ದೆಹಲಿ: ಪ್ರತಿಭಟನಾ ನಿರತ ರೈತರಿಗೆ ಗಾಂಧಿ ಮಾರ್ಗದಲ್ಲಿ ನಡೆಯುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಸೂಚನೆ ನೀಡಿದೆ.
ಪಂಜಾಬ್-ಹರಿಯಾಣ ಗಡಿಯಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ರೈತ ಮುಖಂಡ ಜಗಜಿತ್ ಸಿಂಗ್ ದಲ್ಲೆವಾಲ್ ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ತಕ್ಷಣ ವೈದ್ಯಕೀಯ ನೆರವು ನೀಡುವಂತೆ ಸರ್ಕಾರಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರ ಪೀಠವು 17 ದಿನಗಳಿಂದ ಮುಷ್ಕರ ನಡೆಸುತ್ತಿರುವ ದಲ್ಲೆವಾಲ್ ಅವರನ್ನು ಭೇಟಿ ಮಾಡುವಂತೆ ಕೇಂದ್ರ ಮತ್ತು ಪಂಜಾಬ್ ಸರ್ಕಾರದ ಪ್ರತಿನಿಧಿಗಳಿಗೆ ಆದೇಶಿಸಿದೆ. ”ರೈತರು ಹಿಂಸಾಚಾರಕ್ಕೆ ಮುಂದಾಗಬಾರದು. ಶಾಂತಿಯುತವಾಗಿ ಪ್ರತಿಭಟನೆ ನಡೆಸಬೇಕು.
ಅನ್ನದಾತರ ಸಮಸ್ಯೆಗಳನ್ನು ಪರಿಶೀಲಿಸುವ ಸಂದರ್ಭದಲ್ಲಿ ಗಾಂಧಿ ಮಾರ್ಗದ ಪ್ರತಿಭಟನೆಗಳನ್ನು ಅನುಸರಿಸಬೇಕು. ಹಿಂಸಾತ್ಮಕ ಪ್ರತಿಭಟನೆಗಳು ಸಮಸ್ಯೆಗಳನ್ನು ಸೃಷ್ಟಿಸುತ್ತವೆ. ದಲ್ಲೆವಾಲ್ ಅವರಿಗೆ ವೈದ್ಯಕೀಯ ಸಹಾಯವನ್ನು ನೀಡಿ ಮತ್ತು ಅವರ ಉಪವಾಸವನ್ನು ಕೈಬಿಡುವಂತೆ ಮನವರಿಕೆ ಮಾಡಿ. ಅವರ ಜೀವ ಅಮೂಲ್ಯ,’’ ಎಂದು ಪೀಠ ಹೇಳಿದೆ.
ಮತ್ತೊಂದೆಡೆ, ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಮುಖಂಡ ರಾಕೇಶ್ ಟಿಕಾಯತ್ ಶುಕ್ರವಾರ ಖನೌರಿ ಗಡಿಯಲ್ಲಿ ಪ್ರತಿಭಟನಾ ಚಳವಳಿ ನಡೆಸುತ್ತಿರುವ ಪಂಜಾಬ್ ರೈತ ನಾಯಕ ಜಗಜಿತ್ ಸಿಂಡ್ ದಲ್ಲೆವಾಲ್ ಅವರನ್ನು ಭೇಟಿ ಮಾಡಿದರು.