Friday, August 8, 2025

ಸತ್ಯ | ನ್ಯಾಯ |ಧರ್ಮ

ಮುರ್ಕಣ್ ಗುಡ್ಡದಲ್ಲಿ ನಡಲೆಸಿರುವ ಸಾವಿರಾರು ಕುಟುಂಬಗಳಿಗೆ ಅರಣ್ಯ ಇಲಾಖೆ ನೋಟೀಸ್

ಸಕಲೇಶಪುರ : ತಾಲ್ಲೂಕಿನ, ಮುರ್ಕಣ್ ಗುಡ್ಡ ವ್ಯಾಪ್ತಿಯಲ್ಲಿ ನೆಲೆಸಿರುವ ಎಂಟು ಗ್ರಾಮಗಳ ಸಾವಿರಾರು ಕುಟುಂಬಗಳಿಗೆ ಅರಣ್ಯ ಇಲಾಖೆ ನೋಟೀಸ್ ನೀಡಿದ್ದು, ಇನ್ನೂ ಹಲವು ಕುಟುಂಬಗಳಿಗೆ ನೋಟೀಸ್ ನೀಡಲು ಮುಂದಾಗಿದೆ. ನೋಟೀಸ್ ಹೆಸರಿನಲ್ಲಿ ಅರಣ್ಯ ಇಲಾಖೆ ನಮಗೆ ಕಿರುಕುಳ ನೀಡುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೂರಾರು ವರ್ಷಗಳಿಂದ ಎಂಟು ಹಳ್ಳಿಗಳಲ್ಲಿ ಸಾವಿರಾರು ಕುಟುಂಬಗಳು ವಾಸಿಸುತ್ತಿದ್ದು ಇದೀಗ ಏಕಾಏಕಿ ನೋಟೀಸ್ ನೀಡಿ ಎಲ್ಲರನ್ನು ಒಕ್ಕಲೆಬ್ಬಿಸುವ ಕೆಲಸಕ್ಕೆ ಮುಂದಾಗಿದೆ ಎಂದು ಆರೋಪಿಸಿದ್ದಾರೆ. ಮುರ್ಕಣ್ ಗುಡ್ಡ ಒಟ್ಟು 7900 ಎಕರೆ ಪ್ರದೇಶ ಹೊಂದಿದ್ದು ಇದರ ವ್ಯಾಪ್ತಿಯಲ್ಲಿ ಅಚ್ಚನಹಳ್ಳಿ, ಕಾಡುಮನೆ, ಕಾಡುಮನೆ ಎಸ್ಟೇಟ್, ಮಂಜನಹಳ್ಳಿ, ಕ್ಯಾಮನಹಳ್ಳಿ, ಜಂಬರಡಿ, ಅಗನಿ, ನಡುಹಳ್ಳಿ ಸೇರಿ ಎಂಟು ಗ್ರಾಮಗಳಿವೆ. ಎಂಟು ಗ್ರಾಮಗಳಲ್ಲಿ ಅಂದಾಜು ಎರಡುವರೆ ಸಾವಿರಕ್ಕೂ ಹೆಚ್ಚು ಕುಟುಂಬಗಳು ಮೂರು ಸಾವಿರ ಎಕರೆ ಪ್ರದೇಶದಲ್ಲಿ ಮನೆ ನಿರ್ಮಾಣ‌ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. 1920 ರಲ್ಲಿ ಮಹಾರಾಜರ ಕಾಲದಲ್ಲಿ ಮೀಸಲು ಅರಣ್ಯ ಘೋಷಣೆಗೆ ನೋಟಿಫಿಕೇಷನ್ ಆಗಿತ್ತು. ಆದರೆ ಈ ಪ್ರದೇಶದಲ್ಲಿ ಜನವಸತಿ ಇದೆ ಎನ್ನುವ ಕಾರಣಕ್ಕೆ 1924 ರಲ್ಲಿ ಸದರಿ ಆದೇಶ ರದ್ದಾಗಿತ್ತು. ಆದರೀಗ ನೂರಾರು ವರ್ಷಗಳ ಹಿಂದಿನ ಆದೇಶ ಮುಂದಿಟ್ಟು, ಇಲ್ಲಿನ ನಿವಾಸಿಗಳನ್ನು ಒಕ್ಕಲೆಬ್ಬಿಸಲು ಅರಣ್ಯ ಇಲಾಖೆ ಯತ್ನ ಮಾಡುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಎರಡು-ಮೂರು ಶತಮಾನಗಳಿಂದ ಈ ಭಾಗದಲ್ಲಿ ಸಾವಿರಾರು ಕುಟುಂಬಗಳು ನೆಲೆಸಿವೆ. ಮೂರು ಸಾವಿರ ಎಕರೆ ಪ್ರದೇಶದಲ್ಲಿ ಅಂದಾಜು ಎರಡು ಸಾವಿರ ಕುಟುಂಬಗಳು ಹಿಡುವಳಿ ಹೊಂದಿದ್ದಾರೆ. ಈಗ ಏಕಾಏಕಿ ಹಿಡುವಳಿ ಸಾಬೀತು ಮಾಡಲು ನೋಟಿಸ್ ನೀಡಲಾಗಿದೆ. ಅರಣ್ಯ ಇಲಾಖೆ ನಡೆಯಿಂದ ಸಾವಿರಾರು ಕುಟುಂಬಗಳು ಆತಂಕಕ್ಕೆ ಸಿಲುಕಿವೆ. ಮರಗಸಿ ಮಾಡಲು ಬಿಡುತ್ತಿಲ್ಲ. ಕುಡಿಯುವ ನೀರು, ವಿದ್ಯುತ್ ಸಂಪರ್ಕ ನೀಡದಂತೆಯೂ ಈ ಹಿಂದೆ ಗ್ರಾ.ಪಂ.ಗೆ ನೋಟೀಸ್ ನೀಡಿದ್ದರು. ಇದೀಗ ಎಂಟು ಹಳ್ಳಿಗಳಲ್ಲಿ ವಾಸಿಸುತ್ತಿರುವ ಕುಟುಂಬಗಳ ಮೇಲೆ ಅರಣ್ಯ ಇಲಾಖೆ ದೌರ್ಜನ್ಯ ಎಸಗುತ್ತಿದ್ದು, ಇದನ್ನು ತಡೆಗಟ್ಟುವಂತೆ ಸ್ಥಳೀಯ ಶಾಸಕ ಸಿಮೆಂಟ್‌ಮಂಜು, ತಹಶೀಲ್ದಾರ್ ಸುಪ್ರಿತಾ, ಉಪವಿಭಾಗಾಧಿಕಾರಿ ಶೃತಿ ಅವರಿಗೆ ಮನವಿ ಸಲ್ಲಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page