“..ಎನ್ ಕೌಂಟರ್ ನವೆಂಬರ್ 18 ಸೋಮವಾರ ರಾತ್ರಿ ನಡೆಯಿತು. ಆದರೆ ಸ್ಥಳೀಯ ಜನರ ಪ್ರಕಾರ ಪೊಲೀಸರು ಎನ್ ಕೌಂಟರ್ ನಡೆದ ಸ್ಥಳದ ಅಕ್ಕಪಕ್ಕದ ಮನೆಯವರಿಗೆ ಮೂರು ದಿನದ ಹಿಂದೆಯೇ ಮನೆ ಖಾಲಿ ಮಾಡಲು ಹೇಳಿದ್ದರಂತೆ. ಯಾಕೆ?..” ನಕ್ಸಲ್ ಎನ್ಕೌಂಟರ್ ಬಗೆಗಿನ ಹಲವು ಅನುಮಾನಗಳ ಬಗ್ಗೆ ಪತ್ರಕರ್ತ ನವೀನ್ ಸೂರಿಂಜೆಯವರ ಬರಹ.. ತಪ್ಪದೇ ಓದಿ
ದಲಿತ-ಆದಿವಾಸಿ ಹೋರಾಟಗಾರ ವಿಕ್ರಂ ಗೌಡ ಹತ್ಯೆಗೆ ಸಂಬಂಧಿಸಿ ಪೊಲೀಸರು ನೀಡಿರುವ ಹೇಳಿಕೆ, ಫೋಟೋ ಮತ್ತು ಎಫ್ಐಆರ್ ಗೆ ಒಂದಕ್ಕೊಂದು ತಾಳೆಯಾಗುತ್ತಿಲ್ಲ. ಪೊಲೀಸರು ಹೇಳುತ್ತಿರುವ ಗುಂಡಿನ ಚಕಮಕಿ ಕತೆಗಳು ಮತ್ತು ಎನ್ ಕೌಂಟರ್ ಎಫ್ಐಆರ್ ಗಳ ಬಗ್ಗೆ ಅನುಮಾನಗಳು ಇನ್ನಷ್ಟು ಗಟ್ಟಿಯಾಗುತ್ತಿದೆ.
ಪೊಲೀಸರು ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯ ಪ್ರಕಾರ ‘ನಕ್ಸಲರು ಬಂದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿರುವ ಹಿನ್ನಲೆಯಲ್ಲಿ ನವೆಂಬರ್ 10 ರಿಂದ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದೆವು. ಮೋಸ್ಟ್ ವಾಟೆಂಡ್ ನಕ್ಸಲ್ ನಾಯಕ ವಿಕ್ರಂ ಗೌಡ ಬಂದಿದ್ದಾರೆ ಅನ್ನುವ ಮಾಹಿತಿ ಇತ್ತು. ಅವರ ಮೇಲೆ ಕರ್ನಾಟಕದಲ್ಲಿ 61 ಕೇಸು, ಕೇರಳದಲ್ಲಿ 19 ಕೇಸುಗಳಿದ್ದವು. ಹಾಗೆ ಕಾಡಿನಲ್ಲಿ ಕೂಂಬಿಂಗ್ ನಡೆಸುವಾಗ ವಿಕ್ರಂ ಗೌಡ ತಂಡ ಮತ್ತು ಪೊಲೀಸರ ಮಧ್ಯೆ ಗುಂಡಿನ ಚಕಮಕಿ ನಡೆಯಿತು. ನಕ್ಸಲ್ ನಾಯಕ ವಿಕ್ರಂ ಗೌಡ ಹತರಾಗಿದ್ದಾರೆ’ ಎಂದು ಅಧಿಕೃತ ಬೈಟ್ ನೀಡಿದ್ದಾರೆ.
ಮರುದಿನ ಅಂದರೆ ಮಂಗಳವಾರ, ಪೊಲೀಸರು ಮಾಧ್ಯಮಗಳಿಗೆ ಎನ್ಕೌಂಟರ್ ನಡೆದ ಸ್ಥಳದ ಫೊಟೋವನ್ನು ಕಳುಹಿಸಿದ್ದಾರೆ. ಅದೇ ಫೋಟೋವನ್ನು ಇಂದು ಪ್ರಜಾವಾಣಿ ಸೇರಿದಂತೆ ಎಲ್ಲಾ ಮಾಧ್ಯಮಗಳು ಮುಖಪುಟದಲ್ಲಿ ಅಚ್ಚು ಹಾಕಿದ್ದು, ಎನ್ಕೌಂಟರ್ ನಡೆದ ಸ್ಥಳ ಎಂದು ಉಲ್ಲೇಖಿಸಿದ್ದಾರೆ. ಪೊಲೀಸರು ನೀಡಿರುವ ಫೋಟೋದ ಪ್ರಕಾರ ಎನ್ಕೌಂಟರ್ ನಡೆದಿರುವುದು ಮನೆಯೊಳಗೆ ಆಥವಾ ಮನೆಯ ಎದುರು !
ಪೊಲೀಸರು 19.11.2024 ರಂದು ದಾಖಲಿಸಿರುವ ಎಫ್ಐಆರ್ ಕ್ರೈಂ ನಂ 98/2024 ನಲ್ಲಿ ಮನೆಯಲ್ಲಿ ಎನ್ಕೌಂಟರ್ ನಡೆದಿದೆ ಎಂಬ ಬಗ್ಗೆ ಉಲ್ಲೇಖವೇ ಇಲ್ಲ. BNS ಸೆಕ್ಷನ್ 111, 113, 132, 61(1), 62, 148, 3(5), THE ARMS ACT 2019 SECTION 3, 25, UAPA SECTION : 10, 16(1)(B), 20, 38 ಅಡಿಯಲ್ಲಿ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಎನ್ಎಫ್ ಡಿವೈಎಸ್ಪಿ ದೂರುದಾರರಾಗಿರುವ ಈ ಎಫ್ಐಆರ್ ಸಾರಾಂಶ ಹೀಗೆ ಹೇಳುತ್ತದೆ. “ಫಿರ್ಯಾದಿದಾರರು ಎಎನ್‌ಎಫ್ ಅಧಿಕಾರಿಯಾಗಿದ್ದು, ಅವರು ಮತ್ತು ತಮ್ಮ ಸಿಬ್ಬಂದಿಗಳ ಸಹಿತ ದಿನಾಂಕ18/11/2024 ರಂದು ಸಂಜೆ 05-00 ಗಂಟೆಗೆ ನಿಷೇದಿತ ಉಗ್ರಗಾಮಿ ಸಿಪಿಐ (ಮಾವೋವಾದಿ) ಸಂಘಟನೆಯ ಸದಸ್ಯರ ಚಲನವಲನದ ಬಗ್ಗೆ ಖಚಿತ ಮಾಹಿತಿ ಮೇರೆಗೆ ನಾಡ್ಪಾಲು ಗ್ರಾಮದ ಪೀತಬೈಲ್ ಕಾಡಿನಲ್ಲಿ ಕೊಂಬಿಂಗ್ ಮಾಡುತ್ತಿರುವಾಗ ಸಂಜೆ 06-00 ಗಂಟೆ ವೇಳೆಗೆ 3-4 ಬಂದೂಕದಾರಿಗಳು ಬರುತ್ತಿರುವುದು ಕಂಡುಬಂದಿದ್ದು ಅವರುಗಳನ್ನು ವಿಕ್ರಮ ಗೌಡ ಹಾಗೂ ಇತರ ನಿಷೇದಿತ ಮಾವೋವಾದಿ ಸಂಘಟನೆಯ ಸದಸ್ಯರೆಂದು ಖಚಿತ ಪಡಿಸಿಕೊಂಡು ಸದ್ರಿ, ಯವರಿಗೆ “ನಾವು ಪೊಲೀಸ್ ರು ಶರಣಾಗಿ” ಎಂದು ಪದೇ ಪದೇ ಕೂಗಿ ಹೇಳಿದರು ಸಹ ಅದನ್ನು ಧಿಕ್ಕರಿಸಿ ವಿಕ್ರಮ ಗೌಡ ಹಾಗೂ ಇತರರು, ಪಿರ್ಯಾದಿದಾರರು ಹಾಗೂ ಸಿಬ್ಬಂದಿಗಳನ್ನು ಕೊಲುವ ಉದ್ದೇಶದಿಂದ ಗುಂಡು ಹಾರಿಸುತ್ತಿದ್ದು, ಆತ್ಮ ರಕ್ಷಣೆಗಾಗಿ ಪಿರ್ಯಾದಿದಾರರು ಹಾಗೂ ಸಿಬ್ಬಂದಿಗಳು ಪ್ರತಿದಾಳಿ ಮಾಡಿದ ಪರಿಣಾಮ ವಿಕ್ರಮ ಗೌಡನಿಗೆ ಗುಂಡು ತಗುಲಿ ಕುಸಿದು ಬಿದ್ದಿರುತ್ತಾರೆ. ಇತರರು ಗುಂಡು ಹಾರಿಸುತ್ತಾ ಕಾಡಿನಲ್ಲಿ ಪರಾರಿಯಾಗಿರುತ್ತಾರೆ. ಕುಸಿದು ಬಿದ್ದ ವಿಕ್ರಮ ಗೌಡನು ಸ್ಥಳದಲ್ಲಿ ಮೃತಪಟ್ಟಿದ್ದು ಆತನ ಬಳಿ 9ಎಂಎಂ ಕಾರ್ಬೈನ್ ಗನ್ ಇರುವುದು ಕಂಡು ಬಂದಿರುತ್ತದೆ.ಸದಿ ಮೃತ ಪಟ್ಟಿ ಹಾಗೂ ಪರಾರಿಯಾದ ಆರೋಪಿಗಳು ನಿಷೇಧಿತ ಉಗ್ರವಾದಿ ಸಿಪಿಐ (ಮಾವೋವಾದಿ) ಸಂಘಟನೆಯ ಸದಸ್ಯರಾಗಿದ್ದು ರಾಷ್ಟ್ರೀಯ ಭದ್ರತೆಗೆ ಭಂಗ ತರುವ, ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಸುಲಿಗೆ ಮುಂತಾದ ಸಂಘಟಿತ ಅಪರಾಧಗಳಲ್ಲಿ ತೊಡಗಿದವರಾಗಿದ್ದು ವಿಧಿಬದ್ಧವಾಗಿ ಕರ್ತವ್ಯ ನಿರ್ವಹಿಸುತ್ತದೆ ಫಿರ್ಯಾದಿದಾರರು ಹಾಗೂ ಸಿಬ್ಬಂದಿಗಳನ್ನು ಕೊಲೆ ಮಾಡಲು ಪ್ರಯತ್ನಿಸಿದ ಮೃತ ವಿಕ್ರಮ ಗೌಡ ಮತ್ತು ಪರಾರಿಯಾದ ಇತರರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂಬಿತ್ಯಾದಿ ಫಿರ್ಯಾದಿದಾರರ ದೂರಿನ ಸಾರಾಂಶವಾಗಿದೆ” ಎಂದು ಎಫ್ಐಆರ್ ನಲ್ಲಿ ಬರೆಯಲಾಗಿದೆ. ಈ ಎಫ್ಐಆರ್ ಸಾರಾಂಶದಲ್ಲಿ ಎಲ್ಲೂ ಕೂಡಾ ಪೊಲೀಸರು ಕಳುಹಿಸಿರುವ ಫೋಟೋದಲ್ಲಿರುವ ಮನೆಯ ಉಲ್ಲೇಖವಿಲ್ಲ.
ಇದಷ್ಟೇ ಅಲ್ಲ, ಈ ಎನ್ ಕೌಂಟರ್ ಬಗ್ಗೆ ಇನ್ನೂ ಹಲವು ಅನುಮಾನಗಳು ಎದ್ದಿವೆ.
ಎನ್ ಕೌಂಟರ್ ನವೆಂಬರ್ 18 ಸೋಮವಾರ ರಾತ್ರಿ ನಡೆಯಿತು. ಆದರೆ ಸ್ಥಳೀಯ ಜನರ ಪ್ರಕಾರ ಪೊಲೀಸರು ಎನ್ ಕೌಂಟರ್ ನಡೆದ ಸ್ಥಳದ ಅಕ್ಕಪಕ್ಕದ ಮನೆಯವರಿಗೆ ಮೂರು ದಿನದ ಹಿಂದೆಯೇ ಮನೆ ಖಾಲಿ ಮಾಡಲು ಹೇಳಿದ್ದರಂತೆ. ಯಾಕೆ ?
ನವೆಂಬರ್ 8 ರಿಂದ 11 ರ ಮಧ್ಯೆ ಧರ್ಮಸ್ಥಳದಲ್ಲಿ ಮೂವರು ನಕ್ಸಲರನ್ನು ಬಂಧಿಸಲಾಗಿತ್ತು. ಅವರ ಬಳಿ ಬಂದೂಕುಗಳನ್ನು ವಶಪಡಿಸಲಾಯಿತು. ಅವರನ್ನು ನ್ಯಾಯಾಲಯಕ್ಕೂ ಹಾಜರುಪಡಿಸಿಲ್ಲ. ಅವರ ಮೇಲೆ ಎಫ್ಐಆರ್ ಕೂಡಾ ಮಾಡಿಲ್ಲ. ಅವರು ಯಾರು ? ಎಲ್ಲಿದ್ದಾರೆ ? ಆ ಮೂವರಲ್ಲಿ ವಿಕ್ರಂ ಗೌಡ ಕೂಡಾ ಸೇರಿದ್ದಾರೆಯೇ ?
ನಾಗರಿಕ ಸಮಾಜವೊಂದು ಯಾವುದೇ ರೀತಿಯ ಕೊಲೆಯನ್ನು ಸಮರ್ಥಿಸಬಾರದು. ಸಂವಿದಾನ, ಕಾನೂನಿನ ಪ್ರಕಾರ ಆರೋಪಿ/ಅಪರಾಧಿಗೆ ಶಿಕ್ಷೆಯಾಗಬೇಕೇ ವಿನಹ ಪೊಲೀಸರ ಬಂದೂಕಿನ ಮೂಲಕ ಅಲ್ಲ. ಹಾಗಾಗಿ ಪೊಲೀಸರ ಈ ನಡವಳಿಕೆಗಳಿಗೆ ಪ್ರಜ್ಞಾವಂತ ಸಮುದಾಯ ಉತ್ತರ ಪಡೆದುಕೊಳ್ಳುವುದು ಕರ್ತವ್ಯವಾಗಿದೆ.