ಕಳೆದ ಕೆಲವು ದಿನಗಳ ಹಿಂದೆ ಬಿಜೆಪಿ MLC ಸಿ.ಟಿ. ರವಿ ಅವರು ಸವಿತಾ ಸಮಾಜದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ, ಇದೀಗ ಅವರ ವಿರುದ್ಧ ಬೆಂಗಳೂರಿನ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ (FIR) ದಾಖಲಾಗಿದೆ.
ಕಾರ್ಯಕ್ರಮವೊಂದಕ್ಕೆ ಬರುವ ವಿಷಯದ ಕುರಿತು ಫೋನ್‌ನಲ್ಲಿ ಮಾತನಾಡುತ್ತಿದ್ದಾಗ ಮಾತಿನ ಭರದಲ್ಲಿ ಸಿ.ಟಿ. ರವಿ ಅವರು ಸವಿತಾ ಸಮಾಜಕ್ಕೆ ಸಂಬಂಧಿಸಿದ ಆಕ್ಷೇಪಾರ್ಹ ಪದವನ್ನು ಬಳಸಿದ್ದರು ಎಂದು ಆರೋಪಿಸಲಾಗಿದೆ.
ಈ ಹೇಳಿಕೆ ನೀಡಿದ ನಂತರ ಸಿ.ಟಿ. ರವಿ ಅವರು ಸವಿತಾ ಸಮಾಜದವರ ಕ್ಷಮೆ ಕೇಳಿದ್ದರು. ಆದಾಗ್ಯೂ, ಕಾಂಗ್ರೆಸ್ ಮುಖಂಡ ಮುರುಗೇಶ್ ಮೊದಲಿಯಾರ್ ಅವರು ನೀಡಿದ ದೂರಿನ ಅನ್ವಯ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಂಎಲ್‌ಸಿ ಸಿ.ಟಿ. ರವಿ ಅವರು ಅಕ್ಷೇಪಾರ್ಹ ಪದವನ್ನು ಬಳಸಿದ್ದು ಅಕ್ಟೋಬರ್ 27 ರಂದು, ಚಿಕ್ಕಮಗಳೂರು ಮೆಡಿಕಲ್ ಕಾಲೇಜಿಗೆ ಭೇಟಿ ನೀಡಿದ ಸಂದರ್ಭದಲ್ಲಿ. ಈ ಘಟನೆ ನಡೆದಿದ್ದು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಗಿರುವುದರಿಂದ, ಮಡಿವಾಳ ಪೊಲೀಸರು ಶೂನ್ಯ ಎಫ್‌ಐಆರ್ (Zero FIR) ದಾಖಲಿಸಿಕೊಂಡು ಪ್ರಕರಣವನ್ನು ಮುಂದಿನ ತನಿಖೆಗಾಗಿ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾಯಿಸುವ ಸಾಧ್ಯತೆಯಿದೆ.
