ನನಗೇ ಸಮಸ್ಯೆ ಎದುರಾಗುತ್ತಿರುವಾಗ ಇನ್ನು ಸಾಮಾನ್ಯ ಜನರ ಕತೆಯೇನು?: ಎಸ್‌ಐಆರ್ ಗೋಜಿನಲ್ಲಿ ಸಿಲುಕಿದ ಮಾಜಿ ರಾಜತಾಂತ್ರಿಕ ನವದೀಪ್ ಸೂರಿ

ಮೂರು ದಶಕಗಳಿಗೂ ಹೆಚ್ಚು ಕಾಲ ಹಲವು ದೇಶಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ಮಾಜಿ ಭಾರತೀಯ ರಾಜತಾಂತ್ರಿಕ ನವದೀಪ್ ಸೂರಿ, ಈಗ ತಮ್ಮದೇ ದೇಶದಲ್ಲಿ ಎಸ್‌ಐಆರ್ (SIR) ಗೆ ಸಂಬಂಧಿಸಿದ ಸಮಸ್ಯೆಯನ್ನು ಎದುರಿಸುವಂತಾಗಿದೆ.

ಪಂಜಾಬ್‌ನಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ದಾಖಲೆಗಳನ್ನು ಸಲ್ಲಿಸಿದ ನಂತರ, 2003ರ ತಮ್ಮ ವಿವರಗಳು ಹೊಂದಿಕೆಯಾಗುತ್ತಿಲ್ಲ ಎಂದು ತಮಗೆ ತಿಳಿಸಲಾಗಿದೆ ಎಂದು ಅವರು ‘ಎಕ್ಸ್’ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನವದೀಪ್ ಸೂರಿ ಅವರು ಹಲವು ಪೋಸ್ಟ್‌ಗಳ ಮೂಲಕ ತಮ್ಮ ಸಮಸ್ಯೆಯನ್ನು ವಿವರಿಸಿದ್ದಾರೆ.

‘2003ರ ಎಸ್‌ಐಆರ್ ದತ್ತಾಂಶದೊಂದಿಗೆ ಮಾಹಿತಿ ಹೊಂದಿಕೆಯಾಗುತ್ತಿಲ್ಲ’

“ಪಂಜಾಬ್‌ನಲ್ಲಿ ಎಸ್‌ಐಆರ್ ಕುರಿತ ನನ್ನ ಅನುಭವವನ್ನು ಹಂಚಿಕೊಳ್ಳುತ್ತಿದ್ದೇನೆ. ನಾನು ಬಿಎಲ್‌ಒ (BLO) ಬಳಿ ಹೋಗಿ, ಮತದಾರರ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್ ಸಲ್ಲಿಸಿದೆ ಹಾಗೂ ಎಲ್ಲವೂ ಸರಿಯಾಗಿದೆ ಎಂದು ನನಗೆ ಭರವಸೆ ನೀಡಲಾಗಿತ್ತು. ಇಂದು ಸ್ವಯಂಸೇವಕರೊಬ್ಬರಿಂದ ಸಂದೇಶ ಬಂದಿದ್ದು, ಕೆಲವು ಮಾಹಿತಿಗಳು 2003ರ ಎಸ್‌ಐಆರ್ ದತ್ತಾಂಶದೊಂದಿಗೆ ಹೊಂದಿಕೆಯಾಗುತ್ತಿಲ್ಲ ಎಂದು ತಿಳಿಸಿದ್ದಾರೆ!” ಎಂದು ಅವರು ಹೇಳಿದ್ದಾರೆ.

3 ದೇಶಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ಅನುಭವ

ನವದೀಪ್ ಸೂರಿ ಅವರು 1983 ರಿಂದ 2019 ರವರೆಗೆ ಈಜಿಪ್ಟ್, ಯುಎಇ ಮತ್ತು ಆಸ್ಟ್ರೇಲಿಯಾದಲ್ಲಿ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ತಮ್ಮ ದಾಖಲೆಗಳು ಹೊಂದಿಕೆಯಾಗುತ್ತಿಲ್ಲ ಎಂದು ತಿಳಿಸಿದ ಅಧಿಕಾರಿಗಳು, ತಾವು ಭಾರತದ ಪ್ರಜೆ ಎಂಬುದನ್ನು ಸಾಬೀತುಪಡಿಸುವ ದಾಖಲೆಗಳನ್ನು ಮತ್ತೆ ತರುವಂತೆ ತಮಗೆ ಸೂಚಿಸಿದ್ದಾರೆ ಎಂದು ಮಾಜಿ ರಾಜತಾಂತ್ರಿಕ ಸೂರಿ ತಿಳಿಸಿದ್ದಾರೆ. ಈಗಾಗಲೇ ಮತದಾರರ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್ ಸಲ್ಲಿಸಿದ್ದರೂ ಈ ರೀತಿ ಕೇಳಲಾಗಿದೆ ಎಂದು ಅವರು ಹೇಳಿದ್ದಾರೆ.

‘ಎಕ್ಸ್’ನಲ್ಲಿ ತಮ್ಮ ಅಳಲು ತೋಡಿಕೊಂಡ ನವದೀಪ್, 2003ರಲ್ಲಿ ತಾವು ಭಾರತದಲ್ಲಿ ಇರಲಿಲ್ಲವಾದ್ದರಿಂದ, ಪುರಾವೆಯಾಗಿ ಪಾಸ್‌ಪೋರ್ಟ್ ಸಲ್ಲಿಸುವಂತೆ ತಮಗೆ ಕೇಳಲಾಯಿತು ಎಂದು ತಿಳಿಸಿದ್ದಾರೆ.

‘ಸಾಮಾನ್ಯ ಜನರ ಕತೆಯೇನು?’

ಮೂರು ದೇಶಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ಹೊರತಾಗಿಯೂ ತಮಗೆ ಇಂತಹ ಸಮಸ್ಯೆ ಎದುರಾಗಿರುವುದನ್ನು ಪ್ರಸ್ತಾಪಿಸಿದ ಅವರು, “ಮೂರು ದೇಶಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ನಂತರವೂ ನನ್ನ ಪೌರತ್ವವನ್ನು ಸಾಬೀತುಪಡಿಸಲು ನನಗೆ ತೊಂದರೆಯಾಗುತ್ತಿದ್ದರೆ, ಇನ್ನು ಸಾಮಾನ್ಯ ನಾಗರಿಕರ ಗತಿಯೇನು?” ಎಂದು ಪ್ರಶ್ನಿಸಿದ್ದಾರೆ.

ಈ ವಿಚಾರ ಮುನ್ನೆಲೆಗೆ ಬಂದ ನಂತರ ಚುನಾವಣಾ ಆಯೋಗ, ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರದ ವತಿಯಿಂದ ಈವರೆಗೆ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.

ಎಎಪಿ ನಾಯಕರಿಂದಲೂ ಪ್ರಶ್ನೆ

ಇದಕ್ಕೂ ಮುನ್ನ, ಆಮ್ ಆದ್ಮಿ ಪಕ್ಷದ (ಎಎಪಿ) ಮುಖಂಡ ಸೋಮನಾಥ್ ಭಾರತಿ ಅವರು, 1997 ರಲ್ಲಿ ಐಐಟಿ ದೆಹಲಿಯಿಂದ ಪದವಿ ಪಡೆದು ನಂತರ ದೆಹಲಿಯಲ್ಲಿ ಕಾನೂನು ವ್ಯಾಸಂಗ ಮಾಡಿದ್ದರೂ, 2002 ರ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಕಂಡುಬಂದಿಲ್ಲ ಎಂದು ಹೇಳಿದ್ದರು. ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯ ವೇಳೆ 20 ರಿಂದ 30 ಲಕ್ಷ ಹೆಸರುಗಳನ್ನು ಕೈಬಿಡಬಹುದು ಎಂಬ ವರದಿಗಳ ಬಗ್ಗೆಯೂ ಸೋಮನಾಥ್ ಭಾರತಿ ಕಳವಳ ವ್ಯಕ್ತಪಡಿಸಿದ್ದರು.

Related Articles

ಇತ್ತೀಚಿನ ಸುದ್ದಿಗಳು