Saturday, April 27, 2024

ಸತ್ಯ | ನ್ಯಾಯ |ಧರ್ಮ

ಆಹಾರ ಉತ್ಪಾದನೆ ಮತ್ತು ರೈತರ ಸ್ಥಿತಿ: ಇಂದು ಏನಾಗಿದೆ?

ಈಗಿನ ಜನಸಂಖ್ಯೆಗೆ ಬೇಕಿರುವ ಆಹಾರದ ಅವಶ್ಯಕತೆಗಿಂತ ಸುಮಾರು 1.5 ಪಟ್ಟು ಹೆಚ್ಚು ಆಹಾರ ಉತ್ಪಾದನೆಯಾಗುತ್ತಿದೆ. ಈಗ ಬೆಳೆಯಲಾಗುತ್ತಿರುವ ಆಹಾರವನ್ನು ಸೂಕ್ತ ಸಾಗಾಟ ಮತ್ತು ಶೇಖರಣೆ ವ್ಯವಸ್ಥೆ ಮಾಡಿ 200 ಕೋಟಿಗಿಂತ ಅಧಿಕ ಜನಸಂಖ್ಯೆಗೆ ಆಹಾರ ಒದಗಿಸಬಹುದಾಗಿದೆ ಎನ್ನುತ್ತಾರೆ ಇಕಾನಾಮಿಕ್ಸ್‌ ಲೆಕ್ಚರರ್‌ ಡಾ. ಕಿರಣ ಸೂಡಿ

ಭಾರತ ದೇಶದಲ್ಲಿ ಆಹಾರ ಉತ್ಪಾದನೆ ಏರಿಕೆಯಾದಂತೆ ರೈತರ ಆದಾಯ ಕುಸಿತವಾಗುತ್ತಿದೆ. ದೇಶಕ್ಕೆ ಆಹಾರ ಭದ್ರತೆ ನೀಡುತ್ತಿರುವ ರೈತರಿಗೆ ಆರ್ಥಿಕ ಭದ್ರತೆ ಇಲ್ಲದೆ ಹೋಗುತ್ತಿರುವ ಬಗ್ಗೆ ಗಂಭೀರವಾಗಿ ಯೋಚಿಸಬೇಕಿದೆ. ಕೃಷಿ ಕ್ಷೇತ್ರವನ್ನು ರೈತರು ಹೇಗೆ ಪರಿಗಣಿಸಬೇಕು? ಕೃಷಿಯನ್ನು ಪೂರ್ಣಕಾಲಿಕ ಉದ್ಯೋಗವಾಗಿ ಮತ್ತು ರೈತರ ಜೀವನಕ್ಕೆ ಬೇಕಾಗುವ ಸಂಪೂರ್ಣ ಆದಾಯದ ಮೂಲವಾಗಿ ಪರಿಗಣಿಸಬಹುದೇ? ಈ ಎಲ್ಲ ಪ್ರಶ್ನೆಗಳ ಹಿನ್ನೆಲೆಯಲ್ಲಿ, ಕೃಷಿಯನ್ನು ಆಹಾರ ಭದ್ರತೆ ದೃಷ್ಟಿಯಿಂದ ಮುಂದುವರಿಸುವುದು ಎಷ್ಟು ಮುಖ್ಯವೋ ರೈತರ ಆರ್ಥಿಕ ಭದ್ರತೆಯನ್ನು ನೋಡುವುದು ಸಹ ಅಷ್ಟೇ ಮುಖ್ಯವಾಗಿ ಅನಿವಾರ್ಯವಾಗಿದೆ.

ಆಹಾರ ಭದ್ರತೆ ಹೆಸರಿನಲ್ಲಿ ಪ್ರತಿಯೊಂದು ದೇಶಗಳು ಅಗತ್ಯಕ್ಕಿಂತ ಹೆಚ್ಚಾಗಿ ಉತ್ಪಾದನೆ ಮಾಡುತ್ತಿರುವುದರಿಂದ ಮತ್ತು ಉತ್ಪಾದನೆ ಮಟ್ಟ ಗರಿಷ್ಠ ಮಟ್ಟ ತಲುಪಿ ಆಹಾರ ಪೂರೈಕೆ-ಬೇಡಿಕೆ ನಡುವೆ ಸಾಕಷ್ಟು ವ್ಯತ್ಯಾಸ ಇರುವುದರಿಂದ ಆಹಾರಕ್ಕೆ ಬೇಡಿಕೆ ಇಲ್ಲದಾಗಿ ಬೆಲೆ ಕುಸಿತವಾಗುತ್ತಿದೆ. ರೈತರು ಬೆಳೆ ಬೆಳೆದು ಆರ್ಥಿಕವಾಗಿ ನಷ್ಟ ಹೊಂದುತ್ತಿದ್ದಾರೆ.

ಆಹಾರದ ಉತ್ಪಾದನೆ ಮತ್ತು ಪ್ರತಿ ವ್ಯಕ್ತಿಗೆ ಲಭ್ಯತೆ

ಭಾರತ ದೇಶದ 138 ಕೋಟಿ ಜನಸಂಖ್ಯೆಗೆ 40 ಕೋಟಿ ಎಕರೆ ಪ್ರದೇಶದಲ್ಲಿ ಉತ್ಪಾದನೆ ಮಾಡಲಾಗುತ್ತಿರುವ ಆಹಾರ ಧಾನ್ಯಗಳಲ್ಲಿ ಭತ್ತ-10, ಗೋಧಿ-12, ರಾಗಿ, ಜೋಳ, ಸಿರಿಧಾನ್ಯ-4.5, ಬೇಳೆಕಾಳು-2.5 (ಕೋಟಿ ಟನ್ ಗಳಲ್ಲಿ) ) ಹೀಗೆ, ಒಟ್ಟಾರೆ ಹತ್ತಿರ ಹತ್ತಿರ 30 ಕೋಟಿ ಟನ್. ಸಕ್ಕರೆ-04 ಕೋಟಿ ಟನ್, ಹಾಲು-20 ಕೋಟಿ ಟನ್, ತರಕಾರಿ-20 ಕೋಟಿ ಟನ್, ಹಣ್ಣು-10 ಕೋಟಿ ಟನ್.

138 ಕೋಟಿ ಜನಸಂಖ್ಯೆಗೆ ಉತ್ಪಾದನೆ ಮಾಡಲಾಗುತ್ತಿರುವ ಆಹಾರವನ್ನು ಪ್ರತಿಯೊಬ್ಬ ವ್ಯಕ್ತಿಗೆ ಸಮಾನವಾಗಿ ಹಂಚಿಕೆ ಮಾಡಿದಾಗ ಪ್ರತಿ ವ್ಯಕ್ತಿಗೆ, ಪ್ರತಿ ವರ್ಷಕ್ಕೆ ಸಿಗುವ ಆಹಾರ ಪ್ರಮಾಣ, ಆಹಾರ ಧಾನ್ಯ- 220.೬ ಕೆಜಿ, ಸಕ್ಕರೆ- 30.೦೮ ಕೆಜಿ, ತರಕಾರಿ- 150.೪ ಕೆಜಿ, ಹಣ್ಣು- 75.2 ಕೆಜಿ, ಹಾಲು 150 ಲೀಟರ್ 400 ಎಂ.ಎಚ್.

ನಾವು ದಿನನಿತ್ಯ ಬಳಸುವ ಆಹಾರದ ಪ್ರಮಾಣ ಮತ್ತು ಆಹಾರದ ಲಭ್ಯತೆಯ ಪ್ರಮಾಣಕ್ಕೂ ಬಹಳಷ್ಟು ವ್ಯತ್ಯಾಸವಿರುವುದನ್ನು ಇಲ್ಲಿ ಕಾಣಬಹುದು. ಮುಕ್ತ ವ್ಯಾಪಾರ ನೀತಿಯಿಂದ ಹೊರ ದೇಶಗಳಿಂದ ಆಹಾರ ಆಮದು ಮಾಡಿಕೊಳ್ಳುತ್ತಿರುವ ಪ್ರಮಾಣವನ್ನು ಸಹ ಇಲ್ಲಿ ಗಣನೆಗೆ ತೆಗೆದುಕೊಳ್ಳಬೇಕು.

ಆಹಾರದ ಅವಶ್ಯಕತೆಗಿಂತ ಹೆಚ್ಚು ಉತ್ಪಾದನೆಯಾಗುತ್ತಿದೆ!

ಈಗಿನ ಜನಸಂಖ್ಯೆಗೆ ಬೇಕಿರುವ ಆಹಾರದ ಅವಶ್ಯಕತೆಗಿಂತ ಸುಮಾರು 1.5 ಪಟ್ಟು ಹೆಚ್ಚು ಆಹಾರ ಉತ್ಪಾದನೆಯಾಗುತ್ತಿದೆ. ಈಗ ಬೆಳೆಯಲಾಗುತ್ತಿರುವ ಆಹಾರವನ್ನು ಸೂಕ್ತ ಸಾಗಾಟ ಮತ್ತು ಶೇಖರಣೆ ವ್ಯವಸ್ಥೆ ಮಾಡಿ 200 ಕೋಟಿಗಿಂತ ಅಧಿಕ ಜನಸಂಖ್ಯೆಗೆ ಆಹಾರ ಒದಗಿಸಬಹುದಾಗಿದೆ. ಪ್ರತಿ ವರ್ಷ ಬಳಕೆಯಾಗಿ ಉಳಿಯುವ ಆಹಾರದ ಪ್ರಮಾಣ ಕೂಡ ಏರಿಕೆಯಾಗುತ್ತಾ ಹೋಗುತ್ತದೆ. ರೈತರು ಹೆಚ್ಚು ಬೆಳೆದಂತೆಲ್ಲ ಹೆಚ್ಚು ನಷ್ಟಕ್ಕೆ ಒಳಗಾಗುವ ಸಾಧ್ಯತೆಯಿದೆ. ಆದುದರಿಂದ ಕೃಷಿ ಕ್ಷೇತ್ರಕ್ಕೆ ಹೊಸದಾಗಿ ಹೆಚ್ಚು ಜನರನ್ನು ಸೇರ್ಪಡೆ ಮಾಡುವುದರಿಂದ ಅವರಿಗೆ ಕೃಷಿಯಲ್ಲಿ ಸುಸ್ಥಿರ ಜೀವನ ಮತ್ತು ಆದಾಯ ಪಡೆಯುವ ಸಾಧ್ಯತೆಗಳ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಬೇಕಿದೆ. ಕೃಷಿಯಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಗಳಿಸಬಹುದಾದ ಇತಿ ಮಿತಿಗಳ ಬಗ್ಗೆ ಸ್ಪಷ್ಟ ಆರಿವು ಮೂಡಿಸುವ ಕೆಲಸವೂ ಆಗಬೇಕಿದೆ.

ಕೃಷಿ ಲಾಭದಾಯಕವೇ?

ಕೃಷಿ ಹೊರತುಪಡಿಸಿ ಬೇರೆ ಆದಾಯ ಮೂಲವಿರುವ ಜನರಿಗೆ ಕೃಷಿಯಲ್ಲಿ ಬರುವ ಅಲ್ಪ ಲಾಭವು ಕೂಡ ಅವರಿಗೆ ಲಾಭದಾಯಕವಾಗಿ ಕಾಣಬಹುದು. ಉದಾಹರಣೆಗೆ, ಒಂದು ಲಕ್ಷ ಬಂಡವಾಳ ಹಾಕಿ ಅದರ ಮೇಲೆ 5 ರಿಂದ 10 ಸಾವಿರ ಲಾಭ ಕಂಡರೂ ಅವರಿಗೆ ಬ್ಯಾಂಕ್ ಬಡ್ಡಿ ಲೆಕ್ಕಾಚಾರದಲ್ಲಿ ಲಾಭದಂತೆ ಕಂಡುಬರುತ್ತದೆ. ಬೇರೆ ಆದಾಯದ ಮೂಲವಿಲ್ಲದೆ ಬರೀ ಕೃಷಿ ಆದಾಯದ ಮೂಲವನ್ನು ನಂಬಿಕೊಂಡಿರುವ ರೈತರಿಗೆ ಅದು ಲಾಭದಾಯಕವಾಗುವುದಿಲ್ಲ. ದೊಡ್ಡಮಟ್ಟದ ಕಾರ್ಪೊರೇಟ್ ಕಂಪನಿಗಳು ಎಲ್ಲಾ ರೀತಿಯ ಉತ್ಪಾದನಾ ಮತ್ತು ಸೇವಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರೂ ಕೂಡ ಆಹಾರ ಉತ್ಪಾದನೆ ಮಾಡುವ ಕೃಷಿ ಕ್ಷೇತ್ರಕ್ಕೆ ಪ್ರವೇಶ ಮಾಡಿದ್ದು ಕಡಿಮೆ. ಕೃಷಿ ಕ್ಷೇತ್ರ ಅಷ್ಟೊಂದು ಲಾಭದಾಯಕವಾಗಿದ್ದರೆ ಬಹುತೇಕ ಕಾರ್ಪೊರೇಟ್ ಕಂಪನಿಗಳು ಸಾರ್ವಜನಿಕರಿಂದ ಶೇರು ಸಂಗ್ರಹಿಸಿ ಕೃಷಿಯಿಂದ ರೈತರನ್ನು ಈಗಾಗಲೇ ಓಡಿಸಿ ಬಿಟ್ಟಿರುತ್ತಿದ್ದರು!

ಕೃಷಿ ಕುಟುಂಬದ ಆದಾಯದ ಮೂಲಗಳ ಮಾಹಿತಿಯನ್ನು ನೋಡಿದಾಗ ಬೆಳೆ ಬೆಳೆಯುವ ಮೂಲಕ ಶೇಕಡಾ 35, ಪಶು ಪಾಲನೆ ಮೂಲಕ ಶೇ.15, ಕೂಲಿ/ಸಂಬಳದ ಮೂಲಕ ಶೇ.40, ಉಳಿಕೆ ಶೇ.10, ಕೃಷಿಯೇತರ ಚಟುವಟಿಕೆ, ಗುತ್ತಿಗೆ, ಬಡ್ಡಿ, ಪಿಂಚಣಿ ಈ ಅಂಕಿ ಅಂಶಗಳು ಕೃಷಿಯ ಜೊತೆಗೆ ಕೃಷಿಯೇತರ ಆದಾಯದ ಅನಿವಾರ್ಯತೆಯ ಬಗ್ಗೆ ಸ್ಪಷ್ಟ ತಿಳುವಳಿಕೆಯನ್ನು ನೀಡುತ್ತವೆ.

ಸರಕಾರಗಳು ವಿಶೇಷ ಗಮನ ಹರಿಸಬೇಕು

ಕೃಷಿ ಆದಾಯ ಮತ್ತು ಕೃಷಿ ಜೀವನದ ಕುರಿತು ಎಲೆಕ್ಟ್ರಾನಿಕ್ ಮತ್ತು ಪ್ರಿಂಟ್ ಮೀಡಿಯಾದಲ್ಲಿ ಬರುವ ಅತಿ ರಂಜನೀಯ ಸುದ್ದಿಗಳನ್ನು ನೋಡಿ ರೋಮಾಂಚನಗೊಂಡು ಇರುವ ಉದ್ಯೋಗಗಳನ್ನು ಬಿಟ್ಟು ಕೃಷಿಯಲ್ಲಿ ನಿರೀಕ್ಷಿತ ಆದಾಯ ಪಡೆಯಲಾಗದೆ ನಿರಾಶೆ ಹೊಂದಿದವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಉದ್ಯೋಗ/ವೃತ್ತಿಯ ಜೊತೆಗೆ ಆದಾಯ ಸರಿ ಹೊಂದಿಸಲು ಯಾ ಹೆಚ್ಚುವರಿ ಆದಾಯದ ಮೂಲವಾಗಿ ಕೃಷಿಯನ್ನು ನಡೆಸುವುದು ಇಂದು ಅನಿವಾರ್ಯವಾಗಿದೆ ನಿಜ. ಆದರೆ, ದೇಶದಲ್ಲಿ ಅತಿ ಹೆಚ್ಚು ಜನರು ಕೃಷಿಯಲ್ಲಿ ಪಾಲ್ಗೊಳ್ಳುವುದರ ಮೂಲಕ ಅಭಿವೃದ್ಧಿ ಸಾಧಿಸುವುದರ ಕಡೆಗೆ ಹೆಚ್ಚು ಆಸಕ್ತಿ ವಹಿಸಬೇಕಾದರೆ ಸರ್ಕಾರಗಳು ರೈತರತ್ತ ವಿಶೇಷ ಗಮನ ಹರಿಸಬೇಕಾದುದು ಬಹಳ ಮುಖ್ಯ.

ಡಾ. ಕಿರಣ ಸೂಡಿ
ಗದಗದ ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರು

Related Articles

ಇತ್ತೀಚಿನ ಸುದ್ದಿಗಳು