Home ಬ್ರೇಕಿಂಗ್ ಸುದ್ದಿ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಅವಾಚ್ಯ ನಿಂದನೆ: ಕಾಂಗ್ರೆಸ್ ನಾಯಕ ರಾಜೀವ್ ಗೌಡ ವಿರುದ್ಧ ಎಫ್‌ಐಆರ್

ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಅವಾಚ್ಯ ನಿಂದನೆ: ಕಾಂಗ್ರೆಸ್ ನಾಯಕ ರಾಜೀವ್ ಗೌಡ ವಿರುದ್ಧ ಎಫ್‌ಐಆರ್

0

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಅಶ್ಲೀಲ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದಡಿ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಅವರು ಕಳೆದ ಎರಡು ದಿನಗಳಿಂದ ತಲೆಮರೆಸಿಕೊಂಡಿದ್ದಾರೆ. ಫೋನ್‌ ಸ್ವಿಚ್‌ಆಫ್ ಮಾಡಿಕೊಂಡಿರುವ ಹಿನ್ನೆಲೆ ಅವರನ್ನು ಬಂಧಿಸಲು ಪೊಲೀಸರು ಮೂರು ವಿಶೇಷ ತಂಡಗಳನ್ನು ರಚಿಸಿದ್ದಾರೆ.

ಗುರುವಾರ ರಾಜೀವ್ ಗೌಡ ಮನೆ ಸೇರಿದಂತೆ ಸಂಬಂಧಿಕರು ಹಾಗೂ ಸ್ನೇಹಿತರ ಮನೆಗಳಲ್ಲಿ ಪೊಲೀಸರು ಶೋಧ ಕಾರ್ಯ ನಡೆಸಿದರು. ಈ ವೇಳೆ ರಾಜೀವ್ ಗೌಡ ಪತ್ನಿ ಪೊಲೀಸರೊಂದಿಗೆ ವಾಗ್ವಾದ ನಡೆಸಿ, ಸರ್ಚ್ ವಾರಂಟ್ ಇಲ್ಲದೇ ಮನೆಗೆ ಬರಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಈ ಘಟನೆ ರಾಜೀವ್ ಗೌಡ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಕಾರಣವಾಗಿದ್ದು, ಕಾಂಗ್ರೆಸ್ ಪಕ್ಷಕ್ಕೂ ಮುಜುಗರ ತಂದಿದೆ. ಪ್ರಕರಣ ಹೈಕಮಾಂಡ್ ಮಟ್ಟಕ್ಕೂ ತಲುಪಿದ್ದು, ಈ ಕುರಿತು ವರದಿ ಸಲ್ಲಿಸುವಂತೆ ಕೆಪಿಸಿಸಿಗೆ ಸೂಚನೆ ನೀಡಲಾಗಿದೆ. ಎಐಸಿಸಿ ಸೂಚನೆ ಹಿನ್ನೆಲೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ನೇರವಾಗಿ ಕರೆ ಮಾಡಿ ಮಾಹಿತಿ ಪಡೆದಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ.

ಇದರ ಬೆನ್ನಲ್ಲೇ ಕೆಪಿಸಿಸಿ ರಾಜೀವ್ ಗೌಡಗೆ ನೋಟಿಸ್ ಜಾರಿ ಮಾಡಿದ್ದು, ವಾರದೊಳಗೆ ಸಮರ್ಪಕ ಉತ್ತರ ನೀಡದಿದ್ದರೆ ಶಿಸ್ತುಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ.

ಇಂದು ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ
ಮಹಿಳಾ ಅಧಿಕಾರಿಗೆ ಅನ್ಯಾಯವಾದರೂ ಸರ್ಕಾರಿ ನೌಕರರ ಸಂಘ ಮೌನ ವಹಿಸಿದ್ದ ಹಿನ್ನೆಲೆಯಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ರಾಜೀವ್ ಗೌಡ ಬಂಧನಕ್ಕೆ ಆಗ್ರಹಿಸಿ ಜಿಲ್ಲಾ ಸರ್ಕಾರಿ ನೌಕರರ ಸಂಘ ಇಂದು ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ನಡೆಸಲಿದೆ.
ಇನ್ನೊಂದೆಡೆ, ಪೌರಾಡಳಿತ ಇಲಾಖೆಯ ಮಹಿಳಾ ಅಧಿಕಾರಿಗೆ ಆಗಿರುವ ಅನ್ಯಾಯದ ಕುರಿತು ಸಂಬಂಧಪಟ್ಟ ಸಚಿವರು ಸ್ಪಷ್ಟ ಪ್ರತಿಕ್ರಿಯೆ ನೀಡದಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.

ರಾಜೀವ್ ಗೌಡ ವಿರುದ್ಧ 9 ಕ್ರಿಮಿನಲ್ ಪ್ರಕರಣಗಳು
ಈ ಮಧ್ಯೆ, ಪೊಲೀಸರು ರಾಜೀವ್ ಗೌಡ ಅವರ ಕ್ರಿಮಿನಲ್ ಹಿನ್ನೆಲೆ ಪರಿಶೀಲನೆ ನಡೆಸಿದ್ದು, ಈವರೆಗೆ ವಿವಿಧ ಠಾಣೆಗಳಲ್ಲಿ ಒಟ್ಟು 9 ಕ್ರಿಮಿನಲ್ ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ. ಶಿಡ್ಲಘಟ್ಟ ನಗರ, ಹೊಸಕೋಟೆ, ದೇವನಹಳ್ಳಿ ಸೇರಿದಂತೆ ಬೆಂಗಳೂರು ನಗರದಲ್ಲೂ ಪ್ರಕರಣಗಳಿದ್ದು, ರಿಯಲ್ ಎಸ್ಟೇಟ್ ವಂಚನೆ ಸೇರಿ ವಿವಿಧ ಆರೋಪಗಳು ದಾಖಲಾಗಿವೆ ಎಂದು ಪೊಲೀಸ್ ಇಲಾಖೆಯ ಉನ್ನತ ಮೂಲಗಳು ಮಾಹಿತಿ ನೀಡಿವೆ.

You cannot copy content of this page

Exit mobile version