Home ವಿಶೇಷ ಭಾರತ ವಿದೇಶಾಗ ನೀತಿ ಅಲ್ಲ… ಅದಾನಿ ವಿದೇಶಾಂಗ ನೀತಿ!

ಭಾರತ ವಿದೇಶಾಗ ನೀತಿ ಅಲ್ಲ… ಅದಾನಿ ವಿದೇಶಾಂಗ ನೀತಿ!

0
ಗೌತಮ್‌ ಅದಾನಿ ಮತ್ತು ಮೋದಿಯವರು ಖಾಸಾ ದೋಸ್ತಿಗಳು. ಒಬ್ಬ ಬಿಲಿಯನೇರ್‌ ಉದ್ಯಮಿ ಪ್ರಧಾನಿಯೊಬ್ಬರ ಸೀಟಿನ ಮೇಲೆ ಅಗೋಚರವಾಗಿ ಕುಳಿತಂತೆ ಕಾಣುತ್ತದೆ. ಇಬ್ಬರೂ ಗುಜರಾತಿಗಳು. 2014 ರಲ್ಲಿ ಮೋದಿ ಪ್ರಧಾನಿಯಾದ ಮೇಲೆ ಅದಾನಿ ಗ್ರೂಪ್ ತನ್ನ ವ್ಯವಹಾರಗಳನ್ನು ಆಕ್ರಮಣಕಾರಿ ರೀತಿಯಲ್ಲಿ ವಿಸ್ತರಿಸಿಕೊಂಡಿದೆ. ಮೋದಿ ಹೋದ ದೇಶದಲ್ಲೆಲ್ಲಾ ಅದಾನಿ ತಮ್ಮ ಲಾಭವನ್ನು ಮಾಡಿಕೊಂಡಿದ್ದಾರೆ. ಮಂಗಳೂರು ಸೇರಿದಂತೆ ಭಾರತದ ವಿಮಾನ ನಿಲ್ದಾಣಗಳು, ಬಂದರುಗಳು, ಕಲ್ಲಿದ್ದಲು ಗಣಿಗಳು, ವಿದ್ಯುತ್‌ ಉತ್ಪಾದನಾ ಕೇಂದ್ರಗಳು ಮತ್ತು ಗ್ಯಾಸ್ ಸ್ಟೇಷನ್‌ಗಳನ್ನು ತನ್ನದಾಗಿಸಿಕೊಂಡು ದೇಶ ಯಾಕೆ, ಪ್ರಪಂಚದಲ್ಲೇ ಅತಿದೊಡ್ಡ ಖಾಸಗಿ ಮಾಲೀಕನಾಗುತ್ತಿದ್ದಾರೆ. 

ಕೀನ್ಯಾದ ನೈರೋಬಿ ವಿಮಾನ ನಿಲ್ದಾಣವನ್ನು 30 ವರ್ಷಗಳವರೆಗೆ ನಿರ್ವಹಿಸಲು ಅದಾನಿ ಗ್ರೂಪ್‌ಗೆ ಹಕ್ಕನ್ನು ನೀಡುವ ಒಪ್ಪಂದವನ್ನು ಅಲ್ಲಿನ ಉಚ್ಚ ನ್ಯಾಯಾಲಯ ಅಮಾನತುಗೊಳಿಸಿದೆ. ಇದು ಭಾರತದ ಹೊರಗೆ ವಿಮಾನ ನಿಲ್ದಾಣ ಸ್ಥಾಪಿಸುವ ಮೊದಲ ಪ್ರಯತ್ನವಾಗಿದೆ. ಕೀನ್ಯಾದ ನ್ಯಾಯಾಲಯದ ಈ ಆದೇಶವು ಜಾಗತಿಕವಾಗಿ ವಿಸ್ತರಿಸುವ ಅದಾನಿ ಗ್ರೂಪ್ಸ್‌ನ ಯೋಜನೆಗಳಿಗೆ ಹಿನ್ನಡೆಯಾಗಿದೆ.

ಮೋದಿಯವರು ಬೇರೆ ದೇಶಗಳ ಜೊತೆಗೆ ಮಾಡುವ ರಾಜತಾಂತ್ರಿಕ ಒಪ್ಪಂದಗಳ ಬೆನ್ನಲ್ಲೇ ಅದಾನಿ ಗ್ರೂಪ್ಸ್‌ ತನ್ನ ಯೋಜನೆಗಳನ್ನು ಆ ದೇಶಗಳಲ್ಲಿ ವಿಸ್ತರಿಸಿದೆ. ಮೋದಿಯವರು ಒಂದು ದೇಶಕ್ಕೆ ಬೇಟಿ ನೀಡಿದರೆ, ಇಲ್ಲವೇ ಆ ದೇಶದ ಮುಖ್ಯಸ್ಥನನ್ನು ಬೇಟಿ ನೀಡಿದ ತಿಂಗಳ ಒಳಗೆ ಅದಾನಿಯವರಿಗೆ ಆ ದೇಶದಲ್ಲಿ ಯೋಜನೆಯೊಂದು ಘೋಷಣೆಯಾಗುತ್ತದೆ.

ಕೀನ್ಯಾದ ಪ್ರಧಾನ ಮಂತ್ರಿಯು ಡಿಸೆಂಬರ್ 2023 ರಲ್ಲಿ ನವದೆಹಲಿಗೆ ಭೇಟಿ ನೀಡಿದರು. ಮೂರು ತಿಂಗಳ ನಂತರ, ಮಾರ್ಚ್‌ನಲ್ಲಿ, ಅದಾನಿ ಗ್ರೂಪ್ ನೈರೋಬಿ ವಿಮಾನ ನಿಲ್ದಾಣವನ್ನು ನವೀಕರಿಸಲು ಮತ್ತು ವಿಸ್ತರಿಸಲು ಪ್ರಸ್ತಾವನೆಯನ್ನು ಸಲ್ಲಿಸಿತು. ಜೂನ್‌ನಲ್ಲಿ, ಕೀನ್ಯಾದ ಅಧಿಕಾರಿಗಳು ರಾಷ್ಟ್ರೀಯ ವಿಮಾನಯಾನ ನೀತಿಯನ್ನು ಬದಲಾಯಿಸಿದರು ಮತ್ತು ವಿಮಾನ ನಿಲ್ದಾಣ ಹೂಡಿಕೆ ಯೋಜನೆಯನ್ನು ಅನುಮೋದಿಸಿದರು. ಈ ಬಗ್ಗೆ ಸ್ಕ್ರೋಲ್.ಇನ್‌ ವರದಿ ಮಾಡಿದೆ.

ಈ ಪ್ರಕರಣ ಬೆಳಕಿಗೆ ಬಂದಂತೆ, ಇದನ್ನು ವಿರೋಧಿಸಿ ಕೀನ್ಯಾದ ಮಾನವ ಹಕ್ಕುಗಳ ಆಯೋಗ ಮತ್ತು ಬಾರ್ ಅಸೋಸಿಯೇಷನ್ ​​ಕಾನೂನು ಸವಾಲನ್ನು ಹಾಕಿವೆ. ಲಾಭ ತರುವ ರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಖಾಸಗಿ ಘಟಕಕ್ಕೆ ಗುತ್ತಿಗೆ ನೀಡುವುದು ಸರಿಯಲ್ಲ, ಯಾವುದೇ ಸ್ಪರ್ಧಾತ್ಮಕ ಬಿಡ್ಡಿಂಗ್‌ ಇಲ್ಲದೇ ಇದನ್ನು ಗೌಪ್ಯವಾಗಿ ಮಾಡಲಾಗುತ್ತಿದೆ ಎಂದು ಹೇಳಿವೆ. ಕೀನ್ಯಾದ ಹೈಕೋರ್ಟ್ ಸೆಪ್ಟೆಂಬರ್ 9 ರಂದು ಈ ಒಪ್ಪಂದವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಮೋದಿಯ ಪ್ರಭಾವವನ್ನು ಬಳಸಿ ಕೀನ್ಯಾದ ಒಳಗೆ ನುಗ್ಗಿರುವ ಅದಾನಿ ಗ್ರೂಪ್ಸ್‌ನ ಈ ಯೋಜನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಯನ್ನು ಪಡೆಯಿತು. ಕೀನ್ಯಾದ ಸಂಸತ್ತಿನಲ್ಲಿ ಈ ಬಗ್ಗೆ ಪ್ರಶ್ನೆಗಳು ಎದ್ದವು.  

ಇದರ ಬೆನ್ನಲ್ಲೇ ಅಲ್ಲಿನ ಸರ್ಕಾರಿ ಸಲಹೆಗಾರರೊಬ್ಬರು ಈ ವಿಮಾನ ನಿಲ್ದಾಣದ ವಿಚಾರದಲ್ಲಿ ಅದಾನಿ ಜೊತೆಗೆ ಯಾವುದೇ ಒಪ್ಪಂದವನ್ನು ಮಾಡಿಕೊಂಡಿಲ್ಲ, ಕೀನ್ಯಾದಲ್ಲಿ ಹೈ-ವೋಲ್ಟೇಜ್ ವಿದ್ಯುತ್ ಮಾರ್ಗಗಳನ್ನು ನಿರ್ಮಿಸಲು ಅದಾನಿ ಗ್ರೂಪ್ಸ್‌ಗೆ 1.3 ಬಿಲಿಯನ್ ಡಾಲರ್ ರಿಯಾಯಿತಿಗಳನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.

ಕೀನ್ಯಾದಲ್ಲಿ ನಡೆದಿರುವ ಈ ಅಕ್ರಮ ಚರ್ಚೆಯಾಗುತ್ತಿರುವಂತೆ, ಅದಾನಿ-ಮೋದಿಯ ಜೋಡಿಯ ಇಂತದ್ದೇ ಇನ್ನೊಂದು ಅಕ್ರಮ ಬಾಂಗ್ಲಾದೇಶದಲ್ಲೂ ವಿವಾದಕ್ಕೆ ಈಡಾಗಿದೆ.  ಅಲ್ಲಿನ ಈಗಿನ ಮಧ್ಯಂತರ ಸರ್ಕಾರವು ಅದಾನಿ ಜೊತೆಗೆ ಹಿಂದಿನ ಸರ್ಕಾರ ಮಾಡಿಕೊಂಡಿರುವ ವಿದ್ಯುತ್ ಖರೀದಿ ಒಪ್ಪಂದವನ್ನು ಪರಿಶೀಲಿಸುತ್ತಿದೆ

ಬಾಂಗ್ಲಾದಲ್ಲೂ ಕೀನ್ಯಾದಂತೆ ಮೋದಿ ಪ್ರಭಾವ ಬಳಸಿದ ಅದಾನಿ

2015 ರ ಜೂನ್ ತಿಂಗಳಲ್ಲಿ ಪ್ರಧಾನ ಮೋದಿ ಮೊದಲ ಬಾರಿಗೆ ಢಾಕಾಗೆ ಭೇಟಿ ನೀಡಿದರು. ಆ ಬೇಟಿಯಲ್ಲಿ ಬಾಂಗ್ಲಾದೇಶಕ್ಕೆ ಅಗತ್ಯವಾದ ವಿದ್ಯುತ್ ಪೂರೈಸಲು ಪ್ರಮುಖ ಪಾಲುದಾರನಾಗಿ ಭಾರತ ಸಹಾಯ ಮಾಡಲಿದೆ ಎಂದು ಮೋದಿ ಹೇಳಿದರು. ಇದಾಗಿ ಎರಡು ತಿಂಗಳ ನಂತರ, ಜಾರ್ಖಂಡ್‌ನಿಂದ ಬಾಂಗ್ಲಾಕ್ಕೆ ವಿದ್ಯುತ್ ರಫ್ತು ಮಾಡಲು ಅದಾನಿ ಬಾಂಗ್ಲಾದೇಶದೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದರು. ಇದರ ಬೆನ್ನಲ್ಲೇ ಎರಡು ವರ್ಷಗಳ ನಂತರ, 2017 ರ ಏಪ್ರಿಲ್ ತಿಂಗಳಲ್ಲಿ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ನವದೆಹಲಿಗೆ ಭೇಟಿಯ ನೀಡಿದರು. 

ಇದರ ಬಗ್ಗೆ ಬಾಂಗ್ಲಾದಲ್ಲಿ ತೀವ್ರ ವಿರೋಧ ವ್ಯಕ್ತವಾಗಿ, ಅಲ್ಲಿನ ಪ್ರತಿಪಕ್ಷಗಳು ಮೋದಿ ಸರ್ಕಾರದ ಒತ್ತಡಕ್ಕೆ ಮಣಿದು ಹಸೀನಾ ಸರ್ಕಾರ ಈ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಆರೋಪವನ್ನು ಮಾಡಿದವು.

ಈಗ ಬಾಂಗ್ಲಾದೇಶದಲ್ಲಿ ಶೇಖ್‌ ಹಸೀನಾ ಸರ್ಕಾರ ಪತನವಾಗಿ ಹೊಸ ಆಡಳಿತ ಬಂದಿದೆ. ಅದಾನಿ ಜೊತೆಗೆ ಮಾಡಿಕೊಂಡಿರುವ ಹಿಂದಿನ ಸರ್ಕಾರದ ಒಪ್ಪಂದ ರದ್ದಾಗುವ ಸೂಚನೆ ಕಂಡುಬರುತ್ತಿದೆ.

ಇದರ ಬಗ್ಗೆ ಸ್ಕ್ರೋಲ್.ಇನ್‌ ಅದಾನಿ ಗ್ರೂಪಿನ ವಕ್ತಾರರೊಬ್ಬರ ಅಭಿಪ್ರಾಯವನ್ನು ವರದಿ ಮಾಡಿದ್ದು, “ಬಾಂಗ್ಲಾದೇಶ ಸರ್ಕಾರವು ನಮ್ಮ ಪಿಪಿಎಯನ್ನು ಮರುಪರಿಶೀಲನೆ ನಡೆಸುತ್ತಿದೆ ಎಂಬುದಕ್ಕೆ ನಮಗೆ ಯಾವುದೇ ಮಾಹಿತಿ ಇಲ್ಲ. ಪಾಲುದಾರರಾಗಿ ನಮಗೆ ಬರಬೇಕಾದ ಗಣನೀಯ ಪ್ರಮಾಣದ ಬಾಕಿ ಪಾವತಿಗಳ ಹೊರತಾಗಿಯೂ ನಾವು ವಿದ್ಯುತ್ ಪೂರೈಕೆಯನ್ನು ಮುಂದುವರಿಸುತ್ತೇವೆ,” ಎಂದು ಅವರು ಹೇಳಿದ್ದಾರೆ.

ಮೋದಿ ಪ್ರಧಾನಿಯಾಗುವ ಮೊದಲು, 2014 ಕ್ಕಿಂತ ಹಿಂದೆ, ಅದಾನಿ ಗ್ರೂಪ್ಸ್‌ ಇಂಡೋನೇಷ್ಯಾ, ಆಸ್ಟ್ರೇಲಿಯಾದಲ್ಲಿ ಕಲ್ಲಿದ್ದಲು ಗಣಿಗಾರಿಕೆ ನಡೆಸುತ್ತಿತ್ತು, ಈಗ ಅದು ಏಷ್ಯಾ ಸೇರಿದಂತೆ ಆಫ್ರಿಕಾದಾದ್ಯಂತ ತನ್ನ ಯೋಜನೆಗಳನ್ನು ವಿಸ್ತರಿಸಿದೆ.  ಇದರ ಹಿಂದೆ ಮೋದಿಯವರು ಕುಳಿತಿರುವ ಪ್ರಧಾನಿ ಖುರ್ಚಿ ಕೆಲಸ ಮಾಡಿರುವುದು ಕಂಡುಬರುತ್ತಿದೆ.

ಶ್ರೀಲಂಕಾದಲ್ಲಿ ಮೋದಿ-ಅದಾನಿ ಜೋಡಿ ಕಮಾಲ್!

ಶ್ರೀಲಂಕಾದಲ್ಲಿ‌ ಅಲ್ಲಿನ ವಿದ್ಯುಚ್ಛಕ್ತಿ ಮಂಡಳಿಯ ಅಧಿಕಾರಿಯೊಬ್ಬರು ಸಂಸದೀಯ ಸಮಿತಿಯ ಮುಂದೆ ಹೇಳಿಕೆಯೊಂದನ್ನು ನೀಡಿದ್ದರು. 2021 ರ ನವೆಂಬರ್‌ನಲ್ಲಿ ಆಗಿನ ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಷೆ ತನ್ನ ದೇಶದ  ಪವನ ಶಕ್ತಿ ಯೋಜನೆಯನ್ನು ಅದಾನಿ ಗ್ರೂಪ್ಸ್‌ಗೆ ಹಸ್ತಾಂತರಿಸುವಂತೆ ಮೋದಿ ತನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಹೇಳಿರುವ ಬಗ್ಗೆ ಆ ಅಧಿಕಾರಿ ಹೇಳಿದ್ದಾರೆ. 

ಗ್ಲಾಸ್ಗೋದಲ್ಲಿ ನಡೆದ ಹವಾಮಾನ ಬದಲಾವಣೆ ಸಮಾವೇಶದ ಜೊತೆ ಜೊತೆಗೆ ರಾಜಪಕ್ಸೆಯವರು ಮೋದಿಯವರನ್ನು ಭೇಟಿಯಾದ ಕೆಲ ದಿನಗಳ ನಂತರ ಇದು ನಡೆದಿದೆ. ಇದು ಸುದ್ದಿಯಾಗುತ್ತಿದ್ದಂತೆ ಶ್ರೀಲಂಕಾದಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ಈ ಅಧಿಕಾರಿ ತಮ್ಮ ಹೇಳಿಕೆಗಳನ್ನು ಹಿಂತೆಗೆದುಕೊಂಡು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಇದಾಗುವ ಮೊದಲೇ, 2020 ರ ಫೆಬ್ರವರಿ ತಿಂಗಳಲ್ಲಿ, ಆಗಿನ ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ ದೆಹಲಿಗೆ ಬಂದು ಮೋದಿಯವರನ್ನು ಭೇಟಿ ಮಾಡಿ, ” ಪ್ರಮುಖ ಆರ್ಥಿಕ ವಿಚಾರಗಳ” ಬಗ್ಗೆ ಚರ್ಚಿಸಿದ್ದರು. ಇದಾಗಿ ತಿಂಗಳ ನಂತರ, ಭಾರತ, ಶ್ರೀಲಂಕಾ ಮತ್ತು ಜಪಾನ್ ನಡುವಿನ ಒಪ್ಪಂದದ ಭಾಗವಾಗಿ ಕೊಲಂಬೊ ಬಂದರಿನಲ್ಲಿ ಪೂರ್ವ ಕಂಟೈನರ್ ಟರ್ಮಿನಲ್ ಅನ್ನು ನಿರ್ವಹಿಸುವ ಯೋಜನೆಯನ್ನು ಅದಾನಿ ಗ್ರೂಪ್ಸ್‌ಗೆ ನೀಡಿರುವುದಾಗಿ ವರದಿಯಾಗಿದೆ. ಅನೇಕ ಸಂಘಟನೆಗಳ ಮತ್ತು ಬೌದ್ಧರ ಪ್ರತಿಭಟನೆಯ ನಂತರ, ಶ್ರೀಲಂಕಾ ಈ ಒಪ್ಪಂದವನ್ನು ತಿರಸ್ಕರಿಸಿತು, ಆದರೆ ಅದಾನಿ ಗ್ರೂಪ್ ಬಂದರಿನಲ್ಲಿ ಮತ್ತೊಂದು ಟರ್ಮಿನಲ್ ಅನ್ನು ನಿರ್ವಹಿಸುವ ಹಕ್ಕನ್ನು ಪಡೆದುಕೊಂಡಿತು.

ನೇಪಾಳಕ್ಕೂ ಹೆಜ್ಜೆ ಇಡಲಿದ್ಯಾ ಆದಾನಿ ಗೂಪ್ಸ್‌?

2024 ರಲ್ಲಿ, ನೇಪಾಳದಲ್ಲಿರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ತನ್ನದಾಗಿಸಿಕೊಳ್ಳಲು ಅದಾನಿ ಗ್ರೂಪ್ ನೇಪಾಳದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದೆ. ಚೀನಾದಿಂದ ಸಾಲ ಪಡೆದು ನಿರ್ಮಿಸಲಾಗಿರುವ ಅಲ್ಲಿನ ಪೋಖರಾ ಮತ್ತು ಭೈರಹವಾದ ಎರಡು ಹೊಸ ವಿಮಾನ ನಿಲ್ದಾಣಗಳು ಜೆಟ್ ವಿಮಾನಗಳಿಗಾಗಿ ಎತ್ತರದ ವಾಯುಮಾರ್ಗಗಳನ್ನು ತೆರೆಯದ ಕಾರಣ ಭಾರತಕ್ಕೆ ಸಿಕ್ಕಿರಲಿಲ್ಲ. ನೇಪಾಳದ ಪ್ರಧಾನಿ ಮೋದಿಯವರೊಂದಿಗೆ 2023 ರ ಜೂನ್‌ನಲ್ಲಿ ನಡೆದ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದರು. ಇದಾದ ನಂತರ ಅದಾನಿ ಗ್ರೂಪ್‌ನ ಅಧಿಕಾರಿಗಳು ನೇಪಾಳದ ನಾಗರಿಕ ವಿಮಾನಯಾನ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲು ಕಠ್ಮಂಡುಗೆ ಭೇಟಿ ನೀಡಿದರು ಎಂದು ದೇಶದ ಹಣಕಾಸು ಸಚಿವರು ತಿಳಿಸಿದ್ದಾರೆ.

ಮಲೇಷ್ಯಾ…ಸಿಂಗಾಪುರ….ವಿಯೆಟ್ನಾಂ…ತಾಂಜೇನಿಯಾ!

2017 ರ ಮಾರ್ಚ್  ತಿಂಗಳಲ್ಲಿ, ಮೋದಿಯವರು ಮಲೇಷ್ಯಾದ ಪ್ರಧಾನ ಮಂತ್ರಿ ನಜೀಬ್ ತುನ್ ರಜಾಕ್ ಅವರನ್ನು ನವದೆಹಲಿಯಲ್ಲಿ ಅತಿಥಿ ಸತ್ಕಾರ ಮಾಡಿದರು. ಇಬ್ಬರೂ ಎರಡೂ ದೇಶಗಳ ನಡುವಿನ ಆರ್ಥಿಕ ಸಂಬಂಧಗಳನ್ನು ಮತ್ತು ಭಾರತೀಯ ಉದ್ಯಮಗಳಿಂದ ಮಲೇಷ್ಯಾದಲ್ಲಿ ವ್ಯಾಪಾರ  ಹೇಗೆ ಹೆಚ್ಚಿಸುವುದು ಎಂಬುದರ ಕುರಿತು ಚರ್ಚಿಸಿದರು. ಒಂದು ತಿಂಗಳ ನಂತರ, ಕ್ಯಾರಿ ದ್ವೀಪದಲ್ಲಿ ಮೆಗಾ ಕಂಟೈನರ್ ಪೋರ್ಟ್ ಯೋಜನೆಯನ್ನು ಅಭಿವೃದ್ಧಿಪಡಿಸಲು ಅದಾನಿ ಗ್ರೂಪ್ ಮಲೇಷಿಯಾದ ಕಂಪನಿಯೊಂದಿಗೆ ಎಂಒಯುಗೆ ಸಹಿ ಹಾಕಿತು.

2018 ರ ಜೂನ್ ತಿಂಗಳಲ್ಲಿ, ಮೋದಿಯವರು ಸಿಂಗಾಪುರಕ್ಕೆ ಪ್ರವಾಸ ಹೋದರು, ಅಲ್ಲಿನ ಪ್ರಧಾನಿ ಲೀ ಸೀನ್ ಲೂಂಗ್ ಅವರನ್ನು ಭೇಟಿಯಾದರು. ಒಂದು ತಿಂಗಳಾದ ಮೇಲೆ, ಸಿಂಗಾಪುರದ ಸರ್ಕಾರಿ ಸ್ವಾಮ್ಯದ ಹೂಡಿಕೆ ಸಂಸ್ಥೆ ಟೆಮಾಸೆಕ್ ಅದಾನಿ ಪೋರ್ಟ್ಸ್‌ನಲ್ಲಿ 1,000 ಕೋಟಿ ರುಪಾಯಿಯ ಹೂಡಿಕೆ ಮಾಡಿತು.

ಮೋದಿ 2023 ರ ಅಕ್ಟೋಬರ್‌ನಲ್ಲಿ ದೆಹಲಿಯಲ್ಲಿ ತಾಂಜಾನಿಯಾದ ಅಧ್ಯಕ್ಷ್ಯೆ ಸಮಿಹಾ ಸುಲುಹು ಅವರ ಅತಿಥಿ ಸತ್ಕಾರ ಮಾಡಿದರು. ಎಂಟು ತಿಂಗಳ ನಂತರ, 2024 ರ ಮೇ ತಿಂಗಳಲ್ಲಿ, ದಾರ್ ಎಸ್ ಸಲಾಮ್ ಬಂದರಿನಲ್ಲಿ ಕಂಟೈನರ್ ಟರ್ಮಿನಲ್ ಅನ್ನು ನಿರ್ವಹಿಸಲು ಅದಾನಿ ಗ್ರೂಪ್ಸ್‌ 30 ವರ್ಷಗಳ ರಿಯಾಯಿತಿ ಒಪ್ಪಂದವನ್ನು ಪಡೆದುಕೊಂಡಿತು . ಟರ್ಮಿನಲ್ ಸೇವೆಗಳನ್ನು ಒದಗಿಸುವ ಕಂಪನಿಯಲ್ಲಿ 95% ಪಾಲನ್ನು ಸ್ವಾಧೀನಪಡಿಸಿಕೊಳ್ಳಲು ಇದು ಅಬುಧಾಬಿಯ ಎಡಿ ಪೋರ್ಟ್ಸ್ ಗುಂಪಿನೊಂದಿಗೆ ಜಂಟಿ ಉದ್ಯಮವನ್ನು ಮಾಡಿಕೊಂಡಿತು.

ಮೊನ್ನೆ ಮೊನ್ನೆ, ಅಂದರೆ 2024 ರ ಜುಲೈ-ಆಗಸ್ಟ್‌ನಲ್ಲಿ ವಿಯೆಟ್ನಾಂನ ಪ್ರಧಾನಿ ಫಾಮ್ ಮಿನ್ಹ್ ಚಿನ್ಹ್ ಅವರು ದೆಹಲಿಗೆ ಬಂದರು. ಅವರು ಮೋದಿಯನ್ನು ಭೇಟಿಯಾದ ಅದೇ ದಿನ, ಅವರು ಗೌತಮ್ ಅದಾನಿಯನ್ನೂ ಭೇಟಿ ಮಾಡಿದರು, ಆಗ ವಿಯೆಟ್ನಾಂನಲ್ಲಿ ಎರಡು ವಿಮಾನ ನಿಲ್ದಾಣಗಳಲ್ಲಿ ಹೂಡಿಕೆ ಮಾಡಲು ಅದಾನಿ ಗ್ರೂಪನ್ನು ಪರಿಗಣಿಸುತ್ತಿದ್ದೇವೆ ಎಂದು ಘೋಷಿಸಿದರು. ಬಂದರು ನಿರ್ಮಿಸುವ ಅದರ ಯೋಜನೆಗಳ ಭಾಗವಾಗಿ  ಈ ಒಪ್ಪಂದಕ್ಕೆ ಅನುಮೋದನೆಯನ್ನು ನೀಡಿದೆ.                                                            

2017 ರ ಜುಲೈನಲ್ಲಿ ಮೋದಿ ಇಸ್ರೇಲ್‌ಗೆ ಭೇಟಿ ನೀಡಿದರು. ಇಸ್ರೇಲ್‌ಗೆ ಬೇಟಿ ನೀಡಿದ ಮೊದಲ ಪ್ರಧಾನಿಯಾದರು. ಇವರ ಮೊದಲ ಬೇಟಿಯ ನಂತರ ಅದಾನಿ ಗ್ರೂಪ್ ಇಸ್ರೇಲ್‌ನೊಂದಿಗೆ ಮಹತ್ವದ ವ್ಯಾಪಾರಗಳನ್ನು ಕುದುರಿಸಿಕೊಂಡಿದೆ. 2018 ರ  ಜನವರಿಯಲ್ಲಿ ಇಸ್ರೇಲ್‌ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ದೆಹಲಿಗೆ ಬಂದರು. ಅದೇ ವರ್ಷ ಡಿಸೆಂಬರ್‌ನಲ್ಲಿ, ಅದಾನಿ ಗ್ರೂಪ್ ಜಂಟಿಯಾಗಿ ಇಸ್ರೇಲಿ ಸಂಸ್ಥೆ ಎಲ್ಬಿಟ್ ಸಿಸ್ಟಮ್ಸ್ ಜೊತೆಗೆ ತೆಲಂಗಾಣದಲ್ಲಿ ವೈಮಾನಿಕ ಮಿಲಿಟರಿ ಡ್ರೋನ್‌ಗಳನ್ನು ತಯಾರಿಸುವ ಸೌಲಭ್ಯ ವ್ಯವಸ್ಥೆಯನ್ನು ಉದ್ಘಾಟಿಸಿತು. 2022 ರಲ್ಲಿ, ಅದಾನಿ ಗ್ರೂಪ್ ಇಸ್ರೇಲ್‌ನ ಹೈಫಾ ಬಂದರನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಯಿತು.

Created with Datawrapper – Souce: Scroll.in

ವಿದೇಶಾಂಗ ನೀತಿ ಇರುವುದೇ ಅದಾನಿಗಾಗಿ!

ಗೌತಮ್‌ ಅದಾನಿ ಮತ್ತು ಮೋದಿಯವರು ಖಾಸಾ ದೋಸ್ತಿಗಳು. ಒಬ್ಬ ಬಿಲಿಯನೇರ್‌ ಉದ್ಯಮಿ ಪ್ರಧಾನಿಯೊಬ್ಬರ ಸೀಟಿನ ಮೇಲೆ ಅಗೋಚರವಾಗಿ ಕುಳಿತಂತೆ ಕಾಣುತ್ತದೆ. ಇಬ್ಬರೂ ಗುಜರಾತಿಗಳು. 2014 ರಲ್ಲಿ ಮೋದಿ ಪ್ರಧಾನಿಯಾದ ಮೇಲೆ ಅದಾನಿ ಗ್ರೂಪ್ ತನ್ನ ವ್ಯವಹಾರಗಳನ್ನು ಆಕ್ರಮಣಕಾರಿ ರೀತಿಯಲ್ಲಿ ವಿಸ್ತರಿಸಿಕೊಂಡಿದೆ. ಮಂಗಳೂರು ಸೇರಿದಂತೆ ಭಾರತದ ವಿಮಾನ ನಿಲ್ದಾಣಗಳು, ಬಂದರುಗಳು, ಕಲ್ಲಿದ್ದಲು ಗಣಿಗಳು, ವಿದ್ಯುತ್‌ ಉತ್ಪಾದನಾ ಕೇಂದ್ರಗಳು ಮತ್ತು ಗ್ಯಾಸ್ ಸ್ಟೇಷನ್‌ಗಳನ್ನು ತನ್ನದಾಗಿಸಿಕೊಂಡು ದೇಶ ಯಾಕೆ, ಪ್ರಪಂಚದಲ್ಲೇ ಅತಿದೊಡ್ಡ ಖಾಸಗಿ ಮಾಲೀಕನಾಗುತ್ತಿದ್ದಾರೆ. 

ಭಾರತದ ವಿದೇಶಾಂಗ ನೀತಿಯನ್ನು ಬಳಸಿಕೊಂಡು ಜಾಗತಿಕವಾಗಿ ಬೆಳೆಯುತ್ತಿರುವ ಕ್ರೋನಿ ಕ್ಯಾಪಿಟಲಿಸಂನ ವಿನಾಶಕಾರಿ ಸ್ವರೂಪವನ್ನು ನೋಡಿ, ದೇಶದ ಬುದ್ದಿಜೀವಿಗಳು, ಆರ್ಥಿಕ ಚಿಂತಕರು, ಕಾಂಗ್ರೆಸ್ ಸೇರಿದಂತೆ ಅನೇಕ ಪಕ್ಷಗಳು ವಿರೋಧಿಸಿದ್ದಾರೆ. 2023 ರ ಫೆಬ್ರವರಿ ತಿಂಗಳಲ್ಲಿ ಸಂಸತ್ತಿನಲ್ಲಿ ಮಾತನಾಡುತ್ತಾ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ಇದು ಭಾರತದ ವಿದೇಶಾಂಗ ನೀತಿಯಲ್ಲ. ಇದು ಅದಾನಿ ಜಿಯವರ ವಿದೇಶಾಂಗ ನೀತಿ,” ಎಂದು ಟೀಕಿಸಿದ್ದರು.

ಕಳೆದ ವರ್ಷ ಅಮೆರಿಕದ ಶಾರ್ಟ್-ಸೆಲ್ಲರ್ ಹಿಂಡೆನ್‌ಬರ್ಗ್ ರಿಸರ್ಚ್ ಅದಾನಿ ಗ್ರೂಪ್ಸ್‌ ಮಾಡಿರುವ ಕಾರ್ಪೊರೇಟ್ ವಂಚನೆ ಮತ್ತು ಮನಿ ಲಾಂಡರಿಂಗ್ ಆರೋಪಗಳು ಜಾಗತಿಕ ಚರ್ಚೆಯಾದ ಮೇಲೆ ಅದಾನಿ-ಮೋದಿ ಸಂಬಂಧದ ಬಗ್ಗೆ ಅನೇಕ ಪ್ರಶ್ನೆಗಳು ಹುಟ್ಟಿಕೊಳ್ಳಲು ಆರಂಭವಾಗಿವೆ. 

ಇತ್ತೀಚೆಗೆ ಸ್ವಿಸ್‌ನ ಅಧಿಕಾರಿಗಳು ಅದಾನಿ ಗ್ರೂಪ್ ಪರವಾಗಿ ಹಣವನ್ನು ಲಾಂಡರಿಂಗ್ ಮಾಡಿದ್ದಾನೆ ಎಂದು ಶಂಕೆ ವ್ಯಕ್ತಪಡಿಸಿ ತೈವಾನ್ ಮೂಲದ ವ್ಯಕ್ತಿಯೊಬ್ಬನ 311 ಮಿಲಿಯನ್ ಡಾಲರ್‌ ಹಣ ಹೊಂದಿದ್ದ ಖಾತೆಯನ್ನು ಅಮಾನತು ಮಾಡಿದ್ದರು. ಆದರೆ ಅದಾನಿ ಗ್ರೂಪ್ಸ್‌ ಎಂದಿನಂತೆ ಈ ಆರೋಪವನ್ನು ನಿರಾಕರಿಸಿದೆ. 

You cannot copy content of this page

Exit mobile version