ಸೌಜನ್ಯ ಪರವಾಗಿ ವ್ಯಾಪಕವಾಗಿ ದನಿ ಎತ್ತಿದ ಒಬ್ಬೊಬ್ಬೇ ಹೋರಾಟಗಾರರನ್ನು ಹತ್ತಿಕ್ಕುವ ಕೆಲಸಕ್ಕೆ ಸರ್ಕಾರ ಮುಂದಾಗಿದೆ. ಗುರುವಾರವಷ್ಟೇ ಮಹೇಶ್ ಶೆಟ್ಟಿ ತಿಮರೋಡಿಯ ಬಂಧನವಾಗುತ್ತಿದ್ದಂತೆ, ಯೂಟ್ಯೂಬರ್ ಸಮೀರ್ ಬಂಧನಕ್ಕೂ ಪೊಲೀಸ್ ಇಲಾಖೆ ಮುಂದಾಗಿತ್ತು. ಆದರೆ ಸಮೀರ್ ಗೆ ನಿರೀಕ್ಷಣಾ ಜಾಮೀನು ಮಂಜೂರಾಗಿ ಸಮೀರ್ ಬಂಧನದಿಂದ ಪಾರಾಗಿದ್ದಾರೆ.
ಇದೀಗ ಬೆಳ್ತಂಗಡಿ ಪೊಲೀಸರು ಗಿರೀಶ್ ಮಟ್ಟಣ್ಣನವರ್ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ. ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಬಂಧನದ ವೇಳೆ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದ ಮೇಲೆ ಗಿರೀಶ್ ಮಟ್ಟಣ್ಣನವರ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಗಿರೀಶ್ ಮಾತ್ರವಲ್ಲದೆ ಸೌಜನ್ಯ ಸಾವಿನ ನ್ಯಾಯಕ್ಕಾಗಿ ದನಿ ಎತ್ತಿದ 30 ಜನರ ಮೇಲೆ ಎಫ್ ಐಆರ್ ದಾಖಲಾಗಿದೆ.
ಬೆಳ್ತಂಗಡಿ ಠಾಣೆಯಲ್ಲಿ ಸರ್ವರ್ ಡೌನ್ ಇರುವುದರಿಂದ ಎಫ್ ಐಆರ್ ತಡವಾಗ್ತಿದ್ದು ನೋಟೀಸ್ ಕೊಡುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ. ಬ್ರಹ್ಮಾವರ್ ಠಾಣೆಯ ಪಿಎಸ್ ಐ ನೀಡಿದ ದೂರಿನ ಹಿನ್ನೆಲೆ ಕೇಸ್ ದಾಖಲಾಗಿದೆ.
ಮಹೇಶ್ ಶೆಟ್ಟಿ ಮನೆಗೆ ಸುಮಾರು ನೂರು ಜನ ಬಂದಿದ್ಯಾಕೆ ಎಂದು ಕೇಳಿದ್ದೇ ತಪ್ಪಾ? ಅದನ್ನೇ ಗುರಿ ಮಾಡಿ ನನ್ನ ಮೇಲೆ, ಜಯಂತ್ ಟಿ ಮೇಲೆ ಹಾಗೂ ತಿಮರೋಡಿ ಮೇಲೂ ಮತ್ತೆ ಎಫ್ ಐಆರ್ ಆಗಿದೆ. ಆದ್ರೆ ನಾವು ಯಾವುದಕ್ಕೂ ಹೆದರುವುದಿಲ್ಲ, ಬಂಧನ ಆದ್ರೂ ಹೆದರುವುದಿಲ್ಲ ಎಂದು ಗಿರೀಶ್ ಮಟ್ಟಣ್ಣನವರ್ ಹೇಳಿದ್ದಾರೆ.
ಪೊಲೀಸರಿಗೆ ಉತ್ತರ ಕೊಡಲೂ ಮಹೇಶ್ ಶೆಟ್ಟಿ ಅವರಿಗೆ ಸಮಯ ಕೊಟ್ಟಿಲ್ಲ. ಬ್ರಹ್ಮಾವರಕ್ಕೆ ಹೊರಟಿದ್ದವರನ್ನು ಅವಕಾಶವೂ ಕೊಡದೆ ಬಂಧನ ಮಾಡಿದ್ದಾರೆ. ಮಹೇಶ್ ಶೆಟ್ಟಿಯವರ ಬಿಪಿ 180 ಇದೆ, ಯಾವ ಕಾರಣಕ್ಕಾಗಿ ಬಂಧನ ಎಂದು ಕೇಳಿದ್ದೇ ತಪ್ಪಾ ಎಂದು ಗಿರೀಶ್ ಪ್ರಶ್ನೆ ಮಾಡಿದ್ದಾರೆ.
ಮಹೇಶ್ ಶೆಟ್ಟಿಯನ್ನು ನ್ಯಾಯಾಂಗ ಬಂಧನ ಮಾಡಲು ಅತ್ಯಾಚಾರಿಗಳ ಅತಿದೊಡ್ಡ ಕುಟುಂಬ ಕುತಂತ್ರದಿಂದ, ಎಸ್ ಐಟಿಗೆ ಭೀಮಾ ಸುಳ್ಳು ಹೇಳುತ್ತಿದ್ದಾನೆ. ಸುಳ್ಳು ಹೇಳಿದ್ದಕ್ಕೆ ಮಹೇಶ್ ಶೆಟ್ಟಿಯನ್ನು ಬಂಧನ ಮಾಡಿದ್ರು ಎಂಬ ರೀತಿ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ.. ಇದಕ್ಕೆ ನಾವು ಬಗ್ಗುವುದಿಲ್ಲ. ಬೇಕಾದ್ರೆ ನನ್ನನ್ನು ಅರೆಸ್ಟ್ ಮಾಡಲಿ ನೋಡೋಣ ಎಂದು ಗಿರೀಶ್ ಮಟ್ಟಣ್ಣನವರ್ ಕಿಡಿಕಾರಿದ್ದಾರೆ.