Sunday, June 23, 2024

ಸತ್ಯ | ನ್ಯಾಯ |ಧರ್ಮ

NPS ನೌಕರನ ಡೆತ್ ನೋಟ್ ನಲ್ಲಿ ಮಾಜಿ ಸಚಿವ ಬಿ.ಸಿ.ನಾಗೇಶ್, ಷಡಕ್ಷರಿ ಹೆಸರು

“ನನ್ನ ವೃತ್ತಿಬದುಕಿಗೆ ರಾಜ್ಯದ ನೌಕರ ಸಂಘದ ಅಧ್ಯಕ್ಷರಿಂದ ವ್ಯವಸ್ಥಿತ ತೊಂದರೆಯಾಗಿ ಕಳೆದ 6 ತಿಂಗಳಿಂದ ವೇತನವಿಲ್ಲದೆ ನರಕಯಾತನೆ ಅನುಭವಿಸಿದ್ದೇನೆ…‌ ನಾನು ಈ ಸಮಸ್ಯೆಯನ್ನು ನಿಭಾಯಿಸುವಲ್ಲಿ ಮಾನಸಿಕವಾಗಿ ವಿಫಲನಾಗಿರುವ ಪ್ರಯುಕ್ತ ನಾನು ಬದುಕಿಗೆ ವಿಧಾಯ ಹೇಳಲು ಬಯಸಿದ್ದೇನೆ” ಎಂದು ವಾಟ್ಸಾಪ್ ಮೂಲಕ ಕಳಿಸಲಾದ ಮೆಸೇಜ್ ಒಂದು ಜುಲೈ 19 ರ ಇಡೀ ದಿನದ ಆತಂಕಕ್ಕೆ ಕಾರಣವಾಗಿದೆ.

ರಾಜ್ಯ NPS ನೌಕರರ ಸಂಘ, ಶಿವಮೊಗ್ಗ ತಾಲ್ಲೂಕು ಘಟಕದ ಅಧ್ಯಕ್ಷರಾಗಿದ್ದ ಪ್ರಭಾಕರ್​ ಎಸ್​ ಎನ್ನುವವರು, ತಮ್ಮ ಸರ್ಕಾರಿ ನೌಕರರ ಸಂಘದ ವಾಟ್ಸಾಪ್ ಗ್ರೂಪ್​ನಲ್ಲಿ ಎರಡು ಡೆತ್​ನೋಟ್​ ಪೋಸ್ಟ್​ ಮಾಡಿ ನಾಪತ್ತೆಯಾಗಿದ್ದಾರೆ. ಡೆತ್​ನೋಟ್​ ಸೆಂಡ್​ ಮಾಡಿದ ಬಳಿಕ ಅವರ ಮೊಬೈಲ್ ಸ್ವಿಚ್ ಆಪ್​ ಆಗಿದ್ದು, ಅವರ ಕುಟುಂಬಸ್ಥರು ಮತ್ತು ಸ್ನೇಹಿತರ ವಲಯವನ್ನು ಆತಂಕಕ್ಕೆ ದೂಡಿದಂತಾಗಿದೆ.

ಶಿವಮೊಗ್ಗದ ಮಲ್ಲಪ್ಪ ಕಾಂಪ್ಲೆಕ್ಸ್​ ಬಳಿ ಬರುವ ಸೋಮಯ್ಯ ಲೇಔಟ್​ನಲ್ಲಿರುವ ಪ್ರಭಾಕರ್​ರವರ ಮನೆಯ ಬಳಿ, ಅವರ ಸ್ನೇಹಿತರು, ಬಂಧು ಬಳಗದವರು ಸೇರಿದ್ದು, ಡೆತ್ ನೋಟ್ ನ ಅಡಿಯಲ್ಲಿ ಶಿವಮೊಗ್ಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದರ ಜೊತೆಗೇ ಕರ್ನಾಟಕ ರಾಜ್ಯ NPS ನೌಕರರ ಸಂಘದ ಕಡೆಯಿಂದ ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ದಾಖಲಿಸಿದ್ದು, ಈ ಘಟನೆಗೆ ಸಂಬಂಧಿಸಿದವರ ಮೇಲೆ FIR ದಾಖಲಿಸಿ ವಿಚಾರಣೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲು ಕೋರಲಾಗಿದೆ.

ಘಟನೆಯ ವಿವರ : KSGNPSEA ಹೆಸರಿನ ರಾಜ್ಯ NPS ನೌಕರರ ಸಂಘದ ವಾಟ್ಸಾಪ್ ಗ್ರೂಪ್ ನಲ್ಲಿ ಪ್ರಭಾಕರ್ ಅವರ ವಾಟ್ಸಾಪ್ ನಂಬರಿನಿಂದ ಒಟ್ಟು ಎರಡು ಸಂದೇಶಗಳು ಬಂದಿವೆ. ಬುಧವಾರ ಬೆಳಿಗ್ಗೆ 4.28 ಕ್ಕೆ ಮೊದಲ ಮೆಸೇಜ್​, ಎರಡನೇ ಮೆಸೇಜ್ ಬೆಳಗ್ಗೆ 8.13 ಕ್ಕೆ ಗ್ರೂಪ್​ಗೆ ರವಾನೆಯಾಗಿದೆ.

4.28 ಕ್ಕೆ ಕಳಿಸಿದ ಮೊದಲ ಮೆಸೇಜ್ ನಲ್ಲಿ “ಆತ್ಮೀಯ ರಾಜ್ಯದ ಸಮಸ್ತ NPS ನೌಕರ ಸಂಘದ ಪದಾಧಿಕಾರಿ ಮಿತ್ರರೇ ನಾನು ಕಳೆದ ಹತ್ತು ವರ್ಷಗಳಿಂದ NPS ನೌಕರ ಸಂಘವನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಾಮಾಣಿಕವಾಗಿ ಕಟ್ಟಿ ಬೆಳೆಸಿದ್ದೇನೆ. ರಾಜ್ಯ ಸಂಘದ ನಿರ್ಧೇಶನದಂತೆ ಅನೇಕ ಕಾರ್ಯಕ್ರಮಗಳನ್ನು ಶಿವಮೊಗ್ಗ ತಾಲ್ಲೂಕಿನಲ್ಲಿ ಯಶಸ್ವಿಯಾಗಿ ಸಂಘಟನೆ ಮಾಡಿದ್ದೇನೆ. ಇತ್ತೀಚೆಗೆ ಜನವರಿ 22-2023 ರಂದು ಶಿವಮೊಗ್ಗ ಜಿಲ್ಲಾ ಮಟ್ಟದ NPS ನೌಕರರ ಸಮಾವೇಶ ಮತ್ತು ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಅತ್ಯಂತ ಯಶಸ್ವಿಯಾಗಿ ಮಾಡಿದ್ದರ ಫಲವಾಗಿ ನನ್ನ ವೃತ್ತಿಬದುಕಿಗೆ ರಾಜ್ಯದ ನೌಕರ ಸಂಘದ ಅಧ್ಯಕ್ಷರಿಂದ ವ್ಯವಸ್ಥಿತ ತೊಂದರೆಯಾಗಿ ಕಳೆದ 6 ತಿಂಗಳಿಂದ ವೇತನವಿಲ್ಲದೆ ನರಕಯಾತನೆ ಅನುಭವಿಸಿದ್ದೇನೆ. ಮತ್ತು ನನ್ನ ಇಡೀ ಕುಟುಂಬ ಕಣ್ಣೀರಿನಲ್ಲಿ ಮುಳುಗಿದೆ ನನ್ನ ಸಮಸ್ಯೆಗೆ ಪರಿಹಾರ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಕಾಲ ಕಳೆದಾಯಿತು. ಆದರೂ ಯಾವುದೇ ಪರಿಹಾರ ಸಿಗದೆ ಪ್ರಯತ್ನಗಳೆಲ್ಲ ವಿಫಲವಾಗಿದ್ದು ಅತ್ಯಂತ ನೋವಿನ ಸಂಗತಿ. ಈ ಘಟನೆಗೆ ಕಾರಣರಾದವರು ಚೆನ್ನಾಗಿರಲಿ. ನಾನು ಈ ಸಮಸ್ಯೆಯನ್ನು ನಿಭಾಯಿಸುವಲ್ಲಿ ಮಾನಸಿಕವಾಗಿ ವಿಫಲನಾಗಿರುವ ಪ್ರಯುಕ್ತ ನಾನು ಬದುಕಿಗೆ ವಿಧಾಯ ಹೇಳಲು ಬಯಸಿದ್ದೇನೆ. ನನ್ನ ಕುಟುಂಬದ ಹೊಣೆಗಾರಿಕೆ ಇಡೀ NPS ನೌಕರ ಸಂಘಟನೆಯದ್ದು. ದಯವಿಟ್ಟು ನನ್ನ ಕುಟುಂಬಕ್ಕೆ ಸಹಾಯ ಸಹಕಾರ ಮಾಡಿ. ಇಂತಿ ನಿಮ್ಮ ನತದೃಷ್ಟ NPS ನೌಕರ ಪ್ರಭಾಕರ ಎಸ್.” ಎಂದು ಬರೆದ ಮೆಸೇಜ್ ರವಾನೆಯಾಗಿದೆ.

ನಂತರ 8.13 ಕ್ಕೆ ಬಂದ ಇನ್ನೊಂದು ಮೆಸೇಜ್ ನಲ್ಲಿ “ಆತ್ಮೀಯ ರಾಜ್ಯದ ಸಮಸ್ತ NPS ನೌಕರ ಸಂಘದ ಪದಾಧಿಕಾರಿ ಮಿತ್ರರೇ ನಾನು ಕಳೆದ ಹತ್ತು ವರ್ಷಗಳಿಂದ NPS ನೌಕರ ಸಂಘವನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಾಮಾಣಿಕವಾಗಿ ಕಟ್ಟಿ ಬೆಳೆಸಿದ್ದೇನೆ. ರಾಜ್ಯ ಸಂಘದ ನಿರ್ಧೇಶನದಂತೆ ಅನೇಕ ಕಾರ್ಯಕ್ರಮಗಳನ್ನು ಶಿವಮೊಗ್ಗ ತಾಲ್ಲೂಕಿನಲ್ಲಿ ಯಶಸ್ವಿಯಾಗಿ ಸಂಘಟನೆ ಮಾಡಿದ್ದೇನೆ. ಇತ್ತೀಚೆಗೆ ಜನವರಿ 22-2023 ರಂದು ಶಿವಮೊಗ್ಗ ಜಿಲ್ಲಾ ಮಟ್ಟದ NPS ನೌಕರರ ಸಮಾವೇಶ ಮತ್ತು ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಅತ್ಯಂತ ಯಶಸ್ವಿಯಾಗಿ ಮಾಡಿದ್ದರ ಫಲವಾಗಿ ನನ್ನ ವೃತ್ತಿಬದುಕಿಗೆ ರಾಜ್ಯದ ನೌಕರ ಸಂಘದ ಅಧ್ಯಕ್ಷರಾದ ಷಡಾಕ್ಷರಿ, ಅವರ ಸಹಚರರಾದ ಮೋಹನ್ ಕುಮಾರ ಆರ್,ಬಸವನಗೌಡ, ಹಾಗೂ ಹಿಂದಿನ ಶಿಕ್ಷಣ ಸಚಿವರಾ ಬಿ.ಸಿ.ನಾಗೇಶ್ ಮತ್ತು ಅವರ ಆಪ್ತ ಕಾರ್ಯದರ್ಶಿಗಳಾಗಿದ್ದ ಎ ಆರ್ ರವಿ ಅವರ ವ್ಯವಸ್ಥಿತ ಪಿತೂರಿಯಿಂದಾಗಿ ಹಿಂಬಡ್ತಿ ಮಾಡಿ ನಿಯಮಗಳಲ್ಲಿ ವೇತನ ಸಂರಕ್ಷಣೆಗೆ ಅವಕಾಶವಿದ್ದರೂ ಹಿಂಬಡ್ತಿ ಆದೇಶದಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿಗಳಾದ ಶ್ರೀ ಮಹಂತಯ್ಯ ಹೊಸಮಠ ಅವರು ಹಿಂಬಡ್ತಿ ಮಾಡಿದ್ದಲ್ಲದೆ, ಹೆಚ್ಚುವರಿ ವೇತನ ಕಟಾಯಿಸುವಂತೆ ಆದೇಶ ಮಾಡಿದ್ದರ ಪ್ರತಿಫಲವಾಗಿ, ಹೊನ್ನಾಳಿ BEO ರವರಾದ ನಂಜರಾಜ ಅವರು ಸರಿಯಾದ ಸಮಯಕ್ಕೆ ಅಂತಿಮ ವೇತನ ಪ್ರಮಾಣ ಪತ್ರ, ಸೇವಾವಹಿಯನ್ನು ಕಳುಹಿಸದೆ ಕಳೆದ 6 ತಿಂಗಳಿಂದ ವೇತನ ಆಗದೆ ನರಕಯಾತನೆ ಅನುಭವಿಸಿದ್ದೇನೆ. ಮತ್ತು ನನ್ನ ಇಡೀ ಕುಟುಂಬ ಕಣ್ಣೀರಿನಲ್ಲಿ ಮುಳುಗಿದೆ ನನ್ನ ಸಮಸ್ಯೆಗೆ ಪರಿಹಾರ ಸಿಗಬಹುದು ಎಂಬ ನಿರೀಕ್ಷೆಯಲ್ಲಿ 6 ತಿಂಗಳಕಾಲ ಕಳೆದಾಯಿತು. ಆದರೂ ಯಾವುದೇ ಪರಿಹಾರ ಸಿಗದೆ ಪ್ರಯತ್ನಗಳೆಲ್ಲ ವಿಫಲವಾಗಿದ್ದು ಅತ್ಯಂತ ನೋವಿನ ಸಂಗತಿ .ಈ ಘಟನೆಗೆ ಕಾರಣರಾದವರು ಚೆನ್ನಾಗಿರಲಿ……ನಾನು ಈ ಸಮಸ್ಯೆಯನ್ನು ನಿಭಾಯಿಸುವಲ್ಲಿ ಮಾನಸಿಕವಾಗಿ ವಿಫಲನಾಗಿರುವ ಪ್ರಯುಕ್ತ ನಾನು ಬದುಕಿಗೆ ವಿಧಾಯ ಹೇಳಲು ಬಯಸಿದ್ದೇನೆ….. ನನ್ನ ನಿರ್ಧಾರಕ್ಕೆ ಮೇಲ್ಕಾಣಿಸಿದ ವ್ಯಕ್ತಿಗಳೇ ನೇರ ಕಾರಣರಾಗಿರುತ್ತಾರೆ. ನನ್ನ ಈ ನನ್ನ ಕುಟುಂಬದ ಹೊಣೆಗಾರಿಕೆ ಇಡೀ NPS ನೌಕರ ಸಂಘಟನೆಯದ್ದು ದಯವಿಟ್ಟು ನನ್ನ ಕುಟುಂಬಕ್ಕೆ ಸಹಾಯ ಸಹಕಾರ ಮಾಡಿ……
ಇಂತಿ ನಿಮ್ಮ ನತದೃಷ್ಟ NPS ನೌಕರ” ಎಂದಾಗಿದೆ‌.

ಪ್ರಭಾಕರ್ ಅವರು ಕಳಿಸಿದ ಮೊದಲ ಹಾಗೂ ಎರಡನೇ ಮೆಸೇಜನ್ನು ಸೂಕ್ಷ್ಮವಾಗಿ ಗಮನಿಸಿದರೆ, ಬಹುತೇಕ ಎರಡೂ ಮೆಸೇಜ್ ನಲ್ಲಿ ಇರುವ ವಿಷಯ ಒಂದೇ ಆಗಿದೆ. ಆದರೆ ಮೊದಲ ಮೆಸೇಜ್ ನಲ್ಲಿ ಯಾವುದೇ ವ್ಯಕ್ತಿಗಳ ಹೆಸರು ಬಳಸದೇ ಎರಡನೇ ಮೆಸೇಜ್ ನಲ್ಲಿ ತನ್ನ ಈ ಸ್ಥಿತಿಗೆ ಕಾರಣರಾದ ಪ್ರತೀ ವ್ಯಕ್ತಿಯ ಹೆಸರನ್ನೂ ಉಲ್ಲೇಖಿಸಿ ಸಂದೇಶ ರವಾನಿಸಲಾಗಿದೆ.

ತಾವು ಬರೆದ ಡೆತ್ ನೋಟ್ ನಲ್ಲಿ ಮಾಜಿ ಸಚಿವ ಬಿ.ಸಿ.ನಾಗೇಶ್ ಹಾಗೂ ರಾಜ್ಯ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಹೆಸರು ಇರುವುದು ಚರ್ಚೆಗೆ ಗ್ರಾಸವಾಗಿದೆ. ಪ್ರಭಾಕರ್ ಅವರ ಮುಖ್ಯ ಉದ್ದೇಶ ಇರುವುದು ಘಟನೆ ಹಿನ್ನೆಲೆಯಲ್ಲಿ ತನಿಖೆ ಆಗಬೇಕು, ತಮಗೆ ತೊಂದರೆ ನೀಡಿದ ವ್ಯಕ್ತಿಗಳಿಗೆ ಶಿಕ್ಷೆ ಆಗಬೇಕು ಎಂಬ ಉದ್ದೇಶ ಇರುವುದು ಸ್ಪಷ್ಟವಾಗಿದೆ.

ಗ್ರೂಪ್ ನಲ್ಲಿ ಬಂದ ಮೆಸೇಜ್ ಕಂಡು ಅವರ ಸ್ನೇಹಿತರು ಪ್ರಭಾಕರ್​​ನ್ನ ಸಂಪರ್ಕಿಸುವ ಪ್ರಯತ್ನವನ್ನು ಸಹ ಮಾಡಿದ್ದಾರೆ. ಆದರೆ ಪ್ರಭಾಕರ್ ಯಾರ ಸಂಪರ್ಕಕ್ಕೂ ಬಂದಿಲ್ಲ. ಬಳಿಕ ಎಂಟು ಗಂಟೆಯ ಸುಮಾರಿಗೆ ಮತ್ತೊಂದು ಮೆಸೇಜ್​ ರವಾನೆಯಾಗಿದ್ದು ಆನಂತರ ಪುನಃ ಮೊಬೈಲ್ ಸ್ವಿಚ್​ ಆಫ್​ ಆಗಿದೆ. ವಿಷಯ ತಿಳಿದು ಸರ್ಕಾರಿ ನೌಕರರು ಹಾಗು ಸ್ನೇಹಿತರು, ಪ್ರಭಾಕರ್​ರವರ ಮನೆ ಮತ್ತು ಕೆಲಸ ಮಾಡುವ ಜಾಗದಲ್ಲಿ ವಿಚಾರಿಸಿದ್ದಾರೆ. ಎಲ್ಲಿಯು ಪತ್ತೆಯಾಗದ ಹಿನ್ನೆಲೆ ಪೊಲೀಸರ ಮೊರೆಹೋಗಿದ್ದಾರೆ.

ಮೂಲದಿಂದ ಪ್ರಭಾಕರ್ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿಯ ಕೊಕ್ಕೋಡುವಿನಲ್ಲಿ ಟೀಚರ್ ಆಗಿದ್ದರು. ಶೆಟ್ಟಿಹಳ್ಳಿಯಲ್ಲಿ ಸಿಆರ್​ಪಿಯಾಗಿ ಕಾರ್ಯನಿರ್ವಹಿಸಿದ್ದರು. ಆನಂತರ ಅವರು ಎಫ್​ಡಿಎ ಆಗಿ ಹೊನ್ನಾಳಿ ಬಿಒ ಆಫೀಸ್​ನಲ್ಲಿ ಕಾರ್ಯನಿರ್ವಹಿಸಿದ್ದರು. ಟೀಚರ್ ಆಗಿದ್ದವರು ಎಫ್​ಡಿಎ ಆಗಿ ಬದಲಾವಣೆ ಪಡೆದಿದ್ದರ ಸಂಬಂಧ ಕೆಲವು ಆಕ್ಷೇಪಣೆ ಸಲ್ಲಿಸಿದ್ದರು. ಅಲ್ಲದೆ ಇದರ ನಡುವೆ ಅವರನ್ನು ಹಿರಿಯೂರು ತಾಲ್ಲೂಕಿನ ಸರ್ಕಾರಿ ಪ್ರೌಡಶಾಲೆಗೆ ವರ್ಗಾವಣೆ ಮಾಡಲಾಗಿತ್ತು. ಆದರೆ, ಪ್ರಭಾಕರ್ ಕೋರ್ಟ್​ ಮೊರೆಹೋಗಿ, ವರ್ಗಾವಣೆಗೆ ಸ್ಟೇ ತಂದಿದ್ದರು.

ಅವರ ವರ್ಗಾವಣೆ ಮತ್ತು ಹಿಂಬಡ್ತಿಗೆ ಮುಖ್ಯ ಕಾರಣ ಅವರು ನೌಕರರ ಸಂಘದ ಹೋರಾಟಗಳಲ್ಲಿ ಭಾಗಿ ಆಗಿದ್ದು ಎಂಬುದು ಪರಿಚಿತರಿಂದ ಸಿಕ್ಕ ಮಾಹಿತಿಯಾಗಿದೆ. ವರ್ಗಾವಣೆಗೆ ಸ್ಟೇ ತಂದ ನಂತರ ಎಫ್ ಡಿಎ ಇಂದ ಎಸ್ ಡಿಎ ಆಗಿ ಹಿಂಬಡ್ತಿಗೆ ದೂಡಲಾಗಿತ್ತು. ನಂತರ ಹೊಸನಗರದ ಮಾರುತಿಪುರಕ್ಕೆ ವರ್ಗಾವಣೆ ಮಾಡಲಾಗಿತ್ತು. ಅಲ್ಲಿಗೆ ವರ್ಗಾವಣೆಗೊಳ್ಳದ ಪ್ರಭಾಕರ್, ತಮ್ಮ ವಿರುದ್ಧದ ನಿರ್ಣಯದ ವಿರುದ್ಧ ಹೋರಾಟಕ್ಕೆ ಇಳಿದಿದ್ದರು. ನಿನ್ನೆ ಈ ಸಂಬಂಧ ಸರ್ಕಾರದಿಂದ ಪತ್ರವೊಂದು ಬಂದಿದೆ ಎನ್ನಲಾಗುತ್ತಿದ್ದು, ಆನಂತರ ಪ್ರಭಾಕರ್​ ರವರು ತುಂಬಾ ನೊಂದಿದ್ದರು ಎನ್ನಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು