ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಮನೆಗೆ ಸೀರಿಯಲ್ ಸೆಟ್ ಹಾಕಿಸಿ ಅಲಂಕರಿಸಲು ರಸ್ತೆಯಲ್ಲಿದ್ದ ಕಂಬದಿಂದ ನೇರ ವಿದ್ಯುತ್ ಸಂಪರ್ಕ ಪಡೆದಿದ್ದಕ್ಕಾಗಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರ ವಿರುದ್ಧ ಬೆಂಗಳೂರಿನ ಜಯನಗರದಲ್ಲಿ FIR ದಾಖಲಿಸಲಾಗಿದೆ.
ಈ ಕುರಿತು ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮಂಗಳವಾರ (ನ.14) ಅಪರಾಧ ಎಸಗಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. AEE ಪ್ರಶಾಂತ್ ಕುಮಾರ್ ಎಂಬುವವರು ದೂರು ನೀಡಿದ್ದಾರೆ. ಈಗ ಅದೇ ದೂರಿನಡಿ FIR ದಾಖಲು ಮಾಡಿಕೊಳ್ಳಲಾಗಿದೆ.
ಈ ಹಿಂದೆ ಎಚ್.ಡಿ. ಕುಮಾರಸ್ವಾಮಿ ನಿವಾಸಕ್ಕೆ ದೀಪಾಲಂಕಾರ ಮಾಡಲು ವಿದ್ಯುತ್ ಕಳ್ಳತನ ಮಾಡಲಾಗಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿ ವಿಡಿಯೊ ಸಹಿತ ಟ್ವೀಟ್ ಮಾಡಿತ್ತು. ಈಗ ಬೆಸ್ಕಾಂ ಅಧಿಕಾರಿಗಳು ಕುಮಾರಸ್ವಾಮಿ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಲ್ಲದೆ, ಜಯನಗರ ಬೆಸ್ಕಾಂ ಜಾಗೃತ ದಳದಿಂದ ಎಫ್ಐಆರ್ ದಾಖಲು ಮಾಡಲಾಗಿದೆ.
HDK ವಿರುದ್ಧ ಕರ್ನಾಟಕ ವಿದ್ಯುತ್ ಕಾಯ್ದೆ ಕಲಂ 135ರ ಅಡಿಯಲ್ಲಿ ಕೇಸ್ ದಾಖಲಾಗಿದ್ದು, ಅಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಲಾಗಿದೆ.
ಇದೊಂದು ದಂಡ ವಿಧಿಸಬಹುದಾದ ಪ್ರಕರಣವಾಗಿದ್ದು, ಸುಮಾರು ಐದು ಸಾವಿರ ರೂಪಾಯಿಗಳ ತನಕ ದಂಡ ವಿಧಿಸಬಹುದು ಎನ್ನಲಾಗಿದೆ.