ದೆಹಲಿ: ‘ಬಡಿಸುವವನು ನಮ್ಮವನಾಗಿದ್ದರೆ ಎಲ್ಲಿ ಕುಳಿತರೂ ಊಟ ಸಿಗುತ್ತದೆ’ ಎಂಬ ಗಾದೆ ಮಾತಿನಂತೆ, ಕೇಂದ್ರ ಸರ್ಕಾರದ ದೊಡ್ಡವರ ಬೆಂಬಲವಿದ್ದರೆ ಯಾವುದೇ ರಂಗದಲ್ಲಿ ಅಥವಾ ಯಾವುದೇ ಕಾಂಟ್ರಾಕ್ಟ್ ಅನ್ನಾದರೂ ತಾವೇ ದಕ್ಕಿಸಿಕೊಳ್ಳಬಹುದು ಎಂಬುದನ್ನು ಅದಾನಿ ಸಂಸ್ಥೆ ಮತ್ತೊಮ್ಮೆ ಸಾಬೀತುಪಡಿಸಿದೆ.
ಭಾರತೀಯ ಆಹಾರ ನಿಗಮವು (FCI) ಎರಡು ಹಂತಗಳಲ್ಲಿ ಕೈಗೆತ್ತಿಕೊಂಡಿರುವ ‘ಹಬ್ ಅಂಡ್ ಸ್ಪೋಕ್’ (Hub and Spoke) ಸೈಲೋ ಯೋಜನೆಯ ಗುತ್ತಿಗೆಯನ್ನು ‘ಅದಾನಿ ಆಗ್ರಿ ಲಾಜಿಸ್ಟಿಕ್ಸ್ ಲಿಮಿಟೆಡ್’ ಮತ್ತು ‘ಲೀಪ್ ಇಂಡಿಯಾ ಫುಡ್ ಅಂಡ್ ಲಾಜಿಸ್ಟಿಕ್ಸ್ ಪ್ರೈವೇಟ್ ಲಿಮಿಟೆಡ್’ ಕಂಪನಿಗಳೇ ಸಂಪೂರ್ಣವಾಗಿ ತನ್ನದಾಗಿಸಿಕೊಂಡಿವೆ. ಒಟ್ಟು 134 ಸೈಲೋ ಕಾಂಟ್ರಾಕ್ಟ್‌ಗಳ ಪೈಕಿ ಬರೋಬ್ಬರಿ 16,500 ಕೋಟಿ ರೂಪಾಯಿ ಮೌಲ್ಯದ 110 ಕಾಂಟ್ರಾಕ್ಟ್‌ಗಳನ್ನು ಈ ಎರಡು ಸಂಸ್ಥೆಗಳೇ ಕೈವಶ ಮಾಡಿಕೊಂಡಿವೆ.
ಇದರಿಂದಾಗಿ ದೇಶದ ಒಟ್ಟು 60 ಲಕ್ಷ ಮೆಟ್ರಿಕ್ ಟನ್ ಧಾನ್ಯ ಸಂಗ್ರಹಣೆಯಲ್ಲಿ 46.5 ಲಕ್ಷ ಮೆಟ್ರಿಕ್ ಟನ್ ಧಾನ್ಯವನ್ನು ಈ ಎರಡು ಸಂಸ್ಥೆಗಳಿಗೆ ಸೇರಿದ ಸೈಲೋಗಳಲ್ಲಿ (ಆಧುನಿಕ ಧಾನ್ಯ ಸಂಗ್ರಹಣಾಗಾರ) ಸಂಗ್ರಹಿಸಿಡುವ ಬೃಹತ್ ಗುತ್ತಿಗೆ ಇವುಗಳ ಪಾಲಾಗಿದೆ.
ದೇಶದ ಸಾರ್ವಜನಿಕ ವಿತರಣಾ ವ್ಯವಸ್ಥೆಗಾಗಿ (PDS) ಆಹಾರ ಧಾನ್ಯಗಳ ಸಂಗ್ರಹಣಾ ವಿಧಾನವನ್ನು ಆಧುನೀಕರಿಸಲು ಭಾರತೀಯ ಆಹಾರ ನಿಗಮವು (ಎಫ್‌ಸಿಐ) ನಿರ್ಧರಿಸಿತ್ತು. ಇದಕ್ಕಾಗಿ 20 ಸಾವಿರ ಕೋಟಿ ರೂಪಾಯಿ ವೆಚ್ಚದ ಬೃಹತ್ ಸೈಲೋ ಯೋಜನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಆದರೆ, ಈ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಕಾಂಟ್ರಾಕ್ಟ್‌ಗಳೆಲ್ಲವೂ ಕೇವಲ ಎರಡು ಸಂಸ್ಥೆಗಳ ಕೈಯಲ್ಲೇ ಕೇಂದ್ರೀಕೃತವಾಗುವಂತೆ ಇಡೀ ಯೋಜನೆಯ ನಿಯಮಗಳನ್ನು ರೂಪಿಸಲಾಗಿದೆ. ಈ ಬೃಹತ್ ಯೋಜನೆಗಳನ್ನು ಯಾವುದೇ ಒಂದು ನಿರ್ದಿಷ್ಟ ಕಂಪನಿಯು ಏಕಸ್ವಾಮ್ಯ (Monopoly) ಸಾಧಿಸದಂತೆ ತಡೆಯಲು ಎಫ್‌ಸಿಐ ಆರಂಭದಲ್ಲಿ ‘ಏಕಸ್ವಾಮ್ಯ ವಿರೋಧಿ ನಿಯಮ’ವನ್ನು (Anti-monopoly clause) ಪ್ರಸ್ತಾಪಿಸಿತ್ತು. ಆದರೆ 2022 ರಲ್ಲಿ ನಡೆದ ಒಂದು ಪ್ರಮುಖ ಸಭೆಯಲ್ಲಿ ನೀತಿ ಆಯೋಗ ಮತ್ತು ಆರ್ಥಿಕ ವ್ಯವಹಾರಗಳ ಇಲಾಖೆಯು ಈ ನಿರ್ಬಂಧಗಳನ್ನು ತೀವ್ರವಾಗಿ ವಿರೋಧಿಸಿದವು.
ಮಾರುಕಟ್ಟೆ ಶಕ್ತಿಗಳಿಗೆ ಮುಕ್ತ ಅವಕಾಶ ನೀಡಬೇಕು ಎಂದು ವಾದಿಸಿ ಆ ಕಟ್ಟುನಿಟ್ಟಿನ ನಿಯಮವನ್ನು ಕೈಬಿಡಲಾಯಿತು. ಅದಾನಿ ಕಂಪನಿಗೆ ಅನುಕೂಲ ಮಾಡಿಕೊಡಲೆಂದೇ ಈ ನಿಯಮವನ್ನು ತೆಗೆದುಹಾಕಲಾಗಿದೆ ಎಂದು ಟೀಕೆ ಕೇಳಿಬಂದರೂ ಕೇಂದ್ರ ಸರ್ಕಾರ ಮಾತ್ರ ಇದಕ್ಕೆ ತಲೆಕೆಡಿಸಿಕೊಳ್ಳಲಿಲ್ಲ. ತದನಂತರ ಹಂತ-1 ರ ಎರಡನೇ ಸುತ್ತಿನಲ್ಲಿ ಅದಾನಿ ಸಂಸ್ಥೆಯು ಪ್ರತಿಯೊಂದು ಸಿಂಗಲ್ ಕಾಂಟ್ರಾಕ್ಟ್ ಅನ್ನು ಅತ್ಯಂತ ಸುಲಭವಾಗಿ ಗೆಲ್ಲಲು ಪ್ರಾರಂಭಿಸಿತು. ಇನ್ನು ಎರಡನೇ ಹಂತದ ವೇಳೆಗೆ ಮಾರುಕಟ್ಟೆಯಲ್ಲಿ ದ್ವಿಸ್ವಾಮ್ಯ (Duopoly) ಉದ್ಭವಿಸಿತು. ಈ ಬಾರಿ ಅದಾನಿ ಮತ್ತು ಲೀಪ್ ಸಂಸ್ಥೆಗಳು ಒಟ್ಟಾಗಿ ದೇಶದ ಆಧುನಿಕ ಧಾನ್ಯ ಸಂಗ್ರಹಣಾ ವ್ಯವಸ್ಥೆಯ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದವು.
ಮೌನಕ್ಕೆ ಶರಣಾದ ಸಿಸಿಐ (CCI): ದೇಶದ ವಿವಿಧ ರಂಗಗಳಲ್ಲಿ ಮಿತಿಮೀರಿದ ಮಾರುಕಟ್ಟೆ ನಿಯಂತ್ರಣ ಮತ್ತು ಏಕಸ್ವಾಮ್ಯ ಧೋರಣೆಗಳನ್ನು ಕಟ್ಟುನಿಟ್ಟಾಗಿ ಪ್ರಶ್ನಿಸುವ ಭಾರತೀಯ ಸ್ಪರ್ಧಾ ಆಯೋಗವು (Competition Commission of India – CCI), ಈ ಸೈಲೋ ಪ್ರಾಜೆಕ್ಟ್ ವಿಷಯದಲ್ಲಿ ಮಾತ್ರ ಸಂಪೂರ್ಣ ಮೌನಕ್ಕೆ ಶರಣಾಗಿದೆ. ದೊಡ್ಡ ಕಾರ್ಪೊರೇಟ್ ಸಂಸ್ಥೆಗಳಿಗೆ ಪೂರಕವಾಗಿ ನಿಯಮಗಳನ್ನು ರೂಪಿಸಿದ್ದರೂ ಸಿಸಿಐ ಈ ಬಗ್ಗೆ ಚಕಾರವೆತ್ತಿಲ್ಲ. ತಮಗೆ ಅನುಕೂಲಕರವಾದ ಸಂಸ್ಥೆಗಳಿಗೇ ಕಾಂಟ್ರಾಕ್ಟ್‌ಗಳು ಸಿಗುವಂತೆ ನೋಡಿಕೊಳ್ಳುವ ಕೇಂದ್ರದ ಪ್ರಭಾವಿ ನಾಯಕರ ಆಶೀರ್ವಾದ ಇರುವುದರಿಂದಲೇ, ದೇಶದ ಆಹಾರ ಭದ್ರತಾ ರಂಗದಲ್ಲೂ ಅದಾನಿ ಸಂಸ್ಥೆಯ ಈ ಅಪ್ರತಿಹತ ಆಧಿಪತ್ಯ ಮುಂದುವರಿಯುತ್ತಿದೆ ಎಂಬ ತೀವ್ರ ಟೀಕೆಗಳು ಈಗ ವ್ಯಕ್ತವಾಗುತ್ತಿವೆ.
