Home ಬೆಂಗಳೂರು 19ರಿಂದ FM RAINBOW ಬಂದ್: ಕನ್ನಡಿಗರ ಆಕ್ರೋಶ

19ರಿಂದ FM RAINBOW ಬಂದ್: ಕನ್ನಡಿಗರ ಆಕ್ರೋಶ

0

ಎಫ್‌ ಎಮ್‌ ರೈನೋ ಬೋ ವಾಹಿನಿಯನ್ನು ಬೆಂಗಳೂರು ಆಕಾಶವಾಣಿಯ ಕಾರ್ಯಕ್ರಮಗಳಿಗೆ ಮೀಸಲಾಗಿಸಿ ವಿವಿಧ ಭಾರತಿ ವಾಹಿನಿಯಲ್ಲಿ ಹೆಚ್ಚಿನ ಪ್ರಮಾಣದ ಕನ್ನಡ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಮೂಲಕ ಅದನ್ನು ಪೂರ್ಣಪ್ರಮಾಣದ ಮನರಂಜನಾ ಚಾನೆಲ್‌ ಆಗಿಸುವ ಪ್ರಯತ್ನಗಳು ನಡೆಯುತ್ತಿವೆಯೆಂದು ಮೂಲಗಳು ತಿಳಿಸಿವೆ.

ರಾಜ್ಯದ ಜನರಿಗೆ ಶಾಸ್ತ್ರೀಯ ಸಂಗೀತದ ರಸದೌತಣವನ್ನು ನೀಡುತ್ತಿದ್ದ ಅಮೃತವರ್ಷಿಣಿ (100.10ಎಫ್ಎಂ) ಚಾನೆಲ್ಲನ್ನು ರಾಷ್ಟ್ರೀಯ ಚಾನೆಲ್‌ ರಾಗಂ ಜೊತೆ ವಿಲೀನಗೊಳಿಸಿದ ಬೆನ್ನಲ್ಲೇ ಈಗ ಸಾರ್ವಜನಿಕ ರಂಗದ ಏಕೈಕ ಕನ್ನಡ ಫ್ರೀಕ್ವೆನ್ಸಿ ಮಾಡ್ಯುಲೇಶನ್ (ಎಫ್ಎಂ) ಮನರಂಜನಾ ಚಾನೆಲ್ ಸುಪ್ರಸಿದ್ಧ ಎಫ್ಎಂ ರೇನ್ಬೋ (101.3 ಎಫ್ಎಂ) ಶೀಘ್ರದಲ್ಲೇ ಆಲ್ ಇಂಡಿಯಾ ರೇಡಿಯೋ (ಎಐಆರ್) ಬೆಂಗಳೂರು ವಾಹಿನಿಯೊಂದಿಗೆ ವಿಲೀನಗೊಳ್ಳಲಿದೆಯೆಂದು ಮೂಲಗಳು ತಿಳಿಸಿವೆ.
ವಿಶ್ವಾಸಾರ್ಹ ಮೂಲಗಳ ಪ್ರಕಾರ, 101.3 ಎಫ್ಎಂ ರೇನ್ಬೋ ಜು: 16ರಿಂದ ತನ್ನ ಪ್ರಸ್ತುತ ಮನರಂಜನಾ ಕಾರ್ಯಕ್ರಮಗಳನ್ನು ನಿಲ್ಲಿಸಲಿದೆ ಮತ್ತು ಈ ಕಂಪನಾಂಕದಲ್ಲಿ ಪ್ರಸ್ತುತ ಮೀಡಿಯಂ ವೇವ್‌ ಮೂಲಕ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಿರುವ AIR – ಬೆಂಗಳೂರು ಆಕಾಶವಾಣಿಯ ಕಾರ್ಯಕ್ರಮಗಳು ಬಿತ್ತರಗೊಳ್ಳಲಿವೆ. “ಮಂತ್ಲಿ ಡ್ಯೂಟಿ ಚಾರ್ಟನ್ನು ಈ ಬಾರಿ ಜುಲೈ 8ರ ತನಕವಷ್ಟೇ ಸಿದ್ಧಪಡಿಸಲಾಗಿತ್ತು. ಕೊನೆಗೆ ಗುರುವಾರ ಮತ್ತೆ ಅದನ್ನೇ 15ನೇ ತಾರೀಖಿನವರೆಗೆ ವಿಸ್ತರಿಸಲಾಯಿತು” ಎಂದು FM Rainbow ಉದ್ಯೋಗಿಯೊಬ್ಬರು ತಿಳಿಸಿದ್ದಾರೆ. ಇದೇ ವಿಷಯದ ಕುರಿತು ಹಿರಿಯ ಅಧಿಕಾರಿಯೊಬ್ಬರನ್ನು ಪ್ರತಿಕ್ರಿಯೆ ಕೇಳಿದಾಗ ಅವರು ಪ್ರತಿಕ್ರಿಯಿಸಲು ನಿರಾಕರಿಸಿದರು ಎಂದು ಇಂಗ್ಲಿಷ್‌ ದಿನ ಪತ್ರಿಕೆಯೊಂದು ಹೇಳಿದೆ.

ಇದು ಆ ವಾಹಿನಿಯ ಕೇಳುಗ ವರ್ಗವನ್ನು ಕೆರಳಿಸಿದೆ. ಈ ಕುರಿತು ಗೋವಿಂದರಾಜನಗರದ ಶಾಸಕರಾದ ಪ್ರಿಯ ಕೃಷ್ಣ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಪತ್ರ ಬರೆದು ಎಫ್‌ ಎಮ್‌ ರೀನ್‌ ಬೋ ಮುಚ್ಚದಂತೆ ನೋಡಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಅವರು “ಕರ್ನಾಟಕದ ಜನಪ್ರಿಯ ವಾಹಿನಿ ಎಫ್.ಎಂ. ರೇನ್-ಬೋ 101.3 ಕನ್ನಡಕಾಮನಬಿಲ್ಲು 101.3ನ್ನು ಬೆಂಗಳೂರಿನ ಆಕಾಶವಾಣಿ ಮುಖ್ಯವಾಹಿನಿಯೊಂದಿಗೆ ವಿಲೀನಗೊಳಿಸಿ ಕನ್ನಡ ಕಾರ್ಯಕ್ರಮಗಳ ಅವಧಿಯನ್ನು 18ಘಂಟಗಳಿಂದ ಕೇವಲ 5ಘಂಟೆಗೆ ಇಳಿಸಿ ಕನ್ನಡ ನಿರೂಪಕರ ಸಂಖ್ಯೆಯನ್ನು ಒಂದಕ್ಕೆ ಮಾತ್ರ ಸೀಮಿತ ಮಾಡಿ, ಹಾಲಿ ನಿರೂಪಕರನ್ನು ನಿರುದ್ಯೋಗಿಗಳಾಗಿ ಮಾಡುವ ವಿರುದ್ಧ ಮತ್ತು ಕನ್ನಡದ ಹಿತದೃಷ್ಟಿಯಿಂದ ಮುಖ್ಯಮಂತ್ರಿಗಳಾದ ಶ್ರೀ ಅವರಿಗೆ ವಾಹಿನಿಯನ್ನು ಈಗಿರುವ ರೀತಿಯಲ್ಲಿಯೇ ಕಾರ್ಯವಹಿಸುವಂತೆ ಆದೇಶಿಸಲು ಸಂಬಂಧಪಟ್ಟವರಿಗೆ ಸೂಚಿಸುವಂತೆ ಪತ್ರ ಬರೆದು ವಿನಂತಿಸಿಕೊಳ್ಳಲಾಯಿತು.” ಎಂದು ಬರೆದಿದ್ದರು.

ರೇಡಿಯೋ ವಾಹಿನಿಗಳ ಪ್ರಸರಣ ಮತ್ತು ಅದರಲ್ಲಿನ ಕಾರ್ಯಕ್ರಮಗಳನ್ನು ಕ್ರೋಢೀರಿಸುವ ಪ್ರಯತ್ನದ ಭಾಗವಾಗಿ ಕೇಂದ್ರ ಸರ್ಕಾರವು ಮೀಡಿಯಮ್‌ ವೇವ್‌ ಪ್ರಸರಣವನ್ನು ಹಂತ ಹಂತವಾಗಿ ನಿಲ್ಲಿಸಲು ನಿರ್ಧರಿಸಿದೆ. ಆಲ್‌ ಇಂಡಿಯಾ ರೇಡಿಯೋದಲ್ಲಿ ಸಾರ್ವಜನಿಕ ಸೇವೆಯ ಕುರಿತಾದ ಶೈಕ್ಷಣಿಕ ಕಾರ್ಯಕ್ರಮಗಳು ಈಗಲೂ ಪ್ರಸಾರವಾಗುತ್ತಿದೆ ಆದರೆ ರೇಡಿಯೋ ಉದ್ಯಮ ಇಂದು ಪೂರ್ತಿಯಾಗಿ ಎಫ್‌ ಎಮ್‌ ಕಂಪನಾಂಕದ ಕಡೆ ಹೊರಳುತ್ತಿದೆ. ಇಂದು ಬರುತ್ತಿರುವ ರೇಡಿಯೋ ಸಾಧನಗಳೂ ಕೇವಲ ಎಫ್‌ ಕಂಪನಾಂಕವನ್ನಷ್ಟೇ ಹೊಂದಿರುತ್ತವೆ. ಈ ಎಫ್‌ ಎಮ್‌ ಬ್ಯಾಂಡ್‌ ಅಧಿಕ ಕೇಳುಗರನ್ನು ಹೊಂದಿದ್ದು “AIR ಕಾರ್ಯಕ್ರಮಗಳನ್ನು ಈಗ FM ಕಂಪನಾಂಕದಲ್ಲಿ ತರುವ ಮೂಲಕ ಅದನ್ನು ದೊಡ್ಡ ಸಂಖ್ಯೆಯ ಜನರಿಗೆ ತಲುಪಿಸಲು ಪ್ರಯತ್ನಿಸುತ್ತಿದ್ದೇವೆ. AIR ಕಾರ್ಯಕ್ರಮಗಳು ಅದ್ಭುತ ವಿಷಯಗಳನ್ನು ಒಳಗೊಂಡಿದ್ದು ಅದನ್ನು ಜನರಿಗೆ ತಲುಪಿಸುವುದು ನಮ್ಮ ಗುರಿಯಾಗಿದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ

ಎಲ್ಲೆಲ್ಲಿ ಎರಡೆರಡು ಎಫ್‌ ಎಮ್‌ ಚಾನೆಲ್ಲುಗಳಿವೆಯೋ ಅಲ್ಲೆಲ್ಲ ಈಗ ಒಂದನ್ನು ʼಕಂಟೆಂಟ್‌ ಚಾನೆಲ್‌ ಆಗಿ ಪರಿವರ್ತಿಸಲಾಗುತ್ತಿದೆ. ಮುಖ್ಯವಾಗಿ AIR ಮಾಹಿತಿ ವಿಷಯಗಳನ್ನು ಪ್ರಸಾರ ಮಾಡಿದರೆ, ಇನ್ನೊಂದು ವಾಹಿನಿ ಸಂಪೂರ್ಣವಾಗಿ ಮನರಂಜನೆಗೆ ಮೀಸಲಾಗಿರುತ್ತದೆ. ಈ ಪ್ರಯತ್ನದ ಭಾಗವಾಗಿ, ನಗರದಲ್ಲಿ ಎರಡು ಎಫ್‌ ಎಮ್‌ ಚಾನೆಲ್‌ ಇರುವುದರಿಂದ (ಎಫ್ಎಂ ರೇನ್ಬೋ ಮತ್ತು ವಿವಿದ್ ಭಾರತಿ (102.9 ಎಫ್ಎಂ)) ಅವುಗಳಲ್ಲಿ ಒಂದನ್ನು ಬೆಂಗಳೂರು ಆಕಾಶವಾಣಿಯ ಕಾರ್ಯಕ್ರಮಗಳಿಗೆ ಮೀಸಲಿಟ್ಟು ಇನ್ನೊಂದನ್ನು ಮನೋರಂಜನಾ ಕಾರ್ಯಕ್ರಮಗಳಾದ ಸಿನೆಮಾ ಹಾಡುಗಳು, ಗೇಮ್‌ ಶೋ ಇತ್ಯಾದಿಗಳಿಗೆ ಮೀಸಲಿಡಲಾಗುತ್ತದೆ. ಈ ಪರಿವರ್ತನೆಯ ಭಾಗವಾಗಿ ಈಗಾಗಲೇ ವಿವಿಧ ಭಾರತಿಯಲ್ಲಿ ಕ್ನನಡ ಕಾರ್ಯಕ್ರಮಗಳ ಅವಧಿಯನ್ನು ಹೆಚ್ಚಿಸಲಾಗಿದೆ. ವಿವಿಧ ಭಾರತಿಯಲ್ಲಿ ಮೊದಲು 9 ಗಂಟೆಗಳ ಕಾಲ ಪ್ರಸಾರವಾಗುತ್ತಿದ್ದ ಹಿಂದಿ ಕಾರ್ಯಕ್ರಮದ ಅವಧಿ ಈಗ 4 ಗಂಟೆಗೆ ಇಳಿದಿದೆ. ಹಾಗೆಯೇ ಕನ್ನಡ ಕಾರ್ಯಕ್ರಮಗಳು 13 ಗಂಟೆಗಳ ಕಾಲ ಪ್ರಸಾರವಾಗುತ್ತಿದೆ. ಎಫ್‌ ಎಮ್‌ ರೇನ್‌ ಬೋ ಬ್ರಾಂಡನ್ನು ಉಳಿಸಿಕೊಳ್ಳುವ ಕುರಿತು ಇದುವರೆಗೆ ಸ್ಪಷ್ಟವಾದ ನಿರ್ಧಾರಕ್ಕೆ ಬಂದಿಲ್ಲ” ಎಂದು ಅಧಿಕಾರಿ ಹೇಳಿದರು.

ಈ ನಡುವೆ, ಎಫ್ಎಂ ರೇನ್ಬೋ 101.3 ರಲ್ಲಿ ಹಿಂದಿ ಕಾರ್ಯಕ್ರಮಗಳು ಕಡಿಮೆಯಾಗಿ ಹಿಂದಿ ಕಂಟೆಂಟುಗಳನ್ನು ಸೇರಿಸಲಾಗಿದೆ ಮತ್ತು ಮತ್ತು AIR ಬೆಂಗಳೂರು ಕೇಂದ್ರದ ಪ್ರದೇಶ ಸಮಾಚಾರವೂ ಇದರಲ್ಲಿ ಪ್ರಸಾರವಾಗುತ್ತಿದೆ.

ಈ ವಿಲೀನದ ಕುರಿತು ಈಗ ಎಲ್ಲೆಡೆಯಿಂದ ವಿರೋಧ ಕೇಳಿ ಬರುತ್ತಿದ್ದು, ದೊಡ್ಡ ಸಂಖ್ಯೆಯ ಕೇಳುಗರನ್ನು ಹೊಂದಿರುವ ವಾಹಿನಿಯನ್ನು ಇದ್ದಕ್ಕಿದ್ದಂತೆ ಕತ್ತು ಹಿಸುಕಿ ಕೊಲ್ಲುವುದು ಸರಿಯಲ್ಲ ಎನ್ನುತ್ತಿದ್ದಾರೆ. ಕನ್ನಡಪರ ಸಂಘಟನೆಗಳು ಕೂಡಾ ಈ ಕುರಿತು ಹೋರಾಟ ಸಂಘಟಿಸಲು ಯೋಚಿಸುತ್ತಿರುವುದಾಗಿ ಕೇಳಿ ಬಂದಿದೆ.
ಈ ವಿಲೀನದ ವಿರುದ್ಧ ಸದಾ ಕನ್ನಡದ ಕುರಿತು ಮಾತನಾಡುವ ರಾಜ್ಯಸಭಾ ಸದಸ್ಯ ಜಿ ಸಿ ಚಂದ್ರಶೇಖರ್‌ ಅವರು ಹಿಂದಿನ ಸರ್ಕಾರದ ಮುಖ್ಯಮಂತ್ರಿಯವರಿಗೆ ಈ ಕುರಿತು ಪತ್ರ ಬರೆದು ವಿಲೀನ ತಡೆಯುವಂತೆ ಕೋರಿದ್ದರು. ಆದರೆ ಅವರು ಈ ಬಗ್ಗೆ ತಲೆ ಕೆಡಿಸಿಕೊಂಡಿದ್ದಂತೆ ಕಾಣುತ್ತಿಲ್ಲ.

ಈ ಹಿಂದೆ ಇದೇ ವಿಷಯದ ಕುರಿತು ಕನ್ನಡಪರ ಸಂಘಟನೆಯಾದ ಕರ್ನಾಟಕ ರಕ್ಷಣಾ ವೇದಿಕೆಯು ಪ್ರತಿಭಟನೆಯನ್ನು ನಡೆಸಿತ್ತು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕರವೇ ಸದಸ್ಯರೊಬ್ಬರು “ಎಫ್‌ಎಂ ರೇನ್‌ಬೋ ಕನ್ನಡದ ಜನಪ್ರಿಯ ವಾಹಿನಿಯಾಗಿದ್ದು, ಎರಡನೇ ಅತಿ ಹೆಚ್ಚು ಕೇಳುಗರನ್ನು ಹೊಂದಿರುವ ವಾಹಿನಿಯಾಗಿದೆ. ಇದನ್ನು ರಾಷ್ಟ್ರೀಯ ಚಾನೆಲ್‌ನೊಂದಿಗೆ ವಿಲೀನಗೊಳಿಸುವುದರಿಂದ ನೂರಾರು ಕಲಾವಿದರು, ನಿರೂಪಕರು, ತಂತ್ರಜ್ಞರು ಮತ್ತು ಸಹಾಯಕ ಸಿಬ್ಬಂದಿಗಳು ನಿರುದ್ಯೋಗಿಯಾಗುತ್ತಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ” ಎಂದು ಹೇಳಿದ್ದರು.

ಅಲ್ಲದೆ, “ಇದು ಕನ್ನಡಿಗರ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೂ ಪರಿಣಾಮ ಬೀರುತ್ತದೆ. ಕನ್ನಡ ಕನ್ನಡ ಲಘು ಸಂಗೀತ, ಭಕ್ತಿಗೀತೆಗಳು ಮತ್ತು ಚಲನಚಿತ್ರ ಗೀತೆಗಳನ್ನು ಪ್ರಸಾರ ಮಾಡುವ ವೇದಿಕಯೊಂದು ಕನ್ನಡಿಗರ ಪಾಲಿಗೆ ಇಲ್ಲವಾಗುತ್ತದೆ” ಎಂದು ಕರವೇ ಅಧ್ಯಕ್ಷ ಟಿ ಎ ನಾರಾಯಣ ಗೌಡ ಹೇಳಿದ್ದರು.

You cannot copy content of this page

Exit mobile version