ಸಿನೆಮಾ ಶೂಟಿಂಗ್ ಗಾಗಿ ಮರಗಳನ್ನು ಕಡಿದ ಆರೋಪದಲ್ಲಿ ನ್ಯಾಯಾಲಯದ ಸೂಚನೆಯಂತೆ ಸಿನೆಮಾ ನಟ ಯಶ್ ಅವರ ‘ಟಾಕ್ಸಿಕ್’ ಸಿನಿಮಾದ ನಿರ್ಮಾಣ ಸಂಸ್ಥೆಗಳಾದ ಕೆವಿಎನ್ ಹಾಗೂ ಯಶ್ ರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
‘ಟಾಕ್ಸಿಕ್’ ಸಿನಿಮಾದ ಸೆಟ್ ನಿರ್ಮಾಣವಾಗಿರುವ ಜಾಗ ಮತ್ತು ಮರ ಕಡಿದಿರುವ ಕುರಿತು ಈ ಹಿಂದೆ ವಿವಾದ ಕೇಳಿ ಬಂದಿತ್ತು. ಮರಗಳನ್ನು ಕಡಿದಿರುವ ಆರೋಪದ ಬಳಿಕ ಅರಣ್ಯ ಸಚಿವ ಈಶ್ವರ ಖಂಡ್ರೆಯವರು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಜೊತೆಗೆ ಇಲಾಖೆ ಸೂಚಿಸುವ ವರೆಗೂ ಶೂಟಿಂಗ್ ಸ್ಥಗಿತಗೊಳಿಸುವಂತೆ ಸ್ಪಷ್ಟವಾಗಿ ಸೂಚಿಸಲಾಗಿತ್ತು.
ಅಷ್ಟೇ ಅಲ್ಲದೆ ಎಚ್ಎಂಟಿ ತನಗೆ ನೀಡಲಾಗಿದ್ದ ಜಾಗವನ್ನು ಸಿನಿಮಾಗಳಿಗೆ ಬಾಡಿಗೆ ನೀಡಿ ಹಣ ಮಾಡುತ್ತಿದೆ ಎಂದು ಆರೋಪಿಸಲಾಗಿದೆ. ‘ಟಾಕ್ಸಿಕ್’ ಸಿನಿಮಾದ ಸೆಟ್ ನಿರ್ಮಾಣ ಮಾಡಿದ ಜಾಗದಲ್ಲಿ ಮುಂಚೆ ಇದ್ದ ಮರಗಳು ಆ ನಂತರ ನಾಶವಾದ ಮರಗಳ ಮಾಹಿತಿ ಒದಗಿಸುವ ಸ್ಯಾಟಲೈಟ್ ಚಿತ್ರವನ್ನು ಸಹ ಬಿಡುಗಡೆ ಮಾಡಲಾಗಿತ್ತು.
ಈ ಆರೋಪಗಳಿಗೆ ಸ್ಪಂದಿಸಿದ್ದ ಎಚ್ಎಂಟಿ, ‘ಟಾಕ್ಸಿಕ್’ ಸಿನಿಮಾದ ಸೆಟ್ ನಿರ್ಮಾಣ ಆಗಿರುವ ಸ್ಥಳ ನಮ್ಮದಲ್ಲ, ಅದು ಕೆನರಾ ಬ್ಯಾಂಕ್ಗೆ ಸೇರಿದ್ದು, ಕೆನರಾ ಬ್ಯಾಂಕ್ಗೆ ಸೇರಿದ ಸ್ಥಳವನ್ನು ನಾವು ಬಾಡಿಗೆಗೆ ಕೊಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದಿತ್ತು. ಈ ಹಿನ್ನೆಲೆಯಲ್ಲಿ ಕೆನರಾ ಬ್ಯಾಂಕ್ ಜನರಲ್ ಮ್ಯಾನೇಜರ್ ಹಾಗೂ ಹೆಚ್ಎಂಟಿ ಲಿಮಿಟೆಡ್ ವಿರುದ್ಧವೂ ಸಹ ಎಫ್ಐಆರ್ ದಾಖಲಾಗಿದೆ. ಅರಣ್ಯ ಕಾಯ್ದೆಯ ಅಡಿಯಲ್ಲಿ ಎಫ್ಐಆರ್ ದಾಖಲಾಗಿದ್ದು, ಆರೋಪಿಗಳಿಗೆ ನೊಟೀಸ್ ನೀಡಿ ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ.