ತಿರುವನಂತಪುರಂ: ಕೇರಳದಲ್ಲಿ ಪ್ರಾಣಾಂತಿಕವಾದ ‘ಮೆದುಳು ತಿನ್ನುವ ಅಮೀಬಾ ಸೋಂಕಿನಿಂದ ಮತ್ತೊಬ್ಬ ವ್ಯಕ್ತಿ ಮೃತರಾಗಿದ್ದಾರೆ. ಮಲಪ್ಪುರಂ ಜಿಲ್ಲೆಯ 56 ವರ್ಷದ ಶೋಭನ್ ಎಂಬುವವರು ಕೋಳಿಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ ಸೋಮವಾರ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಘೋಷಿಸಿದ್ದಾರೆ.
ಈ ರೋಗದಿಂದ ರಾಜ್ಯದಲ್ಲಿ ಇಲ್ಲಿಯವರೆಗೆ ಐವರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ 11 ಜನರು ಕೋಳಿಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
‘ನೆಗ್ಲೇರಿಯಾ ಫೌಲೆರಿ’ ಎಂಬ ಅಮೀಬಾದಿಂದ ‘ಪ್ರೈಮರಿ ಅಮೈಬಿಕ್ ಮೆನಿಂಜೊಎನ್ಸೆಫಲೈಟಿಸ್’ ಎಂಬ ಕಾಯಿಲೆ ಅವರಿಗೆ ತಗುಲಿದೆ ಎಂದು ವೈದ್ಯರು ಗುರುತಿಸಿದ್ದಾರೆ.
‘ನೆಗ್ಲೇರಿಯಾ ಫೌಲೆರಿ’ ಅಮೀಬಾ ನೀರಿನ ಮೂಲಕ ಹರಡುತ್ತದೆ. ಇದು ಮೂಗಿನ ಹೊಳ್ಳೆಗಳ ಮೂಲಕ ಮೆದುಳಿಗೆ ಪ್ರವೇಶಿಸಿ ಮೆದುಳಿನ ಅಂಗಾಂಶಗಳಿಗೆ ಹಾನಿ ಮಾಡುತ್ತದೆ.