ವಿಶೇಷ ತೀವ್ರ ಪರಿಷ್ಕರಣೆ (SIR): ಚುನಾವಣಾ ಆಯೋಗದೊಳಗಿನ ಭಿನ್ನಮತದ ಬೆಂಕಿ

“..ವರದಿಯಲ್ಲಿ ಬಹಿರಂಗವಾಗಿರುವ ಸಂಗತಿಗಳ ಹಿನ್ನೆಲೆಯಲ್ಲಿ, ಭಾರತದ ಚುನಾವಣಾ ಆಯೋಗದ ಮುಖ್ಯ ಆಯುಕ್ತರಾದ ಜ್ಞಾನೇಶ್ ಕುಮಾರ್ ರಾಜಿನಾಮೆ ನೀಡಬೇಕು ಮತ್ತು ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂಬ ಆಗ್ರಹಗಳು ತೀವ್ರಗೊಳ್ಳುತ್ತಿವೆ..” (ಇoಡಿಯನ್ ಎಕ್ಸ್ಪ್ರೆಸ್ ವರದಿ ಆಧಾರಿತ) ಲೇಖನ.. ಲತಾಮಾಲ ಅವರ ಬರಹದಲ್ಲಿ

ಕಳೆದ ಹದಿನಾರು ತಿಂಗಳಿನಿಂದ ವಿಶೇಷ ತೀವ್ರ ಪರಿಷ್ಕರಣೆ ಅಥವಾ SIR ವಿರುದ್ಧ ಪ್ರಭಲ ವಿರೋಧಗಳು ಮುಂದುವರೆದಿವೆ. ಇದೀಗ ಇಂಡಿಯನ್ ಎಕ್ಸ್ಪ್ರೆಸ್‌ನ ಸ್ಪೋಟಕ ತನಿಖಾ ವರದಿಯು ಈ ವಿರೋಧಕ್ಕೆ ಸಮರ್ಥನೆ ನೀಡುವ ಮೂಲಕ ಗಂಭೀರ ಆಯಾಮ ನೀಡಿದೆ.

ವರದಿಯಲ್ಲಿ ಬಹಿರಂಗವಾಗಿರುವ ಸಂಗತಿಗಳ ಹಿನ್ನೆಲೆಯಲ್ಲಿ, ಭಾರತದ ಚುನಾವಣಾ ಆಯೋಗದ ಮುಖ್ಯ ಆಯುಕ್ತರಾದ ಜ್ಞಾನೇಶ್ ಕುಮಾರ್ ರಾಜಿನಾಮೆ ನೀಡಬೇಕು ಮತ್ತು ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂಬ ಆಗ್ರಹಗಳು ತೀವ್ರಗೊಳ್ಳುತ್ತಿವೆ. ದೇಶದ ಚುನಾವಣಾ ಪ್ರಕ್ರಿಯೆಯ ಮೇಲಿನ ಏಕ ವ್ಯಕ್ತಿಯ ಹಿಡಿತವು ಆಯೋಗದ ಸ್ವಾಯತ್ತತೆ ಮತ್ತು ಮತದಾನದ ರಕ್ಷಣಾತ್ಮಕ ವ್ಯವಸ್ಥೆಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಸೆಪ್ಟೆಂಬರ್ ೨೩ ಮತ್ತು ೨೪ರಂದು ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯಲ್ಲಿ ರಿತಿಕಾ ಚೋಪ್ರಾರವರ SIR ಕುರಿತು ನಡೆಸಿದ ತನಿಖಾ ವರದಿ ಪ್ರಕಟವಾಗಿದೆ. ಕಳೆದ ಹತ್ತು ತಿಂಗಳಲ್ಲಿ ಚುನಾವಣಾ ಆಯೋಗದ ಇಬ್ಬರು ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿಯವರು SIRಗೆ ಸಂಬಂಧಿಸಿದ ಆಯೋಗದ ನಿರ್ಧಾರ ಹಾಗೂ ಕ್ರಮಗಳನ್ನು ಪ್ರಶ್ನಿಸಿ ೧೪ ಬಾರಿ ದಾಖಲಿಸಿರುವ ಲಿಖಿತ ಆಕ್ಷೇಪಣೆಗಳನ್ನು, ಹಾಗೂ ಗೋವಾದ 97 ಮತದಾರರ ಪ್ರಕರಣವನ್ನು ಈ ವರದಿ ವಿವರಿಸಿದೆ.

ಈ ಅಘಾತಕಾರಿ ವರದಿಯು ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಇಬ್ಬರೂ ಆಯುಕ್ತರ 14 ಲಿಖಿತ ಆಕ್ಷೇಪಣೆಗಳ ದಾಖಲೆಗಳನ್ನು ಆಧರಿಸಿದ ಈ ವರದಿಗೆ ಉತ್ತರವಾಗಿ ಚುನಾವಣಾ ಆಯೋಗವು ಸಹಿ ಇಲ್ಲದ ಪತ್ರಿಕಾ ಪ್ರಕಟಣೆಯ ಪ್ರತಿಕ್ರಿಯೆ ನೀಡಿದೆ. ಆಯುಕ್ತರ ನಡುವಿನ ಭಿನ್ನಾಭಿಪ್ರಾಯಗಳು ಸಹಜ ಎಂದು ಆಯೋಗ ತಿಳಿಸಿದ್ದರೂ, ವರದಿಯ ವಿಷಯಗಳನ್ನು ಅದು ಅಲ್ಲಗೆಳೆದಿಲ್ಲ. ಕೇಂದ್ರ ಸರ್ಕಾರದ ಬೆಂಬಲಿಗರೂ ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದು, ಭಿನ್ನಾಭಿಪ್ರಾಯಗಳು ಪ್ರಜಾಪ್ರಭುತ್ವದ ಜೀವಂತಿಕೆಯ ಸಂಕೇತ ಎಂದಿದ್ದಾರೆ. ಬಿಜೆಪಿಯ ವಕ್ತಾರರಾದ ಸುಧಾಂಶು ತ್ರಿವೇದಿಯವರು ಪತ್ರಿಕೆಯ ವರದಿಯು ಪೂರಕ ಹೇಳಿಕೆ ಮತ್ತು ದಾಖಲೆಗಳಿಂದ ಪುಷ್ಠಿಯಾಗಿಲ್ಲದ ಕಾರಣ, ಅದನ್ನು ಪರಿಗಣಿಸುವಂತಿಲ್ಲ ಎಂದಿದ್ದಾರೆ. ಆಕ್ಷೇಪಣೆಗಳನ್ನು ದಾಖಲಿಸಿರುವ ಇಬ್ಬರು ಆಯುಕ್ತರು ಮಾತ್ರ ಮೌನವಾಗಿದ್ದಾರೆ.

ಈ ನಡುವೆ, ಮೂವರು ಚುನಾವಣಾ ಆಯುಕ್ತರು ಒಟ್ಟಾಗಿ ಪತ್ರಿಕಾಗೋಷ್ಠಿ ನಡೆಸಿ, ವರದಿಯಾಗಿರುವ ಪ್ರತಿ ಅಂಶಗಳಿಗೂ ಸ್ಪಷ್ಟನೆ ನೀಡಬೇಕೆಂದು ಪ್ರತಿಪಕ್ಷಗಳು ಹಾಗೂ ನಾಗರಿಕ ವೇದಿಕೆಗಳು ಒತ್ತಾಯಿಸುತ್ತಿವೆ.

ವಿಶೇಷ ತೀವ್ರ ಪರಿಷ್ಕರಣೆ ಅಥವಾ SIR ಇಗಾಗಲೇ 16 ರಾಜ್ಯಗಳಲ್ಲಿ ಮುಗಿದಿದ್ದು, ಪ್ರಸ್ತುತ 9 ರಾಜ್ಯಗಳಲ್ಲಿ ಇನ್ನೂ ನಡೆಯುತ್ತಿದೆ. ಕರ್ನಾಟಕದಲ್ಲಿಯೂ ಈ ಪ್ರಕ್ರಿಯೆ ಇನ್ನೂ ಚಾಲನೆಯಲ್ಲಿದ್ದು, ಇಗಾಗಲೇ ಒಂದು ಕೋಟಿಗೂ ಹೆಚ್ಚು ಜನರನ್ನು ಮತದಾರರ ಪಟ್ಟಿಯಿಂದ ಹೊರಗಿಡಲಾಗಿದೆ. ಪಟ್ಟಿಯಿಂದ ಹೊರಗುಳಿದವರು ತಮ್ಮ ಪೌರತ್ವವನ್ನು ಸಾಬೀತು ಪಡಿಸುವ ಪ್ರಕ್ರಿಯೆಯಲ್ಲಿದ್ದಾರೆ. ಪರಿಷ್ಕೃತ ಮತದಾರರ ಪಟ್ಟಿ ಪ್ರಕಟಿಸಿರುವ 25 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು 13 ಕೋಟಿಗೂ ಹೆಚ್ಚು ಜನರು ಮತದಾರರ ಪಟ್ಟಿಯಿಂದ ಹೊರಗಿದ್ದಾರೆಂದು ತಿಳಿದುಬಂದಿದೆ. ಪಟ್ಟಿಯಿಂದ ಹೊರಹಾಕಲ್ಪಟ್ಟ ಜನರು ತಮ್ಮ ಪೌರತ್ವ ದಾಖಲೆಗಳನ್ನು ನೀಡಿ, ಅದನ್ನು ಚುನಾವಣಾ ಆಯೋಗವು ಅಂಗೀಕರಿಸುವ ತನಕ, ಅವರು ತಮ್ಮ ಮತದಾನದ ಹಕ್ಕಿನ ಅನಿಶ್ಚಿತತೆಯ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ಹೊಸ ಅರ್ಹ ಮತದಾರರನ್ನು ಸೇರಿಸುವುದು, ವಿಳಾಸ ಬದಲಾಯಿಸಿದವರನ್ನು ಸಂಬಂಧಿಸಿದ ಮತಕ್ಷೇತ್ರಕ್ಕೆ ವರ್ಗಾಯಿಸುವುದು, ಹಾಗೂ ಮೃತಪಟ್ಟವರ ಹೆಸರನ್ನು ತೆಗೆದು ಹಾಕುವುದು – ಇವೆಲ್ಲವೂ ಚುನಾವಣಾ ಆಯೋಗದ ಪ್ರಮುಖ ಕಾರ್ಯವಾಗಿದೆ. ಅದಕ್ಕಾಗಿ ಆಯೋಗವು ಕಾಲಕಾಲಕ್ಕೆ ಮತದಾರರ ಪಟ್ಟಿಯ ಪರಿಷ್ಕರಣೆ ಮಾಡುತ್ತದೆ. ಈ ಮೊದಲು, ‘ತೀವ್ರ ಪರಿಷ್ಕರಣೆ’ ಎಂದಷ್ಟೇ ಕರೆಯಲಾಗುತ್ತಿದ್ದ ಪ್ರಕ್ರಿಯೆಗೆ, ಚುನಾವಣಾ ಆಯೋಗವು 2025ರಲ್ಲಿ ‘ವಿಶೇಷ’ ಎಂಬ ಪದವನ್ನು ಸೇರಿಸಿ SIR ಎಂದು ಕರೆದಿದೆ. ಈ ಹಿಂದಿನ ಸರಳ ಮತದಾರರ ಪಟ್ಟಿ ಪರಿಷ್ಕರಣೆಗೆ ಯಾರ ವಿರೋಧವು ಇರಲಿಲ್ಲ, ಈಗಲೂ ಇಲ್ಲ. ಆದರೆ, ಇಂದಿನ SIRನಲ್ಲಿ ಅರ್ಹ ಮತದಾರರನ್ನು ಗುರುತಿಸಲು ಅತಿ ಕ್ಲಿಷ್ಟ ವ್ಯವಸ್ಥೆಗಳನ್ನು ಅಳವಡಿಸಿರುವ ಕಾರಣ, ಗೊಂದಲಗಳು ಉಂಟಾಗಿ, ಮತದಾರರು ತಮ್ಮ ಹೆಸರುಗಳನ್ನು ನೋಂದಾಯಿಸುವಾಗ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುವುದು ನಿತ್ಯದ ಸುದ್ದಿಯಾಗಿದೆ.

ಹೀಗೆ, SIR ಬಹು ವಿವಾದಕ್ಕೆ ಗುರಿಯಾಗಿದ್ದು, ಜನರಲ್ಲಿ ಅಸಮಧಾನ ಹೆಚ್ಚಿಸಿದೆ. ಅನೇಕರಲ್ಲಿ ಮತದಾನದ ಹಕ್ಕಿನಿಂದ ವಂಚಿತರಾಗಬಹುದೆಂಬ ಆತಂಕ ಹುಟ್ಟಿಸಿದ್ದರೆ, ಕೆಲವರನ್ನು ನಿಜವಾಗಿಯೂ ವಂಚಿತರನ್ನಾಗಿಸಿದೆ. ಈ ನಡುವೆ, ಮತದಾರರ ಪಟ್ಟಿಯಿಂದ ತೆಗೆದು ಹಾಕಲ್ಪಟ್ಟವರಿಗೆ ರೇಷನ್ ಕಾರ್ಡ್ ಸೇರಿದಂತೆ ಮತ್ತಿತರ ಸರ್ಕಾರಿ ಸವಲತ್ತುಗಳು ದೊರೆಯುವುದಿಲ್ಲ ಎಂಬ ಸುದ್ದಿಗಳು (ವಿಶೇಷವಾಗಿ ಪಶ್ಚಿಮ ಬಂಗಾಲದಿಂದ) ಜನರಲ್ಲಿ ಮತ್ತಷ್ಟು ಭಯ ಹಾಗೂ ಆತಂಕಕ್ಕೆ ಕಾರಣವಾಗಿವೆ.

ಪ್ರತಿಪಕ್ಷಗಳು, ನಾಗರಿಕ ವೇದಿಕೆಗಳು, ಮತ್ತು ಸಾಮಾಜಿಕ ಕಾರ್ಯಕರ್ತರು SIR ನಡೆಸುತ್ತಿರುವ ವಿಧಾನವನ್ನು ಖಂಡಿಸಿ, ಅದರ ಔಚಿತ್ಯವನ್ನೇ ಪ್ರಶ್ನಿಸುತ್ತಿದ್ದಾರೆ. ಈ ವಿಷಯವು ಸುಪ್ರಿಂ ಕೋರ್ಟ್ನ ಮೆಟ್ಟಿಲೇರಿದ್ದರೂ, ಜನಸಾಮಾನ್ಯರನ್ನು SIR ಸಂಕಟಗಳು ಇನ್ನೂ ಕಾಡುತ್ತಿವೆ.

ಈ ತೀವ್ರ ವಿರೋಧ ಹಾಗೂ ಪ್ರತಿಭಟನೆಗಳ ನಡುವೆಯೇ SIR ಮುಂದುವರೆದಿದೆ. ಈ ಸಂದರ್ಭದಲ್ಲಿ, ಚುನಾವಣಾ ಆಯೋಗದೊಳಗಿನ ಇಬ್ಬರು ಆಯುಕ್ತರು SIR ಕುರಿತಾಗಿ ದಾಖಲಿಸಿರುವ ಅಕ್ಷೇಪಣೆಗಳನ್ನು ಬಯಲಿಗೆಳೆದ ಇಂಡಿಯನ್ ಎಕ್ಸ್ಪ್ರೆಸ್ ವರದಿಯು ಈಗಾಗಲೇ ಜನರಲ್ಲಿದ್ದ ಅನುಮಾನಗಳಿಗೆ ಮತ್ತಷ್ಟು ಪುಷ್ಠಿ ನೀಡಿ, ವಿರೋಧದ ಧ್ವನಿಯನ್ನು ಇನ್ನಷ್ಟು ಗಟ್ಟಿಗೊಳಿಸಿದೆ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಭಾರತದ ಚುನಾವಣಾ ಆಯೋಗವು ಸ್ವತಂತ್ರ ಸಾಂವಿಧಾನಿಕ ಸಂಸ್ಥೆಯಾಗಿದ್ದು, ಅದು ಯಾವುದೇ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವುದಿಲ್ಲ.

2023ರ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರಾವಧಿ) ಕಾಯ್ದೆಯ ಸೆಕ್ಷನ್ 18ರ ಪ್ರಕಾರ, ಆಯೋಗದ ಎಲ್ಲಾ ವ್ಯವಹಾರಗಳನ್ನು ಸಾಧ್ಯವಾದಷ್ಟು ಸರ್ವಾನುಮತದಿಂದ ನಿರ್ವಹಿಸಬೇಕು. ಆಯುಕ್ತರ ನಡುವೆ ಭಿನ್ನಾಭಿಪ್ರಾಯವಿದ್ದಲ್ಲಿ, ಬಹುಮತದ ಅಭಿಪ್ರಾಯದಂತೆ ನಿರ್ಧಾರ ಕೈಗೊಳ್ಳಬೇಕು. ಅಂದರೆ, ಮೂವರು ಆಯುಕ್ತರಲ್ಲಿ ಇಬ್ಬರು ಒಂದೇ ಅಭಿಪ್ರಾಯ ಹೊಂದಿದ್ದರೆ, ಅದೇ ಬಹುಮತದ ನಿರ್ಧಾರವಾಗುತ್ತದೆ. ಮುಖ್ಯ ಚುನಾವಣಾ ಆಯುಕ್ತರು ಮೂವರಲ್ಲಿ ಒಬ್ಬರಾಗಿದ್ದು, ಅವರು ಸಮಾನ ಸ್ಥಾನದಲ್ಲಿರುವ ಆಯುಕ್ತರಲ್ಲಿ ಮೊದಲಿಗರಾಗಿದ್ದಾರೆ.

ಇಂಡಿಯನ್ ಎಕ್ಸ್ಪ್ರೆಸ್ ವರದಿಯಲ್ಲಿ ಉಲ್ಲೇಖಿಸಿರುವ ಇಬ್ಬರು ಆಯುಕ್ತರ ಆಕ್ಷೇಪಣೆಗಳು ಇಂತಿವೆ:
ಮೊದಲನೆಯದಾಗಿ, ಹೊಸ ಮತದಾರರ ನೋಂದಣಿಗೆ ಫಾರಂ-6 ಕಾನೂನುಬದ್ಧ ಅರ್ಜಿ ನಮೂನೆಯಾಗಿದೆ. ಅದರಲ್ಲಿ ಹೊಸ ಪ್ರಶ್ನೆಗಳನ್ನು ಸೇರಿಸಬೇಕಾದರೆ, ಕಾಯ್ದೆ ಪ್ರಕಾರ ಆಯೋಗವು ಸರ್ಕಾರದ ಅನುಮತಿ ಪಡೆಯಬೇಕು. ಆದರೆ, ಹೊಸ ಮತದಾರರ ತಂದೆ / ತಾಯಿ ಅಥವಾ ಅಜ್ಜ ಅಜ್ಜಿಯ ಹೆಸರು 2002ರ ಮತದಾರರ ಪಟ್ಟಿಯಲ್ಲಿ ಇತ್ತೇ? ಎಂಬ ಹೊಸ ಪ್ರಶ್ನೆಯನ್ನು ಈಗಿನ SIR ನಲ್ಲಿ ಸೇರಿಸಲಾಗಿದೆ. ಈ ಬದಲಾವಣೆಯನ್ನು ಆಯುಕ್ತರು ‘ಅನಧಿಕೃತ ಮತ್ತು ಕಾನೂನುಬಾಹಿರ’ ಎಂದು ಆಕ್ಷೇಪಿಸಿದ್ದಾರೆ.

ಅಂದರೆ, ಸರ್ಕಾರದ ಅನುಮತಿ ಇಲ್ಲದೆ ಫಾರಂ-6ರಲ್ಲಿ ಈ ಹೊಸ ಪ್ರಶ್ನೆ ಸೇರಿಸಲಾಯಿತೇ? ಅಥವಾ, ಈ ಸೇರ್ಪಡೆಗೆ ಸರ್ಕಾರದ ಅನುಮತಿ ಇತ್ತೇ? ಅನುಮತಿ ಇದ್ದರೆ ಅದರ ದಾಖಲೆಗಳೇಲ್ಲಿವೆ? ಅನುಮತಿ ಪಡೆದಿದ್ದು ಈ ಇಬ್ಬರು ಆಯುಕ್ತರ ಗಮನಕ್ಕೆ ಬರಲಿಲ್ಲವೇಕೆ? ಮೇಲಿನ ಆಕ್ಷೇಪಣೆಯಿಂದ ಈ ಪ್ರಶ್ನೆಗಳು ಸಹಜವಾಗಿ ಮೂಡುತ್ತವೆ.

ಮತದಾರರ ಮಾಹಿತಿಯ ಕೇಂದ್ರೀಕರಣವು ಮತ್ತೊಂದು ಆಕ್ಷೇಪಣೆಯಾಗಿದೆ. ಕಾಯ್ದೆಯನುಸಾರ ಮತದಾರರ ಪಟ್ಟಿಗೆ ಹೆಸರು ಸೇರಿಸುವ, ತೆಗೆದು ಹಾಕುವ, ಅಥವಾ ತಿದ್ದುಪಡಿ ಮಾಡುವ ಅಧಿಕಾರವನ್ನು ಕ್ಷೇತ್ರಮಟ್ಟದ ಮತದಾರರ ನೋಂದಣಿ ಅಧಿಕಾರಿಗಳಿಗೆ ಅಂದರೆ ಇಖಔಗಳಿಗೆ ನೀಡಿಲಾಗಿದೆ. ಆದರೆ, SIR ತತ್ರಾಂಶದಲ್ಲಿ ಈ ಮಾಹಿತಿ ನಮೂದಿಸಲು ನೇರಪ್ರವೇಶ (ಅಕ್ಸೆಸ್) ನೀಡಿಲ್ಲವಾದ ಕಾರಣ ಅವರ ಕಾರ್ಯನಿರ್ವಹಣೆಯನ್ನು ತಡೆಯಲಾಗಿದೆ. ಪ್ರವೇಶ ನಿಯಂತ್ರಣವು ದೆಹಲಿಯ ಚುನಾವಣಾ ಆಯೋಗದ ಆಉ (Iಖಿ) ವಿಭಾಗದ ಕೇಂದ್ರಿಕೃತ ನಿಯಂತ್ರಣದಲ್ಲಿದೆ. ಹೀಗೆ, ಸಾಫ್ಟ್ವೇರ್ ಪ್ರವೇಶಾನುಮತಿಗಳನ್ನು ಕೇಂದ್ರದಿಂದ ನಿಯಂತ್ರಿಸುವ ಮೂಲಕ ಕಾಯ್ದೆಯು ನೀಡಿರುವ ಅಧಿಕಾರವನ್ನು ಚುನಾವಣಾ ಅಧಿಕಾರಿ ಅಥವಾ ಉಪ ವಿಭಾಗ ನಿರ್ಬಂಧಿಸಬಹುದೇ ಎಂಬುದು ಈ ಆಕ್ಷೇಪಣೆಯ ಮುಖ್ಯ ಪ್ರಶ್ನೆಯಾಗಿದೆ.

ಮೂರನೇಯದು, ಆಯೋಗದ ಅನುಮೋದನೆಯಿಲ್ಲದೆ, ಚುನಾವಣಾ ಆಯೋಗದ ಹೆಸರಿನಲ್ಲಿ ಪತ್ರಗಳು ಮತ್ತು ಆದೇಶಗಳನ್ನು ಹೊರಡಿಸಲಾಗುತ್ತಿದೆ ಎಂದು ಇಬ್ಬರು ಆಯುಕ್ತರು ಲಿಖಿತವಾಗಿ ಆಕ್ಷೇಪಿಸಿದ್ದಾರೆ. ಇದಲ್ಲದೆ, ಸಂಧು ಅವರು, ಉಪ ವಿಭಾಗವು ಹೊಸ ಮಾಡ್ಯೂಲ್ಸ್ ಮತ್ತು ಪೋರ್ಟಲ್ಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದ್ದು, ಅವುಗಳ ಬಗ್ಗೆ ತಮಗಾಗಲಿ ಅಥವಾ ಆಯೋಗಕ್ಕಾಗಲಿ ಮುಂಚಿತವಾಗಿ ತಿಳಿಸಲಾಗಿರಲಿಲ್ಲ ಎಂಬುದನ್ನು ಪ್ರಶ್ನಿಸಿದ್ದಾರೆ. ಈ ಕೆಲವು ಬೆಳವಣಿಗೆಗಳ ಬಗ್ಗೆ ಮಾಧ್ಯಮಗಳ ಮೂಲಕವೇ ತಿಳಿದುಕೊಂಡಿದ್ದಾಗಿ ದಾಖಲಿಸಿದ್ದಾರೆ.

ಹಾಗಾದರೆ, ಈ ಆಕ್ಷೇಪಿತ ನಿರ್ಧಾರಗಳು ಮತ್ತು ಕ್ರಮಗಳು ಆಯುಕ್ತರ ಕಚೇರಿ ಮೂಲಕ ನಡೆಯಲಿಲ್ಲವೇ? ಯಾರು ಇಂತಹ ನಿರ್ಧಾರಗಳನ್ನು ಮಾಡುತ್ತಿದ್ದರು, ಅವರಿಗೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಆಯೋಗದ ಅನುಮತಿ ಇಲ್ಲದೆ ನೀಡಿದವರಾರು? ಇಂತಹ ಪ್ರಶ್ನೆಗಳು ಸಹಜವಾಗಿವೆ.

ನಾಲ್ಕನೆಯದಾಗಿ, ಪಶ್ಚಿಮ ಬಂಗಾಳದ SIR ಪ್ರಕ್ರಿಯೆಯಲ್ಲಿ, ನ್ಯಾಯಾಂಗ ಅಧಿಕಾರಿಗಳು ಪರಿಶೀಲಿಸಿದ ನಂತರ ಪಟ್ಟಿಯಿಂದ ಹೊರಗಿದ್ದ ಸುಮಾರು 16.10 ಲಕ್ಷ ಮತದಾರರನ್ನು ಮತ್ತೇ ಪಟ್ಟಿಯೊಳಗೆ ಸೇರಿಸಬೇಕು ಎಂದು ತೀರ್ಮಾನಿಸಿದ್ದರು. ಆದರೆ, ಇವರನ್ನು ಮತ್ತೇ ಮತದಾರರ ಪಟ್ಟಿಗೆ ಸೇರಿಸುವುದನ್ನು ಪ್ರಶ್ನಿಸಿ, ಅವರ ಹೆಸರುಗಳನ್ನು ತೆಗೆದು ಹಾಕುವಂತೆ 16.10 ಲಕ್ಷ ಮೇಲ್ಮನವಿಗಳು ಸಲ್ಲಿಕೆಯಾಗುತ್ತವೆ. ಇಷ್ಟೊಂದು ಮೇಲ್ನನವಿಗಳನ್ನು ಯಾರು ಸಲ್ಲಿಸಿದರು ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿರಲಿಲ್ಲ.

ಇದೇ ವಿಷಯವನ್ನು ಆಯುಕ್ತ ಸಂಧು ಲಿಖಿತವಾಗಿ ಪ್ರಶ್ನಿಸಿದ್ದಾರೆ. ಚುನಾವಣಾ ಆಯೋಗದ ಪರವಾಗಿ ಈ ಮೇಲ್ನನವಿಗಳನ್ನು ಸಲ್ಲಿಸಲು ಯಾರಿಗೆ ಅಧಿಕಾರ ನೀಡಲಾಗಿತ್ತು? ಆ ಅಧಿಕಾರವನ್ನು ಯಾರು ನೀಡಿದ್ದರು? ಹಾಗೂ ಆಯೋಗದ ಪರವಾಗಿ ಈ ಮೇಲ್ಮನವಿಗಳನ್ನು ನಿಜವಾಗಿ ಸಲ್ಲಿಸಿದವರು ಯಾರು? ಎಂಬ ಪ್ರಶ್ನೆಗಳನ್ನು ದಾಖಲಿಸುತ್ತಾರೆ. ಸಂಧು ಅವರ ಪ್ರಕಾರ ಅವರಿಗಾಗಲಿ, ವಿವೇಕ್ ಜೋಶಿಯವರಿಗಾಗಲಿ ಅಥವಾ ಮುಖ್ಯ ಚುನಾವಣಾ ಅಧಿಕಾರಿಗಳಿಗಾಗಲಿ ಈ ಮೇಲ್ನನವಿ ಸಲ್ಲಿಕೆಯಾಗಿರುವ ವಿಷಯ ತಿಳಿದಿರಲಿಲ್ಲ!?

ಕೊನೆಯದಾಗಿ, ವರದಿಯ ಎರಡನೇ ಭಾಗವು ಗೋವಾದಲ್ಲಿ ಇಖಔ ರವರ ಅಧಿಕಾರವನ್ನು ಸಾಫ್ಟ್ವೇರ್ ನಿಯಂತ್ರಣವು ಹೇಗೆ ನಿರ್ಬಂಧಿಸಿತು ಎಂಬುದನ್ನು ತಿಳಿಸುತ್ತದೆ. ತಾರ್ಕಿಕ ವ್ಯತ್ಯಾಸಗಳಿಂದಾಗಿ ಮತದಾರರ ಪಟ್ಟಿಯಿಂದ ಹೊರಗುಳಿದ 97 ಮತದಾರರ ದಾಖಲೆಗಳನ್ನು ಪರಿಶೀಲಿಸಿದ ಅಧಿಕಾರಿಗಳು, ಅವರು ಅರ್ಹರೆಂದು ನಿರ್ಧರಿಸಿದರು. ಆದರೆ, ಅವರ ಹೆಸರುಗಳನ್ನು ಮತ್ತೆ ಪಟ್ಟಿಗೆ ಸೇರಿಸಲು ಅವಶ್ಯವಿದ್ದ ಸೌಲಭ್ಯವು (ತಪ್ಪಾದ ಹಿಂದಿನ ನಿರ್ಧಾರವನ್ನು ಹಿಂತೆಗೆದುಕೊಳ್ಳುವ) ಸಾಫ್ಟ್ವೇರ್‌ನಲ್ಲಿ ಇರಲಿಲ್ಲ. ಚುನಾವಣಾ ಇಲಾಖೆರವರು, ಅವರ ಹೆಸರುಗಳನ್ನು ಸಾಫ್ಟ್ವೇರ್‌ನಲ್ಲಿ ಮರುಸ್ಥಾಪಿಸಲು ಪ್ರಯತ್ನಿಸಿದಾಗ ಅವರಿಗೆ ಅಕ್ಸೆಸ್ ಸಿಗುವುದಿಲ್ಲ.

ಈ ಸೌಲಭ್ಯವನ್ನು ಒದಗಿಸುವಂತೆ ಗೋವಾದ ಮುಖ್ಯ ಚುನಾವಣಾಧಿಕಾರಿಯ ಕಚೇರಿಯಿಂದ ಹಿರಿಯ ಉಪಚುನಾವಣಾ ಆಯುಕ್ತರಿಗೆ ಫೇಬ್ರುವೆರಿ 11 ರಿಂದ 17ರ ನಡುವೆ ಎಂಟು ಬಾರಿ ಲಿಖಿತ ಮನವಿಗಳನ್ನು ಕಳುಹಿಸಲಾಗಿತ್ತು. ಎಲ್ಲಾ ಮನವಿಗಳ ಪ್ರತಿಯನ್ನು ಸೀಮಾ ಖನ್ನಾ ಅವರಿಗೂ ಕಳುಹಿಸಲಾಗಿತ್ತು. ಆದರೆ, ಈ ಪತ್ರಗಳಿಗೆ ಉತ್ತರ ಸಿಗದ ಪರಿಣಾಮವಾಗಿ 97 ಅರ್ಹ ಮತದಾರರು ಅಂತಿಮ ಪಟ್ಟಿಯಿಂದ ಹೊರಗುಳಿಯುತ್ತಾರೆ.

ಯಾರನ್ನು ತೆಗೆಯಬೇಕು, ಯಾರನ್ನು ಸೇರಿಸಬೇಕು ಎಂದು ನಿರ್ಣಯಿಸುವ ಅಧಿಕಾರವನ್ನು ಸ್ಥಳೀಯ ಅಧಿಕಾರಿಗಳಿಂದ ಕಸಿದು, ಅದನ್ನು ದಿಲ್ಲಿಕರಣಗೊಳಿಸಿದ ಉದ್ದೇಶವಾದರೂ ಏನು? ಇದರಲ್ಲಿ ಚುನಾವಣಾ ಅಧಿಕಾರಿ ಪಾತ್ರ ಮತ್ತು ಅಧಿಕಾರವೇನಿತ್ತು ಎಂಬುದನ್ನು ಕೇಳಬೇಕಲ್ಲವೇ?

ಇಂಡಿಯನ್ ಎಕ್ಸ್ಪ್ರೆಸ್ ಪ್ರಕಟಿಸಿರುವ ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಮತ್ತು ಆಂತರಿಕ ಅಸಮ್ಮತಿಯ ಸಂಬAಧಿತ ವರದಿಯು ಇನ್ನೂ ಅನೇಕ ನಿರ್ಣಾಯಕ ಪ್ರಶ್ನೆಗಳನ್ನು ತೆರೆದಿಡುತ್ತದೆ.

ಈ ಇಬ್ಬರು ಆಯುಕ್ತರು ತಮ್ಮ ಆಕ್ಷೇಪಣೆಯನ್ನು ಕಾನೂನು ಬದ್ಧವಾಗಿ ರಾಷ್ಟçಪತಿಯವರಿಗೆ ತಿಳಿಸಬೇಕಿತ್ತು. ಆದರೆ, ಅವರು ಹಾಗೆ ಮಾಡದೆ, ತಮ್ಮ ಮೇಲಾಧಿಕಾರಿಯಲ್ಲದ ಕ್ಯಾಬಿನೇಟ್ ಕಾರ್ಯದರ್ಶಿಯವರಿಗೆ ಲಿಖಿತ ಆಕ್ಷೇಪಣೆ ಸಲ್ಲಿಸಿದರೇಕೆ?

ಆಯೋಗದ ಮೂವರು ಆಯುಕ್ತರೊಳಗೆ, ಇಬ್ಬರಿಗೆ ಯಾವುದಾದರೂ ನಿರ್ಧಾರ ಸರಿ ಇಲ್ಲವೆನಿಸಿದಾಗ, ಅದರ ನಿರಾಕರಣೆಯೇ ಬಹುಮತದ ತೀರ್ಮಾನವಾಗುತ್ತದೆ. ಅಂದರೆ ಬಹುಮತದ ನಿರಾಕರಣೆಯನ್ನು ಧಿಕ್ಕರಿಸಿ, ಏಕಪಕ್ಷೀಯವಾಗಿ ತೀರ್ಮಾನ ಕೈಗೊಳ್ಳಲಾಯಿತೇ? ಈ ಏಕಪಕ್ಷೀಯ ತೀರ್ಮಾನಗಳು ಹೇಗೆ ಅನುಷ್ಟಾನಗೊಂಡವು? ಒಬ್ಬರು ಮಾತ್ರ ಕೈಗೊಂಡ ಕ್ರಮಗಳು ಆಯೋಗದ ಅಧಿಕೃತ ನಿರ್ಧಾರಗಳಾಗಿ ಜಾರಿಯಾಗಲು ಹೇಗೆ ಸಾಧ್ಯವಾಯಿತು? ಅಥವಾ ಜ್ಞಾನೇಶ್ ಕುಮಾರ್ ಕೇವಲ ನಿಮಿತ್ತ ಮಾತ್ರರಾಗಿದ್ದು, ಮತ್ತಾವುದೋ ಕಾಣದ ಕೈಗಳು ಚುನಾವಣಾ ಆಯೋಗವನ್ನು ನಿಯಂತ್ರಿಸುತ್ತಿದೆಯೇ?

ಇಬ್ಬರು ಆಯುಕ್ತರು ಕಡತಗಳು, ಪತ್ರ ಮತ್ತು ಇಮೇಲ್‌ಗಳ ಮೂಲಕ ತಮ್ಮ ಸಹಿಯೊಂದಿಗೆ ದಾಖಲಿಸಿರುವ ಲಿಖಿತ ಆಕ್ಷೇಪಣೆಗಳು ಕೇವಲ ಸಹಜ ಭಿನ್ನಾಭಿಪ್ರಾಯಗಳಾಗಿದ್ದರೆ, ಅವುಗಳಲ್ಲಿ ಬಳಸಿರುವ ‘ಅನಧಿಕೃತ ಮತ್ತು ಅಕ್ರಮ’ ಎಂಬಂತಹ ಕಠಿಣ ಪದಗಳನ್ನು ಹೇಗೆ ಅರ್ಥೈಸಿಕೊಳ್ಳಬೇಕು? ಅಲ್ಲದೆ, ಇಷ್ಟೆಲ್ಲಾ ಗಂಭೀರ ವಿವಾದಗಳು ನಡೆಯುತ್ತಿದ್ದರೂ, ಈ ಇಬ್ಬರು ಆಯುಕ್ತರು ಇದು ಕೇವಲ ‘ಸಹಜ ಭಿನ್ನಾಭಿಪ್ರಾಯ’ ಎಂದು ಬಹಿರಂಗ ಪಡಿಸುತ್ತಿಲ್ಲವೇಕೆ?

ಫಾರ್ಮ್ – 6 ಮತ್ತಿತರ ವಿಷಯಗಳ ಕುರಿತು ಇಬ್ಬರು ಆಯುಕ್ತರು ಬರೆದಿರುವ ಲಿಖಿತ ಆಕ್ಷೇಪಣೆಗಳು ನಿಜವಾಗಿಯೂ ಆಯೋಗದ ಗಮನಕ್ಕೆ ಬಂದಿತ್ತೇ? ಯಾವಾಗ ಬಂದವು, ಮತ್ತು ಅವುಗಳನ್ನು ಪರಿಶೀಲಿಸಿ, ಉತ್ತರಿಸಲಾಯಿತೇ? ಆಯೋಗದ ಸಭೆಯಲ್ಲಿ ಚರ್ಚಿಸಿ ದಾಖಲಿಸಲಾಗಿತ್ತೇ? ಚರ್ಚೆಯ ನಂತರ ತೆಗೆದುಕೊಂಡ ನಿರ್ಧಾರಗಳೇನು?

ಇದೇ ಪಶ್ಚಿಮ ಬಂಗಾಳದ ಅಂತಿಮ ಪಟ್ಟಿಯಿಂದ ಹೊರಗುಳಿದ ಮತ್ತು ವಿಚಾರಣೆಗೆ ಒಳಪಟ್ಟ ಸುಮಾರು 27 ಲಕ್ಷ ಪ್ರಕರಣಗಳಲ್ಲಿ, ಈವರೆಗೆ ಸುಮಾರು 1.22 ಲಕ್ಷ ಮೇಲ್ನನವಿಗಳನ್ನು ಮಾತ್ರ ನ್ಯಾಯಮಂಡಳಿಯು ತೀರ್ಮಾನಿಸಲಾಗಿದ್ದು, ಅವುಗಳಲ್ಲಿ, ಸುಮಾರು 93% ರಷ್ಟು ಪ್ರಕರಣಗಳಲ್ಲಿ ಮತದಾರರನ್ನು ಪಟ್ಟಿಯಿಂದ ತೆಗೆದಿದ್ದು ತಪ್ಪು ಎಂದು ತೀರ್ಮಾನಿಸಿ ಮತ್ತೇ ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಚುನಾವಣಾ ಆಯೋಗವೇ ಸುಪ್ರಿಂ ಕೊರ್ಟ್ಗೆ ಸಲ್ಲಿಸಿದ ಅಫಿಡೆವಿಟ್‌ನಲ್ಲಿ ತಿಳಿಸಿರುತ್ತದೆ.

ಅಂದರೆ, ೯೩% ಪ್ರಮಾಣದಲ್ಲಿ ದೋಷವುಳ್ಳ ಇದಾವ ಹುಸಿ ವ್ಯವಸ್ಥೆಯನ್ನು ಜನರ ಮೇಲೆ ಹೇರಲಾಗಿದೆ? ತರ್ಕವೇ ಇಲ್ಲದ ತಾರ್ಕಿಕ ವ್ಯತ್ಯಾಸದ ಈ ದೋಷಪೂರಿತ ವ್ಯವಸ್ಥೆಯ ಪರಿಣಾಮಗಳನ್ನು ಜನರೇಕೆ ಅನುಭವಿಸಬೇಕು? ಯಾವ ತಪ್ಪಿಗಾಗಿ ಜನಸಾಮಾನ್ಯರನ್ನು ನ್ಯಾಯಾಲಯಕ್ಕೆ ಎಳೆಯಲಾಗುತ್ತಿದೆ? ಸಾರ್ವಜನಿಕರ ತೆರಿಗೆ ಹಣದಲ್ಲಿ ನಡೆಸುತ್ತಿರುವ ಈ ದೋಷಪೂರಿತ ಹುಸಿ ವ್ಯವಸ್ಥೆಯಿಂದ ಎನನ್ನು ಸಾಧಿಸಲಾಗಿದೆ?

ಇಂತಹ ಇನ್ನೂ ಅನೇಕ ಕಗ್ಗಂಟಿನ ಪ್ರಶ್ನೆಗಳೊಂದಿಗೆ, ವಿರೋಧ ಪಕ್ಷಗಳು, ಎಎಪಿ ಮತ್ತು ಹಲವು ನಾಗರಿಕ ವೇದಿಕೆಗಳು ಜ್ಞಾನೇಶ್ ಕುಮಾರ್ ರಾಜಿನಾಮೆಗೆ ಆಗ್ರಹಿಸುತ್ತಿವೆ. ಅವರ ಬಂಧನ ಮತ್ತು ಕಾನೂನು ಕ್ರಮಕ್ಕೆ ಒತ್ತಾಯಿಸಿವೆ. ಯುವ ಕಾಂಗ್ರೇಸ್ ಇಗಾಗಲೇ ಪ್ರತಿಭಟನೆಯನ್ನು ಪ್ರಾರಂಭಿಸಿದೆ. ಎಎಪಿಯು ಮೂರು ಮುಖ್ಯ ಬೇಡಿಕೆಗಳನ್ನು ಮುಂದಿಟ್ಟು, 48 ಗಂಟೆಗಳೊಳಗೆ ಜ್ಞಾನೇಶ್ ಕುಮಾರ್ ರಾಜಿನಾಮೆ ನೀಡದಿದ್ದರೆ ದೇಶದಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ.

ಇಂಡಿಯನ್ ಎಕ್ಸ್ಪ್ರೆಸ್‌ನ ತನಿಖಾ ವರದಿಯಲ್ಲಿ ಬಹಿರಂಗವಾಗಿರುವ ಅಂಶಗಳು ಆಯೋಗದೊಳಗಿನ ಇಬ್ಬರು ಆಯುಕ್ತರು ಲಿಖಿತವಾಗಿ ದಾಖಲಿಸಿರುವ ಆಕ್ಷೇಪಣೆಗಳ ಆಧಾರಿತವಾಗಿವೆ. ಹೀಗಾಗಿ, ಇವು ಕೇವಲ ಸಹಜ ಭಿüನ್ನಾಭಿಪ್ರಾಯಗಳು ಅಥವಾ ರಾಜಕೀಯ ಲಾಭಕ್ಕಾಗಿ ನಡೆಸುತ್ತಿರುವ ಬಂಡಾಯವೆಂಬ ಬಣ್ಣನೆಗಳಿಂದ ಈ ಗಂಭೀರ ಪ್ರಶ್ನೆಗಳನ್ನು ತಳ್ಳಿಹಾಕುವುದು ಪ್ರಜಾಪ್ರಭುತ್ವದ ಮೂಲಭೂತ ಪ್ರಶ್ನೆಗಳನ್ನು ಹಗುರವಾಗಿ ಪರಿಗಣಿಸಿದಂತಾಗುತ್ತದೆ.

ಈ ಪ್ರಕರಣವು ಕೇವಲ ಇಬ್ಬರು ಆಯುಕ್ತರ ನಡುವಿನ ಭಿನ್ನಾಭಿಪ್ರಾಯವಾಗಿ ಉಳಿದಿಲ್ಲ. ಇದು ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆ ಮತ್ತು ಮತದಾನದ ಹಕ್ಕನ್ನು ಪ್ರಶ್ನಿಸುವ ಗಂಭೀರ ಸಂಗತಿಗಳಾಗಿದ್ದು, ಅಂತಿಮವಾಗಿ, ಈ ದೇಶದ ಪ್ರಜಾಪ್ರಭುತ್ವದ ಉಳಿವಿಕೆಯ ಪ್ರಶ್ನೆಯಾಗಿದೆ. ಆದ್ದರಿಂದ, ಈ ಪ್ರಶ್ನೆಗಳಿಗೆ ಮೌನ ಅಥವಾ ಹಾರಿಕೆಯ ಉತ್ತರಗಳನ್ನು ಒಪ್ಪಲಾಗದು. ನೇರವಾಗಿ ಚುನಾವಣಾ ಆಯೋಗದ ಮೂವರೂ ಆಯುಕ್ತರು ಜಂಟಿಯಾಗಿ ಸತ್ಯಾಂಶಗಳನ್ನು ಜನತೆಗೆ ನೀಡುವುದು ಸಂವಿಧಾನಿಕ ಜವಾಬ್ದಾರಿಯಾಗಿದೆ.

Related Articles

ಇತ್ತೀಚಿನ ಸುದ್ದಿಗಳು