Home ರಾಜ್ಯ ಬಳ್ಳಾರಿ ಬಿಜೆಪಿ ಸುಳ್ಳು ವಿಷಯ ಮುಂದಿಟ್ಟುಕೊಂಡು ಪಾದಯಾತ್ರೆ ಮಾಡುತ್ತಿದೆ, ದಲಿತರು ಸಚಿವರಾಗುವುದು ಅದಕ್ಕೆ ಇಷ್ಟವಿಲ್ಲ: ಮಾಜಿ ಸಚಿವ...

ಬಿಜೆಪಿ ಸುಳ್ಳು ವಿಷಯ ಮುಂದಿಟ್ಟುಕೊಂಡು ಪಾದಯಾತ್ರೆ ಮಾಡುತ್ತಿದೆ, ದಲಿತರು ಸಚಿವರಾಗುವುದು ಅದಕ್ಕೆ ಇಷ್ಟವಿಲ್ಲ: ಮಾಜಿ ಸಚಿವ ಬಿ. ನಾಗೇಂದ್ರ ಕಿಡಿ

0

ಬಳ್ಳಾರಿ: ಕರ್ನಾಟಕದಲ್ಲಿ ಬಿಜೆಪಿ ನಾಯಕರು ಕಪೋಲಕಲ್ಪಿತ ಹಾಗೂ ಸುಳ್ಳು ವಿಚಾರಗಳನ್ನು ಇಟ್ಟುಕೊಂಡು ಪಾದಯಾತ್ರೆ ನಡೆಸುತ್ತಿದ್ದಾರೆ ಎಂದು ಮಾಜಿ ಸಚಿವ ಬಿ. ನಾಗೇಂದ್ರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಯಚೂರಿನಿಂದ ಬಳ್ಳಾರಿಯವರೆಗೆ ಬಿಜೆಪಿ ಹಮ್ಮಿಕೊಂಡಿರುವ ಈ ಪಾದಯಾತ್ರೆ ರಾಜಕೀಯ ಪ್ರೇರಿತವಾಗಿದ್ದು, ಎಂದಿಗೂ ಯಶಸ್ವಿಯಾಗುವುದಿಲ್ಲ ಎಂದು ಅವರು ಭವಿಷ್ಯ ನುಡಿದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾನು ಸಚಿವನಾಗಿ ಕೇವಲ 25 ದಿನಗಳಾಗಿದ್ದಾಗ ಅಧಿವೇಶನ ಆರಂಭವಾಯಿತು. ಆ ಸಂದರ್ಭದಲ್ಲಿ ಬರಗಾಲ, ಕಾವೇರಿ ನೀರು ಹಂಚಿಕೆ, ದಲಿತರ ಹಾಗೂ ಮಹಿಳೆಯರ ಸಮಸ್ಯೆಗಳಂತಹ ಹತ್ತಾರು ಗಂಭೀರ ಜ್ವಲಂತ ಸಮಸ್ಯೆಗಳು ರಾಜ್ಯದಲ್ಲಿದ್ದವು. ಆದರೆ, ಬಿಜೆಪಿ ನಾಯಕರು ಯಾವುದೇ ನೈಜ ವಿಚಾರಗಳ ಕುರಿತು ಚರ್ಚೆ ಮಾಡಲು ಮುಂದಾಗಲಿಲ್ಲ. ಬದಲಿಗೆ ಬರೀ ನನ್ನ ರಾಜೀನಾಮೆಯನ್ನೇ ಮುಂದಿಟ್ಟುಕೊಂಡು ಸದನದ ಕಲಾಪ ನಡೆಯದಂತೆ ಗಲಾಟೆ ಮಾಡುತ್ತಾ 10 ದಿನಗಳ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿದರು” ಎಂದು ಕಿಡಿಕಾರಿದರು.

ದಲಿತರು ಅಥವಾ ಆದಿವಾಸಿಗಳು ಸಚಿವರಾಗಿ ಮುಖ್ಯವಾಹಿನಿಗೆ ಬರುವುದು ಬಿಜೆಪಿಗೆ ಇಷ್ಟವಿಲ್ಲ ಎಂದು ಆರೋಪಿಸಿದ ನಾಗೇಂದ್ರ, “ಅವರ ಮನಸ್ಸಿನಲ್ಲಿ ಮನುಸ್ಮೃತಿಯ ವಿಚಾರಧಾರೆ ತುಂಬಿದ್ದು, ದೇಶವನ್ನು ಅದೇ ರೀತಿ ಮುನ್ನಡೆಸಲು ಯತ್ನಿಸುತ್ತಿದ್ದಾರೆ. ಆದರೆ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ನಮಗೆ ನೀಡಿರುವ ಸಂವಿಧಾನವು ದಲಿತರು, ಹಿಂದುಳಿದವರು ಹಾಗೂ ಶೋಷಿತ ಸಮುದಾಯಗಳಿಗೆ ಶ್ರೀರಕ್ಷೆಯಾಗಿದೆ. ಬಿಜೆಪಿಯ ಈ ತಾರತಮ್ಯದ ಧೋರಣೆ ಹಾಗೂ ಷಡ್ಯಂತ್ರಗಳ ವಿರುದ್ಧ ಕಾಂಗ್ರೆಸ್ ಪಕ್ಷ, ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಸದನದಲ್ಲೂ, ಸಾರ್ವಜನಿಕವಾಗಿಯೂ ನಿರಂತರವಾಗಿ ಧ್ವನಿ ಎತ್ತಲಿದ್ದಾರೆ” ಎಂದು ಹೇಳಿದರು.

You cannot copy content of this page

Exit mobile version