ನಾಗ್ಪುರ: ವಿಧಾನಸಭೆ ಚುನಾವಣೆ ತರಾತುರಿಯಲ್ಲಿರುವ ಮಹಾರಾಷ್ಟ್ರದಲ್ಲಿ ಅನಿರೀಕ್ಷಿತ ಬೆಳವಣಿಗೆಯೊಂದು ನಡೆದಿದೆ. ನಾಗ್ಪುರ ಜಿಲ್ಲೆಯಲ್ಲಿ ಎನ್‌ಸಿಪಿ (ಎಸ್‌ಪಿ) ನಾಯಕ ಹಾಗೂ ಮಾಜಿ ಸಚಿವ ಅನಿಲ್ ದೇಶಮುಖ್ ಅವರ ವಾಹನದ ಮೇಲೆ ಅಪರಿಚಿತ ವ್ಯಕ್ತಿಗಳು ಕಲ್ಲು ತೂರಾಟ ನಡೆಸಿದ್ದಾರೆ.
ಘಟನೆಯಲ್ಲಿ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಅನಿಲ್ ದೇಶಮುಖ್ ನಾರ್ಖೇಡ್‌ನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ನಂತರ ಕಟೋಲ್ ಎನ್ನುವಲ್ಲಿಗೆ ತೆರಳುತ್ತಿದ್ದರು.
ಮಾರ್ಗಮಧ್ಯೆ ಜಲಖೇಡ ರಸ್ತೆಯ ಬೆಲ್‌ಫಾಟ ಬಳಿ ಅಪರಿಚಿತರು ಅವರ ಕಾರಿಗೆ ಕಲ್ಲು ತೂರಾಟ ನಡೆಸಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಕೂಡಲೇ ಕಟೋಲ್ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಯ ಕುರಿತು ತನಿಖೆಯನ್ನು ಪ್ರಾರಂಭಿಸಲಾಗಿದೆ ಮತ್ತು ದಾಳಿಯ ದುಷ್ಕರ್ಮಿಗಳನ್ನು ಗುರುತಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ನಾಗ್ಪುರ ಗ್ರಾಮಾಂತರ ಎಸ್ಪಿ ಹರ್ಷ್ ಪೊದ್ದಾರ್ ಹೇಳಿದ್ದಾರೆ.
ಅನಿಲ್ ದೇಶಮುಖ್ ಅವರು ಈ ಹಿಂದೆ ಮಹಾರಾಷ್ಟ್ರದ ಗೃಹ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದರು. ಅವರ ಪುತ್ರ ಸಲೀಲ್ ದೇಶಮುಖ್ ಪ್ರಸ್ತುತ ಕಟೋಲ್ ಕ್ಷೇತ್ರದಿಂದ ಎನ್‌ಸಿಪಿ (ಎಸ್‌ಪಿ) ಪರವಾಗಿ ಸ್ಪರ್ಧಿಸುತ್ತಿದ್ದಾರೆ.