ದಾವಣಗೆರೆ: ನೋಂದಾಯಿತ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ನೊಂದಾಯಿತ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕ ಮಕ್ಕಳಿಗೆ ರಾಜ್ಯಾದ್ಯಂತ ವಾಸಸ್ಥಳದಿಂದ 45 ಕಿ.ಮೀ ವರೆಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ.
ಈ ಕುರಿತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ದಾವಣಗೆರೆ ವಿಭಾಗೀಯ ನಿಯಂತ್ರಣಧಿಕಾರಿ ಸಿದ್ದೇಶ್ ಹೆಬ್ಬಾರ್ ಮಾಹಿತಿ ನೀಡಿದ್ದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ದಾವಣಗೆರೆ ವಿಭಾಗದ ವತಿಯಿಂದ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ನಗರ ಹಾಗೂ ಗ್ರಾಮಾಂತರ ಪ್ರದೇಶದ ನೊಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಹಿನ್ನಲೆ ನಗರ ವ್ಯಾಪ್ತಿಯಲ್ಲಿನ ಕರ್ನಾಟಕ ಒನ್ ಹಾಗೂ ಗ್ರಾಮಾಂತರ ವ್ಯಾಪ್ತಿಯಲ್ಲಿನ ಗ್ರಾಮ ಒನ್ ಮೂಲಕ ಉಚಿತ ಬಸ್‍ಪಾಸ್ ವಿತರಣೆಗೆ ಕ್ರಮ ಕೈಗೊಳ್ಳಲಾಗಿರುತ್ತದೆ ಎಂದು ತಿಳಿಸಿದರು.
ಬಸ್‍ಪಾಸ್ ಪಡೆಯಲು ಕಾರ್ಮಿಕ ಇಲಾಖೆಯ ನೊಂದಾಯಿತ ಗುರುತಿನ ಚೀಟಿ, ಆಧಾರ್ ಕಾರ್ಡ್ ಹಾಗೂ ಆಧಾರದ ಕಾರ್ಡ್‍ಗೆ ಲಿಂಕ್ ಇರುವ ಮೊಬೈಲ್ ನಂಬರ್ ಮಾಹಿತಿಯೊಂದಿಗೆ ಬಸ್‌ಪಾಸ್‌ಗೆ ಅರ್ಜಿ ಸಲ್ಲಿಸಬೇಕು ಎಂದು ಮಾಹಿತಿ ನೀಡಿದರು.