ಬೆಂಗಳೂರು: ಬಾಲಕಿ ಅಥವಾ ಸಂತ್ರಸ್ತೆಯನ್ನು ಒಮ್ಮೆ ಹಿಂಬಾಲಿಸಿದರೆ (following) ಅದು ಸ್ಟಾಕಿಂಗ್ (Stalking) ಮಾಡಿದಂತೆ ಆಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ಇತ್ತೀಚೆಗೆ ಹೇಳಿದೆ.
ಹೈಕೋರ್ಟ್‌ನ ನಾಗ್ಪುರ ಪೀಠದ ಏಕ-ನ್ಯಾಯಾಧೀಶ ನ್ಯಾಯಮೂರ್ತಿ ಗೋವಿಂದ್ ಸನಪ್ ಅವರು ಡಿಸೆಂಬರ್ 5, 2024 ರಂದು ತೀರ್ಪನ್ನು ನೀಡಿದ್ದು, ಇದರಲ್ಲಿ ಅವರು ಅಂತಹ ಕೃತ್ಯವು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354-ಡಿ ಮತ್ತು ಪೋಕ್ಸೊ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ಬರುವ stalking ಗೆ ಸಮನಾಗಿರುವುದಿಲ್ಲ ಎಂದು ಹೇಳಿದ್ದನ್ನು ಲೈವ್ ಲಾ ವರದಿ ಮಾಡಿದೆ .
ಅಪ್ರಾಪ್ತ ಬಾಲಕಿಯನ್ನು ಹಿಂಬಾಲಿಸಿ ಆಕೆಯನ್ನು ಸ್ಟಾಕಿಂಗ್ ಮಾಡಿದ ಆರೋಪದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಇಬ್ಬರು ಬಾಲಕರನ್ನು ಖುಲಾಸೆಗೊಳಿಸಿ ನ್ಯಾಯಮೂರ್ತಿ ಸನಪ್ ಈ ತೀರ್ಪು ನೀಡಿದ್ದಾರೆ.
ಸ್ಟಾಕಿಂಗ್ ಆರೋಪ ಸಾಬೀತು ಮಾಡಲು, ಆರೋಪಿಯು ಪದೇ ಪದೇ ಅಥವಾ ನಿರಂತರವಾಗಿ ಮಗುವನ್ನು ಅನುಸರಿಸಿ, ನೋಡಿದ್ದಾರೆ ಅಥವಾ ನೇರವಾಗಿ ಅಥವಾ ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮದ ಮೂಲಕ ಸಂಪರ್ಕಿಸಿದ್ದಾರೆ ಎಂದು ಪ್ರಾಸಿಕ್ಯೂಷನ್ ಸಾಬೀತುಪಡಿಸಬೇಕು ಎಂದು ಕೋರ್ಟ್ ಹೇಳಿದೆ. ಸ್ಟಾಕಿಂಗ್ ಅಪರಾಧದ ಈ ಕಡ್ಡಾಯ ಅವಶ್ಯಕತೆಯ ದೃಷ್ಟಿಯಿಂದ, ಈ ಅಪರಾಧವನ್ನು ಸಾಬೀತು ಮಾಡಲು ಹಿಂಬಾಲಿಸಿದ ಒಂದೇ ಒಂದು ನಿದರ್ಶನವು ಸಾಕಾಗುವುದಿಲ್ಲ,” ಎಂದು ನ್ಯಾಯಾಧೀಶ ಸನಪ್ ತೀರ್ಪಿನಲ್ಲಿ ಹೇಳಿದರು.
ಅಪ್ರಾಪ್ತ ಬಾಲಕಿಯನ್ನು ಹಿಂಬಾಲಿಸಿದ ಮತ್ತು ನಂತರ ಲೈಂಗಿಕ ದೌರ್ಜನ್ಯ ಎಸಗಿದ್ದಕ್ಕಾಗಿ ಶಿಕ್ಷೆಗೊಳಗಾದ ಇಬ್ಬರು ಹುಡುಗರು ಸಲ್ಲಿಸಿದ ಮೇಲ್ಮನವಿಗಳನ್ನು ನ್ಯಾಯಾಲಯವು ವಿಚಾರಣೆ ನಡೆಸುತ್ತಿದೆ. ಸಂತ್ರಸ್ತ ಹುಡುಗಿ ಬಾವಿಯಿಂದ ನೀರು ತರಲು ಹೋದಾಗ ಆಕೆಯನ್ನು ಹಿಂಬಾಲಿಸಿದ ಕಾರಣ ಮೊದಲ ಆರೋಪಿಯ ಜೊತೆಗಿದ್ದ ಎರಡನೇ ಆರೋಪಿಗೆ ಸಂತ್ರಸ್ತೆ ಯಾವುದೇ ನಿರ್ದಿಷ್ಟ ಸಂಬಂಧವನ್ನು ಹೊಂದಿಲ್ಲ ಎಂದು ನ್ಯಾಯಾಧೀಶರು ಹೇಳಿದರು.
2020ರ ಜನವರಿಯಲ್ಲಿ ಬಾಲಕಿಯ ಮನೆಗೆ ಭೇಟಿ ನೀಡಿದಾಗ ಮೊದಲ ಆರೋಪಿಯೊಂದಿಗೆ ಎರಡನೇ ಆರೋಪಿಯೂ ಸಹ ಬಂದಿದ್ದನ್ನು ಮತ್ತು ಆಕೆಯ ಬಾಯಿಯನ್ನು ಬಿಗಿಯಾಗಿ ಹಿಡಿದು ಆಕೆಯ ಎದೆ ಭಾಗವನ್ನು ಅಮುಕಿದರು ಎಂಬ ಆರೋಪವನ್ನು ನ್ಯಾಯಾಧೀಶರು ಪರಿಶೀಲಿಸಿದರು.
ಘಟನೆಯ ಸಂದರ್ಭದಲ್ಲಿ ಎರಡನೇ ಆರೋಪಿಯು “ಸಂತ್ರಸ್ತೆಯ ಮನೆಯ ಹೊರಗೆ ಮಾತ್ರ ನಿಂತಿದ್ದಾನೆ” ಮತ್ತು ಆದ್ದರಿಂದ ಲೈಂಗಿಕ ದೌರ್ಜನ್ಯ ಅಥವಾ ಸ್ಟಾಕಿಂಗ್‌ಗಾಗಿ ಶಿಕ್ಷೆ ವಿಧಿಸಲಾಗುವುದಿಲ್ಲ ಎಂದು ನ್ಯಾಯಾಲಯವು ಗಮನಿಸಿದೆ.
ಮೊದಲ ಆರೋಪಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪವನ್ನು ನ್ಯಾಯಾಲಯ ಎತ್ತಿ ಹಿಡಿದಿದ್ದು, ಆತನನ್ನು ಸ್ಟಾಕಿಂಗ್ ಆರೋಪದಿಂದ ಖುಲಾಸೆಗೊಳಿಸಿದೆ.