ತುಮಕೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಮಾಜಿ ಸಚಿವ ಕೆ ಎನ್ ರಾಜಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಕೆ.ಎನ್.ರಾಜಣ್ಣ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆ ಮೂಲಕ ಸಹಕಾರಿ ಕ್ಷೇತ್ರದಲ್ಲಿ ಇನ್ನೂ ತಮ್ಮ ಹಿಡಿತ ತಪ್ಪಿಲ್ಲ ಎಂಬುದನ್ನು ರಾಜಣ್ಣ ಸಾಬೀತುಪಡಿಸಿದ್ದಾರೆ.
ತುಮಕೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು. ರಾಜಣ್ಣ ಸತತ 7ನೇ ಬಾರಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿ, ಸಹಕಾರ ಕ್ಷೇತ್ರದಲ್ಲಿ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದಾರೆ.
ತಿಪಟೂರು ತಾಲ್ಲೂಕಿನಿಂದ ಕಾಂಗ್ರೆಸ್ ಶಾಸಕ ಕೆ.ಷಡಕ್ಷರಿ ಹಾಗೂ ಪಾವಗಡ ತಾಲ್ಲೂಕಿನಿಂದ ಕಾಂಗ್ರೆಸ್ ಶಾಸಕ ವೆಂಕಟೇಶ್ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗಿದ್ದರು. ಇನ್ನುಳಿದ ಬೇರೆ ಬೇರೆ ತಾಲ್ಲೂಕುಗಳಿಂದಲೂ ರಾಜಣ್ಣ ಬೆಂಬಲಿಗರೇ ಡಿಸಿಸಿ ಬ್ಯಾಂಕ್‌ಗೆ ನಿರ್ದೇಶಕರಾಗಿ ಆಯ್ಕೆಯಾಗಿದ್ದರು. ಇದರಿಂದಾಗಿ ರಾಜಣ್ಣ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗುವುದು ಖಚಿತವಾಗಿತ್ತು. ಅದರಂತೆ ಇಂದು ಅವರು ಅವಿರೋಧವಾಗಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಗುಬ್ಬಿ ಮತ್ತು ಕುಣಿಗಲ್ ನಲ್ಲಿ ಶಾಸಕರ ಆಪ್ತರೇ ನಿಂತಿದ್ದರೂ ಅಲ್ಲೂ ಸಹ ರಾಜಣ್ಣ ಬೆಂಬಲಿಗರೇ ಮೇಲುಗೈ ಸಾಧಿಸಿದ್ದಾರೆ. ಗುಬ್ಬಿ ಮತ್ತು ಕುಣಿಗಲ್ ನಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಪ್ತ ಬಳಗದಿಂದ ನಿರ್ದೇಶಕ ಸ್ಥಾನಕ್ಕೆ ಕಣಕ್ಕಿಳಿಸಲಾಗಿತ್ತು. ಆದರೆ ಅಲ್ಲೂ ಶಾಸಕರ ಆಪ್ತರು ಸೋಲುವ ಮೂಲಕ ಸಹಕಾರಿ ಕ್ಷೇತ್ರದ ತಮ್ಮ ಹಿಡಿತವನ್ನು ರಾಜಣ್ಣ ಮತ್ತಷ್ಟು ಗಟ್ಟಿಗೊಳಿಸಿದ್ದಾರೆ.
ಶಿರಾ ಕ್ಷೇತ್ರದಿಂದ ಕೆಎನ್‌ಆರ್ ಬೆಂಬಲಿಗ ಜಿ.ಎಸ್. ರವಿ ಈ ಭಾರಿಯೂ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಪುನಾರಾಯ್ಕೆ ಆಗಿದ್ದಾರೆ. ಜಿ.ಎಸ್. ರವಿ ಶಿರಾ ಕ್ಷೇತ್ರದ ಕಾಂಗ್ರೆಸ್ ನಾಯಕರಾಗಿದ್ದಾರೆ. ಜೆಡಿಎಸ್ ಪಕ್ಷದ ಎಸ್.ಆರ್. ಗೌಡ ಅವರನ್ನು ಸೋಲಿಸಿ ಜಿ.ಎಸ್.ರವಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ತುರುವೇಕೆರೆ ಕ್ಷೇತ್ರದಿಂದ ಸಿದ್ದಲಿಂಗಪ್ಪ ಪುನಾರಾಯ್ಕೆ ಆಗಿದ್ದಾರೆ. ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಸಿಂಗದಹಳ್ಳಿ ರಾಜಕುಮಾರ್ ಅವರು ಜೆ.ಸಿ.ಮಾಧುಸ್ವಾಮಿ ಬೆಂಬಲಿಗ ವೈ.ಎಸ್.ನಂಜೇಗೌಡ ಅವರನ್ನು ಸೋಲಿಸಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಡಿಸಿಸಿ ಬ್ಯಾಂಕ್‌ನ ಸಿ ವರ್ಗದಿಂದ ಲಕ್ಷ್ಮಿನಾರಾಯಣ್ ಅವರು ನಿರ್ದೇಶಕರಾಗಿ ಪುನರಾಯ್ಕೆ ಆಗಿದ್ದಾರೆ. ಬಿ ವರ್ಗದಿಂದ ಕೆ.ಎನ್.ರಾಜಣ್ಣ ಪುತ್ರ ರಾಜೇಂದ್ರ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.