ಮಂಡ್ಯ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಸಂಚರಿಸುತ್ತಿದ್ದ ಕಾರಿಗೆ ಕೆಎಸ್‌ಆರ್‌ಟಿಸಿ ಬಸ್ಸು ಡಿಕ್ಕಿಯಾದ ಪರಿಣಾಮ ನಾಲ್ವರು ಸ್ಥಳದಲ್ಲೇ ಅಸುನೀಗಿರುವ ಘಟನೆ ಮಂಡ್ಯ ತಾಲ್ಲೂಕಿನ ತೂಬಿನಕೆರೆ ಗ್ರಾಮದ ಬಳಿ ನಡೆದಿದೆ.
ಅಪಘಾತ ಆಗಿದ್ದೇಗೆ?
ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್ ವೇಯಿಂದ ಟಾಟಾ ಪಂಚ್ ಕಾರು ಎಕ್ಸಿಟ್ ಆಗುವಾಗ ಈ ಘಟನೆ ನಡೆದಿದೆ. ಕಾರು ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿತ್ತು. ಈ ಸಂದರ್ಭದಲ್ಲಿ ಕಾರು ಚಾಲಕನಿಗೆ ಎಕ್ಸಿಟ್ ಕುರಿತು ಗೊಂದಲವಾಗಿದೆ. ಮೊದಲು ಎಕ್ಸಿಟ್ ಆಗಲು ಹೋಗಿ ಆ ನಂತರ ಎಕ್ಸ್‌ಪ್ರೆಸ್ ವೇಗೆ ಕಾರನ್ನು ತಿರುಗಿಸಿದ್ದಾನೆ. ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಕೆಎಸ್ಆರ್ಟಿಸಿ ಐರಾವತ ಬಸ್ ಡಿಕ್ಕಿ ಹೊಡೆದಿದೆ. ಅಪಘಾತ ರಭಸಕ್ಕೆ ಸಂಪೂರ್ಣ ನಜ್ಜುಗುಜ್ಜಾಗಿದೆ.
ಅಪಘಾತದಲ್ಲಿ ಬೆಂಗಳೂರಿನವರಾದ ನಿವೃತ್ತ ಎಇ ಸತ್ಯಾನಂದ ರಾಜೇ ಅರಸ್, ನಿಶ್ಚಿತಾ, ಸುವೇಧಿನಿ ರಾಣಿ ಹಾಗೂ ಚಂದ್ರು ಎಂಬುವವರು ಸಾವನ್ನಪ್ಪಿದ್ದಾರೆ. ಬೆಂಗಳೂರಿನಿಂದ ಮೈಸೂರಿಗೆ ತೆರಳುವಾಗ ಟೋಲ್ ತಪ್ಪಿಸಲು ಕಾರು ಸರ್ವಿಸ್ ರಸ್ತೆಗೆ ಇಳಿಯುವ ಸಂದರ್ಭದಲ್ಲಿ ಹಿಂಬದಿಯಿಂದ ಕೆಎಸ್ಆರ್’ಟಿಸಿ ಬಸ್ಸು ಟಾಟಾ ಪಂಚ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಮಂಡ್ಯ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.