ಬೆಂಗಳೂರು: ಮೀಸಲಾತಿ ವ್ಯವಸ್ಥೆ ಹಾಗೂ ಅದರ ಫಲಾನುಭವಿಗಳ ಕುರಿತು ಅವಹೇಳನಕಾರಿ ಮತ್ತು ಸಮಾಜದಲ್ಲಿ ದ್ವೇಷದ ವಾತಾವರಣ ಸೃಷ್ಟಿಸುವ ರೀತಿಯ ಹೇಳಿಕೆ ನೀಡಿದ ಆರೋಪದಡಿ ಪಬ್ಲಿಕ್ ಟಿವಿಯ ಆಂಕರ್ ಅರುಣ್ ಬಡಿಗೇರ್ ವಿರುದ್ಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಖಾಸಗಿ ವಾಹಿನಿಯಲ್ಲಿ ಪ್ರಸಾರವಾದ ಕಾರ್ಯಕ್ರಮವೊಂದರಲ್ಲಿ ಅರುಣ್ ಬಡಿಗೇರ್ ಅವರು ಮೀಸಲಾತಿ ಕುರಿತಾಗಿ ನೀಡಿದ್ದ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕಾರ್ಯಕ್ರಮದ ವಿಡಿಯೊ ತುಣುಕುಗಳು ವೈರಲ್ ಆದ ಬೆನ್ನಲ್ಲೇ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಗಳು ಕೇಳಿಬಂದಿದ್ದವು.
ದೂರುದಾರ ಅನಂತಕುಮಾರ್ ಡಿ.ಆರ್. ಅವರು ಪೊಲೀಸರಿಗೆ ಸಲ್ಲಿಸಿರುವ ದೂರಿನಲ್ಲಿ, ನಿರೂಪಕರು ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಸಮಾಜದ ಒಟ್ಟಾರೆ ಅಭಿಪ್ರಾಯ ಎಂಬಂತೆ ಬಿಂಬಿಸಿದ್ದು, ಮೀಸಲಾತಿ ಮತ್ತು ಸಂವಿಧಾನದ ಆಶಯಗಳಿಗೆ ವಿರುದ್ಧವಾದ ಸಂದೇಶವನ್ನು ಹರಡಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಇಂತಹ ಹೇಳಿಕೆಗಳು ಸಮಾಜದಲ್ಲಿ ವಿಭಜನೆ ಮತ್ತು ದ್ವೇಷವನ್ನು ಪ್ರಚೋದಿಸುವ ಸಾಧ್ಯತೆ ಹೊಂದಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅರುಣ್ ಬಡಿಗೇರ್ ಅವರು ಈ ಹಿಂದೆ ಕೂಡ ಮೀಸಲಾತಿ ಹಾಗೂ ಸಂವಿಧಾನ ಸಂಬಂಧಿತ ವಿಚಾರಗಳಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದ್ದು, ಅವರ ವಿರುದ್ಧ ಹಾಗೂ ಸಂಬಂಧಿತ ಖಾಸಗಿ ವಾಹಿನಿಯ ಆಡಳಿತ ಮಂಡಳಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.
ದೂರಿನ ಆಧಾರದ ಮೇಲೆ ನೆಲಮಂಗಲ ಗ್ರಾಮಾಂತರ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಕಲಂ 196(1), 353(1) ಮತ್ತು 353(2) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆತನ ಹೇಳಿಕೆ ಅಡಿಯಲ್ಲಿ ಈಗಾಗಲೇ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ಶುರುವಾಗಿದ್ದು ತನಿಖೆ ಅಡಿಯಲ್ಲಿ ಪೊಲೀಸರು ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ.
