Wednesday, June 26, 2024

ಸತ್ಯ | ನ್ಯಾಯ |ಧರ್ಮ

ಕೊನೆಗೂ ಸಿಕ್ಕೇಬಿಟ್ಟಿತು ಕುಮಾರಣ್ಣನ ‘ಜಾತ್ಯತೀತತೆ’ಗೆ ಮೀನಿಂಗು!

ಒಂದು ಕಾಲಕ್ಕೆ, ಅಪ್ಪನ ಮಾತು ಕೇಳದೆ ತಪ್ಪು ಮಾಡಿದೆ ಅನ್ನುತ್ತಿದ್ದವರು, ಈಗ ನನ್ನ ಮಾತು ಕೇಳದೆ ಅಪ್ಪನೇ ತಪ್ಪು ಮಾಡಿಕೊಂಡರು ಎಂಬ ಮಾತು ಹೇಳುತ್ತಾರೆಂದರೆ ಜಾತ್ಯತೀತತೆಗೆ ಅವರು ಹುಡುಕಿಕೊಂಡಿರುವ ಮೀನಿಂಗಿನ ಕಾನ್ಫಿಡೆನ್ಸ್ ಬಗ್ಗೆ ನಾವು ಅಡ್ಮೈರ್ ಮಾಡಲೇಬೇಕು.  ಅಷ್ಟಕ್ಕೂ ಏನದು ಮೀನಿಂಗು? – ಮಾಚಯ್ಯ ಎಂ ಹಿಪ್ಪರಗಿ, ರಾಜಕೀಯ ವಿಶ್ಲೇಷಕರು

2006. ಆಗತಾನೇ ಬಿಜೆಪಿ ಜೊತೆ ಸೇರಿ ಕುಮಾರಣ್ಣ ಮುಖ್ಯಮಂತ್ರಿಯಾಗಿದ್ದರು. ಕೋಮುವಾದಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿದ್ದಕ್ಕೆ ಒಂದಷ್ಟು ಟೀಕೆಗಳು ಕೇಳಿಬರುತ್ತಿದ್ದವು. ಸ್ವತಃ ದೇವೇಗೌಡರು ಸಹಾ ಪ್ರಾಮಾಣಿಕವಾಗಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದರು! ಅಂಥಾ ಸಂದರ್ಭದಲ್ಲಿ ಯು.ಆರ್.ಅನಂತಮೂರ್ತಿಯವರು ಯಾವುದೋ ವೇದಿಕೆಯಲ್ಲಿ ಜೆಡಿಎಸ್ ಪಕ್ಷದ ಜಾತ್ಯತೀತ ನಿಲುವಿನ ಬಗ್ಗೆ ಬೇಸರಿಸಿಕೊಂಡು ಮಾತಾಡಿದ್ದರು. ಅದ್ಯಾರೋ ಪತ್ರಕರ್ತ  ಪುಣ್ಯಾತ್ಮ ಸೀದಾ ಕುಮಾರಣ್ಣನ ಮುಖಕ್ಕೆ ಮೈಕು ಹಿಡಿದು, “ಅನಂತಮೂರ್ತಿಯವರು ಹಿಂಗಿಂಗೆ ಅಂದವುರೆ, ಅದುಕ್ಕೆ ನಿಮ್ಮ ರಿಯಾಕ್ಷನ್ನು ಏನು?” ಅಂತ ಕೇಳಿಬಿಡೋದೆ. ಅಷ್ಟರಲ್ಲಾಗಲೆ ಇದೇ ಮಾತು ಕೇಳಿಕೇಳಿ ರೋಸಿಹೋಗಿದ್ದ ಕುಮಾರಣ್ಣನ ಪಿತ್ತ ನೆತ್ತಿಗೇರಿ, “ಅದ್ಯಾರ್ರೀ ಅನಂತಮೂರ್ತಿ? ಈ ಜಾತ್ಯತೀತತೆ ಅಂದ್ರೇನ್ರಿ…? ಅದೆಲ್ಲಿದೆ? ಯಾವ ಡಿಕ್ಷನರಿ ಹುಡುಕಿದ್ರೂ ಇದಕ್ಕೆ ಅರ್ಥ ಸಿಗ್ತಿಲ್ಲ!” ಅಂತ ಪ್ರಾಮಾಣಿಕವಾಗಿ ಬಡಬಡಿಸಿದ್ದರು. 

ಸಿನಿಮಾ ಡಿಸ್ಟ್ರಿಬ್ಯೂಟ್ ಅಂಡ್ ಫೈನಾನ್ಸ್ ಬಿಸಿನೆಸ್‌ನಿಂದ ನೇರವಾಗಿ ವಿಧಾನಸೌಧ ಹೊಕ್ಕಿದ್ದ ಕುಮಾರಣ್ಣನಿಗೆ ಈ ಸಾಹಿತಿ-ಪಾಹಿತಿಗಳ ಬಗ್ಗೆ ಹೇಗೆ ತಿಳಿದಿರಬೇಕು? ಅಷ್ಟು ಕಾಮನ್‌ಸೆನ್ಸ್ ಬೇಡ್ವಾ ಆ ಪತ್ರಕರ್ತನಿಗೆ? ಅಪರಿಚಿತ ಅನಂತಮೂರ್ತಿಗಳ ಬಗ್ಗೆ ಪ್ರಾಮಾಣಿಕವಾದ ರಿಯಾಕ್ಷನ್ನನ್ನೇ ಕೊಟ್ಟಿದ್ದರು. ಆದ್ರೆ ಜಾತ್ಯತೀತತೆ ಮೀನಿಂಗು ಬಗ್ಗೆ ಅವರಾಡಿದ ರಿಸರ್ಚಿನ ಮಾತಿದೆಯಲ್ಲ, ಅದು ಆ ಪತ್ರಕರ್ತನನ್ನು ಅಕ್ಷರಶಃ ದಂಗುಬಡಿಸಿರಲಿಕ್ಕೇ ಬೇಕು. ಯಾಕೆಂದರೆ, ಡಿಕ್ಷ್‌ನರಿಯಲ್ಲೇ ಅರ್ಥ ಸಿಗದಂತ ಪದವನ್ನು ತಾನು ಪ್ರಶ್ನೆಯಾಗಿ ಕೇಳಿಬಿಟ್ಟಿದ್ದೆನಾ? ಅಂತ ಅವನು ಒಳಗೊಳಗೆ ಅದೆಷ್ಟು ನರ್ವಸ್ ಆಗಿರಬೇಡ.

ಆ ಕ್ಷಣದಿಂದ ಈ ಕುಮಾರಣ್ಣನ ಆಯಾಮದಿಂದ ಜಾತ್ಯತೀತತೆಗೆ ಮೀನಿಂಗು ಹುಡುಕುವ ರಿಸರ್ಚು ಕೆಲಸ ಶುರುವಾಗಿತ್ತು. ಇಪ್ಪತ್ತು ತಿಂಗಳು ನಿರಾತಂಕವಾಗಿ ಆಡಳಿತ ನಡೆಸಿದ ಕುಮಾರಣ್ಣನಿಗೆ, ಇನ್ನೇನು ಯಡಿಯೂರಪ್ಪಗೆ ಸಿಎಂ ಸೀಟು ಬಿಟ್ಟುಕೊಡಬೇಕು ಅನ್ನುವಾಗ, ಜಾತ್ಯತೀತತೆ ಪದಕ್ಕೆ ಸಣ್ಣಗೆ ಮೀನಿಂಗು ಸಿಕ್ಕಿರಬೇಕು ಅನ್ನಿಸುತ್ತೆ. ಕೊಸರಾಡಲು ಶುರು ಮಾಡಿದರು. ಅಪ್ಪನ ಮಾತು ಕೇಳದೆ ಕೋಮುವಾದಿಗಳ ಜೊತೆ ಸೇರಿ ಜಾತ್ಯತೀತ ತತ್ವಕ್ಕೆ ದ್ರೋಹ ಬಗೆದೆ ಎಂದು ಕಣ್ಣೀರು ಹಾಕಿದರು, ಮುಮ್ಮಲ ಮರುಗಿದರು. ಅಂತೂ ಮೀನಿಂಗು ಹುಡುಕುವ ರಿಸರ್ಚು ಒಂದು ತಹಬಂದಿಗೆ ಬಂದಂತಾಗಿತ್ತು. ಯಡಿಯೂರಪ್ಪಗೆ ಅಧಿಕಾರ ಕೊಟ್ಟಂತೆ ಮಾಡಿ, ಫಕ್ಕನೆ ಕಿತ್ತುಕೊಂಡು ಚುನಾವಣೆಗೆ ಭಾಷ್ಯ ಬರೆದರು. ಉತ್ತರ ಕರ್ನಾಟಕದ ತುಂಬಾ, ಹೋಗಿಬಂದ ಕಡೆಯಲ್ಲೆಲ್ಲ ಈ ನಂಬಿಕೆದ್ರೋಹದ ಎಪಿಸೋಡನ್ನೇ ಲಾವಣಿ ಪದದಂತೆ ರಾಗವಾಗಿ ಹಾಡಿ ರಂಜಿಸಿದ ಯಡಿಯೂರಪ್ಪನವರು 110 ಸೀಟು ಗೆದ್ದು, ಇಂಡಿಪೆಂಡೆಂಟು ಎಮ್ಮೆಲ್ಲೆಗಳನ್ನು ಖರೀದಿ ಮಾಡಿ, ಕೊನೆಗೂ ಕುಮಾರಣ್ಣನ ಕೃಪಾ ಕಟಾಕ್ಷದಿಂದ ಸರ್ಕಾರ ರಚನೆ ಮಾಡಿದರು.

ಅಲ್ಲಿಂದಾಚೆಗೆ ಸತತ ಹತ್ತು ವರ್ಷಗಳ ಕಾಲ ಅಧಿಕಾರದ ಸನಿಹಕ್ಕೇ ಹೋಗಲಾಗದ ಕುಮಾರಣ್ಣನ ಬಗ್ಗೆಯಾಗಲಿ, ಅವರ ಜಾತ್ಯತೀತತೆಯ ಮೀನಿಂಗಿನ ರಿಸರ್ಚಿನ ಬಗ್ಗೆಯಾಗಲಿ ಜಗತ್ತು ಅಷ್ಟು ತಲೆ ಕೆಡಿಸಿಕೊಳ್ಳಲಿಲ್ಲ. ಆದರೆ ಯಾವಾಗ 2018ರ ಚುನಾವಣೆ ಸಮೀಪಿಸಿ, ಹಂಗೂ ಅಲ್ಲ, ಹಿಂಗೂ ಅಲ್ಲದ ‘ಹಂಗ್ ಅಸೆಂಬ್ಲಿ ನಿರ್ಮಾಣವಾಗುತ್ತೆ ಅನ್ನೋ ಸುಳಿವು ಸಿಕ್ಕಿತೋ ಆಗ ಮತ್ತೆ ರಾಜಕೀಯ ರಂಗ ಕುಮಾರಣ್ಣನ ಮೀನಿಂಗಿನ ಬಗ್ಗೆ ತಲೆ ಕೆಡಿಸಿಕೊಳ್ಳಲಾರಂಭಿಸಿತು. ಹೋದಬಂದಲ್ಲೆಲ್ಲ ಕೋಮುವಾದಿಗಳ ಜೊತೆ ಕೈಜೋಡಿಸಿ ತಪ್ಪು ಮಾಡಿದೆ, ದ್ರೋಹ ಮಾಡಿದೆ ಅಂತ ನರಳಾಡಿದ ಕುಮಾರಣ್ಣನ ಬಗ್ಗೆ ಜಗತ್ತೂ ಸ್ವಲ್ಪ ಸಾಫ್ಟ್ ಕಾರ್ನರ್ ಬೆಳೆಸಿಕೊಂಡಿತು. ಅದೇವೇಳೆಗೆ ದಿಲ್ಲಿ ಮೂಲದ ಪತ್ರಕರ್ತರ‍್ಯಾರೋ “ಈ ಸಲವೂ ನಿಮ್ಮ ಮಗ ಬಿಜೆಪಿ ಜೊತೆಗೆ ಹೋದರೆ ಏನು ಮಾಡ್ತೀರಿ?” ಅಂತ ಕೇಳಿದ್ದಕ್ಕೆ, ನಮ್ಮ ದೇವೇಗೌಡರು, “ಡಿಯರ್ ಸರ್, ಹಂಗೇನಾದ್ರು ಆದ್ರೆ ಈ ಸಲ ನಮ್ಮ ಇಡೀ ಕುಟುಂಬ ಅವನನ್ನು ಬೈಕಾಟ್ ಮಾಡ್ತೀವಿ. ಆತನ ಜೊತೆಗಿನ ಸಂಬಂಧವನ್ನೇ ಕಡಿದುಕೊಳ್ತೀವಿ” ಅಂತ ತುಂಬಾ ಕರಾರುವಾಕ್ಕು ಮಾತಾಡಿದ್ದರು. ಆ ಮೂಲಕ ಕುಮಾರಣ್ಣ ಮತ್ತು ಜಾತ್ಯತೀತತೆ ನಡುವೆ ನಿರ್ಮಾಣವಾಗಿದ್ದ ಬಹುದೊಡ್ಡ ಕಂದರವನ್ನು ದೇವೇಗೌಡರು ತಮ್ಮ ಅನುಭವ ಬಳಸಿ, ಹರಸಾಹಸ ಪಟ್ಟು ಮುಚ್ಚಿಹಾಕುವ ಪಿತೃಧರ್ಮ ಪಾಲಿಸಿದ್ದರು. ಕುಮಾರಣ್ಣ ಕೂಡಾ ತಂದೆಯ ಮಾತಿಗೆ, ವಿಧೇಯ ವಿದ್ಯಾರ್ಥಿಯಂತೆ ತಲೆಬಾಗಿಸಿದ್ದನ್ನು ನೋಡಿ, ಅಂತೂ ಕುಮಾರಣ್ಣನಿಗೆ ಜಾತ್ಯತೀತತೆಯ ಮೀನಿಂಗು ಸಿಕ್ಕೇಬಿಟ್ಟಿತು ಅಂತ ನಾವೂ ಹರ್ಷಪಟ್ಟಿದ್ದೆವು.

ನಮ್ಮ ನಿರೀಕ್ಷೆ ಸುಳ್ಳಾಗಲಿಲ್ಲ. ಹಂಗ್ ಅಸೆಂಬ್ಲಿಯೇ ನಿರ್ಮಾಣವಾಯ್ತು. ರಾಷ್ಟ್ರಮಟ್ಟದಲ್ಲಿ ಬೊಕ್ಕಬೋರಲು ಬಿದ್ದಿದ್ದ ಕಾಂಗ್ರೆಸ್, ಕರ್ನಾಟಕದ ಅಧಿಕಾರ ಚುಕ್ಕಾಣಿಯನ್ನು ಕಳೆದುಕೊಳ್ಳಲು ಇಷ್ಟವಿಲ್ಲದೆ, ಕುಮಾರಣ್ಣನನ್ನೇ ಸಿಎಂ ಮಾಡುವ ಮೈತ್ರಿ ಒಪ್ಪಂದಕ್ಕೂ ಒಪ್ಪಿಕೊಂಡಿತು.

ಎಲ್ಲಾ ಸರಿಹೋಯ್ತು, ಜಾತ್ಯತೀತತೆಗೆ ಮೀನಿಂಗು ಹುಡುಕುವ ರಿಸರ್ಚಿಗೂ ಮುಕ್ತಿ ಸಿಕ್ಕಿತು ಅಂದುಕೊಳ್ಳುವ ವೇಳೆಗೆ ಸರಿಯಾಗಿ, ರೊಚ್ಚಿಗೆದ್ದ ಯಡಿಯೂರಪ್ಪ ಮುಂಬೈ ರೆಸಾರ್ಟುಗಳಲ್ಲಿ ಜೆಡಿಎಸ್-ಕಾಂಗ್ರೆಸ್ಸಿನ ಹದಿನೇಳು ಎಮ್ಮೆಲ್ಲೆಗಳನ್ನು ಅಡ್ಡಡ್ಡ ‘ಮಲಗಿಸಿ’ ಆಪರೇಷನ್ ಮಾಡಿಬಿಡೋದಾ! ತಗೋ, ಮತ್ತೆ ಕುಮಾರಣ್ಣನ ಸರ್ಕಾರ ಢಮಾರ್! ಅರ್ಥಾತ್, ಹತ್ತಿರತ್ತಿರ ಕೈಗೆ ಸಿಕ್ಕೇಬಿಟ್ಟಿದ್ದ ಜಾತ್ಯತೀತತೆಯ ಮೀನಿಂಗೂ, ಮತ್ತೆ ಮಿಸ್ಸ್!

ಥೂತ್ತೇರಿ, ಆ ಜಾತ್ಯತೀತತೆಯ ಗ್ರಹಚಾರವೇ ಸರಿ ಇಲ್ಲ ಮಾರ್ರೆ! ಕುಮಾರಣ್ಣನಿಗೆ ಜಾತ್ಯತೀತತೆ ಮೇಲೆ ಮತ್ತೆ ಡೌಟು, ರಿಸರ್ಚು ಮತ್ತೆ ಶುರು….

ಇಂಥಾ ಕಣ್ಣಾಮುಚ್ಚಾಲೆ ರಿಸರ್ಚಿನ ಆಟದ ತಳಮಳವನ್ನು ಅದೇಗೋ ಸಹಿಸಿಕೊಂಡಿದ್ದ ಕುಮಾರಣ್ಣನಿಗೆ ಇದೀಗ 2023ರಲ್ಲಿ ಮತದಾರ ಕೊಟ್ಟ ತೀರ್ಪು ನೋಡಿ ಕಡುಕೆಟ್ಟ ಹತಾಶೆ ಆವರಿಸಿದೆ. ಇಂಥಾ ಸಮಯದಲ್ಲೇ, ದಿಢೀರ್ ಜ್ಞಾನೋದಯವಾದಂತೆ ಇಷ್ಟು ದಿನಗಳ ಹುಡುಕಾಟಕ್ಕೆ ಜಾತ್ಯತೀತತೆಗೆ ಡೆಫನೆಟ್ ಮೀನಿಂಗೂ ಸಿಕ್ಕಿದೆ. ಈಗ ಸಿಕ್ಕಿರುವ ಮೀನಿಂಗಿನ ಬಗ್ಗೆ ಅವರಿಗೆಷ್ಟು ಖಾತರಿಯಿದೆಯೆಂದರೆ, ಮೊನ್ನೆ ಟೀವಿ ಚಾನೆಲ್ಲೊಂದರಲ್ಲಿ ಕೂತು, “ಅಯ್ಯೋ ನಮ್ಮಪ್ಪ ಈ ಜಾತ್ಯತೀತ ಸಿದ್ಧಾಂತ ನಂಬಿ ಹಾಳಾಗೋದ್ರು, ಆ ಸಿದ್ಧಾಂತ ಬಿಟ್ಟಿದ್ದ್ರೆ ಇನ್ನೂ ದೊಡ್ಡ ಸ್ಥಾನಕ್ಕೆ ಹೋಗುತ್ತಿದ್ದ್ರು ಅಂತಕ್ಕಂತ ಮಾತು ಹೇಳ್ತೀನಿ” ಅಂತ ರಾಜಕಾರಣದ ಫೀನಿಕ್ಸ್ ಹಕ್ಕಿ ದೇವೇಗೌಡರಿಗೇ ಪಾಠ ಮಾಡಿದರು!

ಒಂದು ಕಾಲಕ್ಕೆ, ಅಪ್ಪನ ಮಾತು ಕೇಳದೆ ತಪ್ಪು ಮಾಡಿದೆ ಅನ್ನುತ್ತಿದ್ದವರು, ಈಗ ನನ್ನ ಮಾತು ಕೇಳದೆ ಅಪ್ಪನೇ ತಪ್ಪು ಮಾಡಿಕೊಂಡರು ಎಂಬ ಮಾತು ಹೇಳುತ್ತಾರೆಂದರೆ ಜಾತ್ಯತೀತತೆಗೆ ಅವರು ಹುಡುಕಿಕೊಂಡಿರುವ ಮೀನಿಂಗಿನ ಕಾನ್ಫಿಡೆನ್ಸ್ ಬಗ್ಗೆ ನಾವು ಅಡ್ಮೈರ್ ಮಾಡಲೇಬೇಕು.  ಅಷ್ಟಕ್ಕೂ ಏನದು ಮೀನಿಂಗು?

ಕುಮಾರಣ್ಣನ ಪ್ರಕಾರ ಜಾತ್ಯತೀತತೆ ಅಂದರೆ ‘ಮುಸಲ್ಮಾನರು’! ಅದು ಹೇಗೆ?

ಎಲ್ಲಾ ರಾಜಕಾರಣಿಗಳಿಗಿರುವಂತೆ ಕುಮಾರಣ್ಣನ ಬೆನ್ನಿಗೂ ಒಂದು ಥಿಂಕ್ ಟ್ಯಾಂಕು ಇದೆ. ಅಲ್ಲಿರುವವರಲ್ಲಿ ಬಹುಪಾಲು ಸ್ವಯಂಭೃಗಳೇ. ಅವರೆಲ್ಲ ಸೇರಿ, ಈ ಸಲ ಜೆಡಿಎಸ್ ಐವತ್ತು ಸ್ಥಾನಗಳಲ್ಲಿ ಗೆಲ್ಲೋದು ಗ್ಯಾರಂಟಿ ಅನ್ನೋ ಲೆಕ್ಕಾಚಾರವನ್ನು ಕುಮಾರಣ್ಣನ ತಲೆಗೆ ತುಂಬಿದ್ದರು. ಹೇಗೂ ಜಾತಿಯ ಕಾರಣಕ್ಕೆ ಹಳೇ ಮೈಸೂರು ಪ್ರಾಂತ್ಯದಲ್ಲಿ ಮೂವತ್ತರಿಂದ ಮೂವತ್ತೈದು ಸ್ಥಾನ (ಬೆಂಗಳೂರು ಸೇರಿ) ಗೆಲ್ಲಲಿದೆ. ಕೋಮುವಾದಿ ಬಿಜೆಪಿಯ ವಿರುದ್ಧ ಸಿಟ್ಟಿಗೆದ್ದಿರುವ ಮುಸಲ್ಮಾನರ ಒಂದಷ್ಟು ಮತಗಳನ್ನು ಈ ಹಿಂದಿನಂತೆಯೇ ಜಾತ್ಯತೀತತೆ ಕಾರಣಕ್ಕೆ ಜೆಡಿಎಸ್ ಸೆಳೆದುಕೊಂಡುಬಿಟ್ಟರೆ ಕಾಂಗ್ರೆಸ್‌ನ ಓಟಕ್ಕೆ ಬ್ರೇಕ್ ಹಾಕಿ ಅದನ್ನು ತೊಂಬತ್ತರ ಗಡಿಯಲ್ಲಿ ಕಟ್ಟಿಹಾಕಬಹುದು. ಹೇಗೂ ಯಡಿಯೂರಪ್ಪನವರ ಕಾರಣಕ್ಕೆ ಲಿಂಗಾಯತ ಮತಗಳು ಬಿಜೆಪಿಗೆ ಕೈಕೊಡುವುದರಿಂದ ಉತ್ತರ ಕರ್ನಾಟಕದಲ್ಲಿ ಜೆಡಿಎಸ್‌ಗೆ ಎಂಟತ್ತು ಸೀಟು ಗೆಲ್ಲುವ ಛಾನ್ಸಿದೆ. ಅದಕ್ಕೆ ಮುಸ್ಲಿಂ ಮತಗಳು ನೆರವಾಗಲಿವೆ ಅನ್ನೋ ವರದಿ ಒಪ್ಪಿಸಿದ್ದರು. ಅದನ್ನು ನಂಬಿಯೇ ಲೌಡ್‌ಸ್ಪೀಕರ್ ಇಬ್ರಾಹಿಂ ಸಾಹೇಬರನ್ನು ತಮ್ಮ ಪಕ್ಷದ ಅಧ್ಯಕ್ಷರನ್ನಾಗಿ ಮಾಡಿಕೊಂಡು ಮುಸ್ಲಿಂ ಮತಗಳಿಗೆ ಗಾಳ ಹಾಕಿದರು ಕುಮಾರಣ್ಣ. ಥಿಂಕ್‌ಟ್ಯಾಂಕ್ ನುಡಿದಿದ್ದ ಭವಿಷ್ಯವಾಣಿಯನ್ನು ತುಂಬಾ ಗಂಭೀರವಾಗಿ ನಂಬಿದ್ದ ಕುಮಾರಣ್ಣ, ಐವತ್ತು ಪಕ್ಕಾ, ಸಿಎಂ ಗ್ಯಾರಂಟಿ ಎಂಬ ವಿಶ್ವಾಸದಲ್ಲಿದ್ದರು. ಆದರೆ ಫಲಿತಾಂಶ ಸೀದಾ ಹತ್ತೊಂಬತ್ತರ ಗಡಿಗೆ ತಂದು ನಿಲ್ಲಿಸಿತಲ್ಲಾ, ಆಗಲೇ ಅವರಿಗೆ ಜಾತ್ಯತೀತತೆ ಪದಕ್ಕೆ ಮೀನಿಂಗು ಸಿಕ್ಕಿದ್ದು.

ಈ ಸಲ ಮತಗಳ ಧ್ರುವೀಕರಣವನ್ನು ನೋಡಿದಾಗ, ಕಾಂಗ್ರೆಸ್‌ಗೆ ಸಾಲಿಡ್ಡಾಗಿ ಹರಿದುಹೋದ ಮತಗಳೆಂದರೆ ಮುಸ್ಲೀಮರ ಮತಗಳು. ಬಿಜೆಪಿಯ ಕೋಮುವಾದಿ ಅಜೆಂಡಾಗಳಿಂದ ಹೈರಾಣಾಗಿದ್ದ ಅವರಾದರೂ, ಇನ್ನೇನು ಮಾಡಿಯಾರು? ಅದರ ನಂತರ ದಲಿತರ ಮತಗಳೂ ಗಣನೀಯವಾಗಿ ಕಾಂಗ್ರೆಸ್ ಕೈಹಿಡಿದಿದ್ದವು. ಹಾಗೆ ನೋಡಿದರೆ, ಡಿ.ಕೆ.ಶಿವಕುಮಾರರ ಕಾರಣಕ್ಕೆ ಒಕ್ಕಲಿಗ ಮತಗಳು, ಯಡಿಯೂರಪ್ಪನವರ ನಿರ್ಲಕ್ಷ್ಯದ ವಿದ್ಯಮಾನದಿಂದ ಲಿಂಗಾಯತರ ಮತಗಳು ಕಾಂಗ್ರೆಸ್‌ಗೆ ಯಾವ ಮಟ್ಟದಲ್ಲಿ ಬರಲಿವೆ ಎಂಬ ನಿರೀಕ್ಷೆಯಿತ್ತೋ, ಅಷ್ಟು ಮಟ್ಟದಲ್ಲಿ ಹರಿದು ಬಂದಿಲ್ಲ. ಆದಾಗ್ಯೂ, ಮುಸ್ಲೀಂ, ದಲಿತ ಹಾಗೂ ಒಬಿಸಿಯ ಸಣ್ಣಪುಟ್ಟ ಜಾತಿಗಳು ಗೊಂದಲಕ್ಕೆ ಆಸ್ಪದವಿಲ್ಲದೆ ಕಾಂಗ್ರೆಸ್‌ನತ್ತ ಸರಿದಿದ್ದರಿಂದಾಗಿ ಕಾಂಗ್ರೆಸ್ ಅನಾಮತ್ತು 135ಕ್ಕೆ ತಲುಪಿದೆ.

ಈ ಲೆಕ್ಕಾಚಾರ ಅರ್ಥವಾದದ್ದೇ, ಕುಮಾರಣ್ಣನ ತಲೆ ಚಿಟ್ಟುಹಿಡಿದು ಹೋಗಿದೆ. ಇಬ್ರಾಹಿಂ ಸಾಹೇಬರನ್ನು ಅಧ್ಯಕ್ಷರನ್ನಾಗಿ ಮಾಡಿ, ಅವಕಾಶ ಸಿಕ್ಕಾಗ ದಲಿತ ಸಿಎಂ ದಾಳವನ್ನೂ ಉರುಳಿಸಿ ನೋಡಿದರೂ ಈ ಎರಡು ಸಮುದಾಯಗಳು ಜೆಡಿಎಸ್‌ಗೆ ಕೈಕೊಟ್ಟಿವೆಯಲ್ಲ, ಇಂತದ್ದರಲ್ಲಿ ಜಾತ್ಯತೀತತೆ ನಂಬಿಕೊಂಡಿರಬೇಕಾ? ಎಂಬ ಜುಗುಪ್ಸೆ ಕಾಡಲಾರಂಭಿಸಿದೆ. ಈ ಮೊದಲು ಸಹಾ ದಲಿತರ ಮತಗಳೇನು ದಟ್ಟವಾಗಿ ಜೆಡಿಎಸ್‌ಗೆ ಒಲಿದು ಬರುತ್ತಿರಲಿಲ್ಲ. ಆದರೆ ಕಾಂಗ್ರೆಸ್‌ಗೆ ಪೈಪೋಟಿ ನೀಡುವಷ್ಟರ ಮಟ್ಟಿಗೆ ಮುಸ್ಲಿಂ ಮತಗಳನ್ನು ಗಿಟ್ಟಿಸಿಕೊಳ್ಳುವಲ್ಲಿ ಜೆಡಿಎಸ್ ಯಶಸ್ವಿಯಾಗುತ್ತಿತ್ತು. ಝಮೀರು, ಅನ್ಸಾರಿ ಮೊದಲಾದವರ ಪಾತ್ರವಿರುತ್ತಿತ್ತು. ಆದರೆ ಈ ಸಲ, ತಮ್ಮ ಮತಗಳು ವಿಭಜನೆಯಾಗುವುದರಿಂದ ಕೋಮುವಾದಿಗಳಿಗೆ ಲಾಭ ಎಂಬ ಸಿಂಗಲ್ ಲೈನ್ ಅಜೆಂಡಾಕ್ಕೆ ಕಟ್ಟುಬಿದ್ದ ಮುಸ್ಲೀಮರು, ಸಾರಾಸಗಟು ಕಾಂಗ್ರೆಸಿಗೆ ಮತ ಹಾಕಿದ್ದಾರೆ. ಆ ಲುಕ್ಸಾನೇ ಜೆಡಿಎಸ್ ಪಕ್ಷವನ್ನು ಹತ್ತೊಂಬತ್ತರ ಗಡಿಗೆ ತಂದು ನಿಲ್ಲಿಸಿರುವುದು, ಮತ್ತು ಕುಮಾರಣ್ಣನ ಚೌಕಾಶಿ ರಾಜಕಾರಣಕ್ಕೂ ಕಲ್ಲು ಹಾಕಿರೋದು.

ಹಾಗಾಗಿಯೇ ಕುಮಾರಣ್ಣ ಈ ಜಾತ್ಯತೀತತೆಯ ಸಹವಾಸವೇ ಬೇಡ ಅನ್ನೋ ತೀರ್ಮಾನಕ್ಕೆ ಬಂದಿದ್ದಾರೆ. ಜಾತ್ಯತೀತತೆಯ ಕಾರಣಕ್ಕೆ ಕಟ್ಟುನಿಟ್ಟಿನ ಜಾತಿ ರಾಜಕಾರಣ ಮಾಡುವ ಅವಕಾಶವನ್ನೂ ಕೈಚೆಲ್ಲಿ, ಸ್ವಜಾತಿಯ ವಿಶ್ವಾಸವನ್ನೂ ಕಳೆದುಕೊಳ್ಳಬೇಕಾಯ್ತು; ಇತ್ತ ದಲಿತ, ಮುಸ್ಲಿಂ ಮತಗಳೂ ಕೈಬಿಟ್ಟುಹೋದವು. ಇನ್ನು ನನಗ್ಯಾಕೆ ಈ ಜಾತ್ಯತೀತತೆಯ ಹಂಗು ಎಂಬಲ್ಲಿಗೆ ಕುಮಾರಣ್ಣನ ಪರ್ವ ಬಂದು ನಿಂತಿದೆ. ಅದಕ್ಕೇ, ’ಅಪ್ಪ ಜಾತ್ಯತೀತ ರಾಜಕಾರಣ ಮಾಡಿ ಹಾಳಾದರು, ಕಡೇಪಕ್ಷ ಯಡಿಯೂರಪ್ಪನಂತೆ ಪರಿಶುದ್ಧ ಜಾತಿ ರಾಜಕಾರಣ ಮಾಡಿದ್ದರೆ, ಒಕ್ಕಲಿಗ ಬೆಲ್ಟಿನ ಮೂವತ್ತೈದು ನಲವತ್ತು ಸೀಟು ಗೆದ್ದು ಚೌಕಾಶಿ ರಾಜಕಾರಣ ಮಾಡಬಹುದಿತ್ತು’ ಎಂಬರ್ಥದಲ್ಲಿ ದೇವೇಗೌಡರಿಗೆ ಬುದ್ಧಿ ಮಾತು ಹೇಳಿದ್ದಾರೆ.

ಮುಸಲ್ಮಾನರ ವಿರುದ್ಧ ದ್ವೇಷಕಾರುವುದನ್ನೇ ತನ್ನ ಏಕಮಾತ್ರ ಬಂಡವಾಳ ಮಾಡಿಕೊಂಡ ಹಾಗೂ ಮುಸ್ಲೀಮರ ಓಲೈಕೆಯೇ ಜಾತ್ಯತೀತತೆ ಎಂದು ಬಿಂಬಿಸುತ್ತಾ ಬಂದ ಕೋಮುವಾದಿ ಬಿಜೆಪಿ ಪಕ್ಷದ ಅಂಗಳದಲ್ಲಿ ನಿಂತು, ಕುಮಾರಣ್ಣ ಜಾತ್ಯತೀತತೆಯನ್ನು ತೆಗಳುತ್ತಾರೆಂದರೆ, ಅವರು ಕಂಡುಕೊಂಡಿರುವ ಮೀನಿಂಗನ್ನು ಹೀಗಲ್ಲದೆ ಇನ್ನೇಗೆ ಊಹಿಸಿಕೊಳ್ಳಲು ಸಾಧ್ಯ? ನೀವೇ ಹೇಳಿ..

ಅಂದಹಾಗೆ ಇತ್ತ ದೇವೇಗೌಡರು, ಹಿರೀಮಗ ರೇವಣ್ಣನನ್ನು ಪಕ್ಕದಲ್ಲಿಟ್ಟುಕೊಂಡು ‘ನಾವು ಯಾರ ಜೊತೆಗೂ ಮೈತ್ರಿ ಮಾಡಿಕೊಳ್ಳಲ್ಲ ಸ್ವತಂತ್ರವಾಗಿ ಪಕ್ಷದ ಅಸ್ತಿತ್ವ ಉಳಿಸಿಕೊಳ್ತೇವೆ’ ಎಂದು ಈ ಇಳಿವಯಸ್ಸಿನಲ್ಲೂ ಶಪಥಗೈಯುತ್ತಿದ್ದರೆ, ಅತ್ತ ಕುಮಾರಣ್ಣ ಬಿಜೆಪಿ ಲೆಟರ್‌ಹೆಡ್‌ನಲ್ಲಿ ಹಸ್ತಾಕ್ಷರ ಹಾಕಿ ಕೂತಿರೋದನ್ನು ನೋಡಿದಾಗ, ಅದ್ಯಾಕೋ 2006ರ ಫ್ಯಾಮಿಲಿ ಮೆಲೋ ಡ್ರಾಮಾ ಮತ್ತೆ ಮರುಕಳಿಸುವಂತೆ ಕಾಣುತ್ತಿದೆ.

ಮಾಚಯ್ಯ ಎಂ ಹಿಪ್ಪರಗಿ

ರಾಜಕೀಯ ವಿಶ್ಲೇಷಕರು

ಇದನ್ನೂ ಓದಿ-ಸಿದ್ದರಾಮಯ್ಯನವರ ಮೇಲೆ ಕುಮಾರಸ್ವಾಮಿಯವರಿಗೆ ಯಾಕಿಷ್ಟು ಸಿಟ್ಟು?

Related Articles

ಇತ್ತೀಚಿನ ಸುದ್ದಿಗಳು