ಪುಣೆ: ಪುಣೆಯ ಸರ್ಕಾರಿ ಕಾಲೇಜೊಂದರ ಪ್ರಾಂಶುಪಾಲರ ಕಚೇರಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ತೆರವುಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್‌ಎಸ್) ಮುಖಂಡ ಅಮಿತ್ ಠಾಕ್ರೆ ಮತ್ತು ಅವರ ಬೆಂಬಲಿಗರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಛತ್ರಪತಿ ಶಿವಾಜಿ ಮಹಾರಾಜ್ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳ ಪಕ್ಕದಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಅಳವಡಿಸಿರುವುದಕ್ಕೆ ಅಮಿತ್ ಠಾಕ್ರೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಎಂಎನ್‌ಎಸ್ ಕಾರ್ಯಕರ್ತರು ಪ್ರಧಾನಿ ಮೋದಿ ಅವರ ಫೋಟೋವನ್ನು ಅಲ್ಲಿಂದ ತೆರವುಗೊಳಿಸಿದ್ದರು.
ಅನುಮತಿಯಿಲ್ಲದೆ ಕಚೇರಿಗೆ ನುಗ್ಗಿದ ಅಮಿತ್ ಠಾಕ್ರೆ ಮತ್ತು ಅವರ ಬೆಂಬಲಿಗರು ಫೋಟೋ ತೆಗೆದುಹಾಕಿದ್ದಲ್ಲದೆ, ಕಾಲೇಜು ಸಿಬ್ಬಂದಿಗೆ ಬೆದರಿಕೆ ಹಾಕಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರು ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ಪೊಲೀಸರು ಅಮಿತ್ ಠಾಕ್ರೆ ಹಾಗೂ 20 ರಿಂದ 25 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮತ್ತೊಂದೆಡೆ, ಸರ್ಕಾರಿ ಶಿಷ್ಟಾಚಾರದ (official protocol) ಪ್ರಕಾರವೇ ಪ್ರಧಾನಿ ಅವರ ಭಾವಚಿತ್ರವನ್ನು ಹಾಕಲಾಗಿತ್ತು ಎಂದು ಬಿಜೆಪಿ ಸ್ಪಷ್ಟಪಡಿಸಿದೆ.
