿ ಶೋಧಕಾರ್ಯಕ್ಕೆ ಕತ್ತಲು ಅಡ್ಡಿಯಾದ ಕಾರಣ ಕಾರ್ಯಾಚರಣೆ ಸ್ಥಗಿತಗೊಳಿಸಿ, ಮರುದಿನ ಮುಂಜಾನೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿಯ ನೆರವಿನೊಂದಿಗೆ ಮಕ್ಕಳ ಪತ್ತೆಗಾಗಿ ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿ ಶಾಂತಪ್ಪ ಮತ್ತು ಆತನ ಪತ್ನಿ ರೇಣುಕಾ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ಗೋಗಿ ಪೊಲೀಸ್ ಠಾಣೆಯಲ್ಲಿ ಮಕ್ಕಳ ನಾಪತ್ತೆ ಪ್ರಕರಣ ದಾಖಲಾಗಿದ್ದು, ಸಿಪಿಐ ದೀಪಕ್ ಬೂಸರೆಡ್ಡಿ ನೇತೃತ್ವದಲ್ಲಿ ಶೋಧ ಕಾರ್ಯಾಚರಣೆ ಹಾಗೂ ತನಿಖೆ ಮುಂದುವರಿದಿದೆ.
