Home ರಾಜ್ಯ ಉಡುಪಿ ​ಮುದರಂಗಡಿ ಗ್ರಾಪಂ ಮಾಜಿ ಅಧ್ಯಕ್ಷ ಡೇವಿಡ್ ಡಿಸೋಜ ಹತ್ಯೆ ಪ್ರಕರಣ: ಮೂವರು ಆರೋಪಿಗಳ ಬಂಧನ

​ಮುದರಂಗಡಿ ಗ್ರಾಪಂ ಮಾಜಿ ಅಧ್ಯಕ್ಷ ಡೇವಿಡ್ ಡಿಸೋಜ ಹತ್ಯೆ ಪ್ರಕರಣ: ಮೂವರು ಆರೋಪಿಗಳ ಬಂಧನ

0

ಉಡುಪಿ ಜಿಲ್ಲೆಯ ಮುದರಂಗಡಿ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ ಹಾಗೂ ಗುತ್ತಿಗೆದಾರ ಡೆವಿಡ್ ಡಿಸೋಜಾ (53) ಅವರನ್ನು ಪಿಲ್ಲಾರ್‌ನ ಸೆಂಟ್ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್ ಮುಂಭಾಗದಲ್ಲಿ ಗುಂಡಿಕ್ಕಿ ಭೀಕರವಾಗಿ ಕೊಲೆ ಮಾಡಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಚುರುಕಿನ ಕಾರ್ಯಾಚರಣೆ ನಡೆಸಿ ಪ್ರಮುಖ ಆರೋಪಿಗಳನ್ನು ಎನ್‌ಕೌಂಟರ್‌ ಬಳಿಕ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶುಕ್ರವಾರ ಮಧ್ಯಾಹ್ನ ಡೆವಿಡ್ ಡಿಸೋಜಾ ಅವರು ತಮ್ಮ ಕಾರು ಏರಲು ಸಜ್ಜಾಗುತ್ತಿದ್ದಾಗ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಏಕಾಏಕಿ ದಾಳಿ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿರುವಂತೆ ಹಿಂಬದಿಯಿಂದ ಬಂದ ಬಂದೂಕುಧಾರಿ ಆರೋಪಿಯೊಬ್ಬ ಡೆವಿಡ್ ಅವರಿಗೆ ಹತ್ತಿರದಿಂದ ಗುಂಡು ಹಾರಿಸಿದ್ದಾನೆ. ಅಲ್ಲದೆ ಸ್ಥಳೀಯರಿಗೆ ಶಸ್ತ್ರಾಸ್ತ್ರ ತೋರಿಸಿ ಬೆದರಿಕೆ ಹಾಕಿ ಪರಾರಿಯಾಗಿದ್ದ ಗಂಭೀರ ಗಾಯಗೊಂಡ ಡೆವಿಡ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯದಲ್ಲೇ ಅವರು ಕೊನೆಯುಸಿರೆಳೆದಿದ್ದರು.

ಘಟನೆಯ ಬೆನ್ನಲ್ಲೇ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಹಾಗೂ ಉಡುಪಿ ಎಸ್ಪಿ ಹರಿರಾಮ್ ಶಂಕರ್ ಅವರ ಮಾರ್ಗದರ್ಶನದಲ್ಲಿ ವಿಶೇಷ ಪೊಲೀಸ್ ತಂಡಗಳನ್ನು ರಚಿಸಿ ಆರೋಪಿಗಳಿಗಾಗಿ ಬಲೆ ಬೀಸಲಾಗಿತ್ತು. ಶನಿವಾರ ಮುಂಜಾನೆ ಬೈಂದೂರು ಬಳಿಯ ಒಟ್ಟಿನೆಣೆ ಪ್ರದೇಶದಲ್ಲಿ ಪ್ರಮುಖ ಆರೋಪಿ ಉತ್ತರ ಪ್ರದೇಶ ಮೂಲದ ರಾಜು ಎಂಬುವವನನ್ನು ವಶಕ್ಕೆ ಪಡೆಯಲು ಪೊಲೀಸರು ಯತ್ನಿಸಿದಾಗ ಆತನೂ ಪೊಲೀಸರ ಮೇಲೆಯೇ ಗುಂಡಿನ ದಾಳಿ ನಡೆಸಿದ್ದಾನೆ.

ಈ ವೇಳೆ ಶಿರಸಿ ಮೂಲದ ಸಬ್‌ಇನ್ಸ್‌ಪೆಕ್ಟರ್ ತೇಜಸ್ವಿ ಅವರಿಗೆ ಗಾಯಗಳಾಗಿದ್ದು, ಆತ್ಮರಕ್ಷಣೆಗಾಗಿ ಪೊಲೀಸರು ನಡೆಸಿದ ಪ್ರತಿದಾಳಿಯಲ್ಲಿ ಆರೋಪಿಯ ಕಾಲಿಗೆ ಗುಂಡು ತಗಲಿದೆ. ಪ್ರಸ್ತುತ ಗಾಯಗೊಂಡ ಆರೋಪಿ ಹಾಗೂ ಪೊಲೀಸ್ ಅಧಿಕಾರಿಯನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಕೊಲೆಯ ಹಿನ್ನೆಲೆಯಲ್ಲಿ ವ್ಯಾಪಾರ ಶತ್ರುತ್ವ, ಹಳೆಯ ದ್ವೇಷ ಅಥವಾ ವೈಯಕ್ತಿಕ ವೈಷಮ್ಯಗಳಿವೆಯೇ ಎಂಬ ಕೋನದಲ್ಲಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಉಳಿದ ಸಹಚರರನ್ನು ಬಂಧಿಸಲು ವಿಶೇಷ ತಂಡಗಳು ತನಿಖೆ ಮುಂದುವರಿಸಿವೆ.

You cannot copy content of this page

Exit mobile version