ಪ್ರಧಾನಿ ನರೇಂದ್ರ ಮೋದಿ ಅತ್ಯಾಪ್ತ ಉದ್ಯಮಿ ಎಂದೇ ಗುರುತಿಸಿಕೊಂಡಿರುವ ಗೌತಮ್ ಅದಾನಿ ವಿರುದ್ಧ ಅಮೆರಿಕದಲ್ಲಿ ಶತಕೋಟಿ ಡಾಲರ್ ಲಂಚ ಹಾಗೂ ವಂಚನೆ ಪ್ರಕರಣ ದಾಖಲಾಗುತ್ತಿದ್ದಂತೆಯೇ ಅದಾನಿ ಸಮೂಹ ಸಂಸ್ಥೆಗಳ ಶೇರುಗಳ ಬೆಲೆ ದಾಖಲೆ ಮೊತ್ತಕ್ಕೆ ಕುಸಿದಿದೆ.
ಅದಾನಿ ಗ್ರೂಪ್‌ನ ಷೇರುಗಳ ಮೌಲ್ಯವು ಬರೋಬ್ಬರಿ ಶೇಕಡಾ 20 ರಷ್ಟು ಕುಸಿತ ಕಂಡಿವೆ. ಈ ಹಿನ್ನೆಲೆ ಕಂಪನಿಗೆ ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ.
ಅಮೇರಿಕಾದ ಸೌರ ವಿದ್ಯುತ್ ಗುತ್ತಿಗೆಗೆ ಸಂಬಂಧಿಸಿದಂತೆ ಗೌತಮ್ ಅದಾನಿ ವಿರುದ್ಧ ಅಮೆರಿಕದಲ್ಲಿ ಶತಕೋಟಿ ಡಾಲರ್ ಲಂಚ ಹಾಗೂ ವಂಚನೆ ಪ್ರಕರಣ ದಾಖಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಅಮೆರಿಕದ ನ್ಯೂಯಾರ್ಕ್ ನ್ಯಾಯಾಲಯ ಅದಾನಿ ವಿರುದ್ಧ ಅರೆಸ್ಟ್ ವಾರೆಂಟ್ ಅನ್ನು ಜಾರಿಗೊಳಿಸಿದೆ.
ಶೇರು ಮಾರುಕಟ್ಟೆಯಲ್ಲಿ ಗುರುವಾರ ಈ ಮಾಹಿತಿ ಹೊರ ಬೀಳುತ್ತಿದ್ದಂತೆ ಅದಾನಿ ಸಮೂಹದ ಷೇರುಗಳ ಮೌಲ್ಯ ಕೂಡ ಇಳಿಕೆಯಾಗುತ್ತಾ ಸಾಗಿದೆ. ಅಷ್ಟೇ ಅಲ್ಲದೆ ನ್ಯೂಯಾರ್ಕ್ ನ್ಯಾಯಾಲಯದ ಬಂಧನದ ವಾರೆಂಟ್ ನ ನಂತರ ಈಗ ಗೌತಮ್ ಅದಾನಿ ಯಾವ ಸಂದರ್ಭದಲ್ಲೂ ಬಂಧನಕ್ಕೆ ಒಳಗಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಹಿಂಡನ್‌ಬರ್ಗ್ ವಿವಾದದ ಸಮಯದಲ್ಲಿ ಅದಾನಿ ಕಂಪನಿ ಭಾರೀ ನಷ್ಟವನ್ನು ಎದುರಿಸಿತ್ತು. ಇದೀಗ ಅದಕ್ಕಿಂತಲೂ ಕೆಟ್ಟದಾದ ಏಟು ಅದಾನಿ ಗ್ರೂಪ್‌ಗೆ ಬಿದ್ದಿದೆ.