ಬೆಂಗಳೂರು: ಫಿಫಾ ವಿಶ್ವಕಪ್-2026ರ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳ ಕಾವು ರಾಜಧಾನಿ ಬೆಂಗಳೂರಿನಲ್ಲೂ ಜೋರಾಗಿದ್ದು, ಅಭಿಮಾನಿಗಳ ಅನುಕೂಲಕ್ಕಾಗಿ ನಗರದ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳ ಕಾರ್ಯಾಚರಣೆ ಅವಧಿಯನ್ನು ವಿಸ್ತರಿಸಲಾಗಿದೆ.
ನಗರ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್ ಅವರು ಹೊರಡಿಸಿರುವ ಆದೇಶದಂತೆ, ಜುಲೈ 15 ಮತ್ತು 19ರಂದು ನಗರದ ಎಲ್ಲಾ ಹೋಟೆಲ್, ರೆಸ್ಟೋರೆಂಟ್ ಹಾಗೂ ಆಹಾರ ಸೇವಾ ಕೇಂದ್ರಗಳು ಬೆಳಗಿನ ಜಾವ 3.30 ಗಂಟೆಯವರೆಗೆ ಗ್ರಾಹಕರಿಗೆ ಸೇವೆ ನೀಡಲು ಅವಕಾಶ ಕಲ್ಪಿಸಲಾಗಿದೆ.
ಈ ಹಿಂದೆ ಫಿಫಾ ವಿಶ್ವಕಪ್ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳ ಹಿನ್ನೆಲೆಯಲ್ಲಿ ಜುಲೈ 14, 15 ಹಾಗೂ 19ರಂದು ಮುಂಜಾನೆ 3 ಗಂಟೆಯವರೆಗೆ ಹೋಟೆಲ್-ರೆಸ್ಟೋರೆಂಟ್‌ಗಳನ್ನು ತೆರೆಯಲು ಅನುಮತಿ ನೀಡುವಂತೆ ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ (NRAI) ಮನವಿ ಮಾಡಿತ್ತು. ಈ ಮನವಿಯನ್ನು ಪರಿಗಣಿಸಿ ನಗರ ಪೊಲೀಸ್ ಆಯುಕ್ತರು ವಿಶೇಷ ಅನುಮತಿ ನೀಡಿದ್ದಾರೆ.
ಪ್ರಮುಖ ಮಾರ್ಗಸೂಚಿಗಳು
- ಜನಸಂದಣಿ ನಿಯಂತ್ರಣಕ್ಕೆ ಪ್ರಮಾಣಿತ ಕಾರ್ಯಾಚರಣೆ ವಿಧಾನ (SOP) ಕಡ್ಡಾಯ.
- ಮದ್ಯ ಸೇವನೆಗೆ ಇರುವ ಅಬಕಾರಿ ಪರವಾನಗಿ ಒಳಾಂಗಣಕ್ಕೆ ಮಾತ್ರ ಸೀಮಿತ. ಹೊರಾಂಗಣದಲ್ಲಿ ಅಥವಾ ಹೊರಗೆ ಕಾಯುತ್ತಿರುವವರಿಗೆ ಮದ್ಯ ಪೂರೈಕೆ ನಿಷೇಧ.
- ಆನ್‌ಲೈನ್ ಸೇರಿದಂತೆ ಯಾವುದೇ ರೀತಿಯ ಬೆಟ್ಟಿಂಗ್‌ಗೆ ಸಂಪೂರ್ಣ ನಿಷೇಧ.
- ಹೆಚ್ಚುವರಿ ಪೊಲೀಸ್ ಗಸ್ತು ಹಾಗೂ ಭದ್ರತಾ ವ್ಯವಸ್ಥೆ ಕಡ್ಡಾಯ.
ಕಾರ್ಯಕ್ರಮಕ್ಕೆ ಸಂಬಂಧಪಟ್ಟ ಇಲಾಖೆಗಳ ಪೂರ್ವಾನುಮತಿ ಪಡೆಯಬೇಕು. - ನಿಗದಿತ ಸಮಯವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
- ಆಯುಧಗಳು, ಹೊಗೆ ಬಾಂಬ್, ಪಟಾಕಿಗಳಿಗೆ ಸಂಪೂರ್ಣ ನಿಷೇಧ.
- ಧ್ವನಿವರ್ಧಕ ಬಳಕೆಗೆ ಅನುಮತಿ ಕಡ್ಡಾಯ; ಶಬ್ದ ಮಾಲಿನ್ಯ ನಿಯಮಗಳನ್ನು ಪಾಲಿಸಬೇಕು.
- ಸ್ಥಳದ ಸಾಮರ್ಥ್ಯಕ್ಕೆ ಅನುಗುಣವಾಗಿ ಮಾತ್ರ ಟಿಕೆಟ್ ಅಥವಾ ಪಾಸ್ ವಿತರಿಸಬೇಕು.
- ಪಾರ್ಕಿಂಗ್, ನೆಲಮಹಡಿ ಅಥವಾ ಟೆರೇಸ್‌ನಲ್ಲಿ ಜನಸಂದಣಿ ಉಂಟಾಗುವ ರೀತಿಯ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ.
- ಎಲ್‌ಇಡಿ ಸ್ಕ್ರೀನ್‌ಗಳನ್ನು ಕಟ್ಟಡದ ಒಳಭಾಗಕ್ಕೆ ಮಾತ್ರ ಅಳವಡಿಸಬೇಕು. ಸಾರ್ವಜನಿಕ ರಸ್ತೆ ಅಥವಾ ಹೊರಭಾಗಕ್ಕೆ ಕಾಣುವಂತೆ ಲೈವ್ ಸ್ಕ್ರೀನಿಂಗ್ ನಡೆಸಬಾರದು.
- ಅಗ್ನಿ ಸುರಕ್ಷತಾ ಕ್ರಮಗಳು ಹಾಗೂ ಅಗ್ನಿಶಾಮಕ ಉಪಕರಣಗಳು ಕಡ್ಡಾಯ.
- ಪ್ರವೇಶ ದ್ವಾರ, ನಿರ್ಗಮನ ದ್ವಾರ, ಪಾರ್ಕಿಂಗ್ ಹಾಗೂ ಪ್ರಮುಖ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ದೃಶ್ಯಾವಳಿಯನ್ನು ಡಿವಿಆರ್‌ನಲ್ಲಿ ಸಂಗ್ರಹಿಸಬೇಕು.
- ಮಾದಕ ವಸ್ತುಗಳ ಸೇವನೆ, ಮಾರಾಟ ಅಥವಾ ದಾಸ್ತಾನು ಕುರಿತು ಮಾಹಿತಿ ಸಿಕ್ಕರೆ ತಕ್ಷಣ ಪೊಲೀಸರಿಗೆ ತಿಳಿಸಬೇಕು.
- ಕಾರ್ಯಕ್ರಮದ ಸ್ಥಳದಲ್ಲಿ ಧೂಮಪಾನಕ್ಕೆ ಅವಕಾಶ ನೀಡಬಾರದು.
ವಾಹನಗಳಿಗೆ ನಿಗದಿತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು. - ಡಿಜೆ, ಸಿನಿಮಾ ನಟ-ನಟಿಯರು ಅಥವಾ ಗಣ್ಯರು ಭಾಗವಹಿಸುವ ಕಾರ್ಯಕ್ರಮಗಳ ಬಗ್ಗೆ ಮುಂಚಿತವಾಗಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬೇಕು.
- ಮಹಿಳೆಯರ ಸುರಕ್ಷತೆಗೆ ಮಹಿಳಾ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕು.
- ಪುರುಷರನ್ನು ಪುರುಷ ಸಿಬ್ಬಂದಿ ಹಾಗೂ ಮಹಿಳೆ-ಮಕ್ಕಳನ್ನು ಮಹಿಳಾ ಸಿಬ್ಬಂದಿಯಿಂದಲೇ ತಪಾಸಣೆ ನಡೆಸಬೇಕು.
- ಅಪ್ರಾಪ್ತರಿಗೆ ಮದ್ಯ ಮಾರಾಟ ಅಥವಾ ಮದ್ಯ ಇರುವ ಪ್ರದೇಶಕ್ಕೆ ಪ್ರವೇಶ ನೀಡಬಾರದು.
- ಯಾವುದೇ ಅಹಿತಕರ ಘಟನೆ ಸಂಭವಿಸಿದರೆ ತಕ್ಷಣ 112 ಸಹಾಯವಾಣಿ ಅಥವಾ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು.
ನಗರದಲ್ಲಿ ಫುಟ್‌ಬಾಲ್ ಅಭಿಮಾನಿಗಳ ಸಂಖ್ಯೆ ಹೆಚ್ಚಿರುವ ಹಿನ್ನೆಲೆ, ವಿಶ್ವಕಪ್ ಪಂದ್ಯಾವಳಿಯ ಸಂಭ್ರಮದ ನಡುವೆ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಕಾಪಾಡುವ ಉದ್ದೇಶದಿಂದ ಈ ವಿಶೇಷ ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗಿದೆ.
