ಬೆಂಗಳೂರು : ರಾಜ್ಯ ಸರ್ಕಾರ ಶಾಲಾ-ಕಾಲೇಜು ವಿದ್ಯಾರ್ಥಿನಿಯರ ಮುಟ್ಟಿನ ಸಮಸ್ಯೆಗೆ ಸಂಬಂಧಿಸಿ ಹೊಸ ಹೆಜ್ಜೆ ಇಟ್ಟಿದೆ. ರಾಜ್ಯದ ಆಯ್ದ ಜಿಲ್ಲೆಗಳ ಶಾಲಾ – ಕಾಲೇಜುಗಳ ವಿದ್ಯಾರ್ಥಿನಿಯರಿಗೆ ಪ್ರಾಯೋಗಿಕವಾಗಿ ಮುಟ್ಟಿನ ಕಪ್‌ಗಳನ್ನು (Menstrual cup) ನೀಡಲು ನಿರ್ಧರಿಸಿದೆ. ಅದರ ಯಶಸ್ಸಿನ ಬಳಿಕ, ಮುಟ್ಟಿನ ಕಪ್‌ಗಳನ್ನು (Menstrual cup) ರಾಜ್ಯಾದ್ಯಂತ ವಿತರಿಸಲು ಆರೋಗ್ಯ ಹಾಗೂ ಕುಟುಂಬ ಇಲಾಖೆ ನಿರ್ಧರಿಸಿದೆ.
10 ಲಕ್ಷಕ್ಕೂ ಹೆಚ್ಚು ಕಪ್ ವಿತರಣೆ
ರಾಜ್ಯ ವೈದ್ಯಕೀಯ ಸರಬರಾಜು ನಿಗಮ ಲಿಮಿಟೆಡ್ KSMSCL ಮೂಲಕ 10,38,912 ಮುಟ್ಟಿನ ಕಪ್ ಖರೀದಿಗೆ 61 ಕೋಟಿ ರೂ. ಅನುಮೋದನೆ ಸಿಕ್ಕಿದೆ. ಈ ಯೋಜನೆ ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ಜಾರಿಯಾಗಲಿದೆ. ಈ ಹಿಂದೆ ಸರ್ಕಾರಕ್ಕೆ ವರ್ಷಕ್ಕೆ 71 ಕೋಟಿ ರೂ. ನ್ಯಾಪ್ಕಿನ್ ಖರೀದಿಗೆ ಖರ್ಚಾಗುತ್ತಿತ್ತು. ಮುಟ್ಟಿನ ಕಪ್ ನೀಡುವ ನಿರ್ಧಾರದಿಂದ ಸರ್ಕಾರದ ವೆಚ್ಚವು ಸುಮಾರು 10 ಕೋಟಿ ರೂ. ಕಡಿಮೆಯಾಗಲಿದೆ. ಮೂರು ತಿಂಗಳು ಸ್ಯಾನಿಟರಿ ನ್ಯಾಪ್ಕಿನ್‌ಗಳನ್ನು ಮತ್ತು ಮುಂದಿನ ಶೈಕ್ಷಣಿಕ ವರ್ಷಕ್ಕೆ ಒಂದು ಮುಟ್ಟಿನ ಕಪ್ ಅನ್ನು ಒದಗಿಸುವುದನ್ನು ಮುಂದುವರಿಸುತ್ತದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಶುಚಿ ಕಿಟ್ ಕೊರತೆ: ಸದನದಲ್ಲಿ ಚರ್ಚೆ
2025 ಡಿಸೆಂಬರ್‌ನಲ್ಲಿ ಶುಚಿ ಕಿಟ್ ಅಡಿಯಲ್ಲಿ ಒದಗಿಸಲಾದ ನ್ಯಾಪ್ಕಿನ್ ಕೊರತೆಯಿಂದ ವಿದ್ಯಾರ್ಥಿನಿಯರು ಶಾಲೆ ತಪ್ಪುತ್ತಿರುವ ವರದಿ ಆಗಿತ್ತು. ಈ ಸಂಬಂಧ ಬೆಳಗಾವಿ ಅಧಿವೇಶನದಲ್ಲಿ ವಿಷಯ ಚರ್ಚೆಯಾಗಿದ್ದು, ಸಚಿವ ಗುಂಡೂರಾವ್ ತಕ್ಷಣ ಕ್ರಮದ ಭರವಸೆ ನೀಡಿದ್ದರು. ಕಳೆದ 4 ವರ್ಷಗಳಿಂದ ಬೇರೆ ಬೇರೆ ಕಾರಣಗಳಿಗೆ ಸ್ಥಗಿತವಾಗಿದ್ದ ಶುಚಿ ಯೋಜನೆಯನ್ನು ಸರ್ಕಾರ ಮರು ಚಾಲನೆ ನೀಡುವುದಾಗಿ ತಿಳಿಸಿದ್ದರು. ಈ ಯೋಜನೆಯ ಮೂಲಕ 10 ವರ್ಷದಿಂದ 18 ವರ್ಷದ ಒಳಗಿನ ಸುಮಾರು 19 ಲಕ್ಷ ಹೆಣ್ಣು ಮಕ್ಕಳಿಗೆ ನ್ಯಾಪ್ಕಿನ್ ವಿತರಿಸಲು ಯೋಜಿಸಲಾಗಿದೆ. ಸರ್ಕಾರಿ ಶಾಲೆ ಹಾಗೂ ಹಾಸ್ಟೆಲ್ ಮಕ್ಕಳಿಗೂ ನ್ಯಾಪ್ಕಿನ್‌ಗಳನ್ನು ವಿತರಿಸಲಾಗುವುದು ಎಂದು ಹೇಳಿದ್ದರು. ಮೂರು ತಿಂಗಳು ಸ್ಯಾನಿಟರಿ ನ್ಯಾಪ್ಕಿನ್ ನೀಡಲು ಅನುಮೋದನೆ ನೀಡಿದೆ. ಆದರೆ ಮುಟ್ಟಿನ ಕಪ್ ಬಗ್ಗೆ ಅನುಮೋದನೆ ದೊರೆತಿಲ್ಲ.
