Saturday, April 27, 2024

ಸತ್ಯ | ನ್ಯಾಯ |ಧರ್ಮ

ಸಾಗರದ ಇಂದಿರಾಗಾಂಧಿ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನಲ್ಲಿ ಆಹಾರ ರಾಜಕಾರಣ… ಕೋಳಿ ಕಜ್ಜಾಯ ತಂದ ವಿದ್ಯಾರ್ಥಿನಿಯರಿಗೆ ಬೆದರಿಕೆ ಒಡ್ಡಿದ ಉಪನ್ಯಾಸಕರು!

ಸಾಗರ: ಕಾಲೇಜಿನಲ್ಲಿ ಏರ್ಪಡಿಸಿದ್ದ ಆಹಾರ ಮೇಳದಲ್ಲಿ ಸಾಗರ ಸೀಮೆಯ ವಿಶೇಷ ತಿನಿಸು ಎನಿಸಿಕೊಂಡ ಕೋಳಿಸಾರು- ಕಜ್ಜಾಯವನ್ನು ತಡೆದ ಪ್ರಾಧ್ಯಾಪಕ, ಅತಿಥಿ ಉಪನ್ಯಾಸಕರು ತಿನಿಸು ಮಾಡಿಕೊಂಡು ಬಂದಿದ್ದ ವಿದ್ಯಾರ್ಥಿನಿಯರಿಗೆ ಬೆದರಿಕೆ ಹಾಕಿರುವ ಘಟನೆ ಸೋಮವಾರ ನಡೆದಿದೆ.

ಘಟನೆಯ ವಿವರ:

ಶಿವಮೊಗ್ಗ ಜಿಲ್ಲೆಯ ಸಾಗರದ ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಪ್ರತಿವರ್ಷದಂತೆ ಈ ವರ್ಷವೂ ವಿದ್ಯಾರ್ಥಿನಿಯರಿಗಾಗಿ ವಾರ್ಷಿಕ ಫೆಸ್ಟ್ ಆಯೋಜಿಸಲಾಗಿತ್ತು. ಕಳೆದಬಾರಿ ಕಲಾ ವಿಭಾಗ, ವಾಣಿಜ್ಯ ವಿಭಾಗ ಮತ್ತು ವಿಜ್ಞಾನ ವಿಭಾಗಗಳಿಗೆ ಪ್ರತ್ಯೇಕವಾಗಿ ಮೂರು ದಿನಗಳ ಕಾಲ ಫೆಸ್ಟ್ ಆಯೋಜಿಸಲಾಗಿತ್ತು. ಹೀಗೆ ಫೆಸ್ಟ್ ನೆಡೆಸುವ ಪದ್ಧತಿ ಕೆಲವು ವರ್ಷಗಳ ಹಿಂದಿನಿಂದಲೇ ನಡೆದು ಬಂದಿದೆ. ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರಿಗೆ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟ ಲಾಭ ಗಳಿಸುವಿಕೆಯ ಪರಿಚಯ ಮತ್ತು ಜ್ಞಾನ ಬೆಳೆಸುವ ಉದ್ಧೇಶದಿಂದ ವಿದ್ಯಾರ್ಥಿನಿಯರ ಗುಂಪು ರಚಿಸಿ ಆಯಾ ಗುಂಪುಗಳಿಗೆ ನಾನಾ ಬಗೆಯ ತಿನಿಸು ವಸ್ತು ಇತ್ಯಾದಿಗಳ ಅಂಗಡಿ ತೆರೆದು ಕಾಲೇಜಿನಲ್ಲಿಯೇ ಒಂದು ಕಾರ್ಯಕ್ರಮವನ್ನೂ ಆಯೋಜಿಸಿ ಪ್ರಾಯೋಗಿಕವಾಗಿ ಈ ರೀತಿಯ ಸ್ಕಿಲ್ ಬೆಳೆಸುವ ಉದ್ದೇಶವಿತ್ತು.

ಇಂದಿರಾಗಾಂಧಿ ಕಾಲೇಜಿನಲ್ಲಿ ಸುಮಾರು ಮೂರು ಸಾವಿರ ಜನ ವಿದ್ಯಾರ್ಥಿನಿಯವರು ಓದುತ್ತಾರೆ. ಶಿವಮೊಗ್ಗ ಜಿಲ್ಲೆಯ ಹೊರಗಿನಿಂದಲೂ ನೂರಾರು ಸಂಖ್ಯೆಯ ವಿದ್ಯಾರ್ಥಿನಿಯರು ಬಂದು ಸೇರುತ್ತಾರೆ. ವಾಣಿಜ್ಯ ವಿಭಾಗದ ವಾಣಿಜ್ಯ ಉದ್ದೇಶದಿಂದ ಆರಂಭವಾದ ಈ ಫೆಸ್ಟ್ ಕ್ರಮೇಣ ಎಲ್ಲಾ ವಿಭಾಗಗಳಿಗೂ ವಿಸ್ತರಣೆಯಾಗಿ ಅದು ಮಾರುಕಟ್ಟೆಯ ಮಿತಿಯಿಂದ ಸಾಂಸ್ಕೃತಿಕ ಸ್ವರೂಪ ಪಡೆದಿದ್ದು, ಪ್ರತಿ ವರ್ಷವೂ ಎಲ್ಲಾ ವಿಭಾಗದ ವಿದ್ಯಾರ್ಥಿನಿಯರು ನಿಗದಿ ಪಡಿಸಿದ ದಿನ ಅಂಗಡಿಗಳನ್ನು ತೆರೆದು ವಿಶೇಷವಾದ ರೀತಿ ದೇಶೀಯ ವಿದೇಶೀಯ ಸಂಸ್ಕೃತಿಯ ತಿಂಡಿ ತಿನಿಸು, ಮಲೆನಾಡಿನ ಆಹಾರ ವಿಶೇಷ ಉಡುಗೆ ತೊಡುಗೆಗಳ ವಿಶೇಷಗಳನ್ನು ಪ್ರದರ್ಶನ ಮಾರಾಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ತಮ್ಮಗಳ ಪ್ರತಿಭೆಯ ಅನಾವರಣಕ್ಕೆ ವೇದಿಕೆ ಎಲ್ಲವನ್ನು ಆಯಾ ವಿಭಾಗದ ಉಪನ್ಯಾಸಕರು, ಚುನಾಯಿತ ವಿದ್ಯಾರ್ಥಿನಿ ಪ್ರತಿನಿಧಿಗಳ ಸಹಕಾರದಿಂದ ನಡೆಸಿಕೊಂಡು ಬರಲಾಗುತ್ತಿತ್ತು.

ಪಾರಂಪರಿಕ ಉಡುಗೆಯೊಂದಿಗೆ ಫೆಸ್ಟ್‌ ನಲ್ಲಿ ಭಾಗವಹಿಸಿದ ವಿದ್ಯಾರ್ಥಿನಿಯರು

ಕಾಲೇಜಿನಲ್ಲಿ 85% ರಷ್ಟು ವಿದ್ಯಾರ್ಥಿನಿಯರು  ಮಾಂಸಾಹಾರ ಸೇವಿಸುವ ಸಮುದಾಯಗಳಿಗೆ ಸೇರಿದವರು. ಅದರಲ್ಲೂ ಸಾಗರ ಸೀಮೆಯ ದೀವರ ಸಮುದಾಯದಲ್ಲಿ ಅವರು ಪೂಜಿಸುವ ಹೆಚ್ಚಿನ ದೇವರುಗಳು ಮಾಂಸಾಹಾರಿ ದೇವರುಗಳು. ಚೌಡಮ್ಮ, ಬೂತಪ್ಪ, ಮಾರಮ್ಮ, ಬೀರಪ್ಪ, ರಾಚಮ್ಮ ಇತ್ಯಾದಿ ಮಾಂಸಪ್ರಿಯ ದೇವರುಗಳನ್ನು ಆರಾದಿಸುವ ಸಮುದಾಯಗಳ ಸಂಸ್ಕೃತಿಯಲ್ಲಿ ಮಾಂಸಾಹಾರ ಎನ್ನುವುದು ಪ್ರದಾನವಾಗಿದೆ. ಹೀಗಿರುವಾಗ ಈ ಸಂಸ್ಕೃತಿಕ ಹಿನ್ನೆಲೆಯ  ವಿದ್ಯಾರ್ಥಿನಿಯರ ಈ ಸಾಂಸ್ಕೃತಿಕ ಉತ್ಸವದಲ್ಲಿ ಮಾಂಸಹಾರದ ಮಳಿಗೆ ತೆರೆಯಲು ಪ್ರತಿ ವರ್ಷವೂ ವಾಣಿಜ್ಯ ವಿಭಾಗದವರು ಕಿರಿಕಿರಿ ಮತ್ತು ಆಕ್ಷೇಪ ಮಾಡುತ್ತಲೇ ಬಂದಿರುತ್ತಾರೆ ಎಂಬ ಆರೋಪವಿದೆ. ಕಾಲೇಜಿನಲ್ಲಿ ಮಾಂಸಹಾರದ ಮಳಿಗೆಗೆ ವ್ಯಾಪಾರಕ್ಕೆ ಅವಕಾಶವಿಲ್ಲವೆಂದು ಸಭೆಯಲ್ಲಿ ತೀರ್ಮಾನಿಸುವುದು ವಿದ್ಯಾರ್ಥಿಯರಿಗೆ ಅವಕಾಶ ಕೊಡದೇ ಅವಮಾನಿಸುವುದು. ಸರ್ಕಾರದ ಆದೇಶ ಇಲ್ಲ ಇಲ್ಲಿ ಇದಕ್ಕೆಲ್ಲಾ ಅವಕಾಶವಿಲ್ಲ, ಮಾಂಸಾಹಾರದ ಖಾದ್ಯಗಳನ್ನು ತರುವ ಹಾಗಿಲ್ಲ, ಮಾರುವ ಹಾಗಿಲ್ಲ, ಇಲ್ಲಿ ತಿನ್ನುವ ಹಾಗಿಲ್ಲ ಎಂದು ಎತ್ತಂಗಡಿ ಮಾಡಿಸುವುದು ನಡದೇ ಇತ್ತೆಂದು ಹೇಳಲಾಗುತ್ತಿದೆ. ಅಧಿಕ ಸಂಖ್ಯೆಯ ಮಾಂಸಾಹಾರ ಸೇವಿಸುವ ವಿದ್ಯಾರ್ಥಿನಿಯರು ಇದರಿಂದ ಬೇಸತ್ತಿದ್ದಾರೆ. ದಿನಾಂಕ 7-8-2023ರ  ಸೋಮವಾರ ಎಲ್ಲಾ ವಿಭಾಗಗಳನ್ನೂ ಸೇರಿಸಿ ಒಟ್ಟಿಗೇ ಆಯೋಜಿಸಲಾಗಿದ್ದ ಏಕತಾ – 2023 ಎಂಬ ಫೆಸ್ಟಿನಲ್ಲಿ ಕಲಾ ವಿಭಾಗದ ಕೆಲವು ವಿದ್ಯಾರ್ಥಿನಿಯರು, ಮಲೆನಾಡಿನ ಪಾರಂಪರಿಕ ಅಡುಗೆ, ‘ದೀವರು’ ಸಮುದಾಯದ ಆಹಾರ ಸಂಸ್ಕೃತಿಯ ಭಾಗವೇ ಆದ ‘ಕೋಳಿ  ಕಜ್ಜಾಯ’ ಎಂಬ ವಿಶಿಷ್ಟ ಆಹಾರದವನ್ನು ತಯಾರಿಸಿಕೊಂಡು ಕಾಲೇಜಿಗೆ ಬಂದಿದ್ದರು. ಅವರಿಗೆ ವಾಣಿಜ್ಯ ವಿಭಾಗದವರು ಮಳಿಗೆ ತೆರೆದು ವ್ಯಾಪಾರ ನೆಡೆಸಲು ಅವಕಾಶ ಕೊಡದೆ ಹೊರಗೆ ಕಳಿಸುವ ಪ್ರಯತ್ನ ಮಾಡಿದ್ದಾರಲ್ಲದೆ ವಿದ್ಯಾರ್ಥಿನಿಯರ ಮೇಲೆ ದಬ್ಬಾಳಿಕೆ ಮತ್ತು ಬೆದರಿಕೆಯ ದೌರ್ಜನ್ಯಕ್ಕೂ ಮುಂದಾಗಿದ್ದರೆಂದು ಹೇಳಲಾಗುತ್ತಿದೆ. ಈ ಕುರಿತ ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ‌. ಕಾಮರ್ಸ್ ವಿಭಾಗದ ಮುಖ್ಯಸ್ಥ ರಾಜಾರಾಮ ಹೆಗಡೆ, ಹಾಗೂ ಅದೇ ವಿಭಾಗದ ಉಪನ್ಯಾಸಕ ಮಹಾವೀರ ಜೈನ್ ಈ ಫೆಸ್ಟಿನ ಮಳಿಗೆಗಳ ವಿಶೇಷ ಉಸ್ತುವಾರಿ ನಿಭಾಯಿಸುತ್ತಿದ್ದು ‘ಕೋಳಿ ಕಜ್ಜಾಯ’ ಅನಾನಸ್ ಹಣ್ಣು, ಪೇರಳೆ, ಪಪಾಯ ಮತ್ತು ಕಬ್ಬು ಮೊದಲಾದ ಆಹಾರ ಪದಾರ್ಥಗಳನ್ನು ತಂದಿದ್ದ ಕಲಾ ವಿಭಾಗದ ವಿದ್ಯಾರ್ಥಿನಿಯರಿಗೆ ʼಮಾಂಸಾಹಾರಕ್ಕೆ ಇಲ್ಲಿ ಅವಕಾಶವಿಲ್ಲ, ಅವಕಾಶ ಕೊಡುವುದೂ ಇಲ್ಲ. ಮೊದಲು ಇದನ್ನು ಇಲ್ಲಿಂದ ಹೊರಗೆ ಒಯ್ಯಿರಿ, ನಾವು ಅವಕಾಶ ಕೊಡುವುದಿಲ್ಲʼ ಎಂದು ಗದರಿಸಿ ಹೊರಗಡೆ ಓಡಿಸುವ ಪ್ರಯತ್ನ ಮಾಡಿದ್ದಾರೆ. ನೊಂದ ವಿದ್ಯಾರ್ಥಿನಿಯರು ಕಾಲೇಜು ಕ್ಯಾಂಪಸ್ಸಿನ ಮೂಲೆಯೊಂದರ ಕ್ಯಾಂಟೀನಿನ ಬಳಿ ಅಂಗಡಿ ಇಡಲು ಮುಂದಾದಾಗ ಅಲ್ಲಿಗೂ ವಾಣಿಜ್ಯ ವಿಭಾಗದ ಕೆಲವು ಉಪನ್ಯಾಸಕರು ಒಟ್ಟು ಸೇರಿ ಅಲ್ಲಿಗೂ ಬಂದು ಅಂಗಡಿ ಕೀಳಿಸುವ ಪ್ರಯತ್ನ ಮಾಡಿದ್ದಾರಲ್ಲದೆ ವಿದ್ಯಾರ್ಥಿನಿಯರ ಮೇಲೆ ದಬ್ಬಾಳಿಕೆಯ ವರ್ತನೆ ಮಾಡಿದ್ದಾರೆ‌ ಎನ್ನಲಾಗಿದೆ.  ‘ಕನ್ನಡದಲ್ಲಿ ಹೇಳುತ್ತಿರುವುದು ಅರ್ಥವಾಗುತ್ತಿಲ್ಲವೇ? ಇದನ್ನ ಇಲ್ಲಿಂದ ತಗೊಂಡ್ ಹೋಗಬೇಕು. ಇದಕ್ಕೆ ಇಲ್ಲಿ ಅಲೋ ಇಲ್ಲ. ಇಲ್ಲಿ ಈ ಬಾಕ್ಸ್ ಗಳನ್ನು ಓಪನ್ ಮಾಡಬೇಡಿ, ಹೊರಗೆ ಒಯ್ಯಿರಿ, ನೋ ಆರ್ಗ್ಯುಮೆಂಟ್.’ ಎಂದೆಲ್ಲಾ ಗದರಿಸಿದ್ದಾರೆ. ಕಾಮರ್ಸ್ ವಿಭಾಗದ ಅತಿಥಿ ಉಪನ್ಯಾಸಕರಾದ ಮಧು, ಗಣೇಶ ಭಟ್ಟ, ಪ್ರವೀಣ್ ಶೇಟ್, ರಾಜಾರಾಮ ಹೆಗಡೆ, ಮಹಾವೀರ ಜೈನ್ ಮೊದಲಾದವರು ಗಟ್ಟಿ ಧ್ವನಿಯಲ್ಲಿ ವಿದ್ಯಾರ್ಥಿನಿಯರನ್ನು ಬೆದರಿಸಿ ಓಡಿಸಲು ಆಕ್ರಮಣಕಾರಿಯಾಗಿ ವರ್ತಿಸಿದ್ದಾರೆ. ಆದರೆ ಇದಕ್ಕೆ ಬೆದರದ ವಿದ್ಯಾರ್ಥಿನಿಯರು ” ಸರ್ ಇಲ್ಲಿ 80% ಮಾಂಸಹಾರ ಸೇವಿಸುವ ವಿದ್ಯಾರ್ಥಿನಿಯರಿದ್ದೇವೆ. ನೀವು ನಮಗೆ ಪರ್ಮಿಷನ್ ಕೊಡಬೇಕು, ಎಲ್ಲಾ ಆಹಾರದ ಹಾಗೆ ಇದೂ ಒಂದು ಆಹಾರ. ನಾವು ಮಲೆನಾಡಿನ ಪಾರಂಪರಿಕ ಸಾಂಸ್ಕೃತಿಕ ಆಹಾರ ನಾವು ಮಾರಾಟ ಮಾಡ್ತಿವಿ ಪರಿಚಯಿಸುವ ಸಲುವಾಗಿ ಸಾವಿರಾರು ರೂಪಾಯಿ ಕರ್ಚು ಮಾಡಿ ತಯಾರಿಸಿದ ಅಡುಗೆಯನ್ನು ಹೊರಗೆ ಒಯ್ಯುವುದಿಲ್ಲ.’ ಎಂದು ದೃಢವಾಗಿ ನಿಂತಿದ್ದಾರೆ. ವಿದ್ಯಾರ್ಥಿನಿಯರೊಂದಿಗೆ ವಾಗ್ವಾದದ ಸಮಯದಲ್ಲಿ ರಾಜಾರಾಮ ಹೆಗಡೆಯವರು ವಿದ್ಯಾರ್ಥಿನಿಯೊಬ್ಬರನ್ನು ಉದ್ದೇಶಿಸಿ ‘ನಿನ್ನದು ಯಾವ ಊರು? ಯಾವ ಕ್ಲಾಸು ಏನು ಹೆಸರು? ಎಂದು ಕೇಳಿದ್ದಲ್ಲದೇ ‘ಇವಳ ಮೇಲೆ ಕಣ್ಣು ಇಡಿ’ ಎಂದಿದ್ದಾರೆ. ಅಷ್ಟು ಹೊತ್ತಿಗೆ ಕಾಲೇಜಿನ ಉಳಿದ ಇತರೆ ವಿಭಾಗಗಳ ಉಪನ್ಯಾಸಕರಿಗೆ ವಿಷಯ ತಿಳಿದು ಅವರೂ ಅಲ್ಲಿಗೆ ಧಾವಿಸಿ ವಿದ್ಯಾರ್ಥಿನಿಯರ ಪರ ನಿಂತಿದ್ದಾರೆ. ಇದಕ್ಕೆ ‘ಸರ್ಕಾರದ ಪರ್ಮಿಷನ್ ಇಲ್ಲ’ ಎಂದು ಕಾಮರ್ಸ್ ಉಪನ್ಯಾಸಕರು ಆಕ್ಷೇಪ ತಗೆದಾಗ , ವಿದ್ಯಾರ್ಥಿನಿಯರೂ ಸೇರಿದಂತೆ ಕೆಲವು ಉಪನ್ಯಾಸಕರೂ ಸರ್ಕಾರದ ಪರ್ಮಿಷನ್ ಇಲ್ಲ ಎಂಬ ಯಾವುದಾದರೂ ದಾಖಲೆ ಇದ್ದರೆ, ಆದೇಶ ಪತ್ರವಿದ್ದರೆ ತೋರಿಸುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ಉತ್ತರ ನೀಡಲಾಗದ ಮಾಂಸಾಹಾರ ವಿರೋಧಿಗಳು ʼಇದು ಕಾಲೇಜು, ಇಲ್ಲಿ ಮಾಂಸಾಹಾರ ಮಾರಾಟ ಮಾಡುವಂತಿಲ್ಲʼ ಎಂದಾಗ ಹಾಗಾದರೆ ಸಸ್ಯಾಹಾರದ ಮಳಿಗೆಗೂ ಅವಕಾಶ ಕೊಡಬಾರದು ನಾವು ಅಂಗಡಿ ಇಟ್ಟೇ ತೀರುತ್ತೇವೆಂದು ತಿಳಿಸಿದ್ದಾರೆ. ಹಿಂದೆ ಮುಸ್ಲಿಮ್ ವಿದ್ಯಾರ್ಥಿನಿಯರು ಬಿರಿಯಾನಿ ತಯಾರಿಸಿ ತಂದಾಗ ಇದೇ ರೀತಿ ತೊಂದರೆ ನೀಡಿದ್ದರೆಂತಲೂ ಇಲ್ಲಿ ಆಹಾರ ಮತ್ತು ಜಾತಿ ರಾಜಕಾರಣ ನಡೆಯುತ್ತಿದೆ ಎಂದೂ ಆರೋಪಿಸಿ ದಿಟ್ಟವಾಗಿ ನಿಂತಿದ್ದಾರೆ‌. ಕೆಲವು ಉಪನ್ಯಾಸಕರು ವಿದ್ಯಾರ್ಥಿನಿಯರ ಪರವಾಗಿ ಮಧ್ಯ ಪ್ರವೇಶಿಸಿದ ನಂತರದಲ್ಲಿ ಈ ವಾದ ವಿವಾದವು ಕಾಲೇಜಿನ ಪ್ರಾಂಶುಪಾಲರ ಗಮನಕ್ಕೂ ಬಂದು ಅವರೂ ಗಲಾಟೆ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿ ವಿಚಾರಣೆ ನಡೆಸಿ ಕಡೆಗೆ ಪರಿಸ್ಥಿತಿ ತಹಬಂಧಿಗೆ ತರುವ ಪ್ರಯತ್ನ ಮಾಡಿದರು. ನಂತರವೂ ಈ ಆಹಾರದಲ್ಲಿ ರಾಜಕಾರಣ ಮಾಡುವ ಉಪನ್ಯಾಸಕರ ಆಕ್ಷೇಪಣೆ ಮುಂದುವರೆದಿತ್ತು ಎಂದು ಹೇಳಲಾಗುತ್ತಿದೆ. ಪ್ರಾಂಶುಪಾಲರು ಎಲ್ಲಾ ಬಗೆಯ ಆಹಾರ ಮಳಿಗೆ ತೆರೆಯಲು ಅವಕಾಶ ಮಾಡಿಕೊಟ್ಟು ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ ಮೇಲೆ‌, ಯಾರಿಗೂ ಜಗ್ಗದ ದಿಟ್ಟ ವಿದ್ಯಾರ್ಥಿನಿಯರು ಮಲೆನಾಡಿನ ಪಾರಂಪರಿಕ ಆಹಾರ ಕೋಳಿ ಸಾರು ಕಜ್ಜಾಯವನ್ನು ಮಾರಾಟ ಮಾಡಿ ಗೆದ್ದಿದ್ದಾರೆ.

ಈ ಘಟನೆಯ ಕುರಿತು ಪೀಪಲ್‌ ಮೀಡಿಯಾ ರಾಜಾರಾಮ ಹೆಗಡೆಯವರನ್ನು ಸಂಪರ್ಕಿಸಿ ಕೇಳಿದಾಗ, “ಶನಿವಾರ ನಾವೊಂದು ನಿಯಮ ಮಾಡಿಕೊಂಡಿದ್ದೆವು. ಕೇವಲ ಸಸ್ಯಾಹಾರ ಮಾತ್ರ ತೆಗೆದುಕೊಂಡು ಬರಬೇಕು, ಯಾಕೆಂದರೆ ಕಾಲೇಜು ಒಂದು ದೇವಸ್ಥಾನ ಎಂಬ ಕಾರಣಕ್ಕೆ. ಆ ನಿಮಯವನ್ನು ಕೆಲವು ವಿದ್ಯಾರ್ಥಿನಿಯರು ಉಲ್ಲಂಘಿಸಿದ್ದರು. ಆಗ ನಾವು ತೆಗೆಯಲು ಹೇಳಿದೆವು. ಆದರೆ ಅವರು ತೆಗೆಯಲಿಲ್ಲ. ವಾದ ಮಾಡಿದರು. ನಂತರ ಅವಕಾಶ ಮಾಡಿಕೊಟ್ಟೆವು” ಎಂದರು. ಹೆಚ್ಚಿನ ದೇವರುಗಳು ಮಾಂಸಾಹಾರಿಗಳಲ್ಲವೇ, ಆಹಾರ ಒಂದು ಸಂಸ್ಕೃತಿಯ ಭಾಗವಲ್ಲವೇ ಎಂಬ ಪ್ರಶ್ನೆಗೆ ರಾಜಾರಾಮ ಹೆಗಡೆ ಅವರು ʼನಾವು ಅಷ್ಟೆಲ್ಲಾ ಡೀಪಾಗಿ ಯೋಚನೆ ಮಾಡಲು ಹೋಗಿಲ್ಲ” ಎಂದು ಜಾರಿಕೊಂಡರು. ಕಾಮರ್ಸ್‌ ವಿಭಾಗದ ಮತ್ತೊಬ್ಬ ಉಪನ್ಯಾಸಕ ಮಧು ಅವರವನ್ನು ಪೀಪಲ್‌ ಸಂಪರ್ಕಿಸಿ ಪ್ರತಿಕ್ರಿಯೆ ಕೇಳಿದಾಗ, ʼಈ ಹಿಂದೆ ಮಾಡಿಕೊಂಡಿದ್ದ ನಿಯಮವನ್ನು ಉಲ್ಲಂಘಿಸಿದ್ದರಿಂದ ವಿದ್ಯಾರ್ಥಿನಿಯರನ್ನು ಪ್ರಶ್ನಿಸಿದ್ದು ನಿಜʼ ಎಂದ ಅವರು ʼಈ ಈ ಸ್ಪರ್ದೆಯನ್ನ ಮಕ್ಕಳಲ್ಲಿ ಮಾರ್ಕೆಟಿಂಗ್‌ ಕುರಿತ ಕೌಶಲ್ಯ ಪರಿಚಯಕ್ಕಾಗಿ ನಡೆಸಲಾಗಿತ್ತುʼ ಎಂದರು. ʼಸಸ್ಯಾಹಾರಿ ತಿನಿಸುಗಳನ್ನು ಮಾರ್ಕೆಂಟಿಂಗ್‌ ಮಾಡಬಹುದು ಎಂದ ಮೇಲೆ ಮಾಂಸಾಹಾರಿ ತಿನಿಸುಗಳಿಗೆ ಮಾರ್ಕೆಟಿಂಗ್‌ ಮೌಲ್ಯ ಇಲ್ಲವೆಂದು ನಿಮ್ಮ ಅಭಿಪ್ರಾಯವೇ? ಕೋಳಿ ಕಜ್ಜಾಯಕ್ಕೂ ಮಾರ್ಕೆಟಿಂಗ್‌ ಇದೆ ಎಂದು ನೀವೇ ನಿಮ್ಮ ವಿದ್ಯಾರ್ಥಿನಿಯರಿಗೆ ತೋರಿಸಬಹುದಿತ್ತಲ್ಲ?ʼ ಎಂಬ ಪ್ರಶ್ನೆಗೆ ʼಅವರು ಮೊದಲೇ ಹೇಳಬೇಕಿತ್ತುʼ ಎಂಬ ಉತ್ತರ ಬಂತು. ʼಬಹುಸಂಸ್ಕೃತಿಗಳ ನಾಡಿನಲ್ಲಿ ಇಂತಹ ಒಂದು ಶುದ್ಧ ಸಸ್ಯಾಹಾರಿಗಳ ಪರವಾದ ಪಕ್ಷಪಾತದ ಸ್ಪರ್ಧೆ ಏರ್ಪಡಿಸುವುದೇ ಸಂವಿಧಾನ ಬಾಹಿರವಲ್ಲವೇ?ʼ ಎಂದು ಕೇಳಿದಾಗ ಅವರು ʼಇನ್ನು ಮುಂದೆ ಇಂತಹ ನಿಯಮಗಳನ್ನು ಮಾಡುವುದಿಲ್ಲ ಬಿಡಿʼ ಎಂದರು.

ಮಲೆನಾಡಿನ ಆಹಾರ ಸಂಸ್ಕೃತಿಯ ಭಾಗ- ಸಾಗರ ಸೀಮೆಯ ಕಜ್ಜಾಯ

ಸಾಮಾಜಿಕ ಜಾಲತಾಣದಲ್ಲಿ ವಿದ್ಯಾರ್ಥಿನಿಯರ ಮೇಲೆ ಆಹಾರ ರಾಜಕಾರಣದ ದಬ್ಬಾಳಿಕೆ, ಸಾಂಸ್ಕೃತಿಕ ದಬ್ಬಾಳಿಕೆ ನಡೆಸುತ್ತಿರುವ ಕಾಲೇಜಿನ ಕೆಲವು ಜಾತಿವಾದಿ ಉಪನ್ಯಾಸಕರ ವಿಡಿಯೋ ತುಣುಕುಗಳು ಹರಿದಾಡುತ್ತಿವೆ. ಯುವ ಮುಂದಾಳು ಹಾಗೂ ಸಾಮಾಜಿಕ ಚಿಂತಕರಾದ ಸತ್ಯನಾರಾಯಣ ಜಿ ಟಿ ಕರೂರು ಈ ಕುರಿತು ತಮ್ಮ ಆಕ್ರೋಶ  ವ್ಯಕ್ತಪಡಿಸಿ “ನಿಮ್ಮ ಉಪನ್ಯಾಸಕರ ವಾದ ಮನುಧರ್ಮ ಶಾಸ್ತ್ರ ಭಾಗವೇ ಆಗಿದ್ದ ಏಕಲವ್ಯನ ಬೆರಳು ಕೇಳಿದವರ ವಾದ ಹಾಗೇ ಇದೆ. ಮನುಧರ್ಮ ಶಾಸ್ತ್ರದ ಮೇಲೇ ಕಾಲೇಜು ನಡೆಸುತ್ತಾ ಇಲ್ಲ. ಬಾಬಾ ಸಾಹೇಬರ ಭಾರತದ ಸಂವಿಧಾನದ ಅಡಿಯಲ್ಲಿ ನಮ್ಮ ವಿಧ್ಯಾರ್ಥಿನಿಯರು ದ್ವನಿ ಎತ್ತಿದ್ದಾರೆ. ಅವರ ದ್ವನಿಯನ್ನು ಹತ್ತಿಕ್ಕಲು ಬಿಡುವುದಿಲ್ಲ. ಕಾಲೇಜಿನ ಸಿಡಿಸಿ ಸಮಿತಿ ಅಧ್ಯಕ್ಷರಾದ ಮಾನ್ಯ ಶಾಸಕರಾದ ಗೋಪಾಲಕೃಷ್ಣ ಬೇಳೂರು ರವರು ಈ ಬಗ್ಗೆ ಗಮನ ಹರಿಸಬೇಕು. ಸಿಡಿಸಿ ಸಮಿತಿ ಸಭೆ ಕಾರ್ಯಕ್ರಮ, ಕಟ್ಟಡಕೆ ಸೀಮಿತ ಆಗದೇ ಕಾಲೇಜು ಬೌದ್ದಿಕ ಕೇಂದ್ರ ಆಗಿಸಲು ಹೆಚ್ಚು ಕೆಲಸ ಮಾಡಬೇಕು. ಈ ಘಟನೆ ಬಗ್ಗೆ ತನಿಖೆ ನಡೆಸಬೇಕು ಮತ್ತು ಪುನರಾವರ್ತನೆ ಆಗದ ಹಾಗೆ ನೋಡಿ ಕೊಳ್ಳಬೇಕಿದೆ” ಎಂದು ಫೇಸ್ಬುಕ್‌ ಗೋಡೆಯಲ್ಲಿ ಬರೆದುಕೊಂಡಿದ್ದಾರೆ.

ಬೆದರಿಕೆ ಹಾಕುತ್ತಿರುವ ಪ್ರಾಧ್ಯಾಪಕ- ಉಪನ್ಯಾಸಕರು

ಸಂವಿಧಾನದ ಪ್ರಮುಖ ಆಶಯವಾದ ವೈವಿಧ್ಯಮಯ ಸಂಸ್ಕೃತಿ ರಕ್ಷಣೆ, ಪೋಷಣೆ, ವೈವಿಧ್ಯತೆಯಲ್ಲಿ ಏಕತೆ ಹಾಗೂ ಸಮಾನ ಅವಕಾಶದ ಅ ಆ ಇ ಈ ಗೊತ್ತಿಲ್ಲದ ಪರಮ ಅಜ್ಞಾನಿಗಳಂತೆ ತೋರುವ ಜಾತಿವಾದಿ ಈ ಉಪನ್ಯಾಸಕರು ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಸುತ್ತಿರುವ ಜಾತಿ ತಾರತಮ್ಯಕ್ಕೆ ಇದೀಗ ನೇರ ಪುರಾವೆ ಸಿಕ್ಕಂತಾಗಿದೆ. ಈಗ ಅವರು ತಮ್ಮ ನಿಲುವು ಒಪ್ಪದ ವಿದ್ಯಾರ್ಥಿನಿಯರ ವಯಕ್ತಿಕ ಮಾಹಿತಿ ಕಲೆ ಹಾಕಿ ಸೇಡು ತೀರಿಸಿಕೊಳ್ಳುವ ಸಾಧ್ಯತೆಯೂ ಇರುವುದರಿಂದ ಸರ್ಕಾರ ಅಂದರೆ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಸಂಬಂಧ ಪಟ್ಟವರ ಮೇಲೆ ಕ್ರಮ ಜರುಗಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವರದಿ: ಹರ್ಷಕುಮಾರ್‌ ಕುಗ್ವೆ

Related Articles

ಇತ್ತೀಚಿನ ಸುದ್ದಿಗಳು