ಬೆಂಗಳೂರು : ರಾಜ್ಯ ಸರ್ಕಾರ (Government )ತಂಬಾಕು ಮತ್ತು ನಿಕೋಟಿನ್ (Nicotine ) ಯುಕ್ತ ಉತ್ಪನ್ನಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಭರದಲ್ಲಿ, ತಂಬಾಕು ರಹಿತ ಪಾನ್ ಮಸಾಲ ಉತ್ಪನ್ನಗಳ ಮೇಲೆಯೂ ನಿರ್ಬಂಧ ವಿಧಿಸಲು ಮುಂದಾಗಿರುವುದು ಮಲೆನಾಡು ಹಾಗೂ ಕರಾವಳಿ ಭಾಗದ ಅಡಕೆ ಬೆಳೆಗಾರರ(Arecanut Farmers ) ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಸರ್ಕಾರದ ಈ ನಡೆ ಲಕ್ಷಾಂತರ ರೈತರ ಜೀವನೋಪಾಯಕ್ಕೆ ನೇರ ಹೊಡೆತ ನೀಡಲಿದೆ ಎಂದು ಬೆಳೆಗಾರರ ಸಂಘಟನೆಗಳು ಕಳವಳ ವ್ಯಕ್ತಪಡಿಸಿವೆ.
ಗುಟ್ಕಾದಲ್ಲಿ ಅಪಾಯಕಾರಿ ತಂಬಾಕು ಮತ್ತು ನಿಕೋಟಿನ್ ಇರುವುದರಿಂದ ಅದನ್ನು ನಿಷೇಧಿಸುವುದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಆದರೆ, ಪಾನ್ ಮಸಾಲಾದಲ್ಲಿ ಅಡಕೆಯೇ ಪ್ರಮುಖ ಕಚ್ಚಾವಸ್ತುವಾಗಿದೆ. ದೇಶದಲ್ಲಿ ಉತ್ಪಾದನೆಯಾಗುವ ಒಟ್ಟು ಅಡಕೆಯಲ್ಲಿ ಶೇಕಡಾ ೬೦ಕ್ಕೂ ಹೆಚ್ಚು ಭಾಗ ಪಾನ್ ಮಸಾಲಾ ತಯಾರಿಕೆಗೆ ಬಳಕೆಯಾಗುತ್ತಿದ್ದು, ದಿಢೀರ್ ನಿಷೇಧದಿಂದ ಮಾರುಕಟ್ಟೆಯಲ್ಲಿ ಅಡಕೆ ದರ ತೀವ್ರವಾಗಿ ಕುಸಿಯುವ ಭೀತಿ ಎದುರಾಗಿದೆ.
ಅಡಕೆಯು ಸಾಂಪ್ರದಾಯಿಕ ಹಾಗೂ ಗಿಡಮೂಲಿಕೆ ಗುಣಗಳನ್ನು ಹೊಂದಿದ್ದು, ತಂಬಾಕು ರಹಿತ ಪಾನ್ ಮಸಾಲಾವನ್ನು ನಿಕೋಟಿನ್ ಯುಕ್ತ ಗುಟ್ಕಾದೊಂದಿಗೆ ಒಂದೇ ತಟ್ಟೆಯಲ್ಲಿಟ್ಟು ನೋಡುವುದು ವೈಜ್ಞಾನಿಕವಾಗಿ ಸರಿಯಲ್ಲ ಎಂಬುದು ರೈತರ ಸ್ಪಷ್ಟ ವಾದವಾಗಿದೆ. ಸ್ಥಳೀಯ ಕೃಷಿ ಆರ್ಥಿಕತೆಯ ಬೆನ್ನೆಲುಬಾಗಿರುವ ಅಡಕೆ ಮಾರುಕಟ್ಟೆಯ ಸ್ಥಿರತೆಯನ್ನು ಕಾಯ್ದುಕೊಳ್ಳಲು ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಿ, ತಂಬಾಕು ರಹಿತ ಉತ್ಪನ್ನಗಳಿಗೆ ಸ್ಪಷ್ಟ ವಿನಾಯಿತಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಒಂದು ವೇಳೆ ರಾಜ್ಯ ಸರ್ಕಾರ ತನ್ನ ನಿರ್ಧಾರವನ್ನು ಮರುಪರಿಶೀಲಿಸದಿದ್ದರೆ, ಕ್ಯಾಂಪ್ಕೋ ಸೇರಿದಂತೆ ವಿವಿಧ ಅಡಕೆ ಸಹಕಾರ ಸಂಘಗಳು ಮತ್ತು ರೈತ ಸಂಘಟನೆಗಳ ಒಕ್ಕೂಟದೊಂದಿಗೆ ಸೇರಿ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಜೊತೆಗೆ ಜನಪ್ರತಿನಿಧಿಗಳ ಮನೆಗೆ ಮುತ್ತಿಗೆ ಹಾಕಿ ಹೋರಾಟ ತೀವ್ರಗೊಳಿಸುವುದಾಗಿ ಅಡಕೆ ಬೆಳೆಗಾರರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
