Home ದೇಶ ಮೋದಿ ಸರ್ಕಾರದ ಕಾರ್ಪೊರೇಟ್‌ ನೀತಿಗಳ ವಿರುದ್ಧ ರೈತರು ಮತ್ತು ಕಾರ್ಮಿಕರಿಂದ ಪ್ರತಿಭಟನೆ

ಮೋದಿ ಸರ್ಕಾರದ ಕಾರ್ಪೊರೇಟ್‌ ನೀತಿಗಳ ವಿರುದ್ಧ ರೈತರು ಮತ್ತು ಕಾರ್ಮಿಕರಿಂದ ಪ್ರತಿಭಟನೆ

0

ಮೋದಿ ಸರ್ಕಾರದ ಕಾರ್ಪೊರೇಟ್ ನೀತಿಗಳು ಮತ್ತು ಅಮೆರಿಕಾ ವಿಧಿಸಿದ ಶೇ.50 ರಷ್ಟು ಸುಂಕಗಳ ವಿರುದ್ಧ ದೇಶದ ರೈತರು ಮತ್ತು ಕಾರ್ಮಿಕ ವರ್ಗ ಆಕ್ರೋಶ ವ್ಯಕ್ತಪಡಿಸಿದೆ. ಈ ನೀತಿಗಳು ಮತ್ತು ಅಮೆರಿಕದ ಸುಂಕಗಳ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆದಿವೆ. ಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಪ್ರತಿಕೃತಿಗಳನ್ನು ದಹಿಸುವುದರ ಜೊತೆಗೆ ಭಾರತ-ಯುಕೆ ಮುಕ್ತ ವ್ಯಾಪಾರ ಒಪ್ಪಂದದ (CETA) ಪ್ರತಿಗಳನ್ನು ಸುಟ್ಟುಹಾಕಲಾಯಿತು. ಬುಧವಾರ ದೇಶಾದ್ಯಂತ ಸಂಯುಕ್ತ ಕಿಸಾನ್ ಮೋರ್ಚಾ (SKM) ನೇತೃತ್ವದಲ್ಲಿ “ಬಹುರಾಷ್ಟ್ರೀಯ ಕಂಪನಿಗಳು ಕ್ವಿಟ್ ಇಂಡಿಯಾ – ಕಾರ್పొರೇಟ್ ಕೃಷಿ ಕ್ವಿಟ್” ಎಂಬ ಘೋಷಣೆಯೊಂದಿಗೆ ಪ್ರತಿಭಟನೆ ನಡೆಯಿತು. ಈ ಪ್ರತಿಭಟನೆಗೆ ಹತ್ತು ಕೇಂದ್ರ ಕಾರ್ಮಿಕ ಸಂಘಟನೆಗಳು, ಕೃಷಿ ಕಾರ್ಮಿಕ ಸಂಘಟನೆಗಳು ಮತ್ತು ಇತರ ಹಲವು ಸಂಘಟನೆಗಳು ಬೆಂಬಲ ಸೂಚಿಸಿ ಭಾಗವಹಿಸಿದ್ದವು.

ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಒಡಿಶಾ, ಕರ್ನಾಟಕ, ತ್ರಿಪುರ, ಜಾರ್ಖಂಡ್, ಹರಿಯಾಣ, ಬಿಹಾರ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ, ರಾಜಸ್ಥಾನ, ಕೇರಳ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರತಿಭಟನೆಗಳು ನಡೆದವು. ಅನೇಕ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದ್ದರೂ ರೈತರು ಮತ್ತು ಕಾರ್ಮಿಕರು ರಸ್ತೆಗಿಳಿದು ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದರು. ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಪ್ರತಿಕೃತಿಗಳನ್ನು ದಹಿಸದಂತೆ ಪೊಲೀಸರು ತಡೆದರು. ನೊಯ್ಡಾದಲ್ಲಿ ನಡೆದ ಪ್ರತಿಭಟನೆಯಲ್ಲಿ AIWUU ಪ್ರಧಾನ ಕಾರ್ಯದರ್ಶಿ ಬಿ. ವೆಂಕಟ್ ಮತ್ತು AIKS ಆರ್ಥಿಕ ಕಾರ್ಯದರ್ಶಿ ಕೃಷ್ಣ ಪ್ರಸಾದ್ ಭಾಗವಹಿಸಿದ್ದರು. ಮೋದಿ ಮತ್ತು ಟ್ರಂಪ್ ಪ್ರತಿಕೃತಿಗಳನ್ನು ದಹಿಸದಂತೆ ತಡೆದಾಗ ಪೊಲೀಸರು ಮತ್ತು ರೈತ-ಕಾರ್ಮಿಕ ನಾಯಕರ ನಡುವೆ ವಾಗ್ವಾದ ನಡೆಯಿತು. ಆದರೂ ಅವರು ಮೋದಿ ಮತ್ತು ಟ್ರಂಪ್ ಅವರ ಪ್ರತಿಕೃತಿಗಳನ್ನು ದಹಿಸಿದರು. ಪ್ರತಿಭಟನೆಯಲ್ಲಿ ಭಾಗವಹಿಸಿದ ರೈತರು ಮತ್ತು ಕಾರ್ಮಿಕರಿಗೆ SKM ಅಭಿನಂದನೆಗಳನ್ನು ತಿಳಿಸಿತು.

ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳು ಮತ್ತು ಟೀಕೆಗಳು:

ಪ್ರಧಾನಿ ಮೋದಿ ಅವರು 2017ರಲ್ಲಿ 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಭರವಸೆ ನೀಡಿದ್ದರು. ಆದರೆ ಕಾರ್ಪೊರೇಟ್ ಪರ ನೀತಿಗಳಿಂದ ಹೂಡಿಕೆ ವೆಚ್ಚವನ್ನು ದ್ವಿಗುಣಗೊಳಿಸಿ, ಕೃಷಿಯ ದುಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದ್ದಾರೆ ಎಂದು ಪ್ರತಿಭಟನಾಕಾರರು ಟೀಕಿಸಿದರು.

ದೇಶದಲ್ಲಿ ಪ್ರತಿದಿನ 31 ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಮತ್ತು ಗ್ರಾಮೀಣ ಕುಟುಂಬಗಳು ವಲಸೆ ಹೋಗುವಂತಾಗಿದೆ ಎಂದರು.

ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವ ಮತ್ತು ದೇಶೀಯ ಆರ್ಥಿಕತೆಯನ್ನು ಅಭಿವೃದ್ಧಿಪಡಿಸುವ ಬದಲು, ಮೋದಿ ಸರ್ಕಾರ ದೇಶದ ನೈಸರ್ಗಿಕ ಮತ್ತು ಮಾನವ ಸಂಪನ್ಮೂಲಗಳನ್ನು ಲೂಟಿ ಮಾಡಲು ಕಾರ್పೊರೇಟ್ ಪರ ನೀತಿಗಳಿಗೆ ಬದ್ಧವಾಗಿದೆ ಎಂದು ಆರೋಪಿಸಿದರು.

ದೇಶದ ಆರ್ಥಿಕತೆಯನ್ನು ವಿದೇಶಗಳಿಗೆ ಒಪ್ಪಿಸಲು ಯುಕೆ, ಇಯು ನಂತಹ ದೇಶಗಳ ಒತ್ತಡಕ್ಕೆ ಮೋದಿ ಸರ್ಕಾರ ಮಣಿದಿದೆ ಎಂದು ವಿಮರ್ಶಿಸಿದರು.

SKM ನಾಯಕರು ರೈತರಿಗೆ ಸೂಕ್ತ ಬೆಂಬಲ ಬೆಲೆ, ಕಾರ್ಮಿಕರಿಗೆ ಕನಿಷ್ಠ ಜೀವನ ವೇತನ, ಕಾರ್ಮಿಕರನ್ನು ಸಾಲದಿಂದ ಮುಕ್ತಗೊಳಿಸುವುದು, ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸುವುದು, ಕೃಷಿ ಭೂಮಿಯ ಮೇಲಿನ ಕಾರ್పೊರೇಟ್ ಲೂಟಿ ಕೊನೆಗೊಳಿಸುವುದು ಮತ್ತು ತೀವ್ರ ನಿರುದ್ಯೋಗವನ್ನು ಪರಿಹರಿಸುವುದು ಸೇರಿದಂತೆ ದೀರ್ಘಕಾಲದಿಂದ ಬಾಕಿ ಇರುವ ಬೇಡಿಕೆಗಳನ್ನು ತಕ್ಷಣ ಒಪ್ಪಿಕೊಳ್ಳುವಂತೆ ಆಗ್ರಹಿಸಿದರು. ಪ್ರಧಾನಿ ಮೋದಿ ಕಾರ್ಪೊರೇಟ್ ಪರ ನೀತಿಗಳಿಗೆ ಬದ್ಧರಾಗಿದ್ದರೆ, ಕಾರ್ಮಿಕರು ಮತ್ತು ರೈತರು ಒಗ್ಗೂಡಿ ದೇಶಾದ್ಯಂತ ದೀರ್ಘಕಾಲದ, ತೀವ್ರವಾದ ಹೋರಾಟಗಳನ್ನು ನಡೆಸುತ್ತಾರೆ ಎಂದು SKM ನಾಯಕರು ಎಚ್ಚರಿಕೆ ನೀಡಿದರು.

You cannot copy content of this page

Exit mobile version