ಕರ್ನಾಟಕ ಸರ್ಕಾರವು ‘ಗೌರವ’ದ ಹೆಸರಿನಲ್ಲಿ ನಡೆಯುವ ಹತ್ಯೆ ಮತ್ತು ದೌರ್ಜನ್ಯಗಳನ್ನು ತಡೆಯಲು ‘ಕರ್ನಾಟಕ ವಿವಾಹ ಆಯ್ಕೆ ಸ್ವಾತಂತ್ರ್ಯ ಮತ್ತು ಗೌರವ ಹಾಗೂ ಸಂಪ್ರದಾಯದ ಹೆಸರಿನಲ್ಲಿ ನಡೆಯುವ ಅಪರಾಧಗಳ ತಡೆ ಮತ್ತು ನಿಷೇಧ ಮಸೂದೆ, 2026’ ಅನ್ನು ರೂಪಿಸುತ್ತಿದೆ. ಹುಬ್ಬಳ್ಳಿಯಲ್ಲಿ ನಡೆದ ಮಾನ್ಯ ಪಾಟೀಲ್ ಹತ್ಯೆ ಪ್ರಕರಣದ ನಂತರ ಈ ಕಾನೂನು ಜಾರಿಗೆ ಬರುತ್ತಿದ್ದು, ಇದಕ್ಕೆ ಬಸವಣ್ಣನವರ ವಚನ ಆಧಾರಿತ ‘ಇವ ನಮ್ಮವ ಇವ ನಮ್ಮವ ಕಾನೂನು’ ಎಂದೂ ಕರೆಯಲಾಗಿದೆ.
ಈ ಮಸೂದೆಯ ಪ್ರಕಾರ, ಪ್ರತಿಯೊಬ್ಬರಿಗೂ ತಮ್ಮ ಜೀವನದ ನಿರ್ಧಾರಗಳನ್ನು ತೆಗೆದುಕೊಳ್ಳುವ ಮತ್ತು ಇಷ್ಟಪಟ್ಟವರನ್ನು ಮದುವೆಯಾಗುವ ಸಂಪೂರ್ಣ ಸ್ವಾತಂತ್ರ್ಯವಿರುತ್ತದೆ. ಇಬ್ಬರು ವಯಸ್ಕರು ಒಪ್ಪಿ ಮದುವೆಯಾಗಲು ಪೋಷಕರು, ಕುಟುಂಬ ಅಥವಾ ಜಾತಿಯ ಅನುಮತಿ ಬೇಕಿಲ್ಲ ಎಂದು ಇದು ಸ್ಪಷ್ಟಪಡಿಸುತ್ತದೆ.
ಗೌರವದ ಹೆಸರಿನಲ್ಲಿ ದಂಪತಿಗಳಿಗೆ ಗಂಭೀರ ಗಾಯವುಂಟು ಮಾಡಿದರೆ, ಕನಿಷ್ಠ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಈ ಶಿಕ್ಷೆಯನ್ನು ಜೀವಾವಧಿಯವರೆಗೂ ವಿಸ್ತರಿಸಬಹುದು ಮತ್ತು 3 ಲಕ್ಷ ರೂ.ವರೆಗೆ ದಂಡವನ್ನೂ ಹಾಕಬಹುದು. ಹತ್ಯೆ ಮಾಡಿದರೆ, ಈಗಾಗಲೇ ಇರುವ ಕಾನೂನಿನ ಶಿಕ್ಷೆಯ ಜೊತೆಗೆ ಹೆಚ್ಚುವರಿಯಾಗಿ ಕನಿಷ್ಠ 5 ವರ್ಷ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ.
ಅಂತರ್ಜಾತಿ ಮದುವೆಯ ಸುಳ್ಳು ಭರವಸೆ ನೀಡಿ ಮಹಿಳೆಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿ, ನಂತರ ಜಾತಿಯ ಕಾರಣಕ್ಕೆ ಮದುವೆ ನಿರಾಕರಿಸಿದರೆ ಅದನ್ನು ಅತ್ಯಾಚಾರ ಎಂದು ಪರಿಗಣಿಸಲಾಗುತ್ತದೆ. ಇದಕ್ಕೆ ಕನಿಷ್ಠ 5 ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ. ಮದುವೆ ನಿರಾಕರಣೆಯು ಕೇವಲ ಜಾತಿ ಕಾರಣಕ್ಕಾಗಿಯೇ ನಡೆದಿದೆ ಎಂದು ಕಂಡುಬಂದರೆ, ಮದುವೆಯ ಭರವಸೆಯೇ ಸುಳ್ಳು ಎಂದು ಪರಿಗಣಿಸಲಾಗುತ್ತದೆ.
ದಂಪತಿಗಳಿಗೆ ಬೆದರಿಕೆ ಇದ್ದಲ್ಲಿ, ಅವರು ರಕ್ಷಣೆ ಕೋರಿದ 6 ಗಂಟೆಯೊಳಗೆ ಪೊಲೀಸರು ರಕ್ಷಣೆ ಒದಗಿಸುವುದನ್ನು ಈ ಮಸೂದೆ ಕಡ್ಡಾಯಗೊಳಿಸಿದೆ. ಸಂತ್ರಸ್ತ ದಂಪತಿಗಳಿಗೆ ಸರ್ಕಾರವು ವಸತಿ ಸೌಕರ್ಯವನ್ನೂ ಕಲ್ಪಿಸಬೇಕಾಗುತ್ತದೆ.
ಕಳೆದ 5 ವರ್ಷಗಳಲ್ಲಿ ಇಂತಹ ಪ್ರಕರಣಗಳು ನಡೆದ ಪ್ರದೇಶಗಳನ್ನು ಗುರುತಿಸಿ, ಪ್ರತಿ ಜಿಲ್ಲೆಯಲ್ಲಿಯೂ ಅಪರಾಧ ತಡೆಗೆ ವಿಶೇಷ ಕೋಶಗಳನ್ನು ಸ್ಥಾಪಿಸಲು ಮಸೂದೆ ಸೂಚಿಸಿದೆ. ವಿವಾಹ ನೆರವೇರಿಸಲು ಮತ್ತು ಆಪ್ತಸಮಾಲೋಚನೆಗಾಗಿ ಜಿಲ್ಲಾ ಮಟ್ಟದಲ್ಲಿ ‘ಇವ ನಮ್ಮವ ವೇದಿಕೆ’ಯನ್ನು ರಚಿಸಲಾಗುವುದು ಹಾಗೂ ಪ್ರಕರಣಗಳ ತ್ವರಿತ ವಿಚಾರಣೆಗೆ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗುವುದು.
