ನಾಗ್ಪುರ: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಪರ ಬೇಹುಗಾರಿಕೆ ನಡೆಸಿದ್ದಕ್ಕಾಗಿ ಅಧಿಕೃತ ರಹಸ್ಯ ಕಾಯ್ದೆಯಡಿ ಬ್ರಹ್ಮೋಸ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್‌ನ ಮಾಜಿ ಎಂಜಿನಿಯರ್ ನಿಶಾಂತ್ ಅಗರ್ವಾಲ್ ಎನ್ನುವ ವ್ಯಕ್ತಿಗೆ ನಾಗ್ಪುರ ಜಿಲ್ಲಾ ನ್ಯಾಯಾಲಯ ಸೋಮವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
ಅಗರ್ವಾಲ್ ಒಟ್ಟು 14 ವರ್ಷಗಳ ಕಠಿಣ ಜೈಲು ಶಿಕ್ಷೆ ಅನುಭವಿಸುವುದರ ಜೊತೆಗೆ ಮತ್ತು 3,000 ರೂ. ದಂಡವನ್ನೂ ಪಾವತಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಎಂ.ವಿ.ದೇಶಪಾಂಡೆ ಅವರು ಐಟಿ ಕಾಯ್ದೆಯ ಸೆಕ್ಷನ್ 66 (ಎಫ್) ಮತ್ತು ಅಧಿಕೃತ ರಹಸ್ಯ ಕಾಯ್ದೆಯ (ಒಎಸ್‌ಎ) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಕ್ಕಾಗಿ ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ ಸೆಕ್ಷನ್ 235ರ ಅಡಿಯಲ್ಲಿ ಅಗರ್ವಾಲನನ್ನು ದೋಷಿ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ನಾಗ್ಪುರದಲ್ಲಿರುವ ಕಂಪನಿಯ ಕ್ಷಿಪಣಿ ಕೇಂದ್ರದ ತಾಂತ್ರಿಕ ಸಂಶೋಧನಾ ವಿಭಾಗದಲ್ಲಿ ಉದ್ಯೋಗಿಯಾಗಿದ್ದ ಅಗರ್ವಾಲನನ್ನು 2018ರಲ್ಲಿ ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದ ಮಿಲಿಟರಿ ಗುಪ್ತಚರ ಮತ್ತು ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಿತ್ತು.
ನಾಲ್ಕು ವರ್ಷಗಳ ಕಾಲ ಬ್ರಹ್ಮೋಸ್ ಸೌಲಭ್ಯದಲ್ಲಿ ಕೆಲಸ ಮಾಡುತ್ತಿದ್ದ ಆತ ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಗೆ ಸೂಕ್ಷ್ಮ ತಾಂತ್ರಿಕ ಮಾಹಿತಿಯನ್ನು ಸೋರಿಕೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಬ್ರಹ್ಮೋಸ್ ಬಾಹ್ಯಾಕಾಶ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಮತ್ತು ರಷ್ಯಾದ ಮಿಲಿಟರಿ ಇಂಡಸ್ಟ್ರಿಯಲ್ ಕನ್ಸೋರ್ಟಿಯಂ (NPO Mashinostroyenia) ನಡುವಿನ ಜಂಟಿ ಉದ್ಯಮವಾಗಿದೆ.
ಅಗರ್ವಾಲ್‌ಗೆ ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠವು ಕಳೆದ ಏಪ್ರಿಲ್‌ನಲ್ಲಿ ಜಾಮೀನು ನೀಡಿತ್ತು.