ಅತ್ಯಾಚಾರ ಆರೋಪಿಯಾಗಿರುವ ಆರ್ಆರ್ ನಗರ ಶಾಸಕ ಮುನಿರತ್ನ ವಿರುದ್ಧ ಇದೀಗ ಮತ್ತೊಂದು ಎಫ್ಐಆರ್ ದಾಖಲಾಗಿದೆ. ಕೊಲೆ ಯತ್ನ, ಸುಪಾರಿ ನೀಡಿರುವುದಾಗಿ ಆರೋಪಿಸಿ ಮಾಜಿ ಕಾರ್ಪೊರೇಟರ್ ಮಂಜುಳಾ ಅವರ ಪತಿ ನಾರಾಯಣಸ್ವಾಮಿ ನೀಡಿದ ದೂರಿನ ಮೇರೆಗೆ ಈ ಎಫ್ಐಆರ್ ದಾಖಲಾಗಿದೆ.
ಈಗಾಗಲೆ ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಷರತ್ತು ಬದ್ಧ ಜಾಮೀನಿನ ಮೇಲೆ ಹೊರಗಿರುವ ಶಾಸಕ ಮುನಿರತ್ನ ವಿರುದ್ಧ ಎಸ್‌ಐಟಿ ಅಧಿಕಾರಿಗಳು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ 590 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಇದೇ ದಿನ ಈಗ ಮತ್ತೊಂದು ಎಫ್ಐಆರ್ ದಾಖಲಾಗಿರುವ ಹಿನ್ನೆಲೆಯಲ್ಲಿ ಮುನಿರತ್ನಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಎಸ್ಎಲ್ ವರದಿ ಬಂದಿದ್ದು, ಜಾತಿ ನಿಂದನೆ ಮಾಡಿರುವ ಆಡಿಯೋ ಶಾಸಕ ಮುನಿರತ್ನ ಅವರದ್ದೇ ಎಂಬುವುದು ಎಫ್ಎಸ್ಎಲ್ ವರದಿಯಲ್ಲಿ ದೃಢಪಟ್ಟಿದೆ.
ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ್ದ ದೂರುದಾರ ವೇಲು ನಾಯ್ಕರ್, ಮುನಿರತ್ನ ವಿರುದ್ಧ ಈ ಆರೋಪ ಮಾಡಿದಾಗ ಅದನ್ನ ನಿರಾಕರಿಸಿದ್ದರು. ಅಷ್ಟೆ ಅಲ್ಲದೇ ಎಫ್ಎಸ್ಎಲ್ ವರದಿಯಲ್ಲಿ ನಂದೇ ಧ್ವನಿ ಎಂದು ಸಾಭೀತಾದರೆ, ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಡುವುದಾಗಿ ಹೇಳಿಕೆ ನೀಡಿದ್ದರು.
ಈಗ FSL ವರದಿಯಲ್ಲಿ ಮುನಿರತ್ನ ಅವರದೇ ಧ್ವನಿ ಎಂದು ಬಂದಿದ್ದು ಅವರು ರಾಜೀನಾಮೆ ನೀಡಿ ತಮ್ಮ ಮಾತು ಉಳಿಸಿಕೊಳ್ಳಬೇಕೆಂದು ಆಗ್ರಹಿಸಿದ್ದರು.