ಹಾಸನ : ಗೌರಿ ಲಂಕೇಶ್ ಹತ್ಯೆ ಮಾಡಿದವ್ರಿಗೆ ಸನ್ಮಾನ ಮಾಡಿದ ಘಟನೆಗೆ ಸಂಬಂಧಿಸಿದಂತೆ ಹಾಸನ ಜನಪರ ಚಳುವಳಿಗಳ ಒಕ್ಕೂಟದ ಸದಸ್ಯರು ಗೃಹ ಮಂತ್ರಿಗಳಾದ ಜಿ.ಪರಮೇಶ್ವರ್ ಅವರಿಗೆ ಪತ್ರ ಬರೆದು ಸನ್ಮಾನ ಮಾಡಿದವ್ರನ್ನು ಈ ಕೂಡಲೆ ಬಂಧಿಸುವಂತೆ ಆಗ್ರಹಿಸಿದ್ದಾರೆ. ಇಡೀ ರಾಜ್ಯ ತಲೆ ತಗ್ಗಿಸುವಂತಹ ಕೆಲಸ ಇದಾಗಿದ್ದು ಇದರಿಂದ ಸಮಾಜಕ್ಕೆ ಯಾವ ರೀತಿಯ ಸಂದೇಶ ಕೊಡುವುದಕ್ಕೆ ಇವರು ಹೊರಟಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿಪತ್ರದ ಮೂಲಕ ಗೃಹ ಸಚಿವರಿಗೆ “ಇಂತಹ ಶಕ್ತಿಗಳನ್ನು ಮೊಳಕೆಯಲ್ಲಿಯೇ ಚಿವುಟಿ ಹಾಕುವಂತೆ” ತಿಳೀಸಿದ್ದಾರೆ. ಪತ್ರದ ಸಾರಾಂಶವನ್ನು ಇಲ್ಲಿ ಹಾಕಲಾಗಿದೆ.
ಮಾನ್ಯ ಗೃಹ ಸಚಿವರೇ,
ಕೊಲೆ ಪಾತಕರಿಗೆ ಸನ್ಮಾನ ಕರ್ನಾಟಕಕ್ಕಾದ ಅವಮಾನ ಹಿಂಸೆಗೆ ನೀಡಿರುವ ಬಹಿರಂಗ ಪ್ರಚೋದನೆ
ಅತ್ಯಾಚಾರಿಗಳಿಗೆ, ಕೊಲೆಪಾತಕರಿಗೆ ಸನ್ಮಾನ ಮಾಡುವುದನ್ನು ಗುಜರಾತು, ಉತ್ತರ ಪ್ರದೇಶಗಳಲ್ಲಿ ಕಂಡಿದ್ದೆವು. ಛೆ, ಎಂತಹ ಸ್ಥಿತಿಗೆ ಈ ರಾಜ್ಯಗಳು ತಲುಪಿದವಲ್ಲಾ ಎಂದು ಮರುಗಿದ್ದೆವು, ಈ ರೀತಿಯಲ್ಲಿ ಅಪರಾಧಿಗಳನ್ನು ಸನ್ಮಾನಿಸಿ ಅಪರಾಧಕ್ಕೆ ಸಾಮಾಜಿಕ ಮನ್ನಣೆ ನೀಡುವುದನ್ನು ನಾವು ಪ್ರತಿಭಟಿಸಿದ್ದೆವು. ಆದರೆ ನಮ್ಮದೇ ರಾಜ್ಯದಲ್ಲಿ, ಕರ್ನಾಟಕದ ಹೆಮ್ಮೆಯ ದನಿ ಗೌರಿ ಲಂಕೇಶ್ ಅವರನ್ನು ಕೊಲೆಗೈದ ಆರೋಪಿಗಳನ್ನು ಸನ್ಮಾನಿಸಿರುವುದ ಕಂಡು ನಾವು ದಂಗಾಗಿದ್ದೇವೆ. ಇದು ಕರ್ನಾಟಕದ ಪರಂಪರೆಗೆ, ಈ ನೆಲ ಪೋಷಿಸಿಕೊಂಡು ಬರುತ್ತಿರುವ ಮಾನವೀಯ ಮೌಲ್ಯಗಳಿಗೆ ಆದ ದೊಡ್ಡ ಕಳಂಕ ಎಂದು ನಾವು ಭಾವಿಸುತ್ತೇವೆ. ಏನೂ ಆಗಿಲ್ಲವೆಂಬಂತೆ ಗೃಹ ಇಲಾಖೆ ಇರುವುದನ್ನು ಕಂಡು ಮನಸ್ಸಿಗೆ ಬಹಳ ಬೇಸರವೂ ಆಗಿದೆ.
ಕೋಮುಸೌಹಾರ್ಧತೆ ಹಾಗು ಪ್ರಜಾಪ್ರಭುತ್ವ ಪ್ರೇಮಿಯಾಗಿದ್ದ ಗೌರಿ ಲಂಕೇಶ ಹಾಗು ಡಾ. ಎಂ.ಎಂ. ಕಲಬುರಗಿಯವರ ಕೊಲೆ ಗಡುಕ ಆರೋಪಿಗಳು ಬಿಡುಗಡೆಯ ಸಂದರ್ಭದಲ್ಲಿ ಹಿಂದು ಮತಾಂದ ಶಕ್ತಿಗಳು ಇಂತಹ ದುಷ್ಕೃತ್ಯ ನಡೆಸಿವೆ ಮತ್ತು ಈ ಹಿಂದೆ ಗುಜರಾತಿನ ಮುಸ್ಲಿಂ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಆ ಕುಟುಂಬದ ಸದಸ್ಯರ ಕೊಲೆಗೈದ ಅಪರಾಧಿಗಳು ಬಿಡುಗೊಂಡಾಗ ಹಿಂದುತ್ವ ಕೋಮುವಾದಿ ಶಕ್ತಿಗಳು ಅಂತಹ ಅಪರಾಧಿಗಳ ಪರ ನಿಂತು ಅಪರಾದಿ ದುಷ್ಕೃತ್ಯ ಬೆಂಬಲಿಸಿದ್ದಿದೆ.
ಇದು, ಇಂತಹ ಸಮಾಜ ಘಾತುಕ ಶಕ್ತಿಗಳು ನಾಚಿಕೆ ಇಲ್ಲದೆ ತಮ್ಮ ದುಷ್ಕೃತ್ಯ ಮುಂದುವರೆಸಲು ನೈತಿಕ ಶಕ್ತಿಯನ್ನು ಒದಗಿಸುವ ಮೂಲಕ ಸಮಾಜದ ಶಾಂತಿ ಸೌಹಾರ್ಧತೆಗೆ ಗಂಡಂತಾರವಾಗಿ ಪರಿಣಮಿಸಲಿದೆ. ದುಡಿಯುವ ಜನರು ಹಾಗು ಮಹಿಳೆಯರು ಮತ್ತು ದಲಿತರ ಮೇಲಿನ ದೌರ್ಜನ್ಯಕ್ಕೆ ಇಂಬು ನೀಡಲಿದೆ. ಆದ್ದರಿಂದ, ಇಂತಹ ವೈಭವೀಕರಣದ ನಿಗ್ರಹಕ್ಕೆ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ರಕ್ಷಣೆಗೆ ಅಗತ್ಯ ಕಾನೂನು ರೂಪಿಸಲು ಮತ್ತು ಕಾನೂನು ಕ್ರಮಕ್ಕೆ ಮುಂದಾಗುವಂತೆ ಕೇಂದ್ರ ಹಾಗು ರಾಜ್ಯ ಸರಕಾರಗಳನ್ನು ನಾವು ಆಗ್ರಹಿಸುತ್ತಿದ್ದೇವೆ. ಎಲ್ಲ ಪ್ರಜಾಪ್ರಭುತ್ವ ಹಾಗು ಸಾಮಾಜಿಕ ಸೌಹಾರ್ಧತೆಗಾಗಿ ಕಾರ್ಯ ನಿರ್ವಹಿಸುವ ಶಕ್ತಿಗಳು ಈ ದಿಕ್ಕಿನಲ್ಲಿ ಸರಕಾರಗಳ ಮೇಲೆ ಒತ್ತಡ ಹೇರಲು ಮನವಿ ಮಾಡುತ್ತಿದ್ದೇವೆ.
ಕೊಲೆಪಾತಕರಿಗೆ ಮಾಡಿರುವ ಸನ್ಮಾನ, ಕೊಲೆಗೆ ನೀಡಿರುವ ಪ್ರಚೋದನೆಯಾಗಿದೆ, ಹಿಂಸೆಗೆ ಒದಗಿಸಿರುವ ಸಾಮಾಜಿಕ ಮನ್ನಣೆಯಾಗಿದೆ. ಕರ್ನಾಟಕದ ಪ್ರಜ್ಞಾವಂತ ಜನರೆಲ್ಲರೂ ಈ ಪ್ರಚೋದನಕಾರಿ ನಡತೆಯನ್ನು ತೀವ್ರವಾಗಿ ಖಂಡಿಸುತ್ತಿದ್ದೇವೆ ಹಾಗೂ ಗೃಹ ಸಚಿವರ ಮುಂದೆ ಈ ಹಕ್ಕೊತ್ತಾಯಗಳನ್ನು ಮುಂದಿಡುತ್ತಿದ್ದೇವೆ.
- ಗೌರಿ ಹಂತಕರಿಗೆ ಸನ್ಮಾನ ಮಾಡಿರುವ ವ್ಯಕ್ತಿಗಳ ಮೇಲೆ ಕೊಲೆ ಪ್ರಚೋದನೆಯಡಿ ಕೇಸು ದಾಖಲಿಸಬೇಕು.
- ಹಿಂಸೆ ಮತ್ತು ದ್ವೇಷಕ್ಕೆ ಪ್ರಚೋದನೆ ನೀಡುತ್ತಿರುವ ಕೋಮುವಾದಿ ಸಂಘಟನೆಗಳ ಮೇಲೆ ಕ್ರಮ ಜರುಗಿಸಬೇಕು.
- ಗೌರಿ ಕೊಲೆಯ ವಿಚಾರಣೆಯನ್ನು ತ್ವರಿತಗೊಳಿಸಿ ಹಂತಕರಿಗೆ ಶೀಘ್ರವೇ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು.
ಮೇಲ್ಕಂಡ ಹಕ್ಕೊತ್ತಾಯಗಳೊಂದಿಗೆ ಸರ್ಕಾರದ ಮತ್ತು ಸಮಾಜದ ಗಮನ ಸೆಳೆಯಲು ಅಕ್ಟೋಬರ್ 23 ರಂದು ಹಾಸನದಲ್ಲಿ ನಾಗರಿಕರ ಪ್ರತಿರೋಧ ವ್ಯಕ್ತಪಡಿಸಿ ಕರ್ನಾಟಕ ಸರ್ಕಾರದ ಮಾನ್ಯ ಗೃಹ ಸಚಿವರಿಗೆ ಮನವಿ ನೀಡುತ್ತಿದ್ದೇವೆ.. ಸರ್ಕಾರ ನಾಗರೀಕರ ಈ ಒತ್ತಾಯಕ್ಕೆ ಕೂಡಲೇ ಸ್ಪಂದಿಸಬೇಕೆಂದು ಒತ್ತಾಯಿಸುತ್ತಿದ್ದೇವೆ. ಧನ್ಯವಾದಗಳು
ಹಾಸನ ಜಿಲ್ಲಾಧಿಕಾರಿಗಳ ಮುಖಾಂತರ ಈ ಪತ್ರವನ್ನು ಗೌಹ ಮಂತ್ರಿಗಳಿಗೆ ತಲುಪಿಸುವಂತೆ ಹಾಸನ ಜಿಲ್ಲೆಯ ಜನಪರ ಸಂಘಟನೆಗಳು ಮನವಿಯನ್ನು ಸಲ್ಲಿಸಿದರು. ಈ ಸಂಧರ್ಭದಲ್ಲಿ ಧರ್ಮೇಶ್
ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ, ಎಚ್.ಕೆ. ಸಂದೇಶ್ ಹಿರಿಯ ದಲಿತ ಮುಂಖಂಡರು, ಎಂ. ಸೋಮಶೇಖರ್ ರಾಜ್ಯ ಸಂಚಾಲಕರು ಕ.ದ.ಸಂ.ಸ, ಹುಲಿಕಲ್ ರಾಜಶೇಖರ್ ಹಿರಿಯ ದಲಿತ ಮುಖಂಡರು, ಇರ್ಷಾದ್ ಅಹಮದ್ ದೇಸಾಯಿ ಸಾಮಾಜಿಕ ಕಾರ್ಯಕರ್ತರು, ಈರೇಶ್ ಹಿರೇಹಳ್ಳಿ ದಸಂಸ ಅಂಬೇಡ್ಕರ್‌ವಾದ , ಎಂ.ಜಿ. ಪೃಥ್ವಿ ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ, ರಮೇಶ್ಎ ಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ, ಅಂಬುಗ ಮಲ್ಲೇಶ್ ದಸಂಸ ಅಂಬೇಡ್ಕರ್‌ವಾದ ಮತ್ತಿತರರು ಇದ್ದರು.