ಹಾಸನ: ಬೇಲೂರು ತಾಲ್ಲೂಕಿನ ಬಿಕ್ಕೋಡು ಎಸ್ಟೇಟ್‌ನಲ್ಲಿ ಇಂದು ಬೆಳಗ್ಗೆ ನಡೆದ ದುರಂತದಲ್ಲಿ, ಕೆಲಸಕ್ಕೆ ತೆರಳುತ್ತಿದ್ದ ಇಬ್ಬರು ಮಹಿಳೆಯರ ಮೇಲೆ ಕಾಡಾನೆ ದಾಳಿ ನಡೆಸಿದ್ದು, ಗಂಭೀರ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗೀತಾ (40) ಮತ್ತು ಹೇಮ (38) ಎಂಬ ಇಬ್ಬರು ಮಹಿಳೆಯರು ಬೆಳಗ್ಗೆ ಕಾಫಿ ಎಸ್ಟೇಟ್‌ಗೆ ಹೋಗುತ್ತಿದ್ದ ಸಂದರ್ಭದಲ್ಲಿ ಕಾಡಾನೆ ದಾಳಿ ಮಾಡಿದೆ. ಆನೆಯು ಸೊಂಡಿಲಿನಿಂದ ಎತ್ತಿ ಬಿಸಾಡಿ, ಮಹಿಳೆಯರನ್ನು ತುಳಿದು ಗಾಯಗೊಳಿಸಿದೆ. ಗೀತಾ ಅವರ ಹೊಟ್ಟೆ ಮತ್ತು ತಲೆಗೆ ತೀವ್ರ ಗಾಯವಾಗಿದ್ದು, ಹೇಮ ಅವರ ಮುಖ ಮತ್ತು ಬಲ ಕೈಗೆ ಗಂಭೀರ ಪೆಟ್ಟಾಗಿದೆ. ಗಾಯಗೊಂಡ ಮಹಿಳೆಯರನ್ನು ತಕ್ಷಣವೇ ಬೇಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಘಟನೆಯ ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಈ ಘಟನೆ ಬಳಿಕ, ಬಿಕ್ಕೋಡು ಮತ್ತು ಸುತ್ತಮುತ್ತಲಿನ ರೈತರು ಹಾಗೂ ಕಾಫಿ ಬೆಳೆಗಾರರು ಕಾಡಾನೆ ಹಾವಳಿಯಿಂದ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆಯು ತಕ್ಷಣವೇ ಕ್ರಮ ಕೈಗೊಂಡು, ಕಾಡಾನೆ ಉಂಟುಮಾಡಿದ ಹಾನಿಯನ್ನು ತಡೆಯುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.