ಬಾಂಗ್ಲಾದೇಶದಲ್ಲಿ ಭಾರತದ ಏರ್ ಇಂಡಿಯಾ ಮಾದರಿಯಲ್ಲೇ ಯುದ್ಧ ವಿಮಾನವೊಂದು ಪತನವಾಗಿದ್ದು ಸಧ್ಯದ ಮಾಹಿತಿಯಂತೆ ಒಬ್ಬರು ಮೃತಪಟ್ಟಿದ್ದಾರೆ, ಹಲವು ಮಂದಿ ಗಂಭೀರ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಬಾಂಗ್ಲಾದೇಶ ವಾಯುಪಡೆಯ ತರಬೇತಿ ವಿಮಾನವೊಂದು ಸೋಮವಾರ ಮಧ್ಯಾಹ್ನ ಢಾಕಾದ ಉತ್ತರ ಪ್ರದೇಶದ ಮೈಲ್‌ಸ್ಟೋನ್ ಶಾಲೆ ಮತ್ತು ಕಾಲೇಜಿನ ಕ್ಯಾಂಪಸ್’ಗೆ ಅಪ್ಪಳಿಸಿ ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಫ್ -7 ಬಿಜಿಐ ಫೈಟರ್ ಜೆಟ್ ಎಂದು ಗುರುತಿಸಲಾದ ವಿಮಾನವು ರಾಜಧಾನಿಯ ಉತ್ತರ ಭಾಗದಲ್ಲಿ ಮಧ್ಯಾಹ್ನ 1:06ರ ಸುಮಾರಿಗೆ ಪತನಗೊಂಡಿತು, ಅಪಘಾತದ ಸಮಯದಲ್ಲಿ ವಿದ್ಯಾರ್ಥಿಗಳು ಇದ್ದರು ಎಂದು ವರದಿಯಾಗಿದೆ. ತುರ್ತು ಸಿಬ್ಬಂದಿ ಬೆಂಕಿಯನ್ನು ನಂದಿಸಲು ಧಾವಿಸಿದಾಗ ಅಪಘಾತದ ಸ್ಥಳದಿಂದ ದಟ್ಟವಾದ ಹೊಗೆ ಮತ್ತು ಬೆಂಕಿ ಏರುತ್ತಿರುವುದನ್ನು ಟಿವಿ ಮಾಧ್ಯಮಗಳು ಬಿತ್ತರಿಸಿವೆ.
ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ಅಗ್ನಿಶಾಮಕ ಸೇವಾ ಅಧಿಕಾರಿ ಲಿಮಾ ಖಾನ್ ಹೇಳಿದ್ದಾರೆ. ಮೃತಪಟ್ಟವರು ಮತ್ತು ಗಾಯಗೊಂಡವರ ಸಾವುನೋವುಗಳಲ್ಲಿ ನಾಗರಿಕರೇ ಅಥವಾ ಮಿಲಿಟರಿ ಸಿಬ್ಬಂದಿಯೇ ಎಂಬುದು ತಿಳಿದು ಬಂದಿಲ್ಲ.