ಬೆಂಗಳೂರು : ಆದಿವಾಸಿ (Tribal) ಮತ್ತು ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ವಿಶೇಷ ಆಯೋಗ (Special Commission) ರಚನೆಗೆ ಸಿಎಂ ಡಿ ಕೆ ಶಿವಕುಮಾರ್ (DK Shivakumar) ಆದೇಶ ಹೊರಡಿಸಿದ್ದಾರೆ.
ಒಂದು ತಿಂಗಳಲ್ಲಿ ಆಯೋಗ ರಚಿಸುವ ವಾಗ್ದಾನ ನೀಡಿದ್ದ ಸಿಎಂ
ಇತ್ತೀಚೆಗಷ್ಟೇ ವಿಶ್ವ ಆದಿವಾಸಿ ದಿನಾಚಾರಣೆ ಕಾರ್ಯಕ್ರಮದಲ್ಲಿ ಈ ವಿಶೇಷ ಆಯೋಗ ರಚನೆಗೆ ಬೇಡಿಕೆ ನೀಡಲಾಗಿತ್ತು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಒಂದು ತಿಂಗಳಲ್ಲಿ ಆಯೋಗ ರಚಿಸುವ ವಾಗ್ದಾನ ನೀಡಿದ್ದರು. ಈಗ ಎರಡೇ ದಿನದಲ್ಲಿ ಈ ಆದೇಶ ಹೊರಡಿಸುವ ಮೂಲಕ ಡಿ ಕೆ ಶಿವಕುಮಾರ್ ಅವರು ನುಡಿದಂತೆ ನಡೆದಿದ್ದಾರೆ.
ಕರ್ನಾಟಕದಲ್ಲಿ ವಾಸಿಸುತ್ತಿರುವ ಆದಿವಾಸಿ ಮತ್ತು ಅಲೆಮಾರಿ ಸಮುದಾಯಗಳು ಇಂದಿಗೂ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಲವು ಸವಾಲುಗಳನ್ನು ಎದುರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಅವರ ಅಭಿವೃದ್ಧಿ, ಹಕ್ಕುಗಳ ರಕ್ಷಣೆ ಹಾಗೂ ಸಾಮಾಜಿಕ ನ್ಯಾಯವನ್ನು ಒದಗಿಸುವ ಸಲುವಾಗಿ ವಿಶೇಷ ಆಯೋಗವನ್ನು ರಚಿಸಲು ಸರ್ಕಾರ ನಿರ್ಧರಿಸಿದೆ.
ಸಮಾನ ಅವಕಾಶಗಳನ್ನು ಒದಗಿಸಲು ಸರ್ಕಾರ ಬದ್ಧ
ಉತ್ತಮ ಶಿಕ್ಷಣ, ಪೌಷ್ಟಿಕ ಆಹಾರ, ಗುಣಮಟ್ಟದ ಆರೋಗ್ಯ ಸೇವೆ, ವಸತಿ, ಕುಡಿಯುವ ನೀರು, ರಸ್ತೆ, ವಿದ್ಯುತ್ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸುವುದರ ಜೊತೆಗೆ, ಯುವಜನರಿಗೆ ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗಾವಕಾಶಗಳನ್ನು ಕಲ್ಪಿಸುವುದೇ ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಆದಿವಾಸಿ ಮತ್ತು ಅಲೆಮಾರಿ ಸಮುದಾಯಗಳ ಬದುಕಿನಲ್ಲಿ ಹೊಸ ಭರವಸೆ ಮೂಡಿಸುವುದರ ಜೊತೆಗೆ ಸಮಾನ ಅವಕಾಶಗಳನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ.
