Home ರಾಜ್ಯ ದಕ್ಷಿಣ ಕನ್ನಡ ಅಧಿಕಾರಿ ಸೋಗಿನಲ್ಲಿ ವಂಚನೆ, 8 ರಾಜ್ಯಗಳಿಗೆ ಬೇಕಾಗಿದ್ದ ಆರೋಪಿ – ಕೇರಳದಲ್ಲಿ ಅರೆಸ್ಟ್

ಅಧಿಕಾರಿ ಸೋಗಿನಲ್ಲಿ ವಂಚನೆ, 8 ರಾಜ್ಯಗಳಿಗೆ ಬೇಕಾಗಿದ್ದ ಆರೋಪಿ – ಕೇರಳದಲ್ಲಿ ಅರೆಸ್ಟ್

0

ಮಂಗಳೂರು: ನ್ಯಾಷನಲ್ ಕ್ರೈಮ್ ಇನ್ವೆಸ್ಟಿಗೇಷನ್ ಬ್ಯೂರೋ (NCIB) ಸಂಸ್ಥೆಯ ಹಿರಿಯ ಅಧಿಕಾರಿ ಮತ್ತು ನಿರ್ದೇಶಕ ಎಂದು ಹೇಳಿಕೊಂಡು ಕೋಟ್ಯಂತರ ರೂಪಾಯಿ ವಂಚಿಸಿ, ಆಂತರಿಕ ಭದ್ರತೆಗೆ ಸವಾಲಾಗಿದ್ದ ನಕಲಿ ಅಧಿಕಾರಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಕೇರಳದ ಕಣ್ಣೂರಿನಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಸ್ಯಾಮ್ ಪೀಟರ್ (64) ಎಂದು ಗುರ್ತಿಸಲಾಗಿದೆ. ಈತ ಕಳೆದ 25 ವರ್ಷಗಳಿಂದ ತಲೆಮರೆಸಿಕೊಂಡಿದ್ದು, ಸುಮಾರು 8 ರಾಜ್ಯಗಳಲ್ಲಿ 17 ಕ್ಕೂ ಹೆಚ್ಚು ವಂಚನೆ ಮತ್ತು ಸುಲಿಗೆ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಆರೋಪಿಯಾಗಿದ್ದಾನೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು ಈ ಕುರಿತು ಮಾಹಿತಿ ನೀಡಿದ್ದು, ಆರೋಪಿ ಸ್ಯಾಮ್ ಪೀಟರ್ ಅಲಿಯಾಸ್ ಡ್ಯಾನಿ ತರಕ್ಕನ್ ಅಲಿಯಾಸ್ ಆಂಥೋನಿನನ್ನು ಸೋಮವಾರ ರಾತ್ರಿ ಕೇರಳದ ಕಣ್ಣೂರಿನಲ್ಲಿ ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

ಜಾಮೀನು ಪಡೆದುಕೊಂಡ ಬಳಿಕ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಈತ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಎಂದು ತಿಳಿಸಿದ್ದಾರೆ.

ಸ್ಯಾಮ್ ಪೀಟರ್‌ನನ್ನು 2019ರಲ್ಲಿ ಮಂಗಳೂರು ಪೂರ್ವ ಠಾಣೆ ಪೊಲೀಸರು ಮೊದಲ ಬಾರಿಗೆ ಬಂಧಿಸಿದ್ದರು. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯ ಹಿರಿಯ ಅಧಿಕಾರಿಯಂತೆ ನಟಿಸಿ, ಹಣಕಾಸು ವಿವಾದಗಳು, ಬ್ಯಾಂಕ್ ವಂಚನೆ ಹಾಗೂ ತೆರಿಗೆಗೆ ಸಂಬಂಧಿಸಿದ ಪ್ರಕರಣಗಳನ್ನು ಇತ್ಯರ್ಥಪಡಿಸುವುದಾಗಿ ನಂಬಿಸಿ ಜನರಿಂದ ಹಣ ಪಡೆದು ಸುಲಿಗೆ ಮಾಡುತ್ತಿದ್ದ ಆರೋಪ ಆತನ ಮೇಲಿತ್ತು.

ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಆತ 2023ರ ಸೆಪ್ಟೆಂಬರ್ ಬಳಿಕ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

You cannot copy content of this page

Exit mobile version