Home ಬೆಂಗಳೂರು ಬಿಜೆಪಿಯದ್ದು ‘ಡೋಂಗಿ ರಾಷ್ಟ್ರಭಕ್ತಿ’, ‘ನಿಮ್ಮ ಹಿಂದಿನವರ ಬಂಡವಾಳ ಬಿಚ್ಚಿಡುತ್ತೇನೆ, ಚರ್ಚೆಗೆ ಬರುತ್ತೀರಾ?’: ಕಾಗೇರಿಗೆ ಹರಿಪ್ರಸಾದ್ ನೇರ...

ಬಿಜೆಪಿಯದ್ದು ‘ಡೋಂಗಿ ರಾಷ್ಟ್ರಭಕ್ತಿ’, ‘ನಿಮ್ಮ ಹಿಂದಿನವರ ಬಂಡವಾಳ ಬಿಚ್ಚಿಡುತ್ತೇನೆ, ಚರ್ಚೆಗೆ ಬರುತ್ತೀರಾ?’: ಕಾಗೇರಿಗೆ ಹರಿಪ್ರಸಾದ್ ನೇರ ಸವಾಲು

0

ಬೆಂಗಳೂರು: ರಾಷ್ಟ್ರಗೀತೆ ಕುರಿತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನೀಡಿದ್ದಾರೆ ಎನ್ನಲಾದ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರು, “ಸುಳ್ಳು ಇತಿಹಾಸವನ್ನು ಸೃಷ್ಟಿಸುವುದು ಮತ್ತು ಇತಿಹಾಸವನ್ನೇ ತಿರುಚುವುದು ಬಿಜೆಪಿಯವರ ಹುಟ್ಟುಗುಣ” ಎಂದು ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ದಾಖಲೆ ಸಮೇತ ಬಹಿರಂಗ ಚರ್ಚೆಗೆ ಬರುವಂತೆ ಕಾಗೇರಿಯವರಿಗೆ ಸವಾಲು ಹಾಕಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ (X) ನಲ್ಲಿ ಕಾಗೇರಿಯವರ ವಿಡಿಯೋ ಹಂಚಿಕೊಂಡು ಸರಣಿ ಪೋಸ್ಟ್‌ಗಳನ್ನು ಮಾಡಿರುವ ಅವರು, ಬಿಜೆಪಿ ಹಾಗೂ ಅದರ ಪೂರ್ವಜರ ಇತಿಹಾಸದ ಬಗ್ಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

ಸಾವರ್ಕರ್, ಮುಖರ್ಜಿ ಇತಿಹಾಸ ಕೆದಕಿದ ಹರಿಪ್ರಸಾದ್

“ಇತಿಹಾಸವನ್ನು ಕೆದಕಲು ಹೋಗುವುದಿಲ್ಲ ಎನ್ನುತ್ತಲೇ ಇತಿಹಾಸವನ್ನು ತಿರುಚಲು ಹೋಗಿ ನಿಮ್ಮ ಪೂರ್ವಜರ ಬಂಡವಾಳವನ್ನು ಬಯಲು ಮಾಡಿಕೊಂಡಿದ್ದೀರಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೇ,” ಎಂದು ಕುಟುಕಿದ ಹರಿಪ್ರಸಾದ್, ಬ್ರಿಟಿಷರ ಗುಲಾಮಗಿರಿ ಮಾಡುತ್ತಲೇ, ಕ್ಷಮಾಪಣೆ ಪತ್ರ ಬರೆದು ಸಂಭಾವನೆ ಪಡೆದ ನಿಮ್ಮ ಪೂರ್ವಜ ಸಾವರ್ಕರ್ ಇತಿಹಾಸದ ಬಗ್ಗೆ ಮಾತಾಡೋಣವೇ? ಕ್ವಿಟ್ ಇಂಡಿಯಾ ಚಳುವಳಿಗೆ ನಮ್ಮ ಬೆಂಬಲವಿಲ್ಲ ಎಂದು ಬ್ರಿಟಿಷರಿಗೆ ಪತ್ರ ಬರೆದ ನಿಮ್ಮ ಪೂರ್ವಜ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಇತಿಹಾಸದ ಬಗ್ಗೆ ಚರ್ಚಿಸೋಣವೇ? ಎಂದು ನೇರವಾಗಿ ಪ್ರಶ್ನಿಸಿದ್ದಾರೆ.

ರಾಷ್ಟ್ರಗೀತೆ ಮತ್ತು ರಾಷ್ಟ್ರಧ್ವಜವನ್ನು ಅವಮಾನಿಸುವುದು ಬಿಜೆಪಿಯವರ ರಾಷ್ಟ್ರವಿರೋಧಿ ಧೋರಣೆಯ ಮುಂದುವರಿದ ಭಾಗ ಎಂದು ಆರೋಪಿಸಿರುವ ಅವರು, ರಾಷ್ಟ್ರಗೀತೆಯ ನೈಜ ಇತಿಹಾಸವನ್ನು ವಿವರಿಸಿದ್ದಾರೆ. “1911 ರಲ್ಲಿ ರವೀಂದ್ರನಾಥ ಟ್ಯಾಗೂರರು ಬರೆದ ‘ಜನಗಣಮನ’ ಗೀತೆಯು ಭಾರತದ ಏಕತೆ, ಸ್ವಾಭಿಮಾನ, ಸಾಂಸ್ಕೃತಿಕ ಐಕ್ಯತೆ ಹಾಗೂ ಒಕ್ಕೂಟ ವ್ಯವಸ್ಥೆಯ ಸಂಕೇತವಾಗಿದೆ. ಅದು ಬ್ರಿಟಿಷರ ಸ್ವಾಗತ ಗೀತೆಯಲ್ಲ.” ಸ್ವತಃ ಟ್ಯಾಗೋರ್ ಅವರೇ 1937 ಮತ್ತು 1939 ರಲ್ಲಿ ಪತ್ರಗಳ ಮೂಲಕ ‘ಜನಗಣಮನವನ್ನು ಸ್ವತಂತ್ರ ಭಾರತದ ಪ್ರೇರಣೆಗಾಗಿ ಬರೆದಿದ್ದೇನೆ’ ಎಂದು ಸ್ಪಷ್ಟಪಡಿಸಿದ್ದಾರೆ. “ಇತಿಹಾಸ ತಿರುಚುವ ಸಂಘಪರಿವಾರಕ್ಕೆ ನೈಜ ಇತಿಹಾಸವನ್ನು ಅರಗಿಸಿಕೊಳ್ಳುವುದು ಕಷ್ಟ,” ಎಂದು ಹರಿಪ್ರಸಾದ್ ಹೇಳಿದ್ದಾರೆ.

ರಾಷ್ಟ್ರಧ್ವಜಕ್ಕೆ ಸಮಾನವಾಗಿ ಭಗವಾಧ್ವಜವನ್ನು ಹಾಗೂ ರಾಷ್ಟ್ರಗೀತೆಗೆ ಸಮಾನವಾಗಿ ವಂದೇ ಮಾತರಂ ಅನ್ನು ಸಮೀಕರಿಸುವುದೇ ರಾಷ್ಟ್ರದ್ರೋಹ ಎಂದು ಕಿಡಿಕಾರಿರುವ ಹರಿಪ್ರಸಾದ್, “ನಿಮಗೆ ವಂದೇ ಮಾತರಂ ಬಗ್ಗೆ ನೈಜ ಪ್ರೀತಿ ಇದ್ದರೆ, ಆರ್‌ಎಸ್‌ಎಸ್‌ನ ಅಧಿಕೃತ ಪ್ರಾರ್ಥನೆಯಾದ ‘ನಮಸ್ತೆ ಸದಾ ವತ್ಸಲೆ’ಯನ್ನು ರದ್ದುಗೊಳಿಸಿ ವಂದೇ ಮಾತರಂ ಅನ್ನು ಯಾಕೆ ಹಾಡುತ್ತಿಲ್ಲ? ಆರ್‌ಎಸ್‌ಎಸ್ ಶಾಖೆಗಳಲ್ಲಿ ‘ವಂದೇ ಮಾತರಂ’ ಹಾಡು ಏಕೆ ಕಡ್ಡಾಯವಾಗಿಲ್ಲ? ನಿಮ್ಮ ಈ ಡೋಂಗಿ ರಾಷ್ಟ್ರಭಕ್ತಿಯನ್ನು ದೇಶದ ಜನರ ಮೇಲೆ ಹೇರಬೇಡಿ,” ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

You cannot copy content of this page

Exit mobile version