ರಾಜ್ಯ ಪಿಯು ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ, ನೋಟ್‌ಬುಕ್ – ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ : ರಾಜ್ಯದ ಸರ್ಕಾರಿ ಪದವಿ ಪೂರ್ವ (PU Collage) ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ನೀಡುವ ನಿಟ್ಟಿನಲ್ಲಿ ಸರ್ಕಾರ (Karnataka Government) ಮತ್ತೊಂದು ಪ್ರಮುಖ ಹೆಜ್ಜೆ ಇಟ್ಟಿದೆ. ಬಜೆಟ್‌ನಲ್ಲಿ ಭರವಸೆ ನೀಡಿದ್ದಂತೆ ಈ ಶೈಕ್ಷಣಿಕ ಸಾಲಿನಿಂದಲೇ ಸರ್ಕಾರಿ ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕಗಳನ್ನು ವಿತರಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಉಚಿತವಾಗಿ ನೋಟ್‌ಬುಕ್‌ಗಳನ್ನು ಕೂಡ ನೀಡುವ ಉದ್ದೇಶ ಸರ್ಕಾರಕ್ಕಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಮಧು ಬಂಗಾರಪ್ಪ (Madhu Bangarappa)  ಪ್ರಕಟಿಸಿದ್ದಾರೆ.

ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡುತ್ತೇವೆ

ನಗರದ ಸೈನ್ಸ್ ಮೈದಾನದಲ್ಲಿ ನೂತನ ಕರ್ನಾಟಕ ಪಬ್ಲಿಕ್ ಶಾಲೆ (KPS) ಕಟ್ಟಡ ನಿರ್ಮಾಣ ಕಾಮಗಾರಿಗೆ ಅದ್ಧೂರಿಯಾಗಿ ಶಂಕುಸ್ಥಾಪನೆ ನೆರವೇರಿಸಿದ ಬಳಿಕ, ಸಚಿವರು ಸ್ಥಳೀಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿರುವ ‘ಕಲಾಂ ಸೆಂಟರ್’ಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಮುಕ್ತವಾಗಿ ಸಂವಾದ ನಡೆಸಿದ ಅವರು, ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣಕ್ಕೆ ಯಾವುದೇ ರೀತಿಯ ಅಡೆತಡೆಗಳು ಎದುರಾಗಬಾರದು. ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ಮತ್ತು ಮೂಲಸೌಕರ್ಯಗಳನ್ನು ಒದಗಿಸುವುದು ಸರ್ಕಾರದ ಪ್ರಾಥಮಿಕ ಕರ್ತವ್ಯವಾಗಿದೆ. ಒಂದೇ ಬಾರಿಗೆ ಎಲ್ಲಾ ಸೌಲಭ್ಯಗಳನ್ನು ಪೂರೈಸಲು ಸಾಧ್ಯವಾಗದಿದ್ದರೂ, ಹಂತ ಹಂತವಾಗಿ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳು ಮತ್ತು ಪಿಯು ಕಾಲೇಜುಗಳಲ್ಲಿ ಅಗತ್ಯ ಮೂಲಸೌಕರ್ಯ ಹಾಗೂ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡಲು ತಮ್ಮ ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ಭರವಸೆ ನೀಡಿದರು.

ಸಚಿವರ ಮುಂದೆ ಸಮಸ್ಯೆಗಳನ್ನ ಹೇಳಿಕೊಂಡ ವಿದ್ಯಾರ್ಥಿಗಳು

ಸಂವಾದದ ವೇಳೆ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಚಟುವಟಿಕೆಗಳು, ಅಭ್ಯಾಸದ ಜೊತೆಗೆ ಕಾಲೇಜಿನಲ್ಲಿ ತಂಗಾರುತ್ತಿರುವ ವಿವಿಧ ರೀತಿಯ ಮೂಲಭೂತ ಕೊರತೆಗಳು ಮತ್ತು ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದರು. ವಿದ್ಯಾರ್ಥಿಗಳ ಮಾತನ್ನು ಅತ್ಯಂತ ತಾಳ್ಮೆಯಿಂದ ಆಲಿಸಿದ ಮಧು ಬಂಗಾರಪ್ಪ ಅವರು, ಸಮಸ್ಯೆಗಳನ್ನು ತಕ್ಷಣವೇ ಇತ್ಯರ್ಥಪಡಿಸಲು ಕಾರ್ಯಕ್ರಮದಲ್ಲಿದ್ದ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಕ್ತ ಸೂಚನೆಗಳನ್ನು ನೀಡಿದರು.

ಬಳಿಕ ಮಾಧ್ಯಮಗಳೊಂದಿಗೆ ತಮ್ಮ ಅನುಭವ ಹಂಚಿಕೊಂಡ ಸಚಿವರು, ವಿದ್ಯಾರ್ಥಿಗಳೊಂದಿಗೆ ಈ ರೀತಿ ಸಂವಾದ ನಡೆಸುವುದು ತಮಗೆ ಎಷ್ಟೋ ಬಾರಿ ಹೊಸ ಉತ್ಸಾಹ ಮತ್ತು ಸಮಾಧಾನ ನೀಡುತ್ತದೆ. ಮುಗ್ಧ ಮನಸ್ಸಿನ ಮಕ್ಕಳು ನಾವುಗಳು ಊಹಿಸದೇ ಇರುವಂತಹ ನೈಜ ಪ್ರಶ್ನೆಗಳು ಹಾಗೂ ಪ್ರಸ್ತುತ ಸಮಸ್ಯೆಗಳನ್ನು ನಮ್ಮ ಮುಂದೆ ತಂದಿಡುತ್ತಾರೆ. ಇದರಿಂದ ಕಾಲೇಜಿನಲ್ಲಿ ಲವಲವಿಕೆಯ ವಾತಾವರಣ ಸೃಷ್ಟಿಯಾಗುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು. ಕಾರ್ಯಕ್ರಮ ಹಾಗೂ ಸಂವಾದದ ವೇಳೆಯಲ್ಲಿ ಶಿಕ್ಷಣ ಇಲಾಖೆಯ ಉನ್ನತಾಧಿಕಾರಿಗಳು ಹಾಗೂ ಕಾಲೇಜಿನ ಸಿಬ್ಬಂದಿ ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು