ಸಕಲೇಶಪುರ : ಜಾತಿ ನಿಂದನೆ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಂಡಿರುವ ಪುರಸಭೆ ಮುಖ್ಯಾಧಿಕಾರಿ ಮಹೇಶ್ವರಪ್ಪ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ಅವರನ್ನು ಕೂಡಲೇ ಸೇವೆಯಿಂದ ಅಮಾನತು ಮಾಡಿ ಸಮಾಜದಲ್ಲಿ ಉಂಟಾಗಬಹುದಾದ ಜಾತಿ ಸಂಘರ್ಷಗಳನ್ನು ತಡೆಯಬೇಕೆಂದು ಒತ್ತಾಯಿಸಿ ಪಟ್ಟಣದಲ್ಲಿ ವಕೀಲರು ಪ್ರತಿಭಟನೆ ನಡೆಸಿದರು.
ಖಾತೆ ಬದಲಾವಣೆ ಮಾಡಿಕೊಡುವಲ್ಲಿ ಪುರಸಭೆ ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ, ವಕೀಲ ಹಾಗೂ ಭೂಮಾಲೀಕ ಅಭಿಜ್ಞಾನ್ ಅವರು ಜಿಲ್ಲಾಧಿಕಾರಿ ಕಚೇರಿ ಎದುರು ದಾಖಲೆಗಳನ್ನು ಎಸೆದು ಪ್ರತಿಭಟನೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿ, ಅವರ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಿಸಿರುವುದನ್ನು ಖಂಡಿಸಿ ವಕೀಲರು ಸೋಮವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಖಾತೆ ಬದಲಾವಣೆ ಸಂಬಂಧ ತಮ್ಮ ಅರ್ಜಿಗೆ ಸ್ಪಂದನೆ ದೊರಕದ ಹಿನ್ನೆಲೆಯಲ್ಲಿ ಅಭಿಜ್ಞಾನ್ ಅವರು ಜಿಲ್ಲಾಧಿಕಾರಿಗೂ ದೂರು ಸಲ್ಲಿಸಿದ್ದರು. ಈ ಕ್ರಮವನ್ನು ಖಂಡಿಸಿ ವಕೀಲರು ಹೇಮಾವತಿ ಸೇತುವೆ ಬಳಿಯಿಂದ ಪುರಸಭೆ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಹಳೆ ಬಸ್ ನಿಲ್ದಾಣದ ಮುಂಭಾಗ ಕೆಲಕಾಲ ಮಾನವ ಸರಪಳಿ ನಿರ್ಮಿಸಿ, ಮುಖ್ಯಾಧಿಕಾರಿ ಮಹೇಶ್ವರಪ್ಪ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ನಂತರ ಪುರಸಭೆ ಕಚೇರಿ ಬಳಿ ಜಮಾಯಿಸಿದ ವಕೀಲರು ಮನವಿ ಸಲ್ಲಿಸಲು ಗಂಟೆಗಟ್ಟಲೆ ಕಾಯಿದರು. ಆದರೆ ಮುಖ್ಯಾಧಿಕಾರಿ ಸ್ಥಳಕ್ಕೆ ಆಗಮಿಸದ ಕಾರಣ ಆಕ್ರೋಶಗೊಂಡ ಪ್ರತಿಭಟನಾಕಾರರು ಕಚೇರಿಗೆ ಬೀಗ ಹಾಕಲು ಮುಂದಾದರು. ಈ ವೇಳೆ ವಕೀಲರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು. ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಪ್ರಭಾರ ಉಪವಿಭಾಗಾಧಿಕಾರಿ ಮಂಜುನಾಥ್ ಅವರನ್ನು ಪ್ರತಿಭಟನಾಕಾರರು ಸುತ್ತುವರಿದು ತಮ್ಮ ಆಕ್ಷೇಪಗಳನ್ನು ತಿಳಿಸಿದರು. ವಕೀಲರು ಮಂಜುನಾಥ್ ಅವರಿಗೆ ಮನವರಿಕೆ ಮಾಡಿ, ಅಭಿಜ್ಞಾನ್ ವಿರುದ್ಧ ದಾಖಲಿಸಿರುವ ಅಟ್ರಾಸಿಟಿ ಕೇಸ್ ಅನ್ನು ಕೂಡಲೇ ವಾಪಸ್ ಪಡೆಯಬೇಕು ಹಾಗೂ ಖಾತೆ ಬದಲಾವಣೆ ಸಂಬಂಧ ನ್ಯಾಯಸಮ್ಮತವಾಗಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಈ ದಿನ ನ್ಯಾಯಾಲಯದ ಕಾರ್ಯಕಲಾಪಗಳಿಂದ ವಕೀಲರು ಸಾಂಕೇತಿಕವಾಗಿ ಹೊರಗೆ ಉಳಿದು ಪ್ರತಿಭಟನೆ ನಡೆಸಿದರು. ಮಾನ್ಯ ಉಪವಿಭಾಗಾಧಿಕಾರಿಗಳು, ಸಕಲೇಶಪುರ ಅವರ ಮೂಲಕ ಸಾಂಕೇತಿಕವಾಗಿ ಸಿ. ಮಹೇಶ್ವರಪ್ಪ ಅವರನ್ನು ಅಮಾನತು ಮಾಡುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕೆಲವು ಪುರಸಭೆ ಅಧಿಕಾರಿಗಳು ಅವರ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆಯೆಂಬ ಆರೋಪವಿದೆ. ಬಳಿಕ ಪುರಸಭೆ ಮುಖ್ಯಾಧಿಕಾರಿ ಮಹೇಶ್ವರಪ್ಪ ಅವರು ಅಭಿಜ್ಞಾನ್ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
