ರಾಯಪುರ: ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ಮೇಲೆ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಛತ್ತೀಸ್‌ಗಢದ ರಾಯಪುರದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಸ್ಥಳೀಯ ನಿವಾಸಿ ಗೋಪಾಲ್ ಸಮಂತೋ ನೀಡಿದ ದೂರಿನ ಆಧಾರದ ಮೇಲೆ, ಮೊಯಿತ್ರಾ ವಿರುದ್ಧ ಶನಿವಾರ ಮನ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 196, 197 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಕಳೆದ ಗುರುವಾರ ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಹುವಾ ಮೊಯಿತ್ರಾ ಮಾತನಾಡುತ್ತಾ, ಗಡಿ ಭದ್ರತೆಯ ವಿಷಯದಲ್ಲಿ ಮೋದಿ ಸರ್ಕಾರ ತನ್ನ ಜವಾಬ್ದಾರಿಗಳನ್ನು ನಿರ್ಲಕ್ಷಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಆದರೆ, ಆ ಕಾರ್ಯಕ್ರಮದಲ್ಲಿ ಮೊಹುವಾ ಅಮಿತ್ ಶಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಗೋಪಾಲ್ ಸಮಂತೋ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆ ಹೇಳಿಕೆಗಳು ಸಂವಿಧಾನ ವಿರೋಧಿಯಾಗಿದೆ ಎಂದು ಅವರು ಹೇಳಿದ್ದಾರೆ.
1971ರಲ್ಲಿ ರಾಯಪುರದ ಮನಾ ಕ್ಯಾಂಪ್ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಬಾಂಗ್ಲಾದೇಶದ ನಿರಾಶ್ರಿತರು ನೆಲೆಸಿದ್ದಾರೆ, ಮತ್ತು ಮೊಯಿತ್ರಾ ಅವರ ಹೇಳಿಕೆಯು ಅವರಲ್ಲಿ ಭಯವನ್ನು ಸೃಷ್ಟಿಸಿದೆ ಎಂದು ಅವರು ಹೇಳಿದರು. ಇಂತಹ ಹೇಳಿಕೆಗಳು ಇತರ ಸಮುದಾಯದವರಲ್ಲಿ ಆ ನಿರಾಶ್ರಿತರ ವಿರುದ್ಧ ಆಕ್ರೋಶಕ್ಕೆ ಕಾರಣವಾಗಬಹುದು ಎಂದು ಸಮಂತೋ ತಿಳಿಸಿದ್ದಾರೆ.