ಮುಂಬೈ: ನೌಕರರ ಭವಿಷ್ಯ ನಿಧಿ ಸಂಸ್ಥೆಯ (EPF) ಹೂಡಿಕೆ ನಿಧಿಯಲ್ಲಿ ಸುಮಾರು 1816 ಕೋಟಿ ರೂಪಾಯಿ ವಂಚನೆ ಎಸಗಿದ ಆರೋಪದ ಮೇಲೆ ರಿಲಯನ್ಸ್ ಕ್ಯಾಪಿಟಲ್ ಮಾಜಿ ಅಧ್ಯಕ್ಷ ಅನಿಲ್ ಅಂಬಾನಿ (Anil ambani) ಹಾಗೂ ಇತರರ ವಿರುದ್ಧ ಕೇಂದ್ರ ತನಿಖಾ ದಳ (CBI) ಪ್ರಕರಣ ದಾಖಲಿಸಿಕೊಂಡಿದೆ.
2013-2014ರ ಅವಧಿಯಲ್ಲಿ ಇಪಿಎಫ್‌ಒ ರಿಲಯನ್ಸ್ ಕ್ಯಾಪಿಟಲ್‌ನ ಸೆಕ್ಯೂರ್ಡ್ ಸಾಲಪತ್ರಗಳಲ್ಲಿ (ಎನ್‌ಸಿಡಿ) 2500 ಕೋಟಿ ರೂಪಾಯಿ ಹೂಡಿಕೆ ಮಾಡಿತ್ತು. ಆದರೆ ಈ ಹಣವನ್ನು ಅಕ್ರಮವಾಗಿ ದುರ್ಬಳಕೆ ಮಾಡಿಕೊಂಡು, ಗಡುವು ಮುಗಿದರೂ ಹಿಂತಿರುಗಿಸದೆ ಇಪಿಎಫ್‌ಒಗೆ ಕೋಟ್ಯಂತರ ರೂಪಾಯಿ ನಷ್ಟ ಉಂಟುಮಾಡಲಾಗಿದೆ ಎಂದು ದೂರಲಾಗಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ಅನಿಲ್ ಅಂಬಾನಿ ಪರ ವಕ್ತಾರರು, ತಮ್ಮ ಮೇಲಿನ ಎಲ್ಲ ಆರೋಪಗಳನ್ನು ತಳ್ಳಿಹಾಕಿದ್ದು, ಕಂಪನಿಯ ಮಂಡಳಿಯನ್ನು ಆರ್‌ಬಿಐ ವಶಕ್ಕೆ ಪಡೆಯುವವರೆಗೂ ಅವರು ಕಾರ್ಯನಿರ್ವಾಹಕೇತರ ಅಧ್ಯಕ್ಷರಾಗಿದ್ದರು ಹೊರತು ವೈಯಕ್ತಿಕವಾಗಿ ಜವಾಬ್ದಾರರಲ್ಲ ಎಂದು ತಿಳಿಸಿದ್ದಾರೆ.
