ಕಲಬುರಗಿ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕಲಬುರಗಿ ನಗರದ ರೋಜಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಮುಸ್ಲಿಂ ಯುವತಿಯನ್ನು ಮದುವೆಯಾದವರಿಗೆ 5 ಲಕ್ಷ ರೂಪಾಯಿ ನೀಡುವುದಾಗಿ ಘೋಷಿಸಿದ ಆರೋಪದ ಮೇಲೆ ಅವರ ವಿರುದ್ಧ ದೂರು ದಾಖಲಾಗಿದೆ.
ಮುಸ್ಲಿಂ ಯುವತಿಯನ್ನು ಪ್ರೀತಿಸಿ ಕೊಲೆಯಾದ ಗವಿಸಿದ್ದಪ್ಪ ಅವರ ಮನೆಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭೇಟಿ ನೀಡಿದ್ದರು. ಕೊಪ್ಪಳದ ಕುರುಬರ ಓಣಿಯಲ್ಲಿರುವ ಗವಿಸಿದ್ದಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದರು. ಆಗಸ್ಟ್ 3ರಂದು ಕೊಪ್ಪಳದಲ್ಲಿ ಗವಿಸಿದ್ದಪ್ಪ ಅವರನ್ನು ಕೊಲೆ ಮಾಡಲಾಗಿತ್ತು.
ಭೇಟಿಯ ನಂತರ ಮಾತನಾಡಿದ ವಿಜಯಪುರ ಶಾಸಕ ಯತ್ನಾಳ್, “ಮುಸ್ಲಿಂ ಯುವತಿಯನ್ನು ಮದುವೆಯಾದವರಿಗೆ 5 ಲಕ್ಷ ರೂಪಾಯಿ ನೀಡಲಾಗುವುದು. ಈ ರೀತಿಯ ಅಭಿಯಾನವನ್ನು ನಾವು ಪ್ರಾರಂಭಿಸುತ್ತೇವೆ. ಹಿಂದೂಗಳನ್ನು ಕೊಲೆ ಮಾಡುವ ಮನಸ್ಥಿತಿ ಮುಸ್ಲಿಮರಲ್ಲಿದೆ. ರೀಲ್ಸ್‌ನಲ್ಲಿ ಮಚ್ಚು ತೋರಿಸಿದ್ದಾನೆ. ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಗವಿಸಿದ್ದಪ್ಪ ಪ್ರೀತಿಸಿದ ಹುಡುಗಿಯನ್ನು ಕೂಡ ಬಂಧಿಸಬೇಕು. ಈ ಸರ್ಕಾರದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲ. ಈ ವಿಷಯವನ್ನು ನಾನು ಸದನದಲ್ಲಿ ಪ್ರಸ್ತಾಪಿಸುತ್ತೇನೆ. ಮಚ್ಚು ಹಿಡಿದು ಓಡಾಡುವವರಿಗೆ ರಾಜ್ಯ ಸರ್ಕಾರದ ಬೆಂಬಲ ಇದೆ” ಎಂದು ಟೀಕಿಸಿದ್ದರು.