ಮೇಲುಕೋಟೆ: ಜಾನಪದ ಕಲೆಗಳಿಗೆ ಮೂರು ದಶಕಗಳಿಂದ ವೇದಿಕೆಯಾಗಿರುವ ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿಯ ಜಾನಪದ ಜಾತ್ರೆ ಹಾಗೂ ರಥಸಪ್ತಮಿ ಮಹೋತ್ಸವವನ್ನು ಫೆ.5ರಂದು ಆಯೋಜಿಸಲಾಗಿದೆ. ಫೆ.5ರಂದು ಮುಂಜಾನೆ ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯದ ಸುತ್ತ ಜಾನಪದ ಜಾತ್ರೆ ನಡೆಯಲಿದ್ದು, ಮೇಲುಕೋಟೆಯ ಚತುರ್ವೀದಿಗಳೇ ಜಾನಪದ ಕಲೆಗಳಿಗೆ ವೇದಿಕೆಯಾಗಲಿದೆ.
ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ದಂಪತಿ ಕಲಾ ಮೇಳ ಉದ್ಘಾಟಿಸಲಿದ್ದು, ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಮೇಳದಲ್ಲಿ ಕರ್ನಾಟಕದ ಎಲ್ಲ ಪ್ರಮುಖ ಜಾನಪದ ಕಲಾ ಪ್ರಕಾರಗಳ ಜತೆಗೆ ಕೇರಳದ ತಂಡಗಳು ಭಾಗವಹಿಸಲಿವೆ. ಸ್ವರ್ಣಲೇಪಿತ ಸೂರ್ಯಮಂಡಲ ವಾಹನೋತ್ಸವದ ಜತೆಗೆ ನೂರಾರು ಕಲಾವಿದರ ಜಾನಪದ ಕಲಾವೈಭವ ಅನಾವರಣಗೊಳ್ಳಲಿದೆ ಎಂದು ಯತಿರಾಜದಾಸರ್‌ಗುರುಪೀಠದ ಸ್ಥಾನಾಚಾರ್ಯ ಶ್ರೀನಿವಾಸ ನರಸಿಂಹನ್ ಗುರೂಜಿ ತಿಳಿಸಿದ್ದಾರೆ
ತಮಟೆ, ನಗಾರಿ, ಚಂಡೆಮದ್ದಳೆ ನಿನಾದ, ಗಾರುಡಿ ಗೊಂಬೆಗಳ ನರ್ತನ ನೋಡುಗರನ್ನು ಜಾನಪದ ಲೋಕಕ್ಕೆ ಕರೆದೊಯ್ಯಲಿವೆ. ಕಲಾಮೇಳದಲ್ಲಿ ಕೇರಳದ ಚೆಂಡೆಮೇಳ, ಮಾರೇಹಳ್ಳಿಯ ಚಿಲಿಪಿಲಿ ಗೊಂಬೆ, ಕೊತ್ತತ್ತಿಯ ಮರಗಾಲು ಕುಣಿತ, ಚಿಕ್ಕಮಗಳೂರಿನ ಹುಲಿವೇಷ, ಕೀಲುಕುದುರೆ, ಕರಗ ನೃತ್ಯ ತಂಡ ಭಾಗವಹಿಸಲಿದೆ.
ಮೈಸೂರಿನ ನಗಾರಿ, ಹುಬ್ಬಳ್ಳಿಯ ಜಗ್ಗಲಿಗೆಮೇಳ, ಸಾಂಬಾಳ್‌ನೃತ್ಯ, ಲಕ್ಷ್ಮೀಸಾಗರದ ನಾಸಿಕ್‌ಡೋಲ್, ಹಾಸನದ ಕರಡಿಮಜಲು, ಮಂಡ್ಯ ಜಿಲ್ಲೆಯ ನಂದಿಕಂಬ, ಇತರ ಜಿಲ್ಲೆಗಳ ಪಟಕುಣಿತ, ಗಾರುಡಿಗೊಂಬೆ, ಹುಲಿವೇಷ, ವೀರಗಾಸೆ, ಕೋಲಾಟ, ಡೊಳ್ಳುಕುಣಿತ, ಜಾಂಜ್‌ಮೇಳ, ಸೋಮನ ಕುಣಿತ, ಚಕ್ರಾದಿ ಬಳೆ, ಖಡ್ಗ ಪವಾಡ, ವೀರಭದ್ರನ ಕುಣಿತ, ಶಾಲಾ ಮಕ್ಕಳ 101 ಕಳಸ, ವೀರಮಕ್ಕಳ ಕುಣಿತ, ಕಂಸಾಳೆ ತಂಡ ಮೆರವಣಿಗೆಯಲ್ಲಿ ಸಾಗಲಿದೆ.
ನಾದಸ್ವರ, ಚಂಡೆ ನಗಾರಿ, ಜಡೆ ಕೋಲಾಟ, ಭಾಗವಂತಿಕೆ ಮೇಳ, ದಾಸಯ್ಯರ ದರ್ಶನ, ರಾಮನಗರದ ಯಕ್ಷಗಾನ ಗೊಂಬೆಗಳು, ಕೋಳಿನೃತ್ಯ, ಕರಡಿ ಕುಣಿತ ಸೇರಿದಂತೆ ಕರ್ನಾಟಕದ ಪ್ರಮುಖ ಜಾನಪದ ಕಲಾಪ್ರಕಾರಗಳ ಬಹುತೇಕ ತಂಡಗಳು ಭಾಗವಹಿಸುತ್ತಿವೆ.
ಪಾಂಡವಪುರ ಜಿಜೆಸಿ ಮಕ್ಕಳ ಬ್ಯಾಂಡ್ ಜಕ್ಕನಹಳ್ಳಿ ಸರ್ಕಾರಿ ಪ್ರೌಢಶಾಲೆ ಬಳಿಘಟ್ಟ, ಅಮೃತಿ, ಮೇಲುಕೋಟೆಯ ವಿವಿಧ ಶಾಲೆಯ ಮಕ್ಕಳು ಭಾಗವಹಿಸಲಿದ್ದಾರೆ ಎಂದು ಕಲಾ ಮೇಳದ ಸಂಘಟಕರಾದ ಸೌಮ್ಯಾ ಸಂತಾನಂ, ಕಲಾವಿದ ಕದಲಗೆರೆ ಶಿವಣ್ಣಗೌಡ ತಿಳಿಸಿದ್ದಾರೆ.
ಈ ವರ್ಷ ಕಲಾಮೇಳದಲ್ಲಿ ಮಹಿಳಾ ಚಂಡೆ, ಕೋಲಾಟ, ಯಕ್ಷಗಾನ ವೈಭವ, ಮಹಿಳಾ ಡೊಳ್ಳುಕುಣಿತ, ಮಹಿಳಾ ವೀರಗಾಸೆ, ಮಹಿಳಾ ಕೋಲಾಟ, ವಿದ್ಯಾರ್ಥಿನಿಯರ ಕಳಸ ತಂಡ… ಹೀಗೆ 200ಕ್ಕೂ ಹೆಚ್ಚು ಮಹಿಳಾ ಕಲಾವಿದರು ಉತ್ಸವದಲ್ಲಿ ಭಾಗವಹಿಸಲಿದ್ದಾರೆ